Saturday, September 27, 2025

ನವರಾತ್ರ - 6 (Navaratra - 6)

ಲೇಖಕರು : ವಿದ್ವಾನ್ ಅನಂತ ಬಿ.ಜಿ.

ಪ್ರತಿಕ್ರಿಯಿಸಿರಿ (lekhana@ayvm.in)



ನವರಾತ್ರಿಯು ಬರುವ ಸಮಯದಲ್ಲಿ ಹೊರಗಡೆ ಪ್ರಕೃತಿ ಹೇಗಿರುತ್ತದೆ ಎಂಬುದನ್ನು ಗಮನಿಸಬೇಕು. ಆಗಿನ್ನೂ ಮಳೆಗಾಲ ಮುಗಿದಿರುತ್ತದೆ. ನೀರಿನ ಆಕರಗಳೆಲ್ಲವೂ ತುಂಬಿ ತುಳುಕುತ್ತಿರುತ್ತವೆ. ಕೆರೆ ಕುಂಟೆ ನದಿ ಸರೋವರ ಹೀಗೆ ಎಲ್ಲ ಕಡೆಗಳಲ್ಲಿಯೂ ತುಂಬಿಕೊಂಡಿರುವ ಸ್ವಚ್ಛವಾದ ನೀರು. ಚಿಗುರೆಲೆಗಳಿಂದ ಸಮೃದ್ಧವಾಗಿ ಹಸಿರು ಸೀರೆಯನ್ನುಟ್ಟು ಸಸ್ಯ ಶಾಮಲೆಯಾಗಿರುವ ಭೂಮಿತಾಯಿ. ಅಲ್ಲದೆ ವಿಶೇಷವಾಗಿ ಇದು ಎಲ್ಲ ರೀತಿಯ ಪುಷ್ಪಗಳೂ ಅರಳುವ ಸಮಯ. ಹೀಗೆ ತನ್ನ ಕೊಳೆಯನ್ನೆಲ್ಲಾ ತೊಳೆದುಕೊಂಡು ಪ್ರಕೃತಿ ಮಂಡಲವೇ ಶುಭ್ರವಾಗಿ ನವತ್ವದಿಂದಲೂ ನವೊಲ್ಲಾಸದಿಂದಲೂ ಕೂಡಿಕೊಳ್ಳುವ ಸಮಯವಿದು. ಹಾಗಾಗಿಯೇ ನವರಾತ್ರವು ಎಲ್ಲರ ಜೀವನದಲ್ಲಿಯೂ ನವತ್ವವನ್ನು ಉಂಟುಮಾಡುವ ಕಾಲ. ಪ್ರಕೃತಿ ರೂಪಿಣಿಯಾದ ಜಗಜ್ಜನನಿಯನ್ನು ಆರಾಧಿಸಿ ನಮ್ಮ ನಮ್ಮ ಪ್ರಕೃತಿಗಳನ್ನು ಶುದ್ಧವಾಗಿಸಿಕೊಳ್ಳುವ ಕಾಲವೂ ಹೌದು.


       ಇಷ್ಟಲ್ಲದೇ ಈ ಹತ್ತುದಿವಸಗಳ ಕಾಲದಲ್ಲಿ ಮತ್ತೊಂದು ವಿಶೇಷವನ್ನೂ ಮಹರ್ಷಿಗಳು ಗುರುತಿಸಿದ್ದಾರೆ. ವಿವಾಹ ಉಪನಯನ ಗೃಹನಿರ್ಮಾಣ ನಾಮಕರಣ ಇತ್ಯಾದಿ ಶುಭಕಾರ್ಯಗಳನ್ನು ಮಾಡಲು ಒಳ್ಳೆಯ ದಿವಸ ನಕ್ಷತ್ರ ತಿಥಿ ಮುಹೂರ್ತಗಳು ಆವಶ್ಯಕ. ಆದರೆ ಈ 10 ದಿವಸಗಳಲ್ಲಿ ಅಂತಹ ತಿಥಿ ನಕ್ಷತ್ರಗಳು ಯಾವುದನ್ನೂ ನೋಡದೆ ಯಾವ ಶುಭಕಾರ್ಯವನ್ನು ಬೇಕಾದರೂ ಮಾಡಬಹುದಾಗಿದೆ. ಅದರಲ್ಲಿಯೂ ವಿಜಯ ದಶಮಿಯ ದಿವಸಕ್ಕೆ ಆ ಮಹಾಮಹಿಮೆ ವಿಶೇಷವಾಗಿ ಇದೆ. ಎಂದರೆ ಆ ಇಡೀ ದಿವಸ ಕೇವಲ ಶುಭ ಮೂರ್ತಗಳಿಂದಲೇ ತುಂಬಿದೆ ಎಂದು ಜ್ಞಾನಿಗಳು ಎತ್ತಿ ಹೇಳಿದ್ದಾರೆ. ಅಂದು ಆಚರಿಸಿದ, ಅಂದು ಪ್ರಾರಂಭಿಸಿದ ಯಾವುದೇ ಕಾರ್ಯವೂ ಯಶಸ್ವಿಯಾಗುತ್ತದೆ.


      ‌ ಪ್ರಸ್ತುತ ಈ ವರ್ಷ ಪಂಚಮೀ ತಿಥಿಯು ಎರಡು ದಿವಸ ಬಂದಿರುವುದರಿಂದ ನವರಾತ್ರಿ ಹಬ್ಬವು ಒಟ್ಟು 11 ದಿವಸಗಳ ಕಾಲ ಆಚರಿಸಲ್ಪಡುತ್ತದೆ. ನಿನ್ನೆಯ ದಿವಸ ಆವಾಹನೆ ಮಾಡಿದ ಧೂಮ್ರಹಾ ದುರ್ಗಾದೇವಿಯನ್ನೇ ಇಂದು ಕೂಡ ಧೂಪ ದೀಪ ನೈವೇದ್ಯಗಳನ್ನು ಅರ್ಪಿಸಿ ಪೂಜಿಸಬೇಕು.


ಸೂಚನೆ: 27/9//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ