"ರಾಮರಾವಣಯೋರ್ಯುದ್ಧಂ ರಾಮರಾವಣಯೋರಿವ" (ರಾಮ-ರಾವಣರ ಯುದ್ಧಕ್ಕೆ ಅವರ ಯುದ್ಧವೇ ಸಾಟಿ, ಅರ್ಥಾತ್ ಅದಕ್ಕೆ ಬೇರೆ ಸಾಟಿಯೇ ಇಲ್ಲ.)
ಇಂತಹ ಯುದ್ಧ ನಡೆದದ್ದು ತ್ರೇತಾಯುಗದಲ್ಲಿ. ರಾಮನು ಅತಿಪರಾಕ್ರಮಶಾಲಿಯಾಗಿದ್ದರೂ ಸಹ, ರಾವಣನ ಸಂಹಾರ ಮಾಡುವ ಮುನ್ನ ಒಮ್ಮೆ ರಾವಣನನ್ನು ಸೋಲಿಸಿ, ಅವನಿಗೆ ಅವಕಾಶವೊಂದನ್ನು ನೀಡುತ್ತಾನೆ: ಲಂಕೆಗೆ ಹಿಂದಿರುಗಿ ಮತ್ತೆ ಸಿದ್ಧನಾಗಿ ಬರಲು ಹೇಳುತ್ತಾನೆ. ಯುದ್ಧದಲ್ಲಿ ನಡೆದುದೇನು? ಏಕೆ? - ಎಂದು ವಿಷಯಗಳನ್ನು ವಿಮರ್ಶಿಸಬೇಕು.
ರಾವಣನು ಮೊದಲ ಬಾರಿಗೆ ರಾಮನೊಂದಿಗೆ ಮುಖಾಮುಖಿಯಾದ ದಿನ ಹೇಗಿತ್ತು? ಅಂದು ಮೊದಲು ರಾವಣನು ಸುಗ್ರೀವನನ್ನು ಎದುರಿಸಿ, ಅಸ್ತ್ರಪ್ರಯೋಗದಿಂದ ಅವನನ್ನು ಕೆಡವಿದನು. ನಂತರ ಹಲವರು ವಾನರವೀರರು ರಾವಣನ ಮೇಲೆ ಆಕ್ರಮಣ ಮಾಡಿದರು. ಅವರೆಲ್ಲರನ್ನೂ ರಾವಣನು ಹೊಡೆದುರುಳಿಸಿದನು. ನಂತರ ಅವನಿಗೂ ಹನುಮಂತನಿಗೂ ಯುದ್ಧವಾಯಿತು. ಪರಾಕ್ರಮಿ ಹನುಮಂತನಿಂದ ಅವನು ಕಲವು ಏಟುಗಳನ್ನು ತಿಂದರೂ ಕೊನೆಗೆ ಹನುಮಂತನೇ ರಾವಣನ ಪ್ರಹಾರಗಳಿಂದ ತತ್ತರಿಸಿ ತೂರಾಡುವಂತಾಯಿತು.
ನಂತರ ರಾವಣನ ಯುದ್ಧ ನೀಲನೊಡನೆ. ಮಹಾಬಲಶಾಲಿಯಾದ ನೀಲನ ಚುರುಕುತನ ರಾವಣನಿಗೆ ಅಚ್ಚರಿಯನ್ನುಂಟುಮಾಡಿದರೂ, ಕೊನೆಗೆ ರಾವಣನ ಆಗ್ನೇಯಾಸ್ತ್ರಕ್ಕೆ ನೀಲನು ಬೀಳುವಂತಾಯಿತು. ತದನಂತರ ರಾವಣನಿಗೆ ಸವಾಲೆಸೆದವನು ಲಕ್ಷ್ಮಣ. ರಾವಣನಿಗೆ ಬೆರಗಾಗುವಂತೆ ಸಿಡಿಲಿನ ವೇಗದಲ್ಲಿ ಪ್ರಹಾರ ಮಾಡುತ್ತಿದ್ದ ಆ ಮಹಾಪರಾಕ್ರಮಿಯನ್ನು ಉರುಳಿಸಲು ಬ್ರಹ್ಮನು ಕೊಟ್ಟಿದ್ದ ಶಕ್ತ್ಯಾಯುಧವನ್ನು ಆ ರಾಕ್ಷಸನು ಬೀಸಿ ಹೊಡೆದನು. ಇವೆಲ್ಲದರ ನಂತರ, ಕೊನೆಗೂ ರಾಮ-ರಾವಣರು ಎದುರುಬದುರು ನಿಂತರು.
ಅಷ್ಟು ದಿನಗಳ ರೋಷವೆಲ್ಲವೂ ಉಕ್ಕಿ ಬಂದರೂ ರಾಮನು ತುಂಬ ನಿಯಂತ್ರಿತವಾಗಿಯೇ ಆಕ್ರಮಣ ಮಾಡಿದನು. ರಾವಣನ ರಥ, ಚಕ್ರ, ಪತಾಕೆ, ಅವನ ಆಯುಧಗಳು - ಎಲ್ಲವನ್ನೂ ಶ್ರೀರಾಮನು ಮುರಿದು ಬೀಳಿಸಿದನು. ವಜ್ರಾಯುಧದ ಹೊಡೆತಕ್ಕೂ ಜಗ್ಗದ ರಾವಣನು ಶ್ರೀರಾಮನ ಬಾಣಗಳ ಆಘಾತವನ್ನು ತಡೆಯಲಾರದಾದನು. ಕೊನೆಗೆ ರಾಮನು ಅವನ ಕಿರೀಟವನ್ನು ಹೊಡೆದುರುಳಿಸಿ, ಅವನಿಗೆ "ಲಂಕೆಗೆ ಹಿಂದಿರುಗಿ ವಿಶ್ರಮಿಸಿ ಬಾ. ಹೊಸ ರಥವೇರಿ ಬಂದು ನನ್ನ ಪರಾಕ್ರಮವನ್ನು ನೋಡು" ಎಂದು ಹೇಳಿಕಳುಹಿಸಿದನು.
ಏಕೆ? ಅಂದೇ ರಾವಣನನ್ನು ಕೊಲ್ಲಲು ರಾಮನಿಗೆ ಸಾಮರ್ಥ್ಯವಿರಲಿಲ್ಲವೇ? ಸುಮ್ಮನೆ ಏಕೆ ಹೋಗಬಿಟ್ಟ? ಅವಕಾಶ ಸಿಕ್ಕಿದಾಗ ಹಾಕಿ ಅಂದೇ ಅವನನ್ನು ಬಡಿದುಹಾಕಬೇಕಿತ್ತು - ಎಂದು ಹೇಳುವವರಿರಬಹುದು. ಹೇಗಿದ್ದರೂ ಅವತ್ತಿನ ದಿನ ಸಾಕಷ್ಟು ಜನರ ಮೇಲೆ ಯುದ್ಧಮಾಡಿ ದಣಿದಿದ್ದ ರಾವಣನನ್ನು ಮುಗಿಸಲು ಸದವಕಾಶವನ್ನು ರಾಮನು ಏಕೆ ಬಿಟ್ಟ?
ರಾಮನೆಂತಹ ಪರಾಕ್ರಮಶಾಲಿ ಎಂಬುದು ನಮಗೆ ಆಗಾಗ ವಾಲ್ಮೀಕಿಗಳು ತಿಳಿಸುತ್ತಲೇ ಇರುವರು. ಸರಿಸಾಟಿಯಾದ ಪ್ರತಿನಾಯಕನೊಬ್ಬ ಇರುವಾಗ, ನಾಯಕನ ವಿಜಯವು ನಿರ್ಣಾಯಕವಾಗಿರಬೇಕಿದ್ದರೆ, ಪ್ರತಿನಾಯಕನಾದವನು ತನ್ನ ಪೂರ್ಣಬಲದಿಂದ ಕದನಮಾಡುತ್ತಿರಬೇಕು. ಏನೋ, ದೌರ್ಬಲ್ಯವಿದ್ದ ಸಂದರ್ಭದಲ್ಲಿ ಸೋಲಿಸಿದರೆ ಅದಕ್ಕೆ ಅಷ್ಟಾಗಿ ಬೆಲೆಯಿರುವುದಿಲ್ಲ ಮತ್ತು ನಾಯಕನ ಪರಾಕ್ರಮಕ್ಕೆ ಅದೊಂದು ಕಳಂಕವೂ ಆಗಬಹುದು. ಎಂದೇ ಶ್ರೀರಾಮನು ಇದಾವುದಕ್ಕೂ ಆಸ್ಪದವನ್ನೇ ಕೊಡಲಿಲ್ಲ. ಜೊತೆಗೆ, ಸಂಹಾರವೆಂಬುದು ಶತಸಿದ್ಧವಾಗಿತ್ತಾದ್ದರಿಂದ ಅದಕ್ಕೆ ಮೊದಲು ರಾವಣನಿಗೆ ಆತ್ಮಾವಲೋಕನ-ಪಶ್ಚಾತ್ತಾಪಗಳಿಗೆ ಶ್ರೀರಾಮನು ಸಂದರ್ಭವೊದಗಿಸಿಕೊಟ್ಟ.
ಪರಾಜಿತನಾಗಿ ಹಿಂದಿರುಗಿದಾಗ ರಾವಣನ ದರ್ಪವಡಗಿತ್ತು. ಅವನು ಚಿಂತಿತನಾಗಿದ್ದ. ಹಿಂದೆ ತನಗೆ ಬೇರೆಬೇರೆಯವರಿತ್ತ ಶಾಪಗಳನ್ನು ನೆನಪಿಸಿಕೊಂಡ. ಆದರೂ, ನಾಯಿಬಾಲ ಡೊಂಕೇ ಎನ್ನುವಂತೆ, ಆತ್ಮಾವಲೋಕನ ಮಾಡಿಕೊಳ್ಳುವ ಬದಲು ಅವನ ಮನಸ್ಸು ಈ ಅಸಾಧ್ಯವಾದ ಯುದ್ಧವನ್ನು ಗೆಲ್ಲುವ ತಂತ್ರದ ಬಗೆಗೇ ತಿರುಗಿತು. ಆಗಲೇ ಕುಂಭಕರ್ಣನನ್ನು ಎಬ್ಬಿಸಿ ಯುದ್ಧಕ್ಕೆ ಕಳುಹಿಸಿದ್ದು. ಹೀಗೆ ತಪ್ಪುಹಾದಿಯನ್ನು ಬಿಡಲು ಒಂದು ಅನಿರೀಕ್ಷಿತವಾದ ಅವಕಾಶ ದೊರೆತಾಗಲೂ, ದೌಷ್ಟ್ಯ-ಅಹಂಕಾರಗಳು ಮೈಗೂಡಿಬಿಟ್ಟಿದ್ದಲ್ಲಿ ಆ ಅವಕಾಶವನ್ನು ಪೋಲು ಮಾಡುವುದಾಗುತ್ತದೆ.
ಮುಂದೆ ತನ್ನ ಮಗನೇ ಆದ ಇಂದ್ರಜಿತ್ತೂ ಸೇರಿ ಹಲವು ರಾಕ್ಷಸವೀರರು ಸತ್ತಮೇಲೆ, ರಾವಣನ ಸಮರ ಮತ್ತೆ ಲಕ್ಷ್ಮಣನೊಂದಿಗೆ. ರಾಮನೊಂದಿಗೇ ಮತ್ತೆ ಮುಖಾಮುಖಿಯಾದಾಗ ರಾವಣನು ತನ್ನ ಪ್ರಬಲವಾದ ಶೂಲದಿಂದ ಕಾದಾಡುತ್ತಾನೆ. ರಾಮನು ತನ್ನ ಶಕ್ತ್ಯಾಯುಧಪ್ರಯೋಗದಿಂದ ರಾವಣನನ್ನು ಮತ್ತೆ ಸೋಲಿಸುತ್ತಾನೆ. ದ್ವಂದ್ವ ಮುಂದುವರೆದರೂ ಸಿಕ್ಕಾಪಟ್ಟೆ ಏಟು ತಿಂದು ಕೊನೆಗೆ ಮೈಮರೆತಂತಾಗಿದ್ದ ರಾವಣನನ್ನು ಅವನ ಸಾರಥಿಯೇ ರಣಭೂಮಿಯಿಂದ ದೂರ ಸಾಗಿಸುತ್ತಾನೆ. ಪಾಪಕರ್ಮವು ಫಲಕೊಡಲು ಪ್ರಾರಂಭವಾದಾಗ ಮೊದಲು ಫಲಿಸುತ್ತಿದ್ದ ಕರಣೋಪಕರಣಗಳೂ ಕೆಲಸ ಮಾಡದಂತಾಗುವುವು.
ಮುಂದಿನ ದಿನ ಮತ್ತೆ ರಾಮ-ರಾವಣರ ಯುದ್ಧವಾರಂಭವಾದಾಗ ಅತ್ಯುಗ್ರವಾಗಿ ಅದು ನಡೆಯಿತು. ಎರಡು ಬಾರಿ ರಾವಣನನ್ನು ರಾಮನು ಪರಾಜಯಗೊಳಿಸಿದ ಮೇಲೆ ಈಗ ಮೂರಕ್ಕೆ ಮುಕ್ತಾಯವೆಂಬಂತೆ ಸಂಹಾರದ ಸಂದರ್ಭ. ಶ್ರೀರಾಮನು ಅಸ್ತ್ರಪ್ರಯೋಗದಿಂದ ರಾವಣನ ತಲೆಯನ್ನು ಕತ್ತರಿಸಿದರೆ, ಅವನ ತಲೆ ಮತ್ತೆ ಉದ್ಭವಿಸಿತು. ಹೀಗೇ ನೂರೊಂದು ಬಾರಿ ಆದ ನಂತರ ಶ್ರೀರಾಮನು ರಾವಣನ ಹೃದಯಕ್ಕೆ ಗುರಿಯಿಟ್ಟನು. ಬ್ರಹ್ಮಾಸ್ತ್ರಪ್ರಯೋಗವನ್ನು ಮಾಡಿ, ರಾವಣಸಂಹಾರವನ್ನು ಮಾಡಿ ತನ್ನ ಅವತಾರದ ಧ್ಯೇಯೋದ್ದೇಶವನ್ನು ರಾಮಚಂದ್ರನು ಪೂರೈಸಿದನು.
ಇಲ್ಲೂ ಒಂದು ಪಾಠವಿದೆ. ಹೊರಗೆ ಕಾಣುವ ತಲೆಗಳು ರಾವಣನ ದೌಷ್ಟ್ಯದ ಅಭಿವ್ಯಕ್ತಿ ಮಾತ್ರ. ಅವನ್ನು ತರಿದರೆ ಸಾಲದು. ಅವುಗಳ ಮೂಲಕ್ಕೆ ಹೋಗಿ, ಎಂದರೆ ಹೃದಯಕ್ಕೆ ಗುರಿಯಿಟ್ಟು, ಅದನ್ನು ಉನ್ಮೂಲನಮಾಡುವುದು ಮುಖ್ಯ.
ನಮ್ಮ ಭೂಮಿಯಲ್ಲಿ ಈಗ ನಾವು ನೋಡುತ್ತಿರುವ ಯುದ್ಧದ ಸನ್ನಿವೇಶದಲ್ಲಿ ನಮ್ಮ ಶತ್ರುದೇಶದ ವರ್ತನೆಗೂ, ಮೇಲೆ ವಿಮರ್ಶಿಸಿದ ರಾವಣನ ವರ್ತನೆಗೂ ಹೋಲಿಕೆಗಳು ಇದ್ದಂತಿವೆ, ಅಲ್ಲವೆ? ಯುದ್ಧವು ತಪ್ಪಿದರೆ ಒಳ್ಳೆಯದೇ ಎಂದಾದರೂ, ರಾವಣವಧದ ಉದ್ದೇಶವನ್ನು ವಿವರಿಸುವ ಶ್ರೀರಂಗಮಹಾಗುರುಗಳ ಈ ಮಾತುಗಳು ಚಿಂತನೀಯ: "ದೇವರಿಗೆ ಶತ್ರುವೇ ಇಲ್ಲದಿದ್ದರೂ ಶ್ರೀರಾಮನು ರಾವಣಾದಿಗಳನ್ನು ಕೊಂದದ್ದು ಏತಕ್ಕೆ? ದುಷ್ಟಶಿಕ್ಷಣ ಕರ್ತವ್ಯ. ದುಷ್ಟ ಎಂದರೆ ಅಭ್ಯುದಯ-ನಿಃಶ್ರೇಯಸ ಘಾತಕರು, ಶಿಷ್ಟರು ಎಂದರೆ ಅಭ್ಯುದಯ-ನಿಃಶ್ರೇಯಸಗಳಿಗೆ ಅನುಕೂಲರು. ತತ್ಕಾಲದ ಹಿಂಸೆ ಹಿಂಸೆಯಲ್ಲ; ಪರಿಣಾಮದ ಹಿಂಸೆಯೇ ಹಿಂಸೆ. ಪರಪೀಡನಕ್ಕೋಸ್ಕರವೇ ಸಂಕಲ್ಪವೆತ್ತಿ ಹುಟ್ಟಿದ ತಿಗಣೆ ಮೊದಲಾದುವುಗಳ ವಿರುದ್ಧ ಹಿಂಸೆ ಹಿಂಸೆಯಲ್ಲ."
ಪ್ರಸ್ತುತ ಕೆಲ ವಾರಗಳ ಪರಿಸ್ಥಿತಿಯ ಬಗ್ಗೆಯೂ ಯೋಚಿಸಿದರೆ, ಈ ಮೇಲಿನ ಮಾತುಗಳು ಇಂದಿಗೂ ಪ್ರಸಕ್ತವೂ ನ್ಯಾಯ್ಯವೂ ಆಗಿವೆ ಎಂದು ಎನಿಸುವುದಲ್ಲವೇ?
ಸೂಚನೆ : 20/9/2025 ರಂದು ಈ ಲೇಖನವು ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.