Saturday, September 27, 2025

ನವರಾತ್ರ - 5 (Navaratra - 5)

ಲೇಖಕರು : ವಿದ್ವಾನ್ ಅನಂತ ಬಿ.ಜಿ.

ಪ್ರತಿಕ್ರಿಯಿಸಿರಿ (lekhana@ayvm.in)




'ಶೈವ ವೈಷ್ಣವ ಶಾಕ್ತ ಸೌರ ಗಾಣಪತ ಮತ್ತು ಕೌಮಾರ ಎಂದು ಭಕ್ತ ದರ್ಶನಕ್ಕೆ ಸಂಬಂಧ ಪಟ್ಟಂತೆ ಆರು ಬೇರೆ ಬೇರೆ ದರ್ಶನಗಳಿವೆ. ಅವು ಷಡ್ದರ್ಶನಗಳು ಎಂಬ ಹೆಸರಿನಿಂದ ಪ್ರಸಿದ್ಧವಾಗಿವೆ. ಆದರೆ ಆ ಎಲ್ಲ ಪಂಥದವರೂ ಶ್ರದ್ಧೆಯಿಂದ ಆಚರಣೆ ಮಾಡುವ ಹಬ್ಬ ಈ ನವರಾತ್ರ. ಏಕೆಂದರೆ ಈ ಪರ್ವದಲ್ಲಿ ವಿಶೇಷವಾಗಿ ಪೂಜಿಸಲ್ಪಡುವವಳು ಶಕ್ತಿ.  ಭಕ್ತಿಪಂಥದ ಎಲ್ಲ ದೇವತೆಗಳೂ ಕೂಡ ಶಕ್ತಿ ಸಂಪನ್ನರೇ ಆಗಿರುವುದರಿಂದ ಅವರೆಲ್ಲರೂ ಈ ಪರ್ವದ ಆಚರಣೆಯಿಂದ ಸಂತುಷ್ಟರಾಗುತ್ತಾರೆ'- ಎಂದು ಅಪ್ಪಣೆ ಕೊಡಿಸಿದ್ದಾರೆ ಪೂಜ್ಯರಾದ ರಂಗಪ್ರಿಯ ಶ್ರೀಶ್ರೀಗಳವರು. ಹಾಗೆ ನೋಡಿದರೆ ಎಲ್ಲ ದೇವತೆಗಳೂ ಕೂಡ ತಮ್ಮ ತಮ್ಮ ಪತ್ನಿಯರಿಂದ ಕೂಡಿದವರೇ ಆಗಿದ್ದಾರೆ.  ಆ ಪತ್ನಿಯರು ಯಾರು ಎಂದರೆ ಅವರೇ ಶಕ್ತಿರೂಪಿಣಿಯರು. ಹಾಗಾಗಿ ಎಲ್ಲ ದೇವತೆಗಳೂ ಶಕ್ತಿವಿಶಿಷ್ಟರೇ ಆಗಿದ್ದಾರೆ ಎಂದು ಹೇಳಲು ಅಡ್ಡಿಯಿಲ್ಲ. ಈ ನವರಾತ್ರಿ ಎಂಬುದು ಭಗವಂತನ ಶಕ್ತ್ಯಂಶವನ್ನೇ ವಿಶೇಷವಾಗಿ ಪೂಜಿಸುವ ಹಬ್ಬಗಳ ಸರಮಾಲೆ. ಹಾಗಾಗಿ ಸೃಷ್ಟಿಯಲ್ಲೆಲ್ಲಾ ಆದ್ಯಂತವಾಗಿ ತುಂಬಿಕೊಂಡಿರುವ ಆ ಶಕ್ತಿರೂಪಿಣಿಯರ  ವಿವಿಧ ರೂಪಗಳ ಆರಾಧನೆಯೇ ಇಲ್ಲಿನ ವೈಶಿಷ್ಟ್ಯ.


        ಪ್ರಸ್ತುತ ಐದನೆಯ ದಿವಸದ ದೇವಿಯ ಹೆಸರು ಧೂಮ್ರಹಾದುರ್ಗೆ ಎಂದು.  ಅವಳ ಸ್ವರೂಪ ಇಂತಿದೆ-

.

ಚತುರ್ಭುಜಾಂ ಸುವರ್ಣಾಭಾಂ

 ಶಂಖ-ಚಕ್ರ-ಗದಾಂಬುಜಾಮ್

 ಪಂಚಮ್ಯಾಂ ಪೂಜಯೇತ್ ದೇವೀಂ

 ಸದಾ ಮಕರವಾಹಿನೀಮ್//


ಧೂಮ್ರಹಾ ದುರ್ಗೆಯು ಗಂಗೆಯಂತೆಯೇ ಸದಾ ಮಕರ ವಾಹನಳು. ಎಂದರೆ ಮೊಸಳೆಯನ್ನೇ ವಾಹನವಾಗಿ ಉಳ್ಳವಳು. ನಾಲ್ಕು ಭುಜಗಳನ್ನು ಹೊಂದಿದ್ದು ನಾಲ್ಕು ಕೈಗಳಲ್ಲಿ ಕ್ರಮವಾಗಿ ಶಂಖ ಚಕ್ರ ಗದಾ ಮತ್ತು ಕಮಲ ಪುಷ್ಪವನ್ನು ಧರಿಸಿರುವವಳು. ಶರೀರವೆಲ್ಲವೂ ಥಳಥಳಿಸುವ ಚಿನ್ನದ ಬಣ್ಣದಿಂದ ಕೂಡಿಕೊಂಡಿದ್ದು ಅತ್ಯಾಕರ್ಷಕವಾದ ದೇಹ ಕಾಂತಿಯಿಂದ ಬೆಳಗುವವಳು. ಇಂತಹ ದೇವಿಯನ್ನು ಐದನೆಯ ದಿವಸದಲ್ಲಿ ಶ್ರದ್ಧೆಯಿಂದ ಆವಾಹಿಸಿ ಮಂಟಪದ ಮಧ್ಯದಲ್ಲಿ ಪ್ರತಿಷ್ಠಾಪಿಸಿ ಪೂಜಿಸಬೇಕು.


ಸೂಚನೆ: 26/9//2025 ರಂದು ಈ ಲೇಖನ ವಿಜಯವಾಣಿಯ ಸುದಿನ ಲ್ಲಿ ಪ್ರಕಟವಾಗಿದೆ