ಲೇಖಕರು : ವಿದ್ವಾನ್ ಅನಂತ ಬಿ.ಜಿ.
ಪ್ರತಿಕ್ರಿಯಿಸಿರಿ (lekhana@ayvm.in)
.ನವರಾತ್ರ ಎಂದು ಪ್ರಸಿದ್ಧವಾಗಿದ್ದರೂ ಹತ್ತನೆಯ ದಿನವಾದ ವಿಜಯದಶಮಿಯನ್ನೂ ಸೇರಿಸಿಕೊಂಡು ಇದನ್ನು ದಶಾಹ ಅಥವಾ ದಸರಾ ಎಂಬ ನಾಮಧೇಯದಿಂದಲೂ ಕರೆಯುತ್ತಾರೆ. ಒಂಭತ್ತು ದಿನಗಳಲ್ಲಿ ಪೂರ್ಣವಾಗಿ ಆಚರಿಸದೆ ಇದ್ದರೂ ಮತ್ತು ಹತ್ತನೆಯ ದಿನದಲ್ಲಿ ವಿಜಯ ದಶಮಿಯನ್ನು ಸೇರಿಸಿ ಆಚರಿಸಿದರೂ ಹೇಗೂ ಪಾರಿಭಾಷಿಕವಾಗಿ ಇದು ನವರಾತ್ರವೇ.
ಮಹಿಷಮರ್ದಿನಿ ದುರ್ಗಾ
ಮೂರನೆಯ ದಿವಸ ಪೂಜ್ಯಳಾದ ದೇವತೆಯ ಹೆಸರು ಮಹಿಷಮರ್ದಿನಿ ದುರ್ಗಾ ಎಂದು. ಈ ಹೆಸರನ್ನು ಕೇಳಿದ ಕೂಡಲೇ ನಮಗೆ ಅತ್ಯಂತ ಭಯಂಕರವಾದ ರೂಪವನ್ನು ಧರಿಸಿ ತ್ರಿಶೂಲವೇ ಮೊದಲಾದ ಆಯುಧಗಳಿಂದ ವಿಭೂಷಿತಳಾಗಿ ಮಹಿಷಾಸುರನನ್ನು ಮರ್ದನ ಮಾಡುತ್ತಿರುವ ಚಾಮುಂಡೇಶ್ವರೀ ದೇವಿಯ ರೂಪವು ಕಣ್ಮುಂದೆ ಬರುವುದು ಸಹಜವಾಗಿದೆ. ಆದರೆ ಮಹಿಷಮರ್ದಿನಿ ದುರ್ಗೆಯು ತನ್ನ ಹೆಸರಿಗೆ ವ್ಯತಿರಿಕ್ತವಾಗಿ ಪರಮ ಸಾತ್ವಿಕವಾದ ರೂಪದಿಂದ ಕೂಡಿರುವವಳಾಗಿದ್ದಾಳೆ. ಗ್ರಂಥಗಳಲ್ಲಿ ಅವಳ ರೂಪವು ಈ ಕೆಳಗಿನಂತೆ ವರ್ಣಿತವಾಗಿದೆ-
ಗೌರಾಂಗೀಂ ದ್ವಿಭುಜಾಂ ದೇವೀಂ
ಕಲ್ಹಾರ ದ್ವಯಧಾರಿಣೀಂ /
ಸಿಂಹಾರೂಢಾಂ ತೃತೀಯಾಯಾಂ
ಗೌರವಸ್ತ್ರಾಂ ಪ್ರಪೂಜಯೇತ್ //
ಸತ್ವ ಗುಣವನ್ನು ಪ್ರತಿಪಾದಿಸುವ ಶುಭ್ರವಾದ ಬಿಳಿಯ ಬಣ್ಣದಿಂದ ಕೂಡಿ ಎರಡು ಭುಜಗಳನ್ನು ಹೊಂದಿ ಆ ಎರಡೂ ಕೈಗಳಲ್ಲಿ ಕಲ್ಹಾರ ಎಂಬ ಪುಷ್ಪಗಳನ್ನು ಧರಿಸಿರುವವಳು. ಬಿಳಿಯದಾದ ವಸ್ತ್ರವನ್ನು ಧರಿಸಿ ಸಿಂಹದ ಮೇಲೆ ಕುಳಿತಿರುವ ದೇವಿಯನ್ನು ಪೂಜಿಸಬೇಕು ಎಂಬುದು ಈ ಧ್ಯಾನ ಶ್ಲೋಕದ ತಾತ್ಪರ್ಯ.
ಈ ವರ್ಣನೆಯನ್ನು ಕೇಳಿದರೆ ಈ ದೇವಿಯು ಪರಮ ಸತ್ವಮೂರ್ತಿ ಎಂಬುದು ಸ್ಪಷ್ಟವಾಗುತ್ತದೆ. ಬಿಳಿಯ ಬಣ್ಣವು ಕಶ್ಮಲವಿಲ್ಲದ ಸ್ವಚ್ಛತೆಯನ್ನೂ ಸತ್ವಗುಣದ ಪ್ರಾಧಾನ್ಯವನ್ನೂ ಮನಸ್ಸಿನ ಶಾಂತತೆಯನ್ನೂ ಅಂತೆಯೇ ಸಮಾಧಾನವನ್ನೂ ಪ್ರತಿನಿಧಿಸುವ ಬಣ್ಣ. ಅಂತಹ ಬಿಳಿಯ ಬಣ್ಣವನ್ನು ತನ್ನ ವಸ್ತ್ರದಲ್ಲಿಯೂ, ಧರಿಸಿರುವ ಪುಷ್ಪದಲ್ಲಿಯೂ ಮತ್ತು ಸ್ವತಃ ತನ್ನ ಅಂಗಾಂಗಗಳಲ್ಲಿಯೂ ಹೊಂದಿರುವ ಇವಳು ಮುಂದಿನ ಪೂಜಾದಿಗಳಿಗೆ ಬೇಕಾದ ಮನಶ್ಶಾಂತಿಯನ್ನು ಕೊಡುವ ದೇವಿಯೇ ಆಗಿದ್ದಾಳೆ.
ಸೂಚನೆ: 24/9//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ