Monday, February 10, 2020

ಮುನಿಪತ್ನಿಯರ ಭಕ್ತಿ - ನಮ್ಮ ಆದರ್ಶ. (Munipathniyara bhakthi - namma aadarsha)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ 
(ಪ್ರತಿಕ್ರಿಯಿಸಿರಿ : lekhana@ayvm.in)



ಮ್ಮೆ  ಶ್ರೀಕೃಷ್ಣಬಲರಾಮರು ಕಾಡಿನಲ್ಲಿ ಗೋಪಾಲಕರೊಡನೆ ಸಾಗಿದ್ದಾಗ ಎಲ್ಲರಿಗೂ ಹಸಿವಾಗುತ್ತದೆ. ಅವರೆಲ್ಲ ಶ್ರೀಕೃಷ್ಣನನ್ನು ಆಹಾರಕ್ಕಾಗಿ ವ್ಯವಸ್ಥೆ ಮಾಡಲು ಪ್ರಾರ್ಥಿಸುತ್ತಾರೆ. ಆಗ ಕೃಷ್ಣನು –ಅನತಿ ದೂರದಲ್ಲಿ ಮುನಿಗಳೆಲ್ಲಾ ಯಜ್ಞವೊಂದನ್ನು ಆಯೋಜಿಸಿದ್ದಾರೆ. ಅವರಲ್ಲಿ ಕೃಷ್ಣಬಲರಾಮರು ಹೇಳಿದರೆಂದು ಪ್ರಾರ್ಥಿಸಿ ಆಹಾರವನ್ನು ತೆಗೆದುಕೊಂಡು ಬನ್ನಿ ಎಂದು ಆಜ್ಞಾಪಿಸುತ್ತಾನೆ. ಗೋಪಾಲಕರು ಆ ಮುನಿಗಳನ್ನು ಕೃಷ್ಣನ ಪರವಾಗಿ ಆಹಾರಕ್ಕಾಗಿ ಪ್ರಾರ್ಥಿಸಿದರು. ಆ ಮುನಿಗಳಾದರೋ ಸ್ವರ್ಗಪ್ರಾಪ್ತಿಗಾಗಿ(ಭಗವತ್ಪ್ರಾಪ್ತಿಗಲ್ಲ!) ಅಂಗೀರಸ ಎಂಬ ಯಜ್ಞದಲ್ಲಿ ಉದ್ಯುಕ್ತರಾಗಿದ್ದರು. ಗೋಪಾಲಕರ ಮಾತಿಗೆ ಮಾರುತ್ತರವನ್ನೂ ಕೊಡದೇ ಅನ್ನವನ್ನೂ ಕೊಡದೇ ಅಹಂಕಾರದಿಂದ ವರ್ತಿಸಿದರು. ಗೋಪಾಲಕರು ನಿರಾಶರಾಗಿ ಹಿಂತಿರುಗಿ ಕೃಷ್ಣನಿಗೆ ನಡೆದುದನ್ನು ತಿಳಿಸಿದರು. ಶ್ರೀಕೃಷ್ಣನು ಅವರಿಗೆ-ಮತ್ತೆ ಹೋಗಿ ಶಾಲೆಯಲ್ಲಿರುವ ಮುನಿಪತ್ನಿಯರಲ್ಲಿ ನನ್ನ ಪರವಾಗಿ ಆಹಾರವನ್ನು ಕೇಳಿ ಎಂದು ಸಲಹೆಮಾಡಿದನು. ಈ ಬಾರಿ ಗೋಪಾಲಕರಿಗೆ ನಿರಾಸೆಯಾಗಲಿಲ್ಲ. ಸದಾ ಕೃಷ್ಣಲೀಲೆಗಳನ್ನುಕೇಳುತ್ತಾ ಮುನಿಪತ್ನಿಯರ ಪವಿತ್ರವಾದ ಮನಸ್ಸುಗಳು ಕೃಷ್ಣಮಯವಾಗಿದ್ದವು. 

ಗೋಪಾಲಕರು ಹೇಳಿದೊಡನೆಯೇ ಶುದ್ಧವಾದ ಪಾತ್ರೆಗಳಲ್ಲಿ ಎಲ್ಲ ಬಗೆಯ ಆಹಾರಗಳನ್ನು ತುಂಬಿಕೊಂಡು ಸಂಭ್ರಮದಿಂದ ಕೃಷ್ಣನಿದ್ದೆಡೆಗೆ ಧಾವಿಸಿದರು. ನದಿಗಳು ಸಾಗರವನ್ನು ಸೇರುವ ಸಂಭ್ರಮದಿಂದ ಸಾಗುವಂತೆ ಎಂದು ಶುಕರು ವರ್ಣಿಸುತ್ತಾರೆ. ಅಲ್ಲಿ ಕೃಷ್ಣನಿಗೆ, ಪರಿವಾರಕ್ಕೆಲ್ಲ ತೃಪ್ತಿಯಾಗುವಂತೆ ಬಡಿಸುತ್ತಾರೆ. ಗಾಢನಿದ್ರೆಯಲ್ಲಿ ಎಲ್ಲ ವಿಷಯಗಳೂ ಮರೆಯುವಂತೆ ಕೃಷ್ಣದರ್ಶನದಿಂದ ಅವರು ಜೀವನದ ಕ್ಲೇಶಗಳನ್ನೆಲ್ಲ ಕಳೆದುಕೊಂಡರು. ಕೃಷ್ಣನು ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿ ಬೀಳ್ಕೊಡುತ್ತಾ ಯಜ್ಞಪೂರ್ತಿಗಾಗಿ ನಿಮ್ಮ ಪತಿಗಳಿದ್ದಲ್ಲಿಗೆ ಹಿಂತಿರುಗಿ ಎನ್ನುತ್ತಾನೆ. ಆಗ ಅವರು ಹೇಳುವ ಮಾತುಗಳು ಬಹಳ ಅರ್ಥಪೂರ್ಣ. ಭಗವಂತನಲ್ಲಿಗೆ ಬಂದಮೇಲೆ ಮತ್ತೆ ಸಂಸಾರಕ್ಕೆ ಹಿಂತಿರುಗಿ ಎಂದು ಹೇಳುವುದು ಯಾವ ನ್ಯಾಯ? ನಿನಗಾಗಿ ಜ್ಞಾತಿಗಳೆಲ್ಲರನ್ನೂ ಬಿಟ್ಟುಬಂದಿದ್ದೇವೆ, ಅವರ ಆಜ್ಞೆಯನ್ನು ಮೀರಿ ನಿನ್ನಲ್ಲಿಗೆ ಬಂದಿರುವಾಗ ಅವರು ಮತ್ತೆ ನಮ್ಮನ್ನು ಹೇಗೆ ಒಪ್ಪಿಕೊಳ್ಳುತ್ತಾರೆ ಎನ್ನಲು, ಕೃಷ್ಣನು - ಅವರು ನಿಮ್ಮನ್ನು ಮೊದಲಿಗಿಂತ ಗೌರವದಿಂದ ನೋಡುತ್ತಾರೆ. ನಿಮ್ಮ ಕರ್ತವ್ಯವನ್ನು ಪೂರ್ಣಗೊಳಿಸಿ. ಎಲ್ಲಿದ್ದರೂ ಮನದಲ್ಲಿ ಮಾತ್ರ ನನ್ನನ್ನೇ ಚಿಂತಿಸುತ್ತಿರಿ, ನನ್ನಲ್ಲೇ ಬಂದು ಸೇರುತ್ತೀರಿ ಎಂದು ಭರವಸೆ ಕೊಟ್ಟ ಮೇಲೆ ಅವರು ಹಿಂತಿರುಗುತ್ತಾರೆ. ಇತ್ತ ಆ ಮುನಿಗಳು ತಮ್ಮ ಅಜ್ಞಾನಕ್ಕಾಗಿ ಪಶ್ಚಾತ್ತಾಪ ಪಟ್ಟು ಇವರನ್ನು ಗೌರವಿಸುತ್ತಾರೆ. ಮಾತ್ರವಲ್ಲ ತಮ್ಮ ಅಧ್ಯಯನ, ಶಾಸ್ತ್ರಜ್ಞಾನ, ಸಾಧನೆ ಎಲ್ಲದಕ್ಕೂ ಧಿಕ್ಕಾರವಿರಲಿ, ಭಗವಂತನೇ ಹೇಳಿದರೂ ಗುರುತಿಸುವ ಸಾಮರ್ಥ್ಯವನ್ನು ನಮ್ಮ ಅಹಂಕಾರದಿಂದ ಕಳೆದುಕೊಂಡೆವು. ನಮ್ಮ ಪತ್ನಿಯರೇ ಧನ್ಯರು. ಯಾವ ಶಾಸ್ತ್ರಾಧ್ಯಯನ ಇಲ್ಲದಿದ್ದರೂ ಭಕ್ತಶಿರೋಮಣಿಗಳಾದ್ದರಿಂದ ಭಗವಂತನನ್ನು ನೋಡುವಂತಾಯಿತು ಎಂದು ಕೊರಗುತ್ತಾರೆ.

ಈ ಕಥೆ ನಮಗೆ ಭಕ್ತಿಯ ಪರಾಕಾಷ್ಠೆ ಎಲ್ಲಕ್ಕಿಂತ ದೊಡ್ಡದು ಎಂಬುದನ್ನು ತಿಳಿಸುತ್ತಿದೆ. "ಪರಮಾತ್ಮನನ್ನು ಎಲ್ಲಾ ಜೀವಗಳೂ ಪತ್ನಿಯು ಪತಿಯನ್ನು ಆಶ್ರಯಿಸುವಂತೆ ಆಶ್ರಯಿಸಬೇಕು. ಶ್ರೀಪತಿಯನ್ನೇ ಅವಲಂಬಿಸಿ ಅವನಿಗೋಸ್ಕರ ಜೀವನವನ್ನು ಮುಡುಪಾಗಿಡಬೇಕು" ಎಂಬ ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ. ಯಜ್ಞದ್ರವ್ಯಗಳು, ಯಜ್ಞಾಗ್ನಿ, ದೇವತೆಗಳು, ಧರ್ಮ ಎಲ್ಲವೂ ಕೃಷ್ಣಮಯವೇ. ಅಂತಹ ಪರಬ್ರಹ್ಮನೇ ಸಾಕ್ಷಾತ್ತಾಗಿ ಬಂದು ಕೇಳಿದರೂ ನಮ್ಮ ಅಹಂಕಾರದ ಅಡ್ಡಗೋಡೆ ಗೊತ್ತಾಗದಂತೆ ಮಾಡುವುದಿದೆ. ಸಮಸ್ತ ವಿದ್ಯೆಗಳೆಲ್ಲವೂ ಭಗವಂತನನ್ನು ಪಡೆಯುವುದಕ್ಕಾಗಿ ಎಂಬುದರ ವಿಸ್ಮರಣೆಯಾದಾಗ ನಮಗೂ ಆ ಮುನಿಗಳಿಗೆ ಆದಂತೆ ಆಗಬಹುದಲ್ಲವೇ? ಮುನಿಪತ್ನಿಯರಂತೆ ಅವನಲ್ಲಿ ಭಕ್ತಿ ಇಡುವವರಾಗೋಣ. 

ಸೂಚನೆ: 10/02/2020 ರಂದು ಈಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ