Friday, February 7, 2020

ಮೋಕ್ಷಕ್ಕೆ ಎರಡು ದಾರಿ (Mokshakke eradu daari)

ಲೇಖಕರು: ಶ್ರೀ ವಿದ್ವಾನ್ ನರಸಿಂಹ ಭಟ್ಟರು
(ಪ್ರತಿಕ್ರಿಯಿಸಿರಿ : lekhana@ayvm.in)

 

ಅಷ್ಟಾಂಗ ಯೋಗ ವಿಜ್ಞಾನ ಮಂದಿರದ ಸ್ಥಾಪಕರಾದ ಯೋಗಿವರೇಣ್ಯ ಶ್ರೀರಂಗ ಮಹಾಗುರುಗಳು ಮೋಕ್ಷವನ್ನು ಕುರಿತು ಒಂದಲ್ಲ ಒಂದು ಮಾತನ್ನು ಆಡುತ್ತಲೇ ಇದ್ದರು. ಅವರು “ಮೋಕ್ಷವನ್ನು ಪಡೆಯುವುದು ಪ್ರತಿಮಾನವನ ಕರ್ತವ್ಯವಪ್ಪಾ. ಹೇಗೆ ಒಬ್ಬ ಪ್ರಜೆಗೆ ಹದಿನೆಂಟು ವರ್ಷವಾಯಿತೆಂದರೆ ಮತ ಚಲಾಯಿಸುವ ಹಕ್ಕು ಬರುವುದೋ ಅಂತೆಯೇ ಮಾನವನು ಹುಟ್ಟಿದ ಕ್ಷಣವೇ ಮೋಕ್ಷಕ್ಕೆ ಹಕ್ಕು ಬರುತ್ತಪ್ಪಾ.” ಎಂದು ಹೇಳುತ್ತಿದ್ದರು. ಮೋಕ್ಷವು ಪ್ರತಿಯೊಬ್ಬನಿಂದಲೂ ಪಡೆಯಲೇಬೇಕಾದದ್ದು. ಹಾಗಾದರೆ ಅದನ್ನು ಪಡೆಯುವುದು ಹೇಗೆ ಎಂಬ ಬಗ್ಗೆ ನಿರಂತರವಾಗಿ ಸಾಧನೆ ಶೋಧನೆ ಬೋಧನೆ ನಡೆದುಕೊಂಡು ಬರುತ್ತಲೇ ಇದೆ. ಇದರಿಂದ ಅನೇಕರು ಬದುಕಿನ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ಅವರನ್ನು ಋಷಿ, ಮಹರ್ಷಿ ಎಂಬಿತ್ಯಾದಿ ಪದಗಳಿಂದ ಕರೆಯುತ್ತೇವೆ. ಅವರು ಕಂಡುಕೊಂಡ ಮಾರ್ಗ ಯಾವುದು ?

 ಲೋಕೇಽಸ್ಮಿನ್ ದ್ವಿವಿಧಾ ನಿಷ್ಠಾ ಪುರಾ ಪ್ರೋಕ್ತಾ ಮಯಾನಘ |
ಜ್ಞಾನಯೋಗೇನ ಸಾಂಖ್ಯಾನಾಂ ಕರ್ಮಯೋಗೇನ ಯೋಗಿನಾಮ್ || ಗೀತಾ ೪.೩


ಎಲೈ ಅರ್ಜುನ! ಈ ಹಿಂದೆಯೇ ನಾನು ಲೋಕದಲ್ಲಿ ಎರಡು ಬಗೆಯ ನಿಷ್ಠೆ(ಮಾರ್ಗ)ಯನ್ನು ಹೇಳಿದ್ದೇನೆ. ಸಾಂಖ್ಯರು ಜ್ಞಾನಯೋಗದಿಂದ, ಯೋಗಿಗಳು ಕರ್ಮಯೋಗದಿಂದ ಮೋಕ್ಷವನ್ನು ಪಡೆಯುವರು. ಎಂಬುದಾಗಿ ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಎರಡು ಬಗೆಯ ಮಾರ್ಗವನ್ನು ಹೇಳಿದ್ದಾನೆ. ಜ್ಞಾನಿಯಾದವನು ಜ್ಞಾನದಿಂದ ಮತ್ತು ಕರ್ಮಠನಾದವನು ಕರ್ಮದಿಂದಲೇ ಈ ಸಂಸಾರದಿಂದ ಮುಕ್ತಿ ಪಡೆಯಬೇಕು. ಹಾಗಾದರೆ ಮೋಕ್ಷ ಎಂದರೇನು ? ಮತ್ತು ಅದರ ಸ್ವರೂಪವೇನು ? ಎಂದು ತಿಳಿದಾಗ ಅದನ್ನು ಪಡೆಯಲು ನಾವು ಪ್ರಯತ್ನಿಸಬೇಕು.

ಮೋಕ್ಷ ಎಂದರೆ ಬಿಡುಗಡೆ. ಭಗವಂತನಿಂದ ಬೇರ್ಪಟ್ಟ ಜೀವ ಮತ್ತೆ ಅಲ್ಲೇ ಸೇರಬೇಕು. ಮಾರ್ಕೇಟ್ಟಿಗೆ ಸಾಮಾನು ತರಲೆಂದು ಕಳಿಸಿದ ಮಗುವು ಮನೆಯನ್ನು ಮರೆತು ಮಾರ್ಕೇಟ್ಟಿನಲ್ಲೆ ಸುತ್ತಾಡುವಂತೆ ಜೀವವೂ ಭಗವಂತನಿಂದ ಹೊರಬಂದು. ತನಗೆ ಭಗವಂತ ಕೊಟ್ಟ ವಿವೇಕವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ಅವಿವೇಕದಿಂದ ಭಗವಂತನನ್ನೇ ಮರೆತುಬಿಡುತ್ತಾನೆ. ಇದರಿಂದ ಬೀದಿ ಸುತ್ತುವಂತೆ ಈ ಜನನ ಮರಣ ಎಂಬ ಸಂಸಾರದಲ್ಲಿ ಸಿಲುಕಿರುತ್ತಾನೆ. ಜ್ಞಾನದಿಂದಲೋ ಕರ್ಮದಿಂದಲೋ ಮತ್ತೆ ವಿವೇಕವನ್ನು ಪಡೆದು ಭಗವಂತನ ಸಾನ್ನಿಧ್ಯವನ್ನು ಸೇರುವುದನ್ನೇ- ಈ ಸಂಸಾರದಿಂದ ಬಿಡುಗಡೆ ಹೊಂದುವುದನ್ನೇ ಮೋಕ್ಷ ಎಂದು ಕರೆದಿದ್ದಾರೆ.

ಜ್ಞಾನಮಾರ್ಗ ಮತ್ತು ಕರ್ಮಮಾರ್ಗ ಎಂದರೇನು? 
ಜ್ಞಾನ ಎಂದರೆ ಮೂಲತಃ ಭಗವಂತ-ಪರಬ್ರಹ್ಮವಸ್ತು-ಬೆಳಕು. ಇದರ ಅರಿವನ್ನು-ಇರವನ್ನು ತಿಳಿಯುವ ಕ್ರಮಕ್ಕೆ ಜ್ಞಾನಮಾರ್ಗವೆಂದು ಕರೆಯುತ್ತಾರೆ. ಅದು ಹೇಗೆ ಎಂಬುದನ್ನು ಈಶಾವಾಸ್ಯೋಪನಿಷತ್ ಹೀಗೆ ಸಾರಿದೆ- ‘ಈಶಾವಾಸ್ಯಮಿದಂ ಸರ್ವಂ’ ಎಂದು. ನಮಗೆ ಕಾಣುವ ಚರಾಚರಾತ್ಮಕವಾದ ಅಣುರೇಣುತೃಣಕಾಷ್ಠದಲ್ಲೂ ಆ ಪರಬ್ರಹ್ಮವಸ್ತುವನ್ನು ಅಂದರೆ ಅದರ ಅದ್ವೈತವನ್ನು ಕಾಣುವುದು. ವಿದ್ಯಾವಿನಯಸಂಪನ್ನನಾದ ಜ್ಞಾನಿಯು ಗೋವಿನಲ್ಲಿ, ಆನೆಯಲ್ಲಿ, ನಾಯಿಯಲ್ಲಿ ಮತ್ತು ನಾಯಿಯನ್ನು ತಿನ್ನುವವನಲ್ಲೂ ಯಾವ ಬೇಧ ಭಾವವನ್ನೂ ಕಾಣದೆ ಎಲ್ಲರನ್ನೂ ಸಮವಾಗಿ (ನಿರ್ದೋಷಂ ಹಿ ಸಮಂ ಬ್ರಹ್ಮ) ಕಾಣುತ್ತಾನೆ. ಅಂತಹವನನ್ನೇ ನಿಜವಾದ ಜ್ಞಾನಿ ಎಂದು ಕರೆಯುತ್ತಾರೆ. ಅವನು ಎಲ್ಲವನ್ನು ಸಮವಾಗಿ ನೋಡುವುದರಿಂದ ಶೋಕಮೋಹಗಳಿಗೆ ಅವಕಾಶವಿಲ್ಲ. ಶೋಕಮೋಹಗಳಿಗೆ ಅವಕಾಶವಿಲ್ಲದ್ದರಿಂದ ಅವುಗಳಿಂದಲೇ ಜನಿಸುವ ಅವಿದ್ಯಾಕಾಮಕರ್ಮಗಳಿಗೆ ಅವಕಾಶವಿರುವುದಿಲ್ಲ. ಯಾವಾಗ ಕರ್ಮದ ಲೇಪವಿರುವುದಿಲ್ಲವೋ ಆಗ ಆ ಜೀವ ಮುಕ್ತ ಎಂದರ್ಥ. ಇದನ್ನೇ ಜ್ಞಾನಮಾರ್ಗ ಎಂದು ಕರೆಯಲಾಗಿದೆ. ‘ಜ್ಞಾನಾದೇವ ತು ಕೈವಲ್ಯಂ’ ಎಂಬುದಕ್ಕೆ ಇದೇ ಅರ್ಥ.  

ಇನ್ನೊಂದು ಮಾರ್ಗ ಕರ್ಮಮಾರ್ಗ. ಕರ್ಮದಿಂದಲೇ ಜನಕಾದಿ ಮಹಾಜನರು ಸಂಸಿದ್ಧಿಯನ್ನು ಪಡೆದರು. ಯಜ್ಞಕ್ಕೆ ಹೊರತಾದ ಕರ್ಮವೆಲ್ಲವೂ ಬಂಧನವನ್ನು ಉಂಟುಮಾಡುತ್ತದೆ. ಉಸಿರಾಟದಿಂದ ಹಿಡಿದು ಅಗ್ನಿಹೋತ್ರದವರೆಗಿನ ಶ್ರಮಸಾಧ್ಯ ಯಾಗದವರೆಗಿನ ಪ್ರತಿಯೊಂದು ಕ್ರಿಯೆಯೂ ಯಜ್ಞವೇ. ಇಂತಹ ಕರ್ಮವು ಬಂಧಕವಲ್ಲ ಅದು ಮೋಚಕವೇ ಆಗಿದೆ. ಶಿಷ್ಟರು ಆಚರಿಸಿಕೊಂಡು ಬಂದ ಪ್ರತಿ ಆಚರಣೆಯೂ ಮೋಚಕವೇ.   ಧ್ಯಾನ ತಪಸ್ಸು ಮೊದಲಾದ ಮನೋನಿಗ್ರಹಕರ್ಮಗಳು ಮತ್ತು ಯಜ್ಞಯಾಗಾದಿ ಇಂದ್ರಿಯನಿಗ್ರಹ ಕರ್ಮಗಳಿಂದ ಕರ್ಮಲೇಪಕ್ಕೆ ಒಳಗಾಗದೇ ಕರ್ಮಬಂಧನದಿಂದ  ಬಿಡುಗಡೆ ಹೊಂದುವುದನ್ನೇ ಮುಕ್ತಿ ಎಂದು ಕರೆಯಲಾಗಿದೆ. ಹೀಗೆ ಮೋಕ್ಷಕ್ಕೆ ಜ್ಞಾನ ಮತ್ತು ಕರ್ಮವೆಂಬ ಎರಡು ದಾರಿಗಳು.

ಸೂಚನೆ:  0/02/2020 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ