Saturday, February 29, 2020

ದೇವರಿಗೆ ಪುಷ್ಪಸಮರ್ಪಣೆ (Devarige Puspasamarpaṇe)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್
(ಪ್ರತಿಕ್ರಿಯಿಸಿರಿ : lekhana@ayvm.in)ಮಾನಸ ಪೂಜೆಯಲ್ಲಿ ಸಮಾಧಿಪುಷ್ಪವನ್ನೂ, ಅದರ ವಿಸ್ತಾರವಾದ ಅಹಿಂಸಾ ಮುಂತಾದ ಎಂಟು ಚಿತ್ತವೃತ್ತಿಪುಷ್ಪಗಳನ್ನೂ ಸಮರ್ಪಿಸಿದನಂತರ ಆ ಪುಷ್ಪಗಳ ಪ್ರತೀಕವಾಗಿ ಹೊರಗಡೆಯ ಪುಷ್ಪಗಳನ್ನು ಭಗವಂತನಿಗೆ ಸಮರ್ಪಣೆ ಮಾಡುವುದು ಜ್ಞಾನಿಗಳ ಪೂಜಾವಿಧಾನ.

ಪುಷ್ಪಗಳಲ್ಲಿ ಪೂಜಾಯೋಗ್ಯ ಧರ್ಮಗಳು:
ಭಕ್ತಿಭಾವವಿಲ್ಲದ ಪೂಜೆ ಹೇಗೆ ಭಗವಂತನಿಗೆ ಅಪ್ರಿಯವೋ ಅಂತೆಯೇ ನಿರ್ಗಂಧವಾದ ಹಾಗೂ ದುರ್ಗಂಧದಿಂದ ಕೂಡಿದ ಹೂವುಗಳೂ ಭಗವಂತನಿಗೆ ಅಪ್ರಿಯ. ಆದ್ದರಿಂದ ಕಾಗದದಿಂದ ತಯಾರಿಸಿದ ಹೂವುಗಳನ್ನು ಹೊರಗಡೆಯ ಅಲಂಕಾರಕ್ಕೆ ಬಳಸಬಹುದೇ ಹೊರತು ಪೂಜೆಗಲ್ಲ. ಅನುಕೂಲವಿದ್ದಲ್ಲಿ ಅಲಂಕಾರಕ್ಕೂ ಸುವಾಸನೆಯಪುಷ್ಪಗಳನ್ನೇ ಉಪಯೋಗಿಸಬೇಕು. ಪ್ಲಾಸ್ಟಿಕ್‌ಪದಾರ್ಥವು ಪೂಜಾ-ವಿರುದ್ಧವಾದ ಧರ್ಮಗಳಿಂದ ಕೂಡಿದೆಯೆಂಬುದು ಶ್ರೀರಂಗಮಹಾಗುರುಗಳ ಸಂಶೋಧನೆಯಿಂದ ನಿರೂಪಿತವಾದಸತ್ಯ. ಆದ್ದರಿಂದ ಅದರಿಂದ ತಯಾರಿಸಲ್ಪಟ್ಟ  ಹೂವುಗಳನ್ನು ಬಳಸಲೇಬಾರದೆಂಬುದು ಅವರ ಆಶಯವಾಗಿತ್ತು.
ವೈಷ್ಣವಮೂರ್ತಿಗಳಿಗೆ ಬಿಳಿ ಹಾಗು ಸುವರ್ಣವರ್ಣದ ಹೂವುಗಳು, ಶೈವಮೂರ್ತಿಗಳಿಗೆ ಕೆಂಪು ವರ್ಣದ ಹೂವುಗಳು ಪ್ರಿಯವೆಂಬ ಮಾತಿನಂತೆ  ಬೇರೆಬೇರೆ ಹೂವುಗಳು ಬೇರೆಬೇರೆ ದೇವತೆಗಳ ಪೂಜೆಯಲ್ಲಿ ವಿಶೇಷವಾಗಿ ಉಪಯೋಗಿಸಲ್ಪಡುತ್ತಿವೆ. ಯಾವ ವರ್ಣ ಯಾವ ದೇವತಾ ಭಾವಕ್ಕೆ ನಮ್ಮನ್ನು ಏರಿಸಲು ಸಮರ್ಥವಾಗುತ್ತದೆಯೆಂಬ ವಿಜ್ಞಾನವನ್ನರಿತು ತಂದ ವ್ಯವಸ್ಥೆಯಿದು ಎಂಬಂಶವನ್ನೂ ಶ್ರೀರಂಗಮಹಾಗುರುಗಳು
ತೋರಿಸಿಕೊಟ್ಟರು.

ಕಮಲದ ವೈಶಿಷ್ಟ್ಯ:
ಗುಲಾಬಿ, ಜಾಜಿ, ಮಲ್ಲಿಗೆ, ಸಂಪಿಗೆ ಮುಂತಾದ ಎಲ್ಲ ಪುಷ್ಪಗಳೂ ಪೂಜಾಯೋಗ್ಯವಾದವುಗಳೇ ಆದರೂ ಕಮಲಪುಷ್ಪವು ನಾನಾಕಾರಣಗಳಿಂದ ಪೂಜೆಗೆ ಅತ್ಯಂತ ಪ್ರಶಸ್ತವಾದದ್ದೆಂದು ಜ್ಞಾನಿಗಳಿಂದ ಕೊಂಡಾಡಲ್ಪಟ್ಟಿದೆ. ಎಲ್ಲ ದೇವತೆಗಳ ಪೂಜೆಗೂ ಯೋಗ್ಯವಾಗಿರುವ ಪುಷ್ಪವಿದು. ಪರಮಾತ್ಮನನ್ನು ನೆನಪಿಸಿ ಆ ಭಾವಕ್ಕೆ ಏರಿಸುವ ಧರ್ಮವು ಉಳಿದೆಲ್ಲ ಪುಷ್ಪಗಳಿಗಿಂತ ಇದರಲ್ಲಿ ಹೆಚ್ಚಾಗಿರುವುದೇ ಇದಕ್ಕೆ ಪ್ರಧಾನಕಾರಣ. ಯೋಗಿಗಳ ಅಂತರ್ದರ್ಶನಕ್ಕೆ ವಿಷಯರಾದ ದೇವತೆಗಳಿಗೆ ಆಸನ, ಕೈಯಲ್ಲಿನ ಆಭರಣ, ಅಂಗಾಂಗಗಳ ಸ್ವರೂಪ(ಹಸ್ತಪದ್ಮ, ಮುಖಪದ್ಮ, ನೇತ್ರಪದ್ಮ ಇತ್ಯಾದಿ) ಎಲ್ಲವೂ ಕಮಲವೇ. ಇದು ಅತಿಹೆಚ್ಚುಸಂಖ್ಯೆಯ ದಳಗಳಿಂದ ಕೂಡಿರುವುದರಿಂದ ಯೋಗಿಗಳ ಅಂತರಂಗಯಾತ್ರೆಯಲ್ಲಿ ಅತ್ಯುನ್ನತಮಟ್ಟದಲ್ಲಿನ ಸಹಸ್ರಾರಕಮಲದ ಪ್ರತೀಕವಾಗಿದೆ. ಕಮಲಪುಷ್ಪವು ಉದಯಸೂರ್ಯನ ಕಿರಣಗಳಿಂದ ಮೆಲ್ಲಗೆ ಅರಳುವ ಪರಿಯು ಸಮಾಧಿಯಿಂದ ಎಚ್ಚರಗೊಂಡು ನಿಧಾನವಾಗಿ ತೆರೆಯುವ ಒಬ್ಬ ಯೋಗಿಯ ಕಣ್ಣನ್ನು ಹೋಲುತ್ತದೆ. ತಾವರೆಯು ನೀರಿನಲ್ಲೇ ಇದ್ದರೂ ಹೇಗೆ ನೀರಿಗೆ ಅಂಟುವುದಿಲ್ಲವೋ ಅಂತೆಯೇ ಸಂಸಾರದಲ್ಲೇ ಇದ್ದರೂ ಪುಣ್ಯ-ಪಾಪಗಳ ಫಲವಾದ ಸುಖ-ದುಃಖಗಳಿಗೆ ಜ್ಞಾನಿಯು ಅಂಟಿಕೊಳ್ಳುವುದಿಲ್ಲವೆಂಬ ಜ್ಞಾನಿಯ ಗುಣಲಕ್ಷಣದ ಗುರುತಾಗಿದೆ ಕಮಲ.

ವರ್ಗೀಕರಣ:
ಗೊಬ್ಬರದಗುಂಡಿ, ಮಲಗಳಿಂದ ಕೂಡಿದ ಅಶುಚಿಸ್ಥಾನಗಳಲ್ಲಿ, ಸ್ಮಶಾನಭೂಮಿಗಳಲ್ಲಿ ಬೆಳೆದ ಹೂವುಗಳಲ್ಲಿ ಪೂಜಾಯೋಗ್ಯವಾದ ಧರ್ಮಗಳಿರುವುದಿಲ್ಲ. ತನ್ನ ಮನೆಯಲ್ಲಿ ತಾನೇ ನೀರುಹಾಕಿ ಬೆಳೆಸಿದ ಪುಷ್ಪಗಳು ಉತ್ತಮಕಲ್ಪ. 'ದೇವರಪೂಜೆಗಾಗಿ ಗಿಡ ಪುಷ್ಪಿಸಲಿ' ಎಂಬ ಮನೋಧಾರೆಯ ಜೊತೆಗೆ ಜಲಧಾರೆಯನ್ನು ಬಿಟ್ಟು ಬೆಳಸಿದಾಗ ಆ ಪುಷ್ಪಗಳಲ್ಲಿ ವಿಶೇಷಧರ್ಮಗಳು ಕೂಡಿಬರುತ್ತವೆ.
ಸೃಷ್ಟಿಯಲ್ಲಿ ತಾವಾಗಿಯೇ ಬೆಳೆದ ಪುಷ್ಪಗಳು ಮಧ್ಯಮಕಲ್ಪ, ಅಂಗಡಿಯಿಂದ ಕೊಂಡುಕೊಂಡದ್ದು ಅಧಮಕಲ್ಪ, ಯಾಚಿತವಾದದ್ದು ಅಧಮಾಧಮಕಲ್ಪ, ಕದ್ದುತಂದದ್ದು ಅದಕ್ಕಿಂತಲೂ ಕೆಲಮಟ್ಟದ್ದು ಎಂಬುದಾಗಿ ಜ್ಞಾನಿಗಳು ವರ್ಗೀಕರಿಸಿದ್ದಾರೆ.
ಪುಷ್ಪಗಳನ್ನು ತೊಳೆದು ಶುದ್ಧವಾದ ನೀರಿನಿಂದ ಮಂತ್ರಸಹಿತವಾಗಿ ಪ್ರೋಕ್ಷಿಸಿ ಭಕ್ತಿಪೂರ್ವಕವಾಗಿ ಪೂಜೆಗೆ ಉಪಯೋಗಿಸಬೇಕು.

ಸೂಚನೆ: 29/02/2020 ರಂದು ಈ ಲೇಖನ ಪ್ರಜಾವಾಣಿ ಯಲ್ಲಿ ಪ್ರಕಟವಾಗಿದೆ.