Friday, February 14, 2020

ಚಿತ್ರ ಕಲೆಯ ಅಂತರಾರ್ಥ (Chitra kaleya Antaraartha)

ಲೇಖಕರು: ಡಾ ।। ಹರ್ಷ ಸಿಂಹ
(ಪ್ರತಿಕ್ರಿಯಿಸಿರಿ: lekhana@ayvm.in)ಚಿತ್ತವನ್ನು ಯಾವುದು ಸೆಳೆಯುತ್ತದೆಯೋ ಅದು ‘ಚಿತ್ರ’. ಪ್ರಕೃತಿಸೌಂದರ್ಯವನ್ನು ಬಿಂಬಿಸುವ ಒಂದು ಚಿತ್ರವನ್ನು ಸಹೃದಯನೊಬ್ಬನು ನೋಡಿದಾಗ, ಅವನ ಚಿತ್ತವು, ಆ ಸುಂದರ ಸನ್ನಿವೇಶದೆಡೆಗೆ ಸೆಳೆಯಲ್ಪಟ್ಟು, ಆನಂದವನ್ನನುಭವಿಸುತ್ತಾನೆ. ಚಿತ್ರವು ನೋಡುಗನ ಚಿತ್ತವನ್ನು ವಿಷಯವೊಂದರೆಡೆಗೆ ಸೆಳೆದು, ಅವನ ಮನಸ್ಸಿನಲ್ಲಿ ಒಂದು ರಸವನ್ನು ಮೂಡಿಸುವುದರಿಂದ ಅದು ಚಿತ್ರವೆನಿಸಿಕೊಳ್ಳುತ್ತದೆ. ಶಿಲ್ಪವೂ ಈ ಕಾರ್ಯವನ್ನು ಚೆನ್ನಾಗಿ ಸಾಧಿಸಬಲ್ಲದ್ದಾಗಿರುವುದರಿಂದ, ಶಿಲ್ಪವನ್ನೂ ಚಿತ್ರವೆಂದೇ ನಮ್ಮ ಶಿಲ್ಪಶಾಸ್ತ್ರಗಳಲ್ಲಿ ಕರೆದಿದ್ದಾರೆ.

ಚಿತ್ರಕ್ಕೆ ವಿಷಯವೇನು ಎಂದು ಗಮನಿಸಿದರೆ, ಅದು ಚಿತ್ರಕಾರನ ಚಿತ್ತವನ್ನ ಅವಲಂಬಿಸಿದೆ. ಚಿತ್ರಕಾರನ ಇಂದ್ರಿಯ, ಮನೋವೃತ್ತಿಗಳು ಅವನ ಮನ:ಪಟಲದಲ್ಲಿ ಮೂಡಿಸಿದ ಚಿತ್ರವನ್ನೇ ಆತನ ಕುಂಚವೂ ಹಿಂಬಾಲಿಸುತ್ತದೆ. ಚಿತ್ರವನ್ನು ಹಿಂಬಾಲಿಸಿದ ಪ್ರೇಕ್ಷಕರ ಚಿತ್ತವು, ಚಿತ್ರಕಾರನ ಚಿತ್ತವೃತ್ತಿಯಲ್ಲೇ ಹೋಗಿ ನಿಲ್ಲುತ್ತದೆ. ಈ ಗುಟ್ಟನ್ನು ಅರಿತ ಭಾರತೀಯ ಮಹರ್ಷಿಗಳು ತಮ್ಮ ಚಿದಾಕಾಶದಲ್ಲಿ, ಅಂತರಂಗದಾಳದಲ್ಲಿ, ಕಂಡುಕೊಂಡ ಸೃಷ್ಟಿತತ್ತ್ವಗಳನ್ನೂ, ದೇವತಾ ರೂಪಗಳನ್ನೂ ಚಿತ್ರ/ಶಿಲ್ಪಗಳ ಮೂಲಕ ಬಹಿರಂಗಪಡಿಸಿದ್ದಾರೆ. ಆ ಚಿತ್ರಗಳ ರಸದಲ್ಲಿ ಮುಳುಗುವ ದರ್ಶಕರಿಗೆ ದರ್ಶನವೇ ತಪಸ್ಸಿನಂತೆ ಒಂದು ಪವಿತ್ರವಾದ ಸಾಧನೆಯಾಗುತ್ತದೆ. ಅಂತಹ ಚಿತ್ರ-ಶಿಲ್ಪವು ಸಹೃದಯನ ಮನಸ್ಸನ್ನು ಸೃಷ್ಟಿಮೂಲದಲ್ಲಿರುವ ಆನಂದಘನನಾದ ಭಗವಂತನೆಡೆಗೆ ಸೆಳೆದು ಪರಿಪೂರ್ಣಾನ೦ದ ರಸಾನುಭವವನ್ನು ಉ೦ಟುಮಾಡುತ್ತದೆ.  ಶಿಲ್ಪ ಎಂಬ ಪದವೇ ‘ಸಮಾಧೀ’ ಎಂಬ ಅರ್ಥವನ್ನು ಸಾರುತ್ತದೆ. ದೇವತಾ ಮೂರ್ತಿಗಳಲ್ಲಿನ ಭಾವ, ಭಂಗಿ, ನೋಟ, ಸೌಂದರ್ಯ, ಮಂದಹಾಸಗಳು ಇಂದ್ರಿಯಗಳಿಗೆ ತಂಪನ್ನು ತಂದುಕೊಡುತ್ತವೆ. ಜೊತೆಗೆ ಆ ಸೌಂದರ್ಯದ ಮೂಲ ನೆಲೆಯಾದ ಯೋಗಾನುಭವದ ಕಡೆಯೂ ಮನಸ್ಸನು ನಡೆಸುತ್ತದೆ.

ದೇವತಾ ಮೂರ್ತಿಗಳನ್ನು ಹೊರತುಪಡಿಸಿ ಪ್ರಕೃತಿಸೌಂದರ್ಯದ ಚಿತ್ರಗಳು, ಪಶು, ಪಕ್ಷಿ, ಲೋಕವ್ಯವಹಾರದ ಅನೇಕ ಚಿತ್ರಶಿಲ್ಪಗಳೂ ಕೂಡ ದೇವಾಲಯಗಳಲ್ಲಿ ಕಂಡುಬರುತ್ತವೆ. ಇದೂ ಸಹಜವೇ. ಜೋಗ ಜಲಪಾತವನ್ನು ನೋಡಲು ಹೊರಟರೂ ಕೂಡ ದಾರಿಯ ಮೋಜು, ಊಟ, ತಿಂಡಿ, ಪಯಣ ಇತ್ಯಾದಿ ಇದ್ದೇ ಇರುತ್ತವೆ. ಇವು ಜಲಪಾತದ ಅಚ್ಚರಿಯ ಸ್ಮರಣೆಯ ಜೊತೆಜೊತೆಗೆ ಬರುವ ಮಧುರಸ್ಮರಣೆಗಳು. ಅಂತೆಯೇ ಸೃಷ್ಟೀಶನ ದರ್ಶನವನ್ನು ಗರ್ಭಗುಡಿಯಲ್ಲಿ ಕಂಡರೂ, ಅತ್ತ ಸಾಗುತ್ತಾ  ಆತನ ಸೃಷ್ಟಿಯ ದರ್ಶನವನ್ನೂ ಮಾಡುತ್ತೇವೆ. ಅದು ಅವನ ವಿಭೂತಿಯೆಂದು ಭಾವಿಸಿ ನೋಡುತ್ತೇವೆ. ಸಹೃದಯನೊಬ್ಬನು ಸುಂದರ ಗಿರಿವನಗಳ ಮಡಿಲಲ್ಲೋ, ಸಾಗರದ ತೀರದಲ್ಲೋ, ನಕ್ಷತ್ರಮಂಡಲದಿಂದ ಕಂಗೊಳಿಸುವ ರಾತ್ರಿಯ ಆಗಸದಡಿಯಲ್ಲೋ ಸಹಜವಾದ ಆನಂದವನ್ನು ಅನುಭವಿಸುತ್ತಾನೆ. ಶ್ರೀರ೦ಗ ಮಹಾಗುರುಗಳ ಮಾತಿನಂತೆ ಭಗವಂತನ ಸೃಷ್ಟಿಯು ಸೃಷ್ಟೀಶನ ಲಕ್ಷಣಗಳಿಂದ ಕೂಡಿರುವುದರಿಂದ, ಇ೦ತಹ ಸನ್ನಿವೇಶಗಳಲ್ಲಿ, ನೋಡುಗನ ಅರಿವಿಗೇ ಬಾರದಂತೆ, ಚಿತ್ತವು, ಸೃಷ್ಟಿಮೂಲದಲ್ಲಿರುವ ಭಗವಂತತನೆಡೆಗೆ ಒಯ್ಯಲ್ಪಡುತ್ತದೆ. ಮನಸ್ಸು ಆಳಕ್ಕೆ ಇಳಿಯುತ್ತದೆ. ಒಳ  ಆನಂದದ ಒಂದು ತುಣುಕನ್ನು ಅವನು ಅನುಭವಿಸುತ್ತಾನೆ. ಈ ದೃಷ್ಟಿಯಲ್ಲಿ, ಸೃಷ್ಟಿಯೇ ಭಗವಂತನ ಒಂದು ಚಿತ್ರವಾಗಿದೆ. ಆ ಭಗವಂತನೇ ಚಿತ್ರಕಾರನಾಗಿ ಎಲ್ಲ ಕಲಾ ಸಾಧಕರಿಗೆ ಆದರ್ಶ. ಆ ವಿಶ್ವಶಿಲ್ಪಿಯೇ ಭಾರತೀಯ ಕಲೆಯ ನೆಲೆ.


ಸೂಚನೆ: 13/02/2020 ರಂದು ಈ ಲೇಖನ ವಿಶ್ವ ವಾಣಿಯ ಗುರು ಪುರವಾಣಿ ಅಂಕಣದಲ್ಲಿ ಪ್ರಕಟವಾಗಿದೆ.