Saturday, February 15, 2020

ನಮ್ಮೊಳಗಿನ ಇಲಿಯ ಕಥೆ. (Nammolagina iliya kathe.)

ಲೇಖಕರು:  ಡಾ || ಮೋಹನ ರಾಘವನ್
(ಪ್ರತಿಕ್ರಿಯಿಸಿರಿ lekhana@ayvm.in)
ಋಷಿಗಳೊಬ್ಬರು ಹೊಳೆಯಲ್ಲಿ ಅರ್ಘ್ಯವನ್ನು ಬಿಡುತ್ತಿದ್ದರು. ದಿಢೀರನೆ ಹದ್ದೊಂದು ಆಕಾಶದಲ್ಲಿ ತಲೆಯಮೇಲೆ ಹಾದು  ಹೋಯಿತು. ಅದರ ತೀಕ್ಷ್ಣವಾದ ಹಿಡಿತವನ್ನು ತಪ್ಪಿಸಿಕೊಂಡು ಕೆಳಕ್ಕೆ ಬಿದ್ದ ಇಲಿಯೊಂದು ಋಷಿಗಳ ಕೈಸೇರಿತು. ಪರಮ ಕರುಣಾಳುವಾದ ಋಷಿಗಳು ಬೆದರಿ ಬಿಮ್ಮನಾದ ಇಲಿಯನ್ನು ಸಂರಕ್ಷಿಸುವುದಾಗಿ ಮಾತುಕೊಟ್ಟು, ತಮ್ಮ ಮಂತ್ರಶಕ್ತಿಯಿಂದ ಇಲಿಯನ್ನು ಸಣ್ಣ ಹುಡುಗಿಯನ್ನಾಗಿ ಪರಿವರ್ತಿಸಿದರು. ಆಕೆಯನ್ನು ಸಾಕು ಮಗಳಾಗಿ, ಬೆಳೆಸಿ ಪೋಷಿಸುತ್ತಾ ಬಂದರು. ಅನೇಕ ವರ್ಷಗಳು ಕಳೆದು, ಯುವತಿಯಾದ ತನ್ನ ಮಗಳಿಗೆ ವಿವಾಹ ಮಂಗಳವನ್ನು ಕೈಗೊಳ್ಳಬೇಕೆಂದು ಯೋಗ್ಯ ವರಾನ್ವೇಷಣೆ ಪ್ರಾರಂಭಿಸಿದರು. ತಮ್ಮ ತಪಶಕ್ತಿಯಿಂದ  ಸೂರ್ಯನನ್ನು ಆಹ್ವಾನಿಸಿ, ಮಗಳನ್ನು "ತೇಜಸ್ವಿಯೂ ಲೋಕಪ್ರಕಾಶಕನೂ ಆದ ಸೂರ್ಯನನ್ನು ಮದುವೆಯಾಗುವೆಯಾ?" ಎಂದು ಕೇಳಿದರು . ಮಗಳು ಒಪ್ಪಲಿಲ್ಲ. "ಈತನನ್ನ ನೋಡಲೂ ಸಾಧ್ಯವಿಲ್ಲ ನನ್ನಿಂದ ! ಕಣ್ಣೇ ಕುಗ್ಗಿಹೋಗುತ್ತಿದೆ " ಎಂದಳು. ಸೂರ್ಯನು ಋಷಿಗಳಿಗೆ ಸಲಹೆ ನೀಡಿದ-  "ಮೇಘಗಳ ರಾಜ ನನ್ನನ್ನೂ ಆವರಿಸುವನು. ನಂಗಿಂತಲೂ ಶ್ರೇಷ್ಠ.  ಆತನನ್ನು ವರಿಸಿರಿ". ಮೇಘರಾಜ ಬಂದ. ಹುಡುಗಿಯಾದರೋ ಒಪ್ಪಲಿಲ್ಲ. ವಾಯುದೇವನು ಮತ್ತಷ್ಟು ಬಲಿಷ್ಠನು.  ಮೇಘವನ್ನೂ ಅಟ್ಟಿಬಿಡುತ್ತಾನೆಂದು ವಾಯು ಭಗವಂತನನ್ನು ಕರೆತಂದಾಯಿತು. "ಇವನು ನಿಲ್ಲುವುದೇ ಇಲ್ಲವಲ್ಲಪ್ಪ !" ಎಂದು ಕುಂಟುನೆಪ ಹುಡುಕಿದಳು ಮಗಳು. ವಾಯುದೇವನನ್ನೂ ತಡೆದು ನಿಲ್ಲಿಸುವ ಪರ್ವತರಾಜನನ್ನು ತೋರಿಸಿ ಮದುವೆಯಾಗುವೆಯಾ ಎಂದು ಕೇಳಿದರು ಋಷಿಗಳು. ಮಗಳು ಸರ್ವಥಾ ಒಪ್ಪಲಿಲ್ಲ. ಮುಗುಳು ನಗೆಯ ನಕ್ಕ ಪರ್ವತರಾಜ ಹೇಳಿದ" ನಂಗಿಂತಲೂ ಬಲಶಾಲಿ ಒಬ್ಬನೇ ! ಅವನು ಮೂಷಕ ರಾಜ, ನನ್ನನ್ನೂ ಕೊರೆದು ಬಿಡುತ್ತಾನೆ ! ಆತನೇ ಸೂಕ್ತ ವರ ". ಮೂಷಕ ರಾಜ ಬರುತ್ತಿದ್ದಂತೆಯೇ ಮಗಳು ನಾಚಿದಳು. "ಅಪ್ಪ ನಾನು ಒಪ್ಪಿದ್ದೇನೆ. ನನಗೂ ಸಮಾನವಾದ ಒಂದು ರೂಪ ಕೊಡು" ಎಂದು ಕೇಳಿದಳು. ಋಷಿಗಳು ಮಂತ್ರಶಕ್ತಿಯಿಂದ ಆಕೆಯನ್ನು ಪುನಃ ಇಲಿಯನ್ನಾಗಿ ಮಾಡಿಸಿ ಕಳುಹಿಸಿಕೊಟ್ಟರು.

ಈ ಕಥೆಯು ನಮ್ಮ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಯಾವುದೋ ಕರ್ಮವಿಶೇಷದಿಂದ ನಮಗೆ ಈ ಮನುಷ್ಯಜನ್ಮವು ಸಿಕ್ಕಿತು. ಈ ಮಾನುಷಶರೀರದಲ್ಲಿ ಬೆನ್ನುಮೂಳೆಯೆಂಬ ಪರ್ವತರಾಜನಿದ್ದಾನೆ. ಅದರೊಳ್ ಸಂಚರಿಪ ಪ್ರಾಣರೂಪವಾದ ದೇವನಿದ್ದಾನೆ. ಆ ಪ್ರಾಣವು ಊರ್ಧ್ವಕ್ಕೇರಿದಾಗ ಬೆಳಗುವ ಜ್ಞಾನಸೂರ್ಯನೂ ಉಂಟು. ಅಮೃತರಸಧಾರೆಯನ್ನು ಸುರಿಸುವ ಸನ್ನಿವೇಶವೂ ಇದೆ. ಇವು ತಪಸ್ಸಿನಿಂದ ಅಂತರಂಗದಲ್ಲಿ ಅನುಭವಿಸಬಹುದಾದ ಅತ್ಯಂತ ಆನಂದದಾಯಕ ಸಂಗತಿಗಳೆಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಆದರೆ ಇವರೆಲ್ಲರನ್ನೂ ತಿರಸ್ಕರಿಸಿ ನಮ್ಮೊಳಗಿರುವ ಮೂಷಕನು ಮೂಷಕತ್ತ್ವವನ್ನು  ವರಿಸುತ್ತದೆ. "ಮುಷ್" ಎಂಬ ಧಾತುವು ಕಳ್ಳತನವೆಂಬ ಅರ್ಥವನ್ನು ಕೊಡುತ್ತದೆ. ನಮ್ಮಲ್ಲಿರುವ ಇಂದ್ರಿಯಗಳೇ ಆ ಕಳ್ಳಮೂಷಕರು. ಕಾಣಬಾರದ್ದನ್ನು ಕದ್ದು ನೋಡುವ ಕಣ್ಣು; ಕೇಳಬಾರದ್ದನ್ನು ಕದ್ದುಕೇಳುವ ಕಿವಿ; ಅಭೋಜ್ಯವನ್ನೂ ಚಾಪಲ್ಯದಿಂದ ತಿಂದುಹಾಕುವ ನಾಲಗೆ; ಸಂಯಮವನ್ನು ಹಾಳುಮಾಡಿ ಮೂಷಕಗಳು ನಮ್ಮನ್ನು ಒಳ ಆನಂದದ ಅನುಭವದಿಂದ ವಂಚಿಸುತ್ತವೆ. ಆದರೆ ವಿಘ್ನನಿವಾರಕನಾದ ಗಣೇಶ ಇವುಗಳನ್ನು ಪತ್ತೆಹಚ್ಚಿ, ಬಂಧಿಸಿ ವಶದಲ್ಲಿ ಇಟ್ಟುಕೊಳ್ಳುತ್ತಾನೆ. ಹಾಗಾದರೇನೇ ಎಲ್ಲ ಪೂಜೆ-ತಪ-ಜಪಗಳು ಫಲಿಸುವುದು. ಈ ಕಾರಣದಿಂದ ಗಣಪತಿಗೆ ಆದ್ಯಪೂಜೆ. ಈ ಗಣೇಶನು ನಮ್ಮ ಬಾಳನ್ನು ಸಾರ್ಥಕಗೊಳಿಸಲಿ !.


ಸೂಚನೆ: 15/02/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಯಲ್ಲಿ ಪ್ರಕಟವಾಗಿದೆ.