Wednesday, February 12, 2020

ಯಾವುದು ನಿಜವಾದ ಐಶ್ವರ್ಯ? ( Yavudu nijavada aishvarya?)

ಲೇಖಕರು : ಪ್ರಮೋದ್ ರಾಘವನ್
(ಪ್ರತಿಕ್ರಿಯಿಸಿರಿ: lekhana@ayvm.in)

  
ಶ್ವರ್ಯ ಎಂದರೆ ಸಂಪತ್ತು. ಭೋಗದ ವಸ್ತುಗಳ ಸಮೂಹ ಎಂಬುದು ವ್ಯವಹಾರ. ಹಣಕಾಸು, ಚಿನ್ನ-ಒಡವೆ, ಮನೆ, ವಾಹನ, ಬಟ್ಟೆ ಇತ್ಯಾದಿ. ಐಶ್ವರ್ಯವನ್ನೇಕೆ ಬಯಸುತ್ತೇವೆ? ಐಶ್ವರ್ಯವು ಸಂತೋಷ, ಸಂತ್ತೃಪ್ತಿಯನ್ನು ತಂದುಕೊಡುತ್ತದೆ. ಭರ್ಜರಿ ಔತಣ ನಾಲಿಗೆಯನ್ನು ತಣಿಸುತ್ತದೆ, ಸೊಗಸಾದ ಉಡುಪು, ಆಭರಣಾಲಂಕಾರಗಳು ಕಣ್ಣಿಗೆ ಹಿತಕರ. ಒಳ್ಳೆಯ ವಿಶಾಲವಾದ ಮನೆ,  ಮೈ ಮನಗಳಿಗೆ ಸಂತಸವನ್ನು ನೀಡುತ್ತದೆ. ಒಟ್ಟು ಹೇಳುವುದಾದರೆ ಇವೆಲ್ಲವೂ ನಮ್ಮ ಇಂದ್ರಿಯಗಳನ್ನೂ ತನ್ಮೂಲಕ ಮನಸ್ಸನ್ನೂ ತೃಪ್ತಿ ಪಡಿಸುತ್ತವೆ. ಇಂದ್ರಿಯ ಎಂಬ ಪದದ ಹಿಂದಿರುವ ಧಾತುವೂ 'ಪರಮೈಶ್ವರ್ಯ' ಎಂಬರ್ಥವನ್ನು ಹೊಂದಿದೆ.

ಆದರೆ ಐಶ್ವರ್ಯವೆಂದು ಕರೆಸಿಕೊಂಡು ಇಂದ್ರಿಯಗಳನ್ನು ತಣಿಸುವ ಈ ಭೋಗ್ಯ-ಪದಾರ್ಥಗಳು ಶಾಶ್ವತವಲ್ಲ. ಇಂದು ಇರುವ ಪದಾರ್ಥ ನಾಳೆ ಇಲ್ಲವಾಗಬಹುದು. ಆಗ ಸಂತೋಷವೂ ಕ್ಷೀಣವಾಗಿ ದುಃಖಕ್ಕೆ ಕಾರಣವಾಗುತ್ತದೆ. ಆದ್ದರಿಂದಲೇ, ಶಂಕರ ಭಗವತ್ಪಾದರು "ಅರ್ಥಂ ಅನರ್ಥಂ ಭಾವಯ ನಿತ್ಯಂ' ಎಂದು ಹೇಳಿದ್ದಾರೆ. ಹಾಗಾದರೆ ಶಾಶ್ವತವಾದ ಐಶ್ವರ್ಯ ಉಂಟೇ ಎಂಬ ಪ್ರಶ್ನೆ ಹುಟ್ಟುತ್ತದೆ. ಪದಾರ್ಥ ಹೊರಗಿನದ್ದಾದರೂ, ಸಂತೋಷ ಹುಟ್ಟಿದ್ದು ನಮ್ಮಲ್ಲೇ ತಾನೇ !  ಯಾವ ಪದಾರ್ಥದ ಅವಲಂಬನವೂ ಇಲ್ಲದ ಸಂತೋಷವೇ ಶಾಶ್ವತವಾದ ಸುಖ. ಅಂತಹ ಸಂತೋಷವನ್ನು ಪಡೆಯಲೋಸುಗ ಭಾರತೀಯ ಮಹರ್ಷಿಗಳು ತಪಸ್ಸು ಧ್ಯಾನ, ಪೂಜೆ, ನಾಮಸ್ಮರಣೆ ಮುಂತಾದ ಹಲವಾರು ಮಾರ್ಗಗಳನ್ನು ತೋರಿಸಿಕೊಟ್ಟಿದ್ದಾರೆ. ತನ್ಮೂಲಕ ನಮ್ಮೊಳಗಿನ ಭಗವಂತನನ್ನು ಕಂಡು ಅನುಭವಿಸಬಹದು. ಅಂತರಂಗದಲ್ಲಿ ಪರಂಜ್ಯೋತಿ ಸ್ವರೂಪವಾಗಿ ಬೆಳಗುತ್ತಿರುವ ಭಗವಂತನೇ ನಮ್ಮ ನಿಜವಾದ ಐಶ್ವರ್ಯ.

ಅಂತಹ ಪರಮೈಶ್ವರ್ಯವನ್ನು ಆರಿಸಿ ಗಳಿಸಿಕೊಂಡ ಮಹನೀಯರಿಬ್ಬರು ನಮ್ಮ ಇತಿಹಾಸದಲ್ಲಿ ಪ್ರಸಿದ್ಧರು. ಒಬ್ಬ ಸುದಾಮ, ಶ್ರೀ ಕೃಷ್ಣನ ಆಪ್ತ ಗೆಳೆಯ ಹಾಗೂ ಸಾಂದೀಪಿನಿ ಮಹರ್ಷಿಗಳ ಗುರುಕುಲದಲ್ಲಿ  ಸಹಪಾಠಿ. ಸುದಾಮ ಬಡತನದಲ್ಲಿದ್ದು  ಸಂಸಾರ  ಸಾಗಿಸುತ್ತಿದ್ದನು. ಸುದಾಮ ಕೃಷ್ಣನನ್ನು ನೋಡಲು ದ್ವಾರಕೆಗೆ ಬಂದಾಗ, ಕೃಷ್ಣನಿಗೆ ತಂದಿದ್ದ ಸ್ವಲ್ಪವೇ ಅವಲಕ್ಕಿಯನ್ನು ಕೊಟ್ಟನು. ತನ್ನ ಬಡ ಜೀವನದಲ್ಲಿ ದೊರಕಿದ ಐಶ್ವರ್ಯವನ್ನು ಭಕ್ತಿ-ಪ್ರೀತಿಗಳನ್ನೂ ಬೆರೆಸಿ  ಕೃಷ್ಣನಿಗೆ ಸಮರ್ಪಿಸಿದ್ದನು. ಅವನು ಮತ್ತೆ ಊರಿಗೆ ಬಂದಾಗ ಅವನ ಪುಟ್ಟಮನೆ ಅರಮನೆಯಾಗಿ ಬಿಟ್ಟಿತ್ತು. ಆದರೆ ಅವನ ಸಂತೋಷದ ಝರಿ ಹೊರ ಅರಮನೆಯಾಗಿರಲಿಲ್ಲ. ಕೃಷ್ಣನ ಚಿರಸ್ಮರಣೆ, ಪ್ರೀತಿ-ವಿಶ್ವಾಸ, ದರ್ಶನಾನುಭವಗಳೇ ಅವನ ಪರಮೈಶ್ವರ್ಯವಾಗಿತ್ತು. " ಐಶ್ವರ್ಯ ಎಂಬುದು 'ಈಶ್ವರ' ಎಂಬ ಪದದಿಂದಲೇ ಬಂದಿದೆ. ಅವನು ಕೊಟ್ಟಿದ್ದನ್ನು ಅವನಿಗೇ ಕೊಡುವುದೇ ಐಶ್ವರ್ಯದ ಸದುಪಯೋಗ" ಎಂಬ ಶ್ರೀರಂಗಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ.
ಮತ್ತೊಬ್ಬ ಅರ್ಜುನ. ಯುದ್ಧದಲ್ಲಿ ತನ್ನ ಸಹಾಯಕ್ಕೆ ಬಲಿಷ್ಠ ಸೈನ್ಯ ಬೇಕೋ ಅಥವಾ ಒಬ್ಬಂಟಿಯಾಗಿ ನಿರಾಯುಧವಾಗಿರುವ ಕೃಷ್ಣನ ಮಾರ್ಗದರ್ಶನವೇ ಸಾಕೇ ಎಂಬ ಪ್ರಶ್ನೆ ಎದುರಾದಾಗ, ಕೃಷ್ಣನೇ ತನ್ನ ಪರಮೈಶ್ವರ್ಯ ಎಂದು ನಿಂತವನು ಅರ್ಜುನ. ಎಲ್ಲ ಐಶ್ವರ್ಯಗಳ ಸ್ವಾಮಿಯೂ ಅವನೆಂಬ ನಿರ್ಣಯ ಅರ್ಜುನನದು. ಕೃಷ್ಣಪರಮಾತ್ಮನೇ ಪರಮೈಶ್ವರ್ಯ ಎಂದ ಜೀವದ ಸ್ವರೂಪವೇ ಅರ್ಜುನ.  ಹೀಗೆ ದೇವ-ಜೀವ ಇಬ್ಬರೂ ಸೇರಿದ್ದಾಗ ವಿಜಯಶ್ರೀ ಸದಾಸಿದ್ಧವೆಂಬುದು ಗೀತಾವಾಕ್ಯ.   

ಸೂಚನೆ: 11/02/2020 ರಂದು ಈ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ