ಲೇಖಕರು : ವಿದ್ವಾನ್ ಅನಂತ ಬಿ.ಜಿ.
ಪ್ರತಿಕ್ರಿಯಿಸಿರಿ (lekhana@ayvm.in)
ಭಗವಂತನು ಶಕ್ತಿಯಿಂದ ಕೂಡಿದವನೇ ಆಗಿದ್ದಾನೆ. ಅಂತಹ ಅವನ ಶಕ್ತಿಯ ಅಂಶವನ್ನು ದುರ್ಗೆಯ ರೂಪದಲ್ಲಿ ಅಥವಾ ತ್ರಿಮೂರ್ತಿ ರಾಣಿಯರಾದ ಲಕ್ಷ್ಮೀ ಸರಸ್ವತಿ ಮತ್ತು ದುರ್ಗೆಯರ ರೂಪದಲ್ಲಿ ಪೂಜಿಸುವ ಹಬ್ಬವೇ ಈ ನವರಾತ್ರ. ಇದನ್ನು ಇನ್ನಷ್ಟು ಸ್ಪಷ್ಟಪಡಿಸುವುದಾದರೆ, ಮೊದಲನೆಯ ಮೂರು ದಿನಗಳಲ್ಲಿ ಲಕ್ಷ್ಮೀ ರೂಪದಲ್ಲಿಯೂ, ಎರಡನೆಯ ಮೂರು ದಿನಗಳಲ್ಲಿ ಸರಸ್ವತೀ ರೂಪದಲ್ಲಿಯೂ ಮತ್ತು ಕೊನೆಯ ಮೂರು ದಿನಗಳಲ್ಲಿ ದುರ್ಗಾ-ಪಾರ್ವತೀ ರೂಪದಲ್ಲಿಯೂ ಆಕೆಯನ್ನು ಪೂಜಿಸಬೇಕು ಎಂದು ಜ್ಞಾನಿಗಳು ಹೇಳುತ್ತಾರೆ.
ಮೊದಲನೆಯ ದಿವಸ ಆಕೆಯನ್ನು ಯೋಗನಿದ್ರಾದುರ್ಗಾ ಎಂಬ ಹೆಸರಿನಿಂದ ಪೂಜಿಸುತ್ತಾರೆ ಎಂಬುದನ್ನು ನೋಡಿದೆವು. ಎರಡನೆಯ ದಿವಸದಲ್ಲಿ ಆ ಪರಾಪ್ರಕೃತಿಯಾದ ದೇವಿಯನ್ನು ದೇವಜಾತಾದುರ್ಗಾ ಎಂಬ ಹೆಸರಿನಿಂದ ಪೂಜಿಸಬೇಕು. ಇಂದೂ ಕೂಡ ಮೊದಲನೆಯ ದಿವಸದಂತೆಯೇ ಶುಚಿರ್ಭೂತರಾಗಿ ಆಚಮನ ಪ್ರಾಣಾಯಾಮಗಳನ್ನು ಮಾಡಿ ಸಂಕಲ್ಪವನ್ನು ಹೇಳಿಕೊಳ್ಳಬೇಕು. ಆನಂತರದಲ್ಲಿ ಶ್ರೀ ಮಹಾಲಕ್ಷ್ಮೀ ಮಹಾಸರಸ್ವತೀ ಮಹಾದುರ್ಗಾ ಸ್ವರೂಪಳಾದ ದೇವಜಾತಾ ದುರ್ಗಾದೇವಿಯನ್ನು ಪೂಜಿಸುತ್ತೇನೆ ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು. ಇಂದಿನ ಪೂಜೆಯು ಯಾವುದೇ ವಿಘ್ನಗಳಿಲ್ಲದೆ ನೆರವೇರಲಿ ಎಂದು ಮೊದಲಿಗೆ ವಿಘ್ನ ನಿವಾರಕನಾದ ಮಹಾಗಣಪತಿಯನ್ನು ಪೂಜಿಸಬೇಕು.
ದೇವಿಯ ಸ್ವರೂಪ
ಹಂಸಾರೂಢಾಂ ಶುಕ್ಲವರ್ಣಾಂ ಶುಕ್ಲಮಾಲ್ಯಾದ್ಯಲಂಕೃತಾಂ/
ಚತುರ್ಭುಜಾಂ ಸೃಕ್ಸ್ರುವೌ ಚ ಕಮಂಡಲು ಅಕ್ಷಕಮಾಲಿಕಾಮ್
ಬಿಭ್ರತೀಂ ಪೂಜಯೇದ್ದೇವೀಂ
ದ್ವಿತಿಯಾಯಾಂ ಸದಾ ನೃಪ//
ದೇವಜಾತಾದುರ್ಗೆಯು ಶುಭ್ರವಾದ ಬಿಳಿಯ ಬಣ್ಣದಿಂದ ಕೂಡಿದವಳಾಗಿ ಬಿಳಿಯ ಮಾಲೆಯೇ ಮೊದಲಾದವುಗಳನ್ನು ಅಲಂಕಾರವಾಗಿ ಉಳ್ಳವಳಾಗಿ, ನಾಲ್ಕು ಬಾಹುಗಳಲ್ಲಿ ಕ್ರಮವಾಗಿ ಸೃಕ್-ಸ್ರುವ- ಕಮಂಡಲು, ಇವೆಲ್ಲವೂ ಯಜ್ಞದಲ್ಲಿ ಬಳಸಲ್ಪಡುವ ಸಲಕರಣೆಗಳು ಮತ್ತು ಅಕ್ಷಮಾಲಿಕೆಗಳನ್ನು ಹಿಡಿದವಳಾಗಿ ಶುಭ್ರವಾದ ಹಂಸದ ಮೇಲೆ ಆರೂಢಳಾಗಿರುತ್ತಾಳೆ. ಅಂತಹಾ ಸೌಮ್ಯರೂಪಳಾದ ದೇವಿಯನ್ನು ಮನಸ್ಸಿನಲ್ಲಿ ಭಾವಿಸಿ ಆವಾಹಿಸಬೇಕು.
ಅನಂತರ ಅವಳಿಗೆ ವಿಧಿವತ್ತಾಗಿ ಧೂಪ ದೀಪ ನೈವೇದ್ಯವೇ ಮೊದಲಾದ ಪಂಚೋಪಚಾರ ಪೂಜೆಯನ್ನು ಮಾಡಬೇಕು. ಇದು ಎರಡನೆಯ ದಿವಸದ ಜಗನ್ಮಾತೆಯ ಮೂರ್ತಿಸ್ವರೂಪ ಮತ್ತು ಪೂಜಾಕ್ರಮ.
ಸೂಚನೆ: 23/9//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.