Monday, September 22, 2025

ಪ್ರಶ್ನೋತ್ತರ ರತ್ನಮಾಲಿಕೆ 32 (Prasnottara Ratnamalike 32)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೩೨. ಸುಖವನ್ನು ಕೊಡುವ ವಿಷಯ ಯಾವುದು?

ಉತ್ತರ - ಸಜ್ಜನರ ಮೈತ್ರೀ.

ಈ ಮುಂದಿನ ಪ್ರಶ್ನೆ ಹೀಗಿದೆ - "ಸುಖವನ್ನು ಕೊಡುವ ವಿಷಯ ಯಾವುದು?" ಎಂಬುದಾಗಿ. ಅದಕ್ಕೆ ಉತ್ತರ - 'ಸಜ್ಜನರ ಮೈತ್ರಿ' ಎಂದು. ಅಂದರೆ ಸಜ್ಜನರ ಸಂಗವು ಸುಖವನ್ನು ಕೊಡುತ್ತದೆ ಎಂದರ್ಥ. ಅದು ಸುಖದ ಉತ್ಕೃಷ್ಟಸಾಧನ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ. ಹಾಗಾದರೆ ಸುಖ ಎಂದರೇನು? ಅದು ಸಜ್ಜನರ ಮೈತ್ರಿಯಿಂದ ಹೇಗೆ ಲಭಿಸುತ್ತದೆ? ಎಂಬುದನ್ನು ಇಲ್ಲಿ ಚಿಂತಿಸಬೇಕಾಗಿದೆ.


ಪ್ರಾಯಶಃ ಸುಖದ ಬಗ್ಗೆ ಸರಿಯಾದ ತಿಳಿವಳಿಕೆ ಬರುವುದು ಕಷ್ಟಸಾಧ್ಯ. ಏಕೆಂದರೆ ಯಾವುದನ್ನು ಸುಖ ಎಂದು ತಿಳಿಯಬೇಕೋ, ಅದನ್ನು ಸುಖ ಎಂದು ತಿಳಿದಿಲ್ಲ. ಯಾವುದು ನಿಜವಾಗಿಯೂ ದುಃಖಕ್ಕೆ ಸಾಧನವೋ, ಅದನ್ನು ನಾವು ಸುಖ ಎಂದು ಭ್ರಮಿಸುತ್ತೇವೆ. ಹಾಗಾಗಿ ಸುಖ ಎಂಬುದನ್ನು ತಿಳಿಯುವುದು ಕಷ್ಟಸಾಧ್ಯವಾಗಿದೆ. ಸುಖವೂ ಕೂಡ ದುಃಖವನ್ನು ಉಂಟುಮಾಡುವುದರಿಂದ ಸುಖವನ್ನು ತಿಳಿಯುವುದು ಸಾಮಾನ್ಯರಿಗೆ ಅಸಾಧ್ಯವೇ ಸರಿ. ಸುಖ ಎಂಬುದಕ್ಕೆ ಗ್ರಂಥಗಳಲ್ಲಿ ಬಗೆಬಗೆಯಾದ ವ್ಯಾಖ್ಯಾನವನ್ನು ನಾವು ಕಾಣಬಹುದು. ಸುಖವನ್ನು ಅನುಭವಿಸಬೇಕಾದರೆ ಈ ಸುಖಕ್ಕೆ ಸಾಧನವಾದದ್ದು ಯಾವುದೋ ಅದು ಎಂಬುದಾಗಿ ಹೇಳಲಾಗಿದೆ. ಅಂದರೆ ಈ ಶರೀರಭಾವವನ್ನು ಪಡೆಯುವುದಕ್ಕೆ ಕಾರಣ ಸುಖ ದುಃಖಗಳು. ಹಾಗಾಗಿ ಯಾವಾಗ ಶರೀರಭಾವವನ್ನು ನಾವು ಬಿಡುತ್ತೇವೋ, ಅಂದರೆ ಮತ್ತೆ ಮತ್ತೆ ಜನನ ಮತ್ತು ಮರಣ ಎಂಬ ಚಕ್ರದಲ್ಲಿ ಸಿಲುಕದೇ ಇರುವಂತೆ ಹೇಗೆ ಬದುಕುತ್ತೇವೆ ಎಂಬುದು. ನಿಜವಾದ ಸುಖವನ್ನು ಪಡೆಯಬೇಕು ಎಂದಾದರೆ ಆಗ ಈ ಶರೀರವನ್ನು - ಶರೀರಭಾವವನ್ನು ಪಡೆಯದಂತೆ ಜೀವಿಸಬೇಕಾದದು ಅಷ್ಟೇ ಅಗತ್ಯವಾದುದು. ಹಾಗಾಗಿ ಇದುವೇ ನಿಜವಾದ ಸುಖ.


ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಸುಖವನ್ನು ಸಾತ್ತ್ವಿಕ, ರಾಜಸಿಕ ಮತ್ತು ತಾಮಸಿಕ ಎಂಬುದಾಗಿ ವಿಭಾಗಿಸಿದ್ದಾರೆ. ಅಂದರೆ ಯಾವುದು ಅತ್ಯಂತ ಸುಖವನ್ನು ನೀಡುತ್ತದೆಯೋ, ಅದು ನಿಜವಾಗಿಯೂ ಸುಖ. ಹಾಗಲ್ಲದೆ ಕೇವಲ ಇಂದ್ರಿಯ ಮನಸ್ಸು ಇವುಗಳಿಗೆ ತಾತ್ಕಾಲಿಕ ಸಂತೋಷವನ್ನು ನೀಡುವುದು ರಾಜಸಿಕ ಅಥವಾ ತಾಮಸಿಕ ಸುಖ ಎಂಬುದಾಗಿ ಅಲ್ಲಿ ಹೇಳಲಾಗಿದೆ. ಸುಖ ಎಂಬುದು ಪ್ರಸ್ತುತ ಶಾಶ್ವತವಾದದ್ದು. ಅದು ಆನಂದರೂಪವಾಗಿದ್ದು, ಅದನ್ನು ಬ್ರಹ್ಮಾನಂದ ಎಂಬುದಾಗಿಯೂ ಇನ್ನೊಂದು ಹೆಸರಿನಿಂದ ಕರೆಯುತ್ತಾರೆ. ಹಾಗಾಗಿ ಇಂತಹ ಸುಖವನ್ನು ಪಡೆಯಲು ಸಜ್ಜನಮೈತ್ರೀ ಬೇಕು.


'ಸಜ್ಜನ' ಎಂದರೆ, ಯಾರು ತನ್ನ ಮತಿಯನ್ನು ಅಂದರೆ ಶಾಶ್ವತವಾದ ಯಾವ ಬದುಕುಂಟೋ, ಭಗವಂತ - ಪರಂಜ್ಯೋತಿ ಎಂಬ ಯಾವ ಸಂಗತಿ ಉಂಟೋ ಅದರಲ್ಲಿ ಅನವರತ ಸಂಬಂಧವನ್ನು ಇಟ್ಟುಕೊಂಡಂತವನು. ಅವನು ಈ ಸೃಷ್ಟಿಯಲ್ಲಿ ಇರುವ ಯಾವ ಕ್ಷಣಿಕಸುಖವನ್ನು ಬಯಸದೆ ಶಾಶ್ವತಸುಖಕ್ಕಾಗಿ ಅವನ ಬದುಕಿರುತ್ತದೆ. ಅಂತವನ ಜೊತೆ ಸಂಗ ಇದ್ದರೆ ಅದು ನಮ್ಮನ್ನು ಅಂತೇಯೇ ಮಾಡುತ್ತದೆ; ಅವನಂತೆಯೇ ಮಾಡುತ್ತದೆ. ಶಂಕರ ಭಗವತ್ಪಾದರು ಹೇಳುವಂತೆ ನಾವು ಸಜ್ಜನರ ಸಂಗದಲ್ಲಿ ನಮ್ಮ ಮನಸ್ಸನ್ನು ಇಡಬೇಕು - ನೇಯಂ ಸಜ್ಜನಸಂಗೇ ಚಿತ್ತಂ' ಎಂದು. ಆಗ ಆ ಸಜ್ಜನರು ಯಾವ ಮೂಲವನ್ನು ಪಡೆದಿರುತ್ತಾರೋ, ಅದೇ ಮೂಲವನ್ನು ನಾವು ಕೂಡ ಪಡೆಯಬಹುದು. ಅದುವೇ ನಿಜವಾದ ಸುಖ. ಹಾಗಾಗಿ ಅಂತ ಸುಖವನ್ನು ಬಯಸುವ ಪ್ರತಿಯೊಬ್ಬನೂ ಸಜ್ಜನಮೈತ್ರಿಯನ್ನು ಸಂಪಾದಿಸಬೇಕು ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.


ಸೂಚನೆ : 21
/9/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.