Saturday, February 15, 2020

ದೇವತಾಪೂಜೆ - ಸಂಕ್ಷಿಪ್ತ ವಿವೇಚನೆ (Deevataapuje - Sanksipta vivechane)

ಲೇಖಕರು: ಶ್ರೀಮತಿ ಮೈಥಿಲೀ  ರಾಘವನ್  
(ಮಿಂಚಂಚೆ: lekhana@ayvm.in)


ಪ್ರಪಂಚದ ಎಲ್ಲ ಜನಾಂಗದವರೂ ಅವರವರ ಮತಾನುಸಾರವಾಗಿ ಪೂಜೆಯನ್ನು ಮಾಡುವುದುಂಟು. ಪೂಜೆಗೆ ಪ್ರತಿಯೊಂದು ಜನಾಂಗದಲ್ಲೂ ಅವರದೇ ಆದ ಹೆಸರು, ವಿಧಾನಗಳುಂಟು. ಪ್ರಕೃತ ಲೇಖನವು ಭಾರತೀಯ ಮಹರ್ಷಿಗಳಿಂದ ರೂಪಿಸಲ್ಪಟ ಪೂಜಾವಿಧಾನದ ಕೆಲವು ಅಂಶಗಳನ್ನು ವಿವೇಚಿಸುವುದಾಗಿದೆ.

'ಪೂಜಾ' ಪದದ ವಿವರಣೆ
ಪೂಜೆಯೆನ್ನುವ ಪದ ದೇವರಿಗೆ ಆತನ ಸ್ತೋತ್ರಸಹಿತವಾಗಿ ಮಾಡುವ ಪುಷ್ಪ ಸಮರ್ಪಣೆ, ಗಂಧ ಸಮರ್ಪಣೆ ಇತ್ಯಾದಿ ಉಪಚಾರಗಳನ್ನು ಸೂಚಿಸುತ್ತದೆ. ಈ ಪದ ಜೀವಿಗೆ ಭಗವಂತನ ತಾದಾತ್ಮ್ಯವನ್ನು ಉಂಟುಮಾಡುವ ಕ್ರಿಯೆಯನ್ನು ಸೂಚಿಸುತ್ತದೆ. ಇದಕ್ಕೆ ಆರಾಧನೆ ಎಂಬ ಪದವನ್ನೂ ಬಳಸುವುದುಂಟು. ಆರಾಧನೆಯೆಂದರೆ 'ರಾಧ ಸಂಸಿದ್ಧೌ'-ಎಲ್ಲಾ ವಿಧದಿಂದಲೂ ಪೂರ್ಣಸಿದ್ಧಿಯನ್ನು ಪಡೆಯಲು ನಡೆಸುವ ಕ್ರಿಯೆ.


ಪೂಜೆಯ ಉದ್ದೇಶ
ಒಬ್ಬ ಜ್ಞಾನಿಯಾದವನು ಸಂಸಾರಚಕ್ರದಿಂದ ಬಿಡುಗಡೆಹೊಂದಿ ಮೋಕ್ಷವನ್ನು-ಪಡೆಯುವ ಉದ್ದೇಶದಿಂದ ಮಾತ್ರವೇ ಪೂಜೆಯನ್ನು ಮಾಡುತ್ತಾನೆ. 
ಆದರೆ ಸಾಮಾನ್ಯ ಜನರು ವ್ಯವಹಾರದ ಜೊತೆಯಲ್ಲಿಯೇ ಭಗವಂತನನ್ನೂ ಪಡೆಯಬೇಕಾಗುತ್ತದೆ. ಅಂದರೆ ಧರ್ಮಾರ್ಥಕಾಮಮೋಕ್ಷಗಳಿಗಾಗಿ, ಯೋಗ-ಭೋಗಗಳಿಗಾಗಿ ಪೂಜಿಸುತ್ತಾನೆ. ಆದ್ದರಿಂದಲೇ 'ಚತುರ್ವಿಧಪುರುಷಾರ್ಥ ಫಲಸಿದ್ಧ್ಯರ್ಥಂ' ಎಂದು ಪೂಜಾಕಾಲದಲ್ಲಿ ಸಂಕಲ್ಪವನ್ನು ಮಾಡುವುದು.ಪುರುಷಾರ್ಥಗಳನ್ನು ಪಡೆಯುವ ಉದ್ದೇಶ ಕೆಳಮಟ್ಟದ್ದಲ್ಲ. ಶ್ರೀರಂಗಮಹಾಗುರುಗಳು 'ಇಂದ್ರಿಯಗಳೂ ಕೂಡ ಭಗವಂತನ ಪ್ರಸಾದವಾಗಿಯೇ ನಮಗೆ ಲಭಿಸಿರುವುದರಿಂದ ಅವುಗಳ ಸುಖದಿಂದ ವಂಚಿತರಾಗಬೇಕಿಲ್ಲ. ಗಾಡಿಯನ್ನು ಎಳೆಯುವ ಕುದುರೆಗೂ ಆಹಾರ ನೀಡುವುದು ಹೇಗೆ ಅವಶ್ಯಕವೋ ಹಾಗೆ ಶರೀರಯಾತ್ರೆಗೆ ಸಾಧನವಾದ ಇಂದ್ರಿಯಗಳಿಗೂ ಆಹಾರವನ್ನು ಕೊಡಬೇಕು. ಅರ್ಥ-ಕಾಮಗಳು ಅಪೇಕ್ಷಣೀಯವೇ. ಆದರೆ ಅವು ಧರ್ಮ-ಮೋಕ್ಷಗಳ ಹದ್ದುಬಸ್ತಿನಲ್ಲಿರಬೇಕು' ಎಂಬ ಎಚ್ಚರಿಕೆಯನ್ನು ನೀಡಿದ್ದರು. ಋಷಿಪ್ರಣೀತವಾದ ಪೂಜಾವಿಧಾನವು ಜೀವಿಯನ್ನು ಭಗವಂತನೆಡೆ ಒಯ್ಯುವ ಸೇತುವೆಯಾಗಿದೆ. ಮನಸ್ಸೇ ಜೀವಿಯ ಬಂಧ-ಮೋಕ್ಷಗಳೆರಡಕ್ಕೂ ಕಾರಣ. ಆದ್ದರಿಂದ ಮನಸ್ಸನ್ನು ಭಗವಂತನೆಡೆ ಒಯ್ಯುವುದೇ ಜೀವಿಯ ಉದ್ಧಾರಕ್ಕೆ ದಾರಿ ಎಂಬುದನ್ನು ಮಹರ್ಷಿಗಳು ಸ್ಪಷ್ಟವಾಗಿ ಕಂಡುಕೊಂಡರು. ಆ ಗುರಿಮುಟ್ಟಲು ಕಲ್ಪಿಸಿದ ಅನೇಕ ಕರ್ಮಗಳಲ್ಲಿ ಭಗವಂತನ ಪೂಜೆಯು ಪ್ರಧಾನವಾದ ಅಂಗವಾಗಿದೆ. ಋಷಿಸಂಸ್ಕೃತಿಯಲ್ಲಿ ಪೂಜಾಸಿದ್ಧತೆಯಿಂದ ಹಿಡಿದು ಪೂಜಾವಿಧಾನದ ಪ್ರತಿಯೊಂದು ಅಂಶವೂ ಹೇಗೆ ಈ ಉದ್ದೇಶವನ್ನು ಪೂರೈಸುತ್ತಿದೆ ಎಂಬುದನ್ನು ಸ್ಪಷ್ಟವಾಗಿ ನೋಡಬಹುದಾಗಿದೆ.


ಪೂಜೆಗೆ ಅಧಿಕಾರಿ ಯಾರು?
ಆತ್ಮಸಾಕ್ಷಾತ್ಕಾರವು ಪ್ರತಿಯೊಂದು ಜೀವಿಯ ಹಕ್ಕು ಎಂಬುದಾಗಿ ಶ್ರೀರಂಗಮಹಾಗುರುಗಳು ಘೋಷಣೆ ಮಾಡಿದ್ದಾರೆ. 'ನನ್ನ ಹಕ್ಕಿನ ಸ್ವಾಮಿ'ಎಂಬುದಾಗಿ ಭಕ್ತರೊಬ್ಬರು ಭಗವಂತನನ್ನು ಕೊಂಡಾಡಿದ್ದಾರೆ. ಆ ರೀತಿ ದೇವರನ್ನು ತನ್ನ ಸ್ವಾಮಿ, ಪತಿ ಎಂಬುದಾಗಿ ಭಾವಿಸುವ ಎಲ್ಲ ಚೇತನರಿಗೂ ಭಗವಂತನನ್ನು ಪೂಜಿಸುವ ಅಧಿಕಾರವುಂಟು ಎನ್ನುವುದು ಜ್ಞಾನಿಗಳ ಮತ.  ಪೂಜಿಸುವ ಕ್ರಮದಲ್ಲಿ ವ್ಯತ್ಯಾಸಗಳಿದ್ದರೂ ಪೂಜಾಕಾರ್ಯವು ಸರ್ವರಿಗೂ ವಿಧಿತವೇ.

ಸೂಚನೆ: 15/02/2020 ರಂದು ಈ ಲೇಖನ ಪ್ರಜಾ ವಾಣಿಯಲ್ಲಿ ಪ್ರಕಟವಾಗಿದೆ.