Tuesday, April 23, 2019

ನಿರಾವರಣಗೊಳಿಸುವ ನಿಷ್ಕ್ರಮಣ ಸಂಸ್ಕಾರ. (Niravaranagolisuva nishkramana samskara).

ಲೇಖಕರು: ತಾರೋಡಿ ಸುರೇಶ



ನಿಷ್ಕ್ರಮಣವೆಂದರೆ ಆವರಣದಿಂದ ಕೂಡಿದ ಮನೆಯಿಂದ ಮಗುವನ್ನು ಹೊರಗಡೆ ಕರೆದುಕೊಂಡು ಬರುವುದು. ಇದು ಸ್ತ್ರೀ-ಪುರುಷ ಶಿಶುಗಳಿಬ್ಬರಿಗೂ ಉಂಟು. ಮನೆಯಿಂದ ಹೊರಗೆ ಕರೆದೊಯ್ಯುವುದೂ ಸಂಸ್ಕಾರವೇ? ಎಂಬ ಪ್ರಶ್ನೆ ಸಹಜವೇ. ಆದರೆ“ನಿಷ್ಕ್ರಮಣಮ್ ಚಂದ್ರ,ಸೂರ್ಯ ದೇವತಾ ದರ್ಶನಂ”. ಆವರಣವನ್ನು ದಾಟಿ ಚಂದ್ರ,ಸೂರ್ಯ,ದೇವತೆಗಳ ದರ್ಶನ ಮಾಡಿಸುವುದಕ್ಕೆ ಇಲ್ಲಿ ನಿಷ್ಕ್ರಮಣವೆಂದು ಕರೆದಿದ್ದಾರೆ. ಕೆಲವರು ಧೇನುದರ್ಶನವನ್ನೂ ಹೇಳಿದ್ದಾರೆ.

ಆಚರಣೆ:  

ಮಗುವಿನ ‘ಆಯುರ್ವೃದ್ಧಿ,ಬೀಜ ಮತ್ತು ಗರ್ಭದ ದೋಷಗಳ ನಿವಾರಣೆ ಮತ್ತು ಪರಮೇಶ್ವರ ಪ್ರೀತ್ಯರ್ಥವಾಗಿ’ ಎಂದು ಸಂಕಲ್ಪವನ್ನು ಮಾಡಬೇಕು.ಸಾಮಾನ್ಯವಾಗಿ ನಾಲ್ಕನೇ ಮಾಸದ ಹನ್ನೆರಡನೇ ದಿವಸ ಮಾಡಬೇಕೆಂಬ ಸಂಪ್ರದಾಯ,ಶಾಸ್ತ್ರವಾಕ್ಯಗಳಿವೆ. ಆ ದಿನದಲ್ಲಿ ತಂದೆ ತಾಯಿ ಮತ್ತು ಮಗು ಮೂವರಿಗೂ ಅಭ್ಯಂಗಸ್ನಾನವನ್ನು ವಿಧಿಸಿದೆ. ಮಗುವಿಗೆ ಸ್ನಾನ ಮಾಡಿಸಿ,ಹೊಸ ಬಟ್ಟೆಯನ್ನು ಉಡಿಸಿ, ಉತ್ತರಾಭಿಮುಖವಾಗಿ ಅಂದರೆ ದಕ್ಷಿಣದಿಂದ ಉತ್ತರಕ್ಕೆ ಹೋಗುವಂತೆ,ಪತಿಗೆ ಸಮರ್ಪಣೆ ಮಾಡಿ, ಅವನ ಹಿಂದುಗಡೆ ನಿಂತುಕೊಳ್ಳಬೇಕು. ನಂತರ ಆಯಾ ಮಂತ್ರಗಳನ್ನು ಪಠಿಸುತ್ತಾ ಸೂರ್ಯನ ದರ್ಶನ ಮಾಡಿಸಬೇಕು. ಇದನ್ನು ಮೂರನೇ ತಿಂಗಳೇ ಮಾಡುವುದೂ ಇದೆ. ನಾಲ್ಕನೆಯ ತಿಂಗಳಲ್ಲಿ ಅಗ್ನಿಯ ದರ್ಶನ, ಚಂದ್ರದರ್ಶನ ಮಾಡಿಸುತ್ತಾರೆ ನಂತರ ಧೇನುವಿನ ದರ್ಶನವನ್ನೂ ಮಾಡಿಸುವುದುಂಟು.

ಎಲ್ಲ ದೇವತೆಗಳಲ್ಲಿಯೂ ಮಗುವಿನ ಯೋಗಕ್ಷೇಮವನ್ನು ನೋಡಿಕೊಳ್ಳಬೇಕೆಂದು ಪ್ರಾರ್ಥಿಸುತ್ತಾರೆ. ಸಾಮಾನ್ಯವಾಗಿ ದೇವಾಲಯಕ್ಕೆ ಕರೆದೊಯ್ದು ದೇವತಾದರ್ಶನ ಮಾಡಿಸುತ್ತಾರೆ. ಗೋಮಯಾದಿಯುಕ್ತವಾಗಿರುವ ನೆಲದಲ್ಲಿ, ಒಂದು ಚೌಕಾಕಾರದ ಪ್ರದೇಶವನ್ನು ಮಾಡಿ,ಅಲ್ಲಿ ಧಾನ್ಯರಾಶಿಯನ್ನು ಹಾಕಿ ಶಿಶುವನ್ನು ಮಲಗಿಸಿ ಮಂತ್ರದಿಂದ ರಕ್ಷೆಯನ್ನು ಮಾಡುತ್ತಾರೆ. ನಂತರ ಹಿರಿಯರಿಂದ, ಸುಮಂಗಲಿಯರಿಂದ ಆಶೀರ್ವಾದವನ್ನು ಪಡೆದು ಅವರನ್ನೂ ಉಚಿತ ದಾನ ಮತ್ತು ಆತಿಥ್ಯದಿಂದ ಸಂತೋಷಪಡಿಸುತ್ತಾರೆ. ಬೇರೆ ಬೇರೆ ಸಂಪ್ರದಾಯಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳಿರುತ್ತವೆ.

ತಾತ್ವಿಕ ಹಿನ್ನೆಲೆ: 

ಋಷಿಗಳ ನೋಟದಂತೆ ಜೀವಿಯು ಭಗವಂತನ ಮಡಿಲಲ್ಲಿ ಆಡುತ್ತಿದ್ದವನು ಅವನ ಆಶಯದಂತೆ ಸೃಷ್ಟಿಯತ್ತ ಹೆಜ್ಜೆಯಿಡುತ್ತಾನೆ. ಅಂತಹ ವಿಕಾಸದಲ್ಲಿ 24 ತತ್ವಗಳ ಕವಚಗಳ ಆವರಣದಲ್ಲಿ ಇಳಿದುಬರುತ್ತಾನೆ. ಜೊತೆಗೆ ತತ್ವರೂಪವಾದ ವಿಕಾಸದೊಂದಿಗೆ ಅಧಿಷ್ಠಾತೃದೇವತೆಗಳ ವಿಕಾಸವೂ ಆಗುತ್ತದೆ.  ಅಂತಹ ಶಕ್ತಿಗಳ ಪ್ರಸನ್ನತೆಯನ್ನೂ ಕಾಪಾಡಿಕೊಂಡು ಸಾಧನೆಯ ಮೂಲಕ ಬಂಧದಿಂದ ಮುಕ್ತನಾಗಬೇಕಾಗುತ್ತದೆ. ಹಾಗೆ ಒಳಮಾರ್ಗದಲ್ಲಿ ಸಾಗುತ್ತಿರುವಾಗ ಸೂರ್ಯಚಂದ್ರಾಗ್ನಿಮಂಡಲಗಳ ಮಧ್ಯೆ ಭಗವಂತನ ದರ್ಶನವಾಗುತ್ತದೆ.ಈ ಅಂತರಂಗದ ಅನುಭವವನ್ನು ಯೋಗಶಾಸ್ತ್ರವು ವಿವರಿಸಿದೆ. 

ಶ್ರೀರಂಗಮಹಾಗುರುಗಳೂ ಈ ಅಂಶವನ್ನು ಎತ್ತಿ ಹೇಳಿದ್ದರು. ಮೂಲಬೆಳಕೇ ಸೂರ್ಯಚಂದ್ರಾಗ್ನಿಮಂಡಲಗಳಾಗಿ ವಿಸ್ತಾರಗೊಂಡಿರುತ್ತವೆ. ನಾವು ಜಾತಕರ್ಮ ಸಂಸ್ಕಾರದಲ್ಲಿ ಗಮನಿಸಿರುವಂತೆ ಅಭಿಜಾತಶಿಶುವಿನ ಮುಂದೆ ತ್ರಿಕೋಣಾಕಾರದ ದೀಪವನ್ನು ಬೆಳಗಿಸುತ್ತೇವಷ್ಟೆ. ಹಾಗೆ ವಿಸ್ಮೃತಿಯನ್ನು ಪರಿಹರಿಸಿ ಈ ಮಂಡಲಗಳು ದೇವತಾತ್ಮಕವಾಗಿ ಶಿಶುವಿಗೆ ಬೇಕಾದ  ಸೌಭಾಗ್ಯಗಳನ್ನೂ ಕರುಣಿಸಿ ಯೋಗಕ್ಕೂ ಕರೆದೊಯ್ಯುತ್ತವೆ. ಈ ಒಳತತ್ವಗಳನ್ನು ಪ್ರತಿನಿಧಿಸುವ ಹೊರಗಡೆಯ ಸೂರ್ಯಚಂದ್ರಾಗ್ನಿಗಳನ್ನು ಸೂಕ್ತಕಾಲದಲ್ಲಿ ದರ್ಶನ ಮಾಡಿಸುವುದು, ಅನ್ಯದುಷ್ಟಸಂಸ್ಕಾರಗಳ ಪ್ರಭಾವಕ್ಕೆ ಒಳಗಾಗದ ಮಗುವಿನ  ಅತ್ಯಂತ ಎಳೆಯ ಮನಸ್ಸನ್ನು  ಅಂತರ್ಮುಖಗೊಳಿಸುತ್ತದೆ. ತತ್ವರೂಪವಾದ ಆವರಣ(ದೇಹ) ವನ್ನು ಭೇದಿಸಿಕೊಂಡು ಪರಮಾತ್ಮನಲ್ಲಿ ಲಯಗೊಳಿಸಲು ಸಹಕಾರಿಯಾಗುತ್ತದೆ. ತತ್ವಗಳ ಬಂಧನರೂಪವಾದ ಆವರಣದಿಂದ ನಿರಾವರಣಗೊಳಿಸುತ್ತದೆ. ಋಷಿಗಳ ಮಹಾಮೇಧೆಗೆ ನಮೋನಮಃ. ನಮಃ ಪರಮಋಷಿಭ್ಯಃ ನಮಃ ಪರಮಋಷಿಭ್ಯಃ. 

ಸೂಚನೆ: 23/04/2019 ರಂದುಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.