ಲೇಖಕರು : ವಿದ್ವಾನ್ ಅನಂತ ಬಿ.ಜಿ.
ಪ್ರತಿಕ್ರಿಯಿಸಿರಿ (lekhana@ayvm.in)
ಮೊದಲ ಮೂರು ದಿನಗಳಲ್ಲಿ ಲಕ್ಷ್ಮಿಯನ್ನು ಪ್ರಧಾನವಾಗಿ ಪೂಜಿಸಿದ ಮೇಲೆ ನಾಲ್ಕನೆಯ ದಿವಸದಿಂದ ಸರಸ್ವತಿ ಪ್ರಧಾನವಾದ ದುರ್ಗಾ ಪೂಜೆ ಪ್ರಾರಂಭವಾಗುತ್ತದೆ. ಸರಸ್ವತಿಯು ಕೇವಲ ಹರಿಯುವ ಹೊಳೆಯಲ್ಲ ಎಲ್ಲ ಸುಂದರವಾದ ವಾಣಿಗೂ ಸನ್ಮತಿಗೂ ಪ್ರೇರಕಳು, ಸುಕೃತಿಗಳ ಯಜ್ಞದಲ್ಲಿ ಆಹ್ವಾನಿಸಲ್ಪಟ್ಟು ಪೂಜೆಯನ್ನು ಕೈಗೊಂಡು ಇಷ್ಟಾರ್ಥಗಳನ್ನು ಕರುಣಿಸುವ ಪರಾದೇವತೆ ಎಂಬ ಅಭಿಪ್ರಾಯವೂ ವೇದಮಂತ್ರಗಳಲ್ಲಿ ಸ್ಪಷ್ಟವಾಗಿದೆ.
ನಾಲ್ಕನೆಯ ದಿವಸ ಪೂಜ್ಯಳಾದ ದೇವತೆ ಶೈಲಜಾತ ದುರ್ಗಾದೇವಿ. ಸ್ನಾನಾದಿಗಳನ್ನು ಮುಗಿಸಿ, ಇಂದು ಶೈಲಜಾತ ದುರ್ಗಾದೇವಿಯನ್ನು ಪೂಜಿಸುತ್ತೇನೆ ಎಂದು ಸಂಕಲ್ಪ ಮಾಡಬೇಕು. ನಿತ್ಯದಂತೆ ಪೀಠ ಪೂಜೆ ಮತ್ತು ನವಶಕ್ತಿ ಪೂಜೆಯನ್ನು ಮಾಡಿಕೊಂಡು ಬೊಗಸೆಯಲ್ಲಿ ಗಂಧ ಪುಷ್ಪಾದಿಗಳನ್ನು ಹಿಡಿದು ಶೈಲಜಾತ ದುರ್ಗೆಯನ್ನು ಭಾವಿಸಿ ಆಹ್ವಾನಿಸಬೇಕು.
ದೇವಿಯ ಸ್ವರೂಪ-
ರಕ್ತವರ್ಣಾಂ ಚತುರ್ಭುಜಾಮ್
ರಕ್ತ ವಸ್ತ್ರಾದ್ಯಲಂಕೃತಾಮ್/
ಪಾಶಾಂಕುಶಾಂ ಮಾತುಲಿಂಗಧರಾಮ್
ಮೂಷಿಕ ವಾಹಿನೀಮ್ //
ಈ ದೇವಿಯು ಕೆಂಪಾದ ಮೈಬಣ್ಣದಿಂದ ಕೂಡಿದವಳಾಗಿ ನಾಲ್ಕು ಭುಜಗಳನ್ನು ಹೊಂದಿದ್ದು ಕೆಂಪು ವಸ್ತ್ರ ಮತ್ತು ಆಭರಣಗಳನ್ನು ಧರಿಸಿದವಳಾಗಿದ್ದಾಳೆ. ಕೈಗಳಲ್ಲಿ ಪಾಶ ಅಂಕುಶ ಮತ್ತು ಮಾತುಲಿಂಗ ಎಂಬ ಫಲವನ್ನು ಧರಿಸಿ ಮೂಷಿಕವನ್ನೇ ವಾಹನವನ್ನಾಗಿ ಹೊಂದಿದ್ದಾಳೆ ಎಂಬುದು ಯೋಗಿಗಳಿಗೆ ಗೋಚರವಾಗುವ ಅವಳ ಸ್ವರೂಪವಾಗಿದೆ. ಮಾತುಲಿಂಗ ಎಂಬುದು ಸಂಸ್ಕೃತದಲ್ಲಿ ಮಾದೀಫಲ ಎಂದು ಕರೆಯಲ್ಪಡುವ, ದೇವಿಗೆ ಪರಮಪ್ರಿಯವಾದ ಫಲ. ಕನ್ನಡದಲ್ಲಿ ಮಾದಳ ಹಣ್ಣು ಎಂದು ಇದು ಪ್ರಸಿದ್ಧವಾಗಿದೆ. ಜೀರ್ಣಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುವುದೂ ಸೇರಿದಂತೆ ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಮಧುರವಾದ ಫಲವಿದು.
ನವರಾತ್ರಿಯು ಜೀವನದಲ್ಲಿ ನವತ್ವವನ್ನು ಉಂಟುಮಾಡುವ ಕಾಲ ವಿಶೇಷವಾಗಿದೆ. ಪ್ರಕೃತಿ ಮಾತೆಯ ಆರಾಧನೆಯ ಮೂಲಕ ನಮ್ಮ ದೇಹ ಪ್ರಕೃತಿ, ಮನಃ ಪ್ರಕೃತಿ, ಇಂದ್ರಿಯ ಪ್ರಕೃತಿಗಳನ್ನು ಶುದ್ಧವಾಗಿಸಿಕೊಂಡು ಆ ಪರಾ ಪ್ರಕೃತಿಯ ಪ್ರಸಾದದಿಂದ ಪರಮಪುರುಷನ ಕಡೆಗೆ ಸಾಗುವುದು ಇದರ ಪರಮಫಲ.
ಸೂಚನೆ: 25/9//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ