Monday, September 22, 2025

ನವರಾತ್ರ - 1 (Navaratra - 1)

ಲೇಖಕರು : ವಿದ್ವಾನ್ ಅನಂತ ಬಿ.ಜಿ.

ಪ್ರತಿಕ್ರಿಯಿಸಿರಿ (lekhana@ayvm.in)



ನವರಾತ್ರ ಎಂಬುದು ಭಾರತೀಯರ ಹಬ್ಬ ಹರಿದಿನಗಳ ಮಾಲೆಯಲ್ಲಿ ಅತ್ಯಂತ ಮುಖ್ಯವಾಗಿರುವ ಒಂದು ಪರ್ವ. ಹೆಸರೇ ಹೇಳುವಂತೆ ಇದು ಒಂಭತ್ತು ದಿವಸಗಳ ಹಬ್ಬಗಳ ಸರಮಾಲೆ. ವಿಜಯದಶಮಿಯೂ ಸೇರಿದರೆ ಹತ್ತು ದಿವಸಗಳು. ಭಾರತ ದೇಶದ ಎಲ್ಲ ಭಾಗಗಳಲ್ಲಿಯೂ ವಿಶೇಷವಾಗಿ ಆಚರಿಸಲ್ಪಡುವ ಹಬ್ಬವಿದು. ನವರಾತ್ರ, ದುರ್ಗೋತ್ಸವ  ಎಂಬ ಎರಡು ಪ್ರಸಿದ್ಧವಾದ ಹೆಸರುಗಳಿಂದ ಈ ಹಬ್ಬವು ಕರೆಯಲ್ಪಡುತ್ತದೆ. ದುರ್ಗಿಯು ಇಲ್ಲಿ ಪ್ರಧಾನವಾಗಿ  ಆರಾಧಿಸಲ್ಪಡುವ ದೇವತೆಯಾಗಿರುವುದೇ ಇದಕ್ಕೆ ಕಾರಣ. ಚೈತ್ರ ಮಾಸದ ಶುಕ್ಲ ಪಕ್ಷದ ಪ್ರಾಥಮಿಯಿಂದ ಪ್ರಾರಂಭಿಸಿ ಒಂಭತ್ತು ದಿನಗಳು ಆಚರಿಸಲ್ಪಡುವ  ಪರ್ವವನ್ನು ವಸಂತನವರಾತ್ರ ಎಂದೂ, ಶರತ್ಕಾಲದ ಪ್ರಥಮೆಯಿಂದ ಪ್ರಾರಂಭಿಸಿ ಒಂಭತ್ತು ದಿನಗಳ ಕಾಲ ಆಚರಿಸಲ್ಪಡುವ ಪರ್ವವನ್ನು ಶರನ್ನವರಾತ್ರಾ ಎಂದೂ ಕರೆಯುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.

 ಆಚರಣೆಯ ಕಾಲ - ವಿಧಿ

       ಅಶ್ವಯುಜ ಮಾಸದ ಶುಕ್ಲ ಪ್ರತಿಪತ್ತಿನ ದಿವಸ ಇದರ ಆರಂಭ. ಇಂದು ಪ್ರಾತಃಕಾಲದಲ್ಲಿ ಎದ್ದು ಮಂಗಳ ಸ್ನಾನವನ್ನು ಮಾಡಿ, ದೇವಿಯ ಪೂಜೆಗಾಗಿ ಪುಷ್ಪಗಳಿಂದ ಮಂಟಪವೊದನ್ನು   ರಚಿಸಬೇಕು. ಅದರಲ್ಲಿ ಕಲಶವನ್ನಿಟ್ಟು ಅದರಲ್ಲಿ  ಚಂದನ ಅಕ್ಷತೆ ಇತ್ಯಾದಿಗಳಿಂದ ಸುಗಂಧಿತವಾದ ಜಲವನ್ನು ತುಂಬಬೇಕು. ಆ ಕಲಶದಲ್ಲಿ ದುರ್ಗೆಯನ್ನು ಪ್ರತಿಷ್ಠಾಪಿಸಿ ಪೂಜಿಸಬೇಕು. 

 ಯೋಗನಿದ್ರಾ 

      ಮೊದಲನೆಯ ದಿವಸ ದೇವಿಯು ಯೋಗನಿದ್ರಾ ಎಂಬ ಹೆಸರಿನಿಂದ ಕರೆಯಲ್ಪಡುವ ಶಕ್ತಿ ದೇವತೆಯಾಗಿರುತ್ತಾಳೆ. ಅವಳ ಸ್ವರೂಪವು ಅತ್ಯದ್ಭುತವಾದುದು. ಅವಳು ಬೆಳಕಿನ ಪುಂಜದಂತಿದ್ದು ತನ್ನ ಎಂಟು ಭುಜಗಳಲ್ಲಿ ಖಡ್ಗ ಗದಾ ಚಕ್ರ ಧನುಸ್ಸು ಅಗ್ನಿ ಮೊದಲಾದ ಆಯುಧಗಳಿಂದ ಕೂಡಿದವಳಾಗಿ ಮಹಾಸಿಂಹವನ್ನೇ ವಾಹನವನ್ನಾಗಿ ಮಾಡಿಕೊಂಡಿದ್ದು ತಾನು ಜಗದೀಶ್ವರೀ ಎಂಬುದನ್ನು ಸಾರಲೋ ಎಂಬಂತೆ ತ್ರಿನೇತ್ರಗಳಿಂದ ಕೂಡಿಕೊಂಡಿರುತ್ತಾಳೆ ಎಂದು ದುರ್ಗಾಸಪ್ತಶತಿ ಎಂಬ ಗ್ರಂಥವು ತಿಳಿಸುತ್ತದೆ. 

       ಅಂತಹ ಪರಮಾದ್ಭುತಳಾದ ಯೋಗನಿದ್ರಾ ದೇವಿಯನ್ನು ಮೊದಲನೆಯ ದಿವಸದಲ್ಲಿ ಶ್ರದ್ಧೆಯಿಂದ ಪೂಜಿಸಿದವನು ಧನ್ಯನಾಗುತ್ತಾನೆ.


ಸೂಚನೆ: 22/9//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ.