Monday, September 22, 2025

ವ್ಯಾಸ ವೀಕ್ಷಿತ 154 ಶತ್ರುಗಳೊಡ್ಡುವ ಆಮಿಷಗಳಿಗೆ ಪಕ್ಕಾಗುವ ಪ್ರಜೆಗಳ ಮೇಲೆ ಕಣ್ಣಿಟ್ಟಿರಬೇಕು (Vyaasa Vikshita 154)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ನಾರದರು ಯುಧಿಷ್ಠಿರನಿಗೆ ರಾಜ್ಯವ್ಯವಸ್ಥೆಯ ತತ್ತ್ವಗಳನ್ನು ತಿಳಿಯಪಡಿಸುತ್ತಿದ್ದಾರೆ.

ಪ್ರಾಂತಗಳಲ್ಲಿಯ ಜನತೆಯು ರಾಜನಲ್ಲಿ ಅರ್ಪಣಬುದ್ಧಿಯನ್ನೇ ಹೊಂದಿರಬೇಕು.ನಿನ್ನ ಆಳ್ವಿಕೆಯಲ್ಲಿ ಇದೇ ಕ್ರಮವೇ ಇದೆ ತಾನೆ?

ರಾಜ್ಯದಲ್ಲಿ ಸಮಭೂಮಿ-ವಿಷಮಭೂಮಿ (ಎಂದರೆ ಏರು-ತಗ್ಗುಗಳು ಹೆಚ್ಚಾಗಿರುವ ಪ್ರದೇಶ)ಗಳಲ್ಲಿ ಕಳ್ಳಕಾಕರು ಸೇರಿಕೊಳ್ಳುತ್ತಿರುತ್ತಾರೆ. ಅದಕ್ಕೆ ಪ್ರತಿಯಾಗಿ ಅವರನ್ನು ಮಟ್ಟಹಾಕುವ ಭಟರು ಆಗಾಗ್ಗೆ ಅಲ್ಲೆಲ್ಲಾ ಓಡಾಡುತ್ತಿರುತ್ತಾರೆ ತಾನೆ?

ಸ್ತ್ರೀಯರ ವಿಷಯದಲ್ಲಿ ಕೆಲವು ಎಚ್ಚರಗಳು ಅವಶ್ಯ. ಅವರಿಗೆ ಸಾಂತ್ವನ ಹೇಳಬೇಕಾದಾಗ ಹೇಳಬೇಕು. ಅವರಿಗೆ ಒಳ್ಳೆಯ ರಕ್ಷಣೆಯು ಲಬ್ಧವಾಗಬೇಕು. ಅವರಲ್ಲಿ ಅತಿಯಾದ ನಂಬಿಕೆಯಿಟ್ಟು ಗುಟ್ಟುಗಳನ್ನೆಲ್ಲ ಹೇಳಿಬಿಡಬಾರದು. ಈ ಎಚ್ಚರಗಳು ಇವೆ ತಾನೆ?

ಮುಂದೆ ಬರಬಹುದಾದ ಅಪಾಯಗಳನ್ನು ಕುರಿತಾಗಿ ಮೊದಲೇ ಚಿಂತಿಸಿರಬೇಕು. ಬದಲಾಗಿ, ಅಂತಃಪುರದಲ್ಲಿ ಸುಖಗಳನ್ನು ಮೆಲ್ಲುತ್ತಾ ಸುಖಲೋಲುಪನಾಗಿ ಇದ್ದುಬಿಡಬಾರದು. ನೀನು ಈ ಬಗ್ಗೆ ಎಚ್ಚರವಾಗಿರುವೆ ತಾನೆ?

ರಾತ್ರಿಯ ಮೊದಲೆರಡು ಯಾಮ(ಜಾವ)ಗಳಲ್ಲಿ ನಿದ್ರಿಸಬೇಕು. ನಾಲ್ಕನೆಯ ಯಾಮದ ಹೊತ್ತಿಗೆ ಎದ್ದವನಾಗಿ ಧರ್ಮಾರ್ಥಗಳನ್ನು ಕುರಿತು ಸಂಚಿಂತನೆಯನ್ನು ಮಾಡಬೇಕು. ನೀನು ಹಾಗೆ ಮಾಡುತ್ತಿರುವೆ ತಾನೆ?

ಕಾಲಕ್ಕೆ ಸರಿಯಾಗಿ ಉತ್ಥಿತನಾಗಿ ಪರಿಶುದ್ಧನಾಗಿ ಯುಕ್ತ ವೇಷಭೂಷಣಗಳನ್ನು ಧರಿಸಿ ಕಾಲಜ್ಞರಾದ ಮಂತ್ರಿಗಳೊಂದಿಗೆ ಮಾತಾಡಿಕೊಂಡಿದ್ದು, ದರ್ಶನಾರ್ಥಿಗಳಾಗಿ ಬಂದ ಪ್ರಜೆಗಳ ಅಪೇಕ್ಷೆಗಳಿಗೆ ಗಮನಕೊಡುವೆ ತಾನೆ?

ರಾಜನ ರಕ್ಷೆಗಾಗಿ ರಾಜಭಟರು ಕೆಂಪನೆಯ ವಸ್ತ್ರವನ್ನು ಧರಿಸಿ ಚೆನ್ನಾಗಿ ಅಲಂಕಾರ ಮಾಡಿಕೊಂಡು, ಖಡ್ಗಧಾರಿಗಳಾಗಿ ರಾಜನ ಸುತ್ತಲೂ ಇರತಕ್ಕದ್ದು; ಹಾಗೆ ಭಟರು ನಿನ್ನನ್ನು ರಕ್ಷಿಸುತ್ತಿರುವರು ತಾನೆ?

ದಂಡನೆಗೆ ಅರ್ಹರಾದ ವಿಷಯದಲ್ಲಿ ಹಾಗೂ ಪೂಜಾರ್ಹರಾದವರ ವಿಷಯದಲ್ಲಿ ಯಮನ ಹಾಗೆ ನಿಷ್ಪಕ್ಷಪಾತವಾಗಿ ರಾಜನು ವರ್ತಿಸಬೇಕು. ನೀನು ಹಾಗಿರುವೆ ತಾನೆ? ಪ್ರಿಯರಾದವರು ಕೆಲವರು, ಅಪ್ರಿಯರಾದವರು ಕೆಲವರು ಇರುವುದುಂಟು. ಅವರು ಯಾರೇ ಆಗಿದ್ದರೂ, ಅವರುಗಳ ವಿಷಯದಲ್ಲಿ ಚೆನ್ನಾಗಿ ಪರೀಕ್ಷಿಸಿಯೇ ವರ್ತಿಸುವೆಯಷ್ಟೆ?

ವ್ಯಾಧಿಗಳು ಎರಡು ಬಗೆ - ಶಾರೀರ ಮತ್ತು ಮಾನಸ ಎಂಬುದಾಗಿ. ಔಷಧ-ಸೇವನದಿಂದಲೂ ಯುಕ್ತನಿಯಮ-ಪಾಲನದಿಂದಲೂ ಶಾರೀರ ವ್ಯಾಧಿಗಳನ್ನು ಪರಿಹರಿಸಿಕೊಳ್ಳುತ್ತಿರಬೇಕು. ವೃದ್ಧರ ಸೇವೆಯನ್ನು ಮಾಡುತ್ತಾ ಮಾನಸಿಕವಾದ ವ್ಯಾಧಿಗಳನ್ನು ಪರಿಹರಿಸಿಕೊಳ್ಳುತ್ತಿರಬೇಕು. ನೀನು ಹಾಗೆ ಮಾಡುತ್ತಿರುವೆ ತಾನೆ?

ಒಳ್ಳೆಯ ವೈದ್ಯರನ್ನೂ ಮಿತ್ರರನ್ನೂ ಹೊಂದಿರಬೇಕು. ಎಂಟು ಅಂಗಗಳಿಂದ ಕೂಡಿರುವಂತಹುದು, ಚಿಕಿತ್ಸಾಶಾಸ್ತ್ರ. ವೈದ್ಯರು ಅದರಲ್ಲಿ ಪರಿಣತರಾಗಿರಬೇಕು. (ರೋಗಿಯ ರೂಪ-ಸ್ಪರ್ಶ-ಶಬ್ದಗಳು, ಕಣ್ಣು-ನಾಲಿಗೆಗಳು, ಮಲ-ಮೂತ್ರಗಳು ಹಾಗೂ ನಾಡಿ - ಈ ಎಂಟನ್ನು ಪರೀಕ್ಷಿಸುವುದೇ ಅಷ್ಟಾಂಗ-ವೈದ್ಯ). ಅಂತಹ ವೈದ್ಯರೂ, ತನಗೆ ಮಿತ್ರರಾದವರೂ, ತನ್ನಲ್ಲಿ ಅನುರಕ್ತರಾದವರೂ, ರಾಜನ ಶರೀರ-ಹಿತವನ್ನು ನೋಡಿಕೊಳ್ಳುತ್ತಿರಬೇಕು. ಅಂತಹ ಮಿತ್ರರೂ ವೈದ್ಯರೂ ನಿನಗಿರುವರಷ್ಟೆ?

ರಾಜನಲ್ಲಿಗೆ ಅರ್ಥಿಗಳೂ ಪ್ರತ್ಯರ್ಥಿಗಳೂ ಬರುತ್ತಿರುವರು. ರಾಜನು ತನ್ನ ಲೋಭ-ಮೋಹ-ಅಹಂಕಾರಗಳ ಹಿನ್ನೆಲೆಯಲ್ಲಿ ಅವರನ್ನು ಕಾಣಬಾರದು. ನೀನು ಹಾಗೆ ಕಾಣುತ್ತಿಲ್ಲವಷ್ಟೆ?

ಲೋಭ-ಮೋಹಗಳಿಂದಾಗಲಿ, ಪ್ರೀತಿ-ವಿಶ್ವಾಸಗಳಿಂದಾಗಲಿ, ನೀನು ನಿನ್ನನ್ನಾಶ್ರಯಿಸಿ ಬಂದವರ ಜೀವಿಕೆಗೆ ಅಡ್ಡಿಯಾಗುತ್ತಿಲ್ಲ ತಾನೆ?

ಶತ್ರುಪಕ್ಷದವರು ನಾನಾ ಆಮಿಷಗಳನ್ನು ತೋರಿಸಿ ನಿನ್ನ ಪ್ರಜೆಗಳನ್ನೇ ಕೊಂಡುಕೊಂಡುಬಿಡುವುದುಂಟು. ಅಂತಹವರು ಒಗ್ಗಟ್ಟಾಗಿ ನಿನ್ನನ್ನು ವಿರೋಧಿಸುತ್ತಿಲ್ಲ ತಾನೆ? (ಶತ್ರುದೇಶಗಳಿಂದ ಪುರಸ್ಕೃತವಾದ ಅನೇಕ ಎನ್.ಜಿ.ಓಗಳ ಇಂದಿನ ಘಾತಕ ಚಟುವಟಿಕೆಗಳಿಗೆ ಇಲ್ಲಿನ ಮಾತುಗಳು ಅನ್ವಿತವಾಗುವುದಲ್ಲವೇ?)

ಸೂಚನೆ : 21/9/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.