ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
ಇವತ್ತಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತವಿರುವ ವಿಷಯ ಮತದಾನ. ನಮ್ಮ ದೇಶ ಈಗ ಪ್ರಜಾಪ್ರಭುತ್ವ ಮಾದರಿಯ ವ್ಯವಸ್ಥೆಯನ್ನು ಹೊಂದಿರುವುದರಿಂದ ಮತದಾನ ಅತ್ಯಂತ ಮಹತ್ವದ ವಿಷಯವಾಗುತ್ತದೆ. ಇಲ್ಲಿ ಪ್ರಜೆಗಳೇ ಪ್ರಭುಗಳು. ಅಂದರೆ ಎಲ್ಲ ಪ್ರಜೆಗಳ ಜವಾಬ್ದಾರಿ ಬಹಳ ಹೆಚ್ಚಾಗಿರುತ್ತದೆ. ಅವರು ಪ್ರಭುತ್ವ ಸಂಪನ್ನರಾಗಬೇಕಾದರೆ ಜೀವನದಲ್ಲಿ ಒಳಿತು ಯಾವುದು, ಕೆಡಕು ಯಾವುದು, ಸಮಾಜದ ಹಿತ-ಅಹಿತಗಳ ವಿವೇಚನೆ ಆಯಾ ದೇಶದ ಪ್ರಜೆಗಳಿಗೆ ಅವಶ್ಯಕವಾಗಿರಬೇಕಾಗುತ್ತದೆ. ಆದರೆ ಇಂದಿನ ನಮ್ಮ ಪ್ರಜಾ ಪ್ರಭುತ್ವದಲ್ಲಿ ನಾವು ಪ್ರಜೆಗಳು ಅಂತಹ ಹೊಣೆಗಾರಿಕೆಯಿಂದ ನಮ್ಮ ಮತಗಳನ್ನು ಚಲಾಯಿಸುತ್ತಿದ್ದೆವೆಯೇ ಎಂದು ಎಲ್ಲರೂ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕು.
ನಮ್ಮ ಪ್ರಾಚೀನ ಭಾರತದಲ್ಲೂ ಜನಾಭಿಪ್ರಾಯಕ್ಕೆ ಅತ್ಯಂತ ಮಹತ್ವವಿತ್ತು. ರಾಮ ಪಟ್ಟಾಭಿಷೇಕವನ್ನು ಪುರಜನರೆಲ್ಲರ ಅನುಮತಿಯೊಂದಿಗೆ ದಶರಥ ಮಹಾರಾಜ ನಿಶ್ಚಯಿಸಿದ್ದ. ರಾಮರಾಜ್ಯದಲ್ಲಿಯೂ ಜನಾಭಿಪ್ರಾಯಕ್ಕೆ ಎಷ್ಟೊಂದು ಮಹತ್ವವಿತ್ತೆಂಬುದು ರಾಮನ ಜೀವನದಿಂದಲೇ ವ್ಯಕ್ತವಾಗುತ್ತದೆ. ರಾಮನ ಪೂರ್ವಜ ದಿಲೀಪನ ವಿಷಯದಲ್ಲಿ ಅವನು ಎಷ್ಟು ಪ್ರಜೆಗಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ ಎಂದರೆ ಅವನ ರಾಜ್ಯದಲ್ಲಿ ಪ್ರಜೆಗಳನ್ನು ಹೆತ್ತ ತಾಯಿತಂದೆಯರು ಕೇವಲ ಜನ್ಮ ಕೊಟ್ಟ ನಿಮಿತ್ತ ಮಾತ್ರರಾಗಿದ್ದರು. ಅವರ ಎಲ್ಲ ಅವಶ್ಯಕತೆಗಳನ್ನೂ ರಾಜನೇ ಪೂರೈಸುತ್ತಾ ಅವರ ನಿಜವಾದ ತಂದೆ ತಾಯಿಯಂತಿದ್ದನು ಎಂಬ ಉಲ್ಲೇಖ ಬರುತ್ತದೆ. ಅಂದು ಪ್ರಜಾ ಪ್ರಭುತ್ವ ಎನ್ನುವ ಹೆಸರಿನಲ್ಲಿ ವ್ಯವಸ್ಥೆ ಇಲ್ಲದಿದ್ದರೂ ಇಂದಿಗಿಂತ ಪ್ರಜೆಗಳ ಅಭಿಪ್ರಾಯಗಳಿಗೆ ಮಹತ್ವವಿತ್ತೆಂದು ನಮಗೆ ತಿಳಿದುಬರುತ್ತದೆ.
ಇಂದಂತೂ ರಾಜರಿಲ್ಲ ಪ್ರಜೆಗಳೇ ಪ್ರತಿನಿಧಿಗಳನ್ನು ಆರಿಸಬೇಕು. ಪ್ರಜೆಗಳಾದ ನಾವೆಲ್ಲರೂ ಈ ಸಂಸ್ಕೃತಿಯ ವಾರಸುದಾರರು. ನಮ್ಮ ಮೇಲೆ ಈ ದೇಶವನ್ನು ಕಟ್ಟಿ ಬೆಳೆಸುವ, ಇಲ್ಲಿ ನೆಮ್ಮದಿಯ ವಾತಾವರಣ ಎಂದೆಂದಿಗೂ ಇರುವಂತೆ ಮಾಡುವ ಗುರುತರವಾದ ಹೊಣೆ ಇದೆ. ಹಾಗಿದ್ದಮೇಲೆ ಎಲ್ಲರೂ ಈ ವ್ಯವಸ್ಥೆಯನ್ನು ಕಾಪಾಡುವ ಮತದಾನವನ್ನು ಮಾಡಲೇಬೇಕು. ಅಂತಹ ಜವಾಬ್ದಾರಿಯನ್ನು ನಿರ್ವಹಿಸುವಾಗ ದೇಶ ಹಿತ, ಒಳ ಹೊರಗಿನ ದೇಶದ ರಕ್ಷಣೆ ಇವೆಲ್ಲವನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಪ್ರತಿನಿಧಿಗಳನ್ನೇ ಆರಿಸಬೇಕಾಗುತ್ತದೆ. ಒಂದೊಮ್ಮೆ ನಿಂತಿರುವ ಎಲ್ಲರೂ ಅಯೋಗ್ಯರಾಗಿದ್ದಾಗ ಕಡಿಮೆ ಅಯೋಗ್ಯರನ್ನಾದರೂ ಆರಿಸಬೇಕಾಗುತ್ತದೆ. ಇವರೆಲ್ಲರ ರುವಾರಿಯಾಗಿ ರಾಷ್ಟ್ರಮಟ್ಟದಲ್ಲಿ ದೇಶಪ್ರೇಮಿಯಾದ ನಾಯಕನಿದ್ದರೆ ಅವನನ್ನು ಗಮನದಲ್ಲಿಟ್ಟು ಮತವನ್ನಂತೂ ಚಲಾಯಿಸಬೇಕು. ಅದು ನಮ್ಮ ಹಕ್ಕು ಮಾತ್ರವಲ್ಲ ಕರ್ತವ್ಯ ಕೂಡ.
ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು-“ನಮ್ಮ ಜೀವನದಲ್ಲಿ ಗೊತ್ತು,ಗುರಿ,ಶಿಸ್ತು,ಜವಾಬ್ದಾರಿ ಇಷ್ಟೂ ಇದ್ದಾಗ ಒಂದು ಸಮೃದ್ಧ ಜೀವನವಾಗುತ್ತದೆ” ಎಂದು. ಹಾಗಿರಬೇಕಾದರೆ ನಾವೆಲ್ಲಾ ಸುಶಿಕ್ಷಿತರಾಗಬೇಕಾಗುತ್ತದೆ. ನಮ್ಮೊಳಗೇ ಬೆಳಗುವ ಚೈತನ್ಯ,ಅದರ ಆಶಯವೇನು? ಅದರಂತೆ ಬದುಕಿದಾಗ ಅದೆಷ್ಟು ನೆಮ್ಮದಿಯ ಜೀವನ ನಡೆಸ ಬಹುದು ಅಂತಹ ಅನುಭವದ ವ್ಯಕ್ತಿಗಳ ಸಮಾಜ ಎಷ್ಟು ಸುಂದರವಾಗಿರುತ್ತದೆ, ಅಂತಹವರು ಕಟ್ಟಿದ ರಾಷ್ಟ್ರ ಒಂದು ಸಮೃದ್ಧವಾದ ರಾಷ್ಟ್ರವಾಗುತ್ತದೆ ಎಂಬ ಬಗ್ಗೆ ಶಿಕ್ಷಣ ಅವಶ್ಯಕ. ನನಗೇನು ಈ ದೇಶದಿಂದ ಲಾಭವಾಗುತ್ತಿದೆ ಎಂದಷ್ಟೇ ಆಲೋಚನೆ ಮಾಡುವವರು ಸುಶಿಕ್ಷಿತರಲ್ಲ. ನಮ್ಮ ದೇಶದ ಜ್ಞಾನಿಗಳು ಬೆಳೆಸಿದ ಇಲ್ಲಿನ ಸಂಸ್ಕೃತಿ, ನಾಗರೀಕತೆಗಳನ್ನು ಉಳಿಸಿ ಬೆಳೆಸುವಲ್ಲಿ ನಾನೇನು ಮಾಡಬಹುದು ಎಂಬ ಸೇವಾ ಮನೋಭಾವದ ಸಮಾಜ ನಮ್ಮದಾಗಬೇಕು. ಹಾಗಾದಾಗ ಅಂತಹ ವ್ಯಕ್ತಿಗಳು ನಮ್ಮ ಪ್ರತಿನಿಧಿಗಲಾಗಲು ನಮ್ಮ ಮತವನ್ನು ಚಲಾಯಿಸಬೇಕು. ನಾವು ಮನೆಯಲ್ಲೇ ಕುಳಿತರೆ ಒಬ್ಬ ಸ್ವಾರ್ಥಿ, ಸಮಾಜ ಕಂಟಕನಾಗಿರುವವನು ಆರಿಸಿ ಬಂದರೆ ಅದಕ್ಕೆ ನಾವೂ ಕಾರಣರಾದಂತಾಗುತ್ತದೆ. ನಮ್ಮ ಕರ್ತವ್ಯವಾದ ಮತದಾನವನ್ನು ಮಾಡದೇ ಸಮಾಜದಲ್ಲಿ ನೆಮ್ಮದಿಯನ್ನು ನಿರೀಕ್ಷಿಸುವಂತಿಲ್ಲ. “ಧರ್ಮಸ್ಯ ಫಲಮಿಚ್ಚಂತಿ ಧರ್ಮಂ ನೇಚ್ಚಂತಿ ಮಾನವಾಃ “ ಎಂಬಂತೆ ಫಲವನ್ನು ಮಾತ್ರ ನಿರೀಕ್ಷೆ ಮಾಡಿ ಆ ಫಲಕ್ಕಾಗಿ ಯಾವ ಪರಿಶ್ರಮವನ್ನೂ ಪಡದಿರುವವರ ಸಾಲಿಗೆ ನಾವು ಸೇರಬಾರದು. ಸಮಾಜದಲ್ಲಿ ಈ ಬಗೆಯ ಸುಶಿಕ್ಷಣ ವ್ಯಾಪಕವಾಗಿ ಬೆಳೆದಾಗ ಪ್ರತಿನಿಧಿಗಳಾಗಿ ನಿಲ್ಲುವ ಅಂತಹ ವ್ಯಕ್ತಿಗಳು ತಯಾರಾಗುತ್ತಾರೆ. ಅಂತಹವರು ಆರಿಸಿಬಂದಾಗ ಒಂದು ಸುಶಿಕ್ಷಿತ,ಸಮೃದ್ಧ ರಾಷ್ಟ್ರ ನಿರ್ಮಾಣವಾಗುತ್ತದೆ. ಇಂತಹ ಗುರುತರವಾದ ಕಾರ್ಯವಾದ ಮತದಾನವನ್ನು ನಾವೆಲ್ಲರೂ ತಪ್ಪದೇ ಮಾಡೋಣ.