ಲೇಖಕರು: ತಾರೋಡಿ ಸುರೇಶ
ಭಾರತೀಯರ ಎಲ್ಲ ಕರ್ಮಗಳಲ್ಲೂ “ಪುರುಷಾರ್ಥಪ್ರಾಪ್ತಿಗಾಗಿ ಮಾಡುತ್ತೇನೆ” ಎಂಬ ಸಂಕಲ್ಪವಿರುತ್ತದೆ. ಹಾಗಿದ್ದರೆ ಪುರುಷಾರ್ಥವೆಂದರೇನು? ಇದಕ್ಕೇಕೆ ಇಷ್ಟು ಮಹತ್ವ? ಪುರುಷ ಎಂದರೆ ಗಂಡಸು ಎಂದು ರೂಢಿ. ಅಂದರೆ ಪುರುಷಾರ್ಥವು ಕೇವಲ ಗಂಡಸರಿಗೆ ಮಾತ್ರವೇ? ಇತ್ಯಾದಿ ಪ್ರಶ್ನೆಗಳು ಸಹಜ.
ಪುರುಷಾರ್ಥವೆಂದರೆ ಪುರುಷನ ಅಪೇಕ್ಷೆ ಎಂದರ್ಥ. ಪುರುಷನು ಬಯಸುವ ಪ್ರಯೋಜನಗಳೇ ಪುರುಷಾರ್ಥಗಳು. ಪುರುಷಾರ್ಥದಲ್ಲಿನ ಪುರುಷ ಎಂಬ ಪದಕ್ಕೆ ಗಂಡಸು ಎಂದರ್ಥವಲ್ಲ. ಇದು ‘ಪುರಿಶೇತೇ ಇತಿ ಪುರುಷಃ’ ಎಂಬ ವಿವರಣೆಯುಳ್ಳದ್ದಾಗಿದೆ. ದೇಹವೆಂಬ ಪುರದಲ್ಲಿ ವಾಸಿಸುತ್ತಿರುವ ಜೀವನೇ ಪುರುಷ. ಹಾಗಾಗಿ, ಪುರುಷಾರ್ಥವೆಂದರೆ ಜೀವದ ಅಪೇಕ್ಷೆಗಳು. ಇದು ಪುರುಷರಷ್ಟೇ ಸಮಾನವಾಗಿ ಸ್ತ್ರೀಯರಿಗೂ ಅನ್ವಯಿಸುತ್ತದೆಯಾದ್ದರಿಂದ ತಥಾಕಥಿತ ಸ್ತ್ರೀಸಮಾನತಾವಾದಿಗಳು ಆಕ್ರೋಶಗೊಳ್ಳುವ ಅಗತ್ಯವಿಲ್ಲ.
ಹಾಗಾದರೆ, ಜೀವದ ಅಪೇಕ್ಷೆಗಳೇನು? ಇದರ ವಿವರಗಳು ತಿಳಿದದ್ದಾದರೂ ಹೇಗೆ?.ದೇಹವು ಜೀವವೆಂಬ ಚೈತನ್ಯಶಕ್ತಿಯ ಒಡಲು. ಜೀವತತ್ವದವರೆಗೂ ಸಂಚಾರವುಳ್ಳ ಋಷಿಮುನಿಗಳು ಜೀವದಿಂದಲೇ ನೇರವಾಗಿ ಅದರ ಅಪೇಕ್ಷೆಗಳನ್ನು ಅರಿತರು. ಧರ್ಮ-ಅರ್ಥ-ಕಾಮ ಮತ್ತು ಮೋಕ್ಷಗಳೇ ಜೀವವು ಬಯಸುವ ಪ್ರಯೋಜನಗಳು ಎಂದು ತಮ್ಮ ಅಲೌಕಿಕ ಅನುಭವಗಳನ್ನು ಆಧರಿಸಿ ಘೋಷಿಸಿದರು. ಅದು ಸಾಧ್ಯವಾದದ್ದು ತಪಸ್ಸಿನಿಂದ, ಅವರು ಸಂಪಾದಿಸಿದ್ದ ಯೋಗದೃಷ್ಟಿಯಿಂದ.
ಈಗ ಈ ಧರ್ಮಾರ್ಥಕಾಮಮೋಕ್ಷಗಳ ಸಂಕ್ಷಿಪ್ತತಮವಾದ ಪರಿಚಯವನ್ನು ನೋಡೋಣ.
ಧರ್ಮವು ಮೊಟ್ಟಮೊದಲ ಪುರುಷಾರ್ಥ. ಧರ್ಮ ಎಂಬ ಪದವು ಸಂಸ್ಕೃತದ ‘ಧೃ’ ಧಾತುವಿನಿಂದ ಬಂದಿದೆ. ಯಾವುದು ಧರಿಸುತ್ತದೆಯೋ ಅದು ಧರ್ಮ. ವಿಶ್ವವನ್ನೆಲ್ಲಾ ಭಗವಂತನೇ ಧರಿಸಿರುವುದರಿಂದ ಮೊಟ್ಟಮೊದಲ ಧರ್ಮ ಭಗವಂತನೇ. “ಕೃಷ್ಣಂ ಧರ್ಮಂ ಸನಾತನಮ್” ಎಂದಿದ್ದಾರೆ. ಮುಂದಕ್ಕೆ ಭಗವತ್ಸಂಕಲ್ಪಕ್ಕೆ ತಕ್ಕಂತೆ ಸೃಷ್ಟಿಕಾರ್ಯದಲ್ಲಿ ಜೀವವೂ ಮತ್ತು ಅದರ ಒಡಲಾದ ದೇಹವೂ ವಿಕಾಸಗೊಳ್ಳುವುದಷ್ಟೆ. ಉದಾಹರಣೆಗೆ ಆರೋಗ್ಯವು ದೇಹದ ಒಂದು ಸ್ಥಿತಿ. ಅದಿದ್ದಾಗ ಚಟುವಟಿಕೆಯಿಂದಲೂ ಇರಬಲ್ಲ ಹಾಗೆಯೇ ಸುಖನಿದ್ರೆಯನ್ನೂ ಮಾಡಬಲ್ಲ. ಅಂತೆಯೇ ಯೋಗಭೋಗಗಳೆರಡನ್ನೂ ಬಯಸುವ ಜೀವಕ್ಕೆ ಎರಡನ್ನೂ ಕೊಡಬಲ್ಲ ಸ್ಥಿತಿಯು(Condition) ಇರಬೇಕು. ಇಂತಹ ಸ್ಥಿತಿಗೇ ಎರಡನೆಯ ಘಟ್ಟದಲ್ಲಿ ಪ್ರಧಾನವಾಗಿ ಧರ್ಮವೆಂದು ಹೆಸರು. “ಯತಃ ಅಭ್ಯುದಯ ನಿಶ್ರೇಯಸ ಸಿದ್ಧಿಃ ಸ ಧರ್ಮಃ”. ಇಂದ್ರಿಯಧರ್ಮ, ಮನೋಧರ್ಮ, ಬುದ್ಧಿಧರ್ಮ ಎಲ್ಲವೂ ಆತ್ಮಧರ್ಮದಲ್ಲಿ ನಿಲ್ಲುವಂತಿರಬೇಕು. ಧರ್ಮವು ಹಿಮ್ಮುಖವಾದಾಗ ಭಗವದ್ರೂಪವನ್ನು ತಾಳಿದರೆ ಮುಂದೆ ವಿಕಾಸಗೊಂಡಾಗ ಆಚಾರವೆನ್ನಿಸಿಕೊಳ್ಳುತ್ತದೆ.
ಜಡ ಪದಾರ್ಥಗಳಲ್ಲಿಯೂ ಆಯಾ ಪದಾರ್ಥದ ಅನನ್ಯತೆಯೇ ಅದರ ಧರ್ಮ. ಆಯಾ ಪದಾರ್ಥಗಳ ಇರುವಿಕೆಗೆ ಅವುಗಳ ಧರ್ಮವೇ ಕಾರಣ. ಧರ್ಮವಿದ್ದರೆ ಮಾತ್ರ ನಂಬಿಕೆಗೂ ಅರ್ಹವಾಗುತ್ತದೆ. ಏಕೆಂದರೆ ಇಟ್ಟಿಗೆಯೊಂದು ಒಮ್ಮೆ ಗಟ್ಟಿಯೂ ಇನ್ನೊಮ್ಮೆ ಮೃದುವೂ ಆಗಿಬಿಟ್ಟರೆ ಅದನ್ನು ನಂಬಿ ಮನೆ ಕಟ್ಟುವುದು ಹೇಗೆ?
ಎರಡನೆಯ ಪುರುಷಾರ್ಥವು ಅರ್ಥ. ಪ್ರಕೃತಿಯಲ್ಲಿರುವ ಸಮಸ್ತ ಪದಾರ್ಥಗಳೂ ಅರ್ಥವೇ. ಈಶ್ವರಸೃಷ್ಟಿಯೆಲ್ಲವೂ ಐಶ್ವರ್ಯವೇ. ಆಯಾ ಪದಾರ್ಥಗಳ ಧರ್ಮವರಿತು ಮೂಲಭೂತವಾದ ಧರ್ಮಕ್ಕೆ ಹಾನಿಯಾಗದಂತೆ ಬಳಸಿದಾಗ ಪರಮಾರ್ಥ. ಹಾಗಿಲ್ಲದಿದ್ದರೆ ಅನರ್ಥ. ತೃತೀಯ ಪುರುಷಾರ್ಥವಾದ ‘ಕಾಮ’ವೆಂದರೆ ಬಯಕೆಗಳು. ಒಂದು ವಾಹನದಲ್ಲಿ ಸಾಗುತ್ತಿರುವಾಗ ಎನ್ಜಿನ್, ಚಾಲಕ ಮತ್ತು ಸಹಪ್ರಯಾಣಿಕರು ಎಲ್ಲರಿಗೂ ಅವರವರಿಗೆ ಬೇಕಾದ ಆಹಾರ ಕೊಡಬೇಕು. ಜೊತೆಗೆ ಯಜಮಾನನಿಗೂ ಕೊಡಬೇಕಾದದ್ದನ್ನು ಸಲ್ಲಿಸಬೇಕು. ಯಜಮಾನನನ್ನೇ ಮರೆತುಬಿಡಬಾರದು.ಹಾಗೆಯೇ ನಮ್ಮ ಜೀವನಯಾತ್ರೆಯಲ್ಲೂ ಮನೋಬುದ್ಧೀಂದ್ರಿಯಗಳಿಗೆ, ಯೋಗ-ಭೋಗಗಳಿಗೆ ಹೊಂದುವಂತೆ, ಆಹಾರವನ್ನು ಕೊಟ್ಟು, ಧರ್ಮದ ಲಕ್ಷ್ಮಣರೇಖೆಯನ್ನು ದಾಟದೆ ಕಾಮವನ್ನು ಅನುಭವಿಸಬೇಕು.
ನಾಲ್ಕನೆಯದು ಮೋಕ್ಷ. ಪ್ರಕೃತಿಯ ಬಂಧನದಿಂದ ಬಿಡುಗಡೆ. ಪರಮಾತ್ಮ ಸಾಕ್ಷಾತ್ಕಾರದ ಪರಮಸೌಖ್ಯದ ಪ್ರಾಪ್ತಿ. ಮಾನವದೇಹದ ಸಾರ್ಥಕ್ಯದ ಅತ್ಯಮೂಲ್ಯವಾದ ಸ್ಥಿತಿ. ಅರ್ಥ-ಕಾಮಗಳು, ಧರ್ಮ-ಮೋಕ್ಷದ ಸೀಮೆಯೊಳಗೆ ಇರಬೇಕು. ಆದ್ದರಿಂದಲೇ ಜ್ಞಾನಿಗಳು “ಧರ್ಮಾರ್ಥಕಾಮಮೋಕ್ಷ” ಎಂಬುದಾಗಿ ಅರ್ಥಕಾಮಗಳನ್ನು ಧರ್ಮ-ಮೋಕ್ಷಗಳ ನಡುವೆ ಇಟ್ಟಿದ್ದಾರೆ.ಜೀವನದಲ್ಲಿ ಸಮಸ್ತವೂ ಈ ನಾಲ್ಕರ ಚೌಕಟ್ಟಿನಲ್ಲಿರುವಂತೆ ಜೀವನವನ್ನು ರೂಪಿಸಿಕೊಟ್ಟಿದ್ದಾರೆ. ಇದನ್ನು ಅರಿತು ಅಳವಡಿಸಿಕೊಂಡು ಬಾಳಬೇಕಾದದ್ದು ನಮ್ಮ ಕರ್ತವ್ಯವಾಗಿದೆ.