Sunday, February 9, 2020

ಶ್ರೀ ಶ್ರೀ ರಂಗಪ್ರಿಯಸ್ವಾಮಿಗಳ ೯೩ ನೇ ಜಯಂತ್ಯುತ್ಸವ (Sri Sri RangaPriya Swamigala 93 ne Jayantyutsava)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ : lekhana@ayvm.in)


    (ಯತಿವರೇಣ್ಯ ಶ್ರೀಶ್ರೀ ರಂಗಪ್ರಿಯಮಹಾದೇಶಿಕರು : 10/02/2020)

ಇಂದು ಪೂಜ್ಯ ಶ್ರೀಶ್ರೀರಂಗಪ್ರಿಯಸ್ವಾಮಿಗಳ ೯೩ ನೇ ಜಯಂತ್ಯುತ್ಸವ. ಪೂಜ್ಯರು ಈ ಕಾಲ ಕಂಡ ಋಷಿಯುಗದ ಸನ್ಯಾಸಿ. ಅವರ ಪವಿತ್ರ ಜೀವನವಾಹಿನಿಯು ಅದು ಹರಿದ ಕ್ಷೇತ್ರವನ್ನೆಲ್ಲ ಪಾವನಗೊಳಿಸಿದೆ. ತಮ್ಮ ವಿಚಾರಗಳು, ಬೋಧನೆಗಳೆಲ್ಲಕ್ಕೂ ದೃಷ್ಟಿಕೋಣ-ಸ್ಫೂರ್ತಿ-ಅನುಗ್ರಹ-ಆಶೀರ್ವಾದಗಳನ್ನು ಅಂತರಂಗ ಬಹಿರಂಗಗಳಲ್ಲಿ ನೀಡುತ್ತಿದ್ದುದು ಶ್ರೀರಂಗಮಹಾಗುರುಗಳು ಎಂಬುದನ್ನು ಸ್ಮರಿಸಿಕೊಳ್ಳುತ್ತಿದ್ದ ಅವರ ಅಚಾರ್ಯನಿಷ್ಠೆ ಲೋಕಕ್ಕೇ ಒಂದು ಆದರ್ಶ. "ಸುಖ" ಜೀವನದ ಸ್ವರೂಪಕ್ಕೆ ಸಂಬಂಧಿಸಿದುದು.

ಯಾರೂ ದುಃಖಕ್ಕಾಗಿ ಜೀವನ ಮಾಡಬಯಸುವುದಿಲ್ಲ. ಮನೆಗೆ ಬಂದವರೂ-"ಸುಖವಾಗಿದ್ದೀರಾ? ಆರೋಗ್ಯವಾಗಿದ್ದೀರಾ?" ಎಂದೇ ವಿಚಾರಿಸುತ್ತಾರೆಯೇ ಹೊರತು "ದುಃಖದಿಂದಿದ್ದೀರಾ? ಖಾಯಿಲೆಗಳೆಲ್ಲಾ ಆಗಾಗ ಬರುತ್ತಿದೆಯೇ" ಎಂದಲ್ಲವಲ್ಲಾ! ಧರ್ಮ-ಅರ್ಥ-ಕಾಮ ಮೋಕ್ಷಗಳನ್ನೊಳಗೊಂಡ ಪುರುಷಾರ್ಥಮಯ ಪೂರ್ಣಜೀವನ ನಡೆಸಿ ಅತ್ಯಂತಿಕ ಸುಖವಾದ ಭಗವದಾನಂದಾನುಭವವನ್ನು ಎಲ್ಲ ಜೀವಿಗಳೂ ಪಡೆಯುವಂತಾಗುವುದೇ ಜೀವನದ ನಿಜವಾದ ಧ್ಯೇಯ.

ಹೀಗೆ ಸಾಗುತ್ತದೆ, ಶ್ರೀರಂಗಪ್ರಿಯಸ್ವಾಮಿಗಳ ವಿಚಾರವೈಭವ. ಇಂದಿನ ಕಾಲದಲ್ಲೂ ಇಂತಹ ಜೀವನವನ್ನು ನಡೆಸುವ ಸಾಧನಾಮಾರ್ಗಗಳನ್ನು ಅವರು ನಿರಂತರವಾಗಿ ಬೋಧಿಸಿದ್ದಾರೆ. ಪ್ರಾಯೋಗಿಕವಾಗಿಯೂ ತೋರಿಸಿಕೊಟ್ಟಿದ್ದಾರೆ. ಉದಾಹರಣೆಗೆ ಅವರು ಮಾಡುತ್ತಿದ್ದ ಭಗವದಾರಾಧನೆ. ದೇವರ ಪೂಜೆ-ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಪ್ರಪತ್ತಿ(ಶರಣಾಗತಿ) ಯೋಗಗಳನ್ನು ಒಳಗೊಂಡ ಮಹಾಯೋಗ ಎನ್ನುತ್ತಿದ್ದರು. ಇಂತಹ ಪೂಜೆಯನ್ನು ನಿತ್ಯವೂ ಮಾಡಿ ಅದರ ಆನಂದದಲ್ಲಿ ಅವರು ಮುಳುಗುತ್ತಿದ್ದುದನ್ನು ನೋಡಿದವರಿಗೆ ಆ ಮಹಾಯೋಗದ ದರ್ಶನ ಅವಿಸ್ಮರಣೀಯ.

ಅಂತಹ ಪೂಜೆಯಲ್ಲಿನ ಅಭಿಷೇಕ ನೈವೇದ್ಯ-ಪ್ರಸಾದ-ಪದಾರ್ಥಗಳ ವಿಜ್ಞಾನ, ತೀರ್ಥಪ್ರಸಾದಗಳನ್ನು ತೆಗೆದುಕೊಂಡಾಗ ನಮ್ಮಲ್ಲಾಗುವ ಧರ್ಮಪ್ರಬೋಧಗಳ ಬಗೆಗೆ ತಿಳಿಯಾದ ಭಾಷೆಯಿಂದ ಬರುತ್ತಿದ್ದ ಅವರ ಅಮೃತವಚನಗಳು ಚೇತೋಹಾರಿ. ಶ್ರೀರಂಗಪ್ರಿಯಸ್ವಾಮಿಗಳದ್ದು ನಿಷ್ಕಳಂಕವಾದ ವಿರಕ್ತ ಜೀವನ. ಸತ್ಯೈಕನಿಷ್ಠರಾಗಿ-ಸದ್ವಸ್ತುವಿನಲ್ಲಿ ತಮ್ಮ ಜೀವನವನ್ನು ನ್ಯಾಸವಾಗಿಟ್ಟು ಜೀವನ ನಡೆಸಿದ ಅಪರೂಪದ ಸನ್ಯಾಸಿ. ಹೊರವೇಷ ಮಾತ್ರವಲ್ಲದೇ ಮನೋಧರ್ಮದಿಂದಲೇ ಯತಿಯಾಗಿದ್ದುದು ಅವರ ಸಂಪರ್ಕಕ್ಕೆ ಬಂದವರೆಲ್ಲರ ಅನುಭವ. ಹಿಂದಿನ ಶೃಂಗೇರಿ ಮಠಾಧೀಶರು ಶ್ರೀರಂಗಪ್ರಿಯ ಸ್ವಾಮಿಗಳು ಸನ್ಯಾಸ ತೆಗೆದುಕೊಂಡಾಗ "ಅವರು ಈಗ ಕೇವಲ ಬಟ್ಟೆ ಬದಲಾಯಿಸಿದ್ದಾರಷ್ಟೇ. ಅವರು ಮೊದಲಿನಿಂದಲೂ ಸನ್ಯಾಸಿಗಳೇ" ಎಂದು ಉದ್ಧರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.ಅವರ ೧೩ ನೇ ವಯಸ್ಸಿನಿಂದ ಅಂತಿಮಕ್ಷಣದವರೆಗೂ ಅವರ ಜೀವನ-ಜ್ಞಾನಬೋಧನೆ, ಲೋಕಸಂಗ್ರಹ, ಸಮಾಜಸೇವೆ, ದೇವಾಲಯಗಳ ಜೀರ್ಣೋದ್ಧಾರ, ಬಡವಿದ್ಯಾರ್ಥಿಗಳಿಗೆ-ರೋಗಿಗಳಿಗೆ ಆರ್ಥಿಕ ಸಹಾಯ, ಹಳ್ಳಿಯ ಶಾಲೆಗಳಿಗೆ ಸಹಾಯ-ಇತ್ಯಾದಿ ಹಲವಾರು ಲೋಕಹಿತದ ಪವಿತ್ರ ಸತ್ಕಾರ್ಯಗಳಲ್ಲಿಯೇ ಸಾಗಿತ್ತು. 

ಜೀವಿತದ ಒಂದು ಕ್ಷಣವೂ ವ್ಯರ್ಥವಾಗಬಾರದು. ಭಗವದ್ಧರ್ಮವನ್ನು ಬೆಳೆಸುವುದಕ್ಕಾಗಿಯೇ ಈ ಶರೀರವನ್ನು ಉಪಯೋಗಿಸಬೇಕೆಂಬ ತೀವ್ರತೆ ಅವರದು. ತೀವ್ರ ಅನಾರೋಗ್ಯವನ್ನೂ ಕಿಂಚಿತ್ತೂ ಲೆಕ್ಕಿಸದೇ ಜೀವನ ಮುಗಿಯುವುದರೊಳಗೆ ಶಕ್ತಿಮೀರಿ ಭಗವಂತನ ಕರಣವಾಗಿ ಕೆಲಸಮಾಡಿದ "ಧಾವಂತದ ಸಂತ". ಅವರು ಬಹುಭಾಷಾ ಕೋವಿದರು.

ವಿದ್ವತ್ತು,ವಿಚಾರವಂತಿಗೆಯಲ್ಲಿ ಅವರೊಂದು ವಿಶ್ವಕೋಶ .ತಮಗೆ ನಮಸ್ಕಾರ ಮಾಡಲುಬಂದ ಭಕ್ತರಿಗೆಲ್ಲ "ನಮಸ್ಕಾರ ಒಳಗಿರುವ ಭಗವಂತನಿಗಪ್ಪಾ" ಎಂದು ಆ ನಮಸ್ಕಾರವನ್ನು ಭಗವಂತನಿಗೆ ತಲುಪಿಸುತ್ತಿದ್ದ ಅವರ ಭಾವವೈಭವ ಅದ್ವಿತೀಯ. ದೇವಾಲಯಗಳ ಬಗ್ಗೆ ಸ್ವಾಮಿಗಳ ಆಸ್ಥೆ ಅನನ್ಯವಾದುದು. ಋಷಿಗಳು ನಮ್ಮ ಉದ್ಧಾರಕ್ಕಾಗಿ ತಂದ ದೇವಾಲಯಗಳು ಸ್ಮಾರಕ ಮಂದಿರಗಳಂತೆ(Memory Hall) ನಮ್ಮ ಸ್ವಸ್ವರೂಪವನ್ನು ನೆನಪಿಸುವಂತಹವು ಎಂಬ ಶ್ರೀರಂಗಮಹಾಗುರುವಾಣಿಯನ್ನು


ಬೋಧಿಸುತ್ತಾ ದೇವಸ್ಥಾನಗಳ ದೈವಿಕ-ಆಧ್ಯಾತ್ಮಿಕ ವಿಜ್ಞಾನವನ್ನು ಲೋಕಕ್ಕೆ ತಿಳಿಸಿಕೊಟ್ಟವರು ಸ್ವಾಮಿಗಳು. ದೇವಾಲಯದ ವಿಜ್ಞಾನವನ್ನು ತಿಳಿದುಕೊಳ್ಳದಿರುವುದೇ 'ದೇವಾಲಯ-ನಾಶ' ಎನ್ನುತ್ತಿದ್ದರು. ಹಾಗೆಂದೇ ಅನೇಕ ಪ್ರಾಚೀನ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಲು ಕಾರಣರಾಗಿದ್ದಾರೆ. ಭಾರತೀಯಹಬ್ಬ-ಹರಿದಿನಗಳ ಸಮಗ್ರ ಪರಿಚಯ ಮಾಡಿಸುವ "ಭಾರತೀಯರ ಹಬ್ಬಹರಿದಿನಗಳು" ಎಂಬ ಅವರ ಉದ್ಗ್ರಂಥ ಎಲ್ಲರಿಗೂ ಕೈದೀವಿಗೆಯಾಗಿದೆ. ಶ್ರಾದ್ಧವಿಧಿಯ ಬಗೆಗಿನ "ಶ್ರಾದ್ಧ-ಪಿತೃಪೂಜೆ"ಯಲ್ಲಿ ಆಧುನಿಕರಿಂದ ಪುರೋಹಿತವರ್ಗದವರೆಗೆ ಏಳಬಹುದಾದ ಪ್ರಶ್ನೆಗಳಿಗೆ ಸಮಾಧಾನಕರವಾದ ಉತ್ತರಗಳಿವೆ. ಅವರು ಭಾರತದರ್ಶನ ಪ್ರಕಾಶನದ ಪ್ರಧಾನಸಂಪಾದಕರಾಗಿ ಹರಿವಂಶ,ಭಾಗವತ,ರಾಮಾಯಣ,ಮಹಾಭಾರತಗಳಂತಹ ಸುದೀರ್ಘವಾದ ಸಂಪುಟಗಳ ಲೋಕಾರ್ಪಣಕ್ಕೆ ಕಾರಣರಾಗಿದ್ದಾರೆ.

ಇದಲ್ಲದೇ ನೂರಾರು ವಿಷಯಗಳ ಬಗ್ಗೆ ಆರ್ಯ ಸಂಸ್ಕೃತಿಯೇ ಮೊದಲಾದ ಪತ್ರಿಕೆಗಳಲ್ಲಿ ಅವರ ಲೇಖನಗಳು ಮಾರ್ಗದರ್ಶಿಗಳಾಗಿವೆ. ಉಪನಿಷತ್, ಬ್ರಹ್ಮಸೂತ್ರ, ಯೋಗಸೂತ್ರ, ವೇದ-ವೇದಾಂಗಗಳು, ಭಾರತೀಯ ಸಂಸ್ಕೃತಿಯಲ್ಲಿನ, ಸಾಮಾನ್ಯ ಮನುಷ್ಯನಿಗೂ ಉಪಯುಕ್ತವಾದ ಪಾಪ-ಪುಣ್ಯ, ವೇಷ- ಭೂಷಣಗಳು,ವಿಧಿ-ಪುರುಷಪ್ರಯತ್ನ ಮುಂತಾದವುಗಳ ಬಗ್ಗೆ ಅವರು ನೀಡಿದ ಸಾವಿರಾರು ಪ್ರವಚನಗಳು-ಅವುಗಳ ಹಿಂಬದಿಯಲ್ಲಿ ಬೆಳಗುವ ಸದ್ವಸ್ತುವಿನಲ್ಲಿ ಅವರಲ್ಲಿದ್ದ ಅಚಲವಾದ ನಿಷ್ಠೆ ಅನಿರ್ವಚನೀಯ. ಅವರು ತಮ್ಮ ಪೂರ್ವಾಶ್ರಮದಲ್ಲಿ ನ್ಯಾಷನಲ್ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು. ಅಭಿಜ್ಞಾನಶಾಕುಂತಲ, ರಘುವಂಶ, ಕುಮಾರಸಂಭವ ಮುಂತಾದವುಗಳಲ್ಲಿ ಅವರ ಆಯಸ್ಕಾಂತದಂತಹ ಪಾಠದ ಶೈಲಿ ಬೇರೆಬೇರೆ ಕಾಲೇಜಿನ ವಿದ್ಯಾರ್ಥಿಗಳನ್ನೂ ಅವರ ತರಗತಿಗೆ ಸೆಳೆಯುತ್ತಿದ್ದುದೊಂದು ವಿಶೇಷ. ದ್ವೈತಾದ್ವೈತವಿಶಿಷ್ಟಾದ್ವೈತಗಳ ಸಹಜಸಮನ್ವಯವನ್ನು ಎತ್ತಿ ಹಿಡಿದ ಸಮನ್ವಯಾಚಾರ್ಯರಿವರು.

ಬಾಲಕರಿಂದ ಪ್ರಬುದ್ಧವಿದ್ವಾಂಸರವರೆಗೆ, ಮುಗ್ದಭಕ್ತಿಯ ಕಣ್ಣೀರಿನವರಿಂದ ಮಹಾಜ್ಞಾನಿಗಳವರೆಗೆ ಎಲ್ಲರೂ ಶ್ರೀರಂಗಪ್ರಿಯಸ್ವಾಮಿಗಳಲ್ಲಿ ಬಂದು ತಮ್ಮ ಮನಸ್ಸನ್ನು ತಣಿಸಿಕೊಂಡು, ಅನುಗ್ರಹ-ಮಾರ್ಗದರ್ಶನಗಳನ್ನು ಪಡೆದುಕೊಂಡಿದ್ದಾರೆ. ಇಷ್ಟು ಸಣ್ಣ ಲೇಖನದಲ್ಲಿ ಅನಂತವಾದ ಅವರ ಜೀವನದ ಮುಖಗಳನ್ನು, ಲೋಕಕ್ಕೆ ಅವರ ಕೊಡುಗೆಯನ್ನು ಅರುಹುವುದೆಂತು? ಅವರು 'ಜಂಗಮತೀರ್ಥ'ರಾಗಿ ತಮ್ಮ ನಡೆ-ನುಡಿ-ಉಪದೇಶಗಳಿಂದ ಬಳಿಬಂದವರು ಭವಸಾಗರವನ್ನು ದಾಟಲು ಕಾರಣರಾದರು. ಅವರ ಪಾವನಸ್ಮರಣೆ ನಮ್ಮೆಲ್ಲರ ಜೀವನದ ದಾರಿದೀಪ. ಅವರ ಉಪದೇಶದಂತೆ ಎಲ್ಲರೂ ಭಗವಂತನಿಗಾಗಿ ಜೀವನವನ್ನು ನಡೆಸುವ ಪ್ರಯತ್ನಮಾಡುವುದೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿಯಾಗಿದೆ.