Friday, April 19, 2019

ಜೀವನಕ್ಕೊಂದು ಹೂಡಿಕೆ ಮತ್ತು ಲಾಭದ ಚಿಂತನೆ (Jeevanakkondu hoodike mattu labhada chintane)

ಲೇಖಕರು: ನಾಗರಾಜ ಗುಂಡಪ್ಪ

ಕಳೆದ 2-3 ದಶಕಗಳ, ವಿಶೇಷವಾಗಿ ಆರ್ಥಿಕ ಉದಾರೀಕರಣದ ನಂತರದ ದಿನಗಳ ವಿದ್ಯಮಾನಗಳನ್ನು ಗಮನಿಸಿದರೆ, ಇದೊಂದು ಸೂಚ್ಯಂಕಗಳ (Index) ಯುಗವೆಂದು ಕರೆದರೆ ತಪ್ಪಾಗಲಾರದು. ರಾಷ್ಟ್ರೀಯ ಉತ್ಪನ್ನಾಂಕದಿಂದ (GDP) ಹಿಡಿದು, ಶೇರು ಮಾರುಕಟ್ಟೆಯ (SENSEX, NIFTY) ಸೂಚ್ಯಂಕಗಳವರೆವಿಗೂ ಅನೇಕ ಸೂಚ್ಯಂಕಗಳು ಬಂಡವಾಳ ಹೂಡಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಹೂಡಿಕೆದಾರರು ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಎಲ್ಲಿ ಮತ್ತು ಯಾವ ರೀತಿಯಲ್ಲಿ ಬಂಡವಾಳ ಹೂಡಿದರೆ, ಅತ್ಯಂತ ಹೆಚ್ಚು ಲಾಭ ಗಳಿಸಬಹುದು (Return on investment) ಎಂದು ವಿಶ್ಲೇಷಿಸುತ್ತಾರೆ ಮತ್ತು ಈ ವಿಶ್ಲೇಷಣೆಗೆ ಸೂಚ್ಯಂಕಗಳೇ ಆಧಾರವಾಗಿರುತ್ತವೆ. ನಿಖರವಾದ ಅಂಕಿ ಆಂಶಗಳಾಧಾರಿತ ನಿಶ್ಚಯಗಳ ಬೆಂಬಲದಿಂದ ಅತ್ಯಂತ ಪರಿಣಾಮಕಾರಿಯಾದ ರೀತಿಯಲ್ಲಿ ಹೂಡಿಕೆಯನ್ನು ಮಾಡಿ ಕೋಟಿ-ಕೋಟಿ ಹಣವನ್ನು ಸಂಪಾದಿಸಿ ಇತ್ತೀಚೆಗೆಂದೂ ಕಂಡು ಕೇಳರಿಯದ ಮಟ್ಟದಲ್ಲಿ ಶ್ರೀಮಂತರಾಗಿ ವಿಜೃಂಭಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಂಟಾಗುವ ಪ್ರಶ್ನೆಯೆಂದರೆ - ಈ ರೀತಿಯ ಚಿಂತನೆಯನ್ನು ನಾವು ಜೀವನಕ್ಕೆ ಅನ್ವಯಿಸಬಹುದೇ? ಹೀಗೆ ಜೀವನಕ್ಕೆ ಅನ್ವಯಿಸಿದರೆ, ನಮ್ಮ ಬಂಡವಾಳ ಹೂಡಿಕೆ ಯಾವ ರೀತಿಯದ್ದಾಗಿರುತ್ತದೆ ಮತ್ತು ಅದರಿಂದ ಗಳಿಸಬಹುದಾದ ಲಾಭದ ಸ್ವರೂಪವಾದರೂ ಏನು? ಈ ವಿಷಯದ ಬಗ್ಗೆ ಮಹರ್ಷಿಗಳು ಚೆಲ್ಲಿರುವ ಬೆಳಕೇನು? ಪ್ರಯತ್ನಕ್ಕೆ ಸಿಗುವ ಪ್ರತಿಫಲದ ಬಗ್ಗೆ ಮಹರ್ಷಿಗಳು ಕೊಟ್ಟಿರುವ ನೋಟವನ್ನು ಅನುಸಂಧಾನ ಮಾಡುವುದು ಈ ಲೇಖನದ ಉದ್ದೇಶ.

ಜೀವನದಲ್ಲಿ ಸೂಚ್ಯಂಕಗಳ ಪಾತ್ರ:

ಅಲ್ಪ ಪ್ರಯತ್ನದಿಂದ ಹೆಚ್ಚು ಲಾಭ ಗಳಿಸುವ ಚಿಂತನೆ ಮಹರ್ಷಿ ಸಂಸ್ಕೃತಿಗೆ ಹೊಸ ವಿಷಯವೇನಲ್ಲಾ! ಉದಾಹರಣೆಗೆ, ವಿಷ್ಣು ಸಹಸ್ರನಾಮವನ್ನು ಕೊಂಡಾಡಬೇಕಾದರೆ ವಾಗ್ಗೇಯಕಾರರು "ಅಲ್ಪ ಪ್ರಯಾಸಂ ಅನಲ್ಪ ಫಲಂ" ಎಂದು ವಿಷ್ಣುಸಹಸ್ರನಾಮವನ್ನು ಕೊಂಡಾಡುತ್ತಾರೆ. ಈ ಉದಾಹರಣೆಯನ್ನು ಗಮನಿಸಿದರೆ, ನಾವು ಪಡುವ ಪ್ರಯತ್ನ ಮತ್ತು ಕೊಡುವ ಸಮಯವೇ ನಮ್ಮ ಬಂಡವಾಳ ಹೂಡಿಕೆಯಾಗಿರುತ್ತದೆ (investment) ಮತ್ತು ಅದರಿಂದ ಸಿಗುವ ಲೌಕಿಕ ಮತ್ತು ಪಾರಮಾರ್ಥಿಕ ಫಲಗಳೇ(Returns) ಲಾಭವಾಗಿರುತ್ತದ. ಕೆಲವು ಅಪವಾದಗಳನ್ನು ಹೊರತು ಪಡಿಸಿ ನೋಡುವುದಾದರೆ, ಎಂತಹಾ ದೊಡ್ಡ ಉದ್ದಿಮೆದಾರರಾಗಲೀ, ರಾಜಕೀಯ ನೇತಾರರಾಗಲೀ, ಯಶಸ್ವಿಯಾಗಬೇಕಾದರೆ ನಿರಂತರ ಪ್ರಯತ್ನಶೀಲರಾಗಿರಬೇಕಾಗುತ್ತದೆ. ಇಂತಹಾ ಅನೇಕ ಪ್ರಯತ್ನಗಳಿಗೆ ಸಿಗುವ ಫಲಗಳು ಹಣ, ಅಧಿಕಾರ, ಕೀರ್ತಿ, ಭೌತಿಕ ಸಂಪತ್ತು ಮುಂತಾಗಿ ಅನೇಕ ರೀತಿಯವುಗಳಾದರೂ ನ್ಯಾಯಯುತವಾಗಿದ್ದಾಗ ಒಂದು ಮಟ್ಟದ ತೃಪ್ತಿಯನ್ನು ಕೊಡುತ್ತದೆ. ವಿವಿಧ ಫಲಗಳಿಂದ ಅಂತಿಮವಾಗಿ ದೊರೆಯುವ ತೃಪ್ತಿ ಅಥವಾ ಆನಂದಕ್ಕಾಗಿಯೇ ನಾವು ಪ್ರಯತ್ನವೆಂಬ ಬಂಡವಾಳವನ್ನು ಹೂಡುವುದು. ಹೀಗಾಗಿ ಜೀವನಕ್ಕೆ ಅನ್ವಯಿಸಿದಾಗ, ಪ್ರಯತ್ನವೇ ಬಂಡವಾಳವಾಗಿದ್ದು ದೊರಕುವ ಆನಂದವೇ ಫಲವಾಗಿರುತ್ತದೆ. ಆದುದರಿಂದ ಯಾವ ಮಟ್ಟದ ಪ್ರಯತ್ನಕ್ಕೆ ಯಾವ ಮಟ್ಟದ ಆನಂದ ದೊರೆಯುತ್ತದೆ ಎನ್ನುವುದನ್ನು ವಿಶ್ಲೇಷಣೆ ಮಾಡಿ, ಅತ್ಯಂತ ಹೆಚ್ಚು ಆನಂದ ದೊರೆಯುವ ದಾರಿಯಲ್ಲಿ ಪರಿಶ್ರಮವನ್ನು ಹೂಡುವುದೇ ಜೀವನದಲ್ಲಿ ನಾವು ಕೈಗೊಳ್ಳಬಹುದಾದ ಅತ್ಯಂತ ಬುದ್ಧಿವಂತಿಕೆಯ High ROI ನಿರ್ಧಾರವಾಗಿರುತ್ತದೆ.
ಆದರೆ, ಇಲ್ಲಿ ಬರುವ ಪ್ರಶ್ನೆಯೆಂದರೆ, ಯಾವ ರೀತಿಯ ಪ್ರಯತ್ನಕ್ಕೆ ಯಾವ ಮಟ್ಟದ ಆನಂದ ಫಲವಾಗಿ ದೊರೆಯುತ್ತದೆ ಎಂದು ಹೇಗೆ ನಿಶ್ಚಯಿಸುವುದು? ಇದಕ್ಕೆನಾದರೂ ಸೂಚ್ಯಂಕಗಳಿವೆಯೇ ಎಂದು ಕೇಳಿದರೆ, ನಮ್ಮ ಅದೃಷ್ಟವಶಾತ್ ಅಂತಹಾ ಸೂಚ್ಯಂಕವನ್ನು ವಿಶ್ವಕ್ಕೆ ಕೊಡುಗೆಯಾಗಿ ಮಹರ್ಷಿಗಳು ನೀಡಿದ್ದಾರೆ - ಈ ಕೊಡುಗೆಯೇ ಆನಂದ ಮೀಮಾಂಸೆ.

ಉಪನಿಷತ್ತುಗಳ ಕೊಡುಗೆ - ಆನಂದ ಮೀಮಾಂಸೆ:

ತೈತ್ತಿರೀಯೋಪನಿಷತ್ತಿನ, ಬ್ರಹ್ಮಾನಂದವಲ್ಲಿಯ ಆನಂದ ಮೀಮಾಂಸೆ ಅಧ್ಯಾಯವು ಆನಂದದ ಮಟ್ಟಗಳ ನಿಖರವಾದ ವಿಶ್ಲೇಷಣೆಯನ್ನು ಹೊಂದಿದ್ದು ಜೀವನ ನಿರ್ಣಯಕ್ಕೆ ಅತ್ಯಂತ ಉಪಯುಕ್ತವಾದ ಕೈದೀವಿಗೆಯಾಗಿದೆ. ಅದು ಮಾನುಷಾನಂದ ಎಂದರೇನು ಎಂದು Define ಮಾಡಿ ಅದನ್ನು ಒಂದು Measuring Unit ಅಥವಾ index (ಸೂಚ್ಯಂಕ) ಆಗಿ ಇಟ್ಟುಕೊಂಡು ಉಳಿದ ಆನಂದದ ಮಟ್ಟಗಳನ್ನು ವಿವರಿಸುತ್ತದೆ. ಒಬ್ಬ ದೃಢಕಾಯನೂ, ಆರೋಗ್ಯವಂತನೂ, ಸುಖದ ಅಭಿಲಾಷೆಯೂ ಇರುವ ಯುವಕನ ಅಧೀನದಲ್ಲಿ ಸಕಲ ಭೋಗವಸ್ತುಗಳಿಂದ ಕೂಡಿದ ಇಡೀ ಭೂಮಂಡಲವೇ ಇದೆಯೆಂದುಕೊಳ್ಳೋಣ. ಅಂತಹ ಯುವಕನು ಏನೇನೆಲ್ಲಾ ಸುಖವನ್ನನುಭವಿಸಬಹುದೋ ಅದಷ್ಟನ್ನೂ ಸೇರಿಸಿದರೆ ಒಂದು ಮಾನುಷ ಆನಂದವಾಗುತ್ತದೆ. ಈ ಆನಂದದ ಮಟ್ಟಕ್ಕೆ ಹೋಲಿಸಿದರೆ, ಮನುಷ್ಯ ಗಂಧರ್ವರ ಆನಂದವನ್ನು ನೂರು ಪಟ್ಟು ಹೆಚ್ಚು ಎಂದು ಉಪನಿಷತ್ತು ಹೇಳುತ್ತದೆ. ದೇವ ಗಂಧರ್ವರ ಆನಂದದ ಮಟ್ಟವು ಮನುಷ್ಯ ಗಂಧರ್ವರ ಆನಂದದ ಮಟ್ಟಕ್ಕಿಂತಾ ನೂರು ಪಟ್ಟು ಹೆಚ್ಚು. ದೇವ ಗಂಧರ್ವರ ನಂತರ, ಪಿತೃಗಳು, ಆಜಾನಜಾನ ದೇವತೆಗಳು, ಕರ್ಮ ದೇವತೆಗಳು, ದೇವತೆಗಳು, ಇಂದ್ರ, ಬೃಹಸ್ಪತಿ, ಪ್ರಜಾಪತಿಯ ಆನಂದಗಳನ್ನು ವಿವರಿಸುತ್ತಾ ಪ್ರತಿ ಹಂತದವರ ಆನಂದವು ಹಿಂದಿನ ಆನಂದದ ಮಟ್ಟಕ್ಕಿಂತಾ ನೂರು ಪಟ್ಟು ಹೆಚ್ಚು ಎಂದು ಹೇಳಿ ಕೊನೆಯಲ್ಲಿ ಪ್ರಜಾಪತಿಯ ಆನಂದದ ನೂರು ಪಟ್ಟು ಹೆಚ್ಚು ಬ್ರಹ್ಮಾನಂದ ಎಂದು ಆನಂದ ಮೀಮಾಂಸೆಯು ಸಮಾಪ್ತವಾಗುತ್ತದೆ. ಅಂದರೆ, ಮಾನುಷಾನಂದಕ್ಕಿಂತಾ ಸಹಸ್ರ ಕೋಟಿ ಪಾಲು ಹೆಚ್ಚು ಮಟ್ಟದ್ದು ಬ್ರಹ್ಮಾನಂದವೆಂಬುದು ಆನಂದ ಮೀಮಾಂಸೆಯ ಸಾರಾಂಶ. ಈ ಸಾರಾಂಶದ ಜೊತೆಗೇ ಋಷಿಗಳು ತಿಳಿಸಿರುವ ಅತ್ಯಂತ ಮುಖ್ಯವಾದ, ಸಂತೋಷದ ಸಂಗತಿಯೆಂದರೆ, ಪ್ರತಿಯೊಬ್ಬ ಮನುಷ್ಯನೂ ಸಹಾ ಇಲ್ಲಿ ಜೀವಿತವಾಗಿರುವಾಗಲೇ ತಪಸ್ಯೆಯ ಮೂಲಕ ಈ ಬ್ರಹ್ಮಾನಂದವನ್ನು ಹೊಂದಬಹುದು. ಈ ನೇರದಲ್ಲಿ ಯೋಗಿವರೇಣ್ಯರಾದ ಶ್ರೀರಂಗ ಮಹಾಗುರುಗಳ ವಾಣಿ ಗಮನೀಯ. ವಿಷಯದಲ್ಲಿ ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಿರುವಂತೆ ಸ್ಪಷ್ಟತೆ ಇರುವಂತೆ ಶ್ರೀರಂಗ ಮಹಾಗುರುಗಳು ಬ್ರಹ್ಮ ಸಾಕ್ಷಾತ್ಕಾರ ಪ್ರತಿ ಮಾನವನ ಆಜನ್ಮ ಸಿಧ್ದ ಹಕ್ಕು ಎಂದು ಘೋಷಿಸಿದ್ದಾರೆ.

ಯಾವುದು ಅತ್ಯಂತ ಲಾಭಕರವಾದ ಉದ್ದಿಮೆ?

ಹೀಗೆ ಆನಂದವೆಂಬ ಪ್ರತಿಫಲದ ದೃಷ್ಟಿಯಿಂದ ನೋಡುವುದಾದರೆ, ಬ್ರಹ್ಮಾನಂದಕ್ಕಾಗಿ ಪಡುವ ಪ್ರಯತ್ನ, ಅತ್ಯಂತ ಲಾಭದಾಯಕವಾದ (highest return on investment) ಹೂಡಿಕೆಯಾಗಿರುತ್ತದೆ. ಇಂದು ಲೋಕದಲ್ಲಿ, ಯಾವುದೇ ಕ್ಷೇತ್ರದಲ್ಲಿ, ಗಣನೀಯವಾದ ಸಾಧನೆ ಮಾಡಬೇಕಾದರೆ ಪಡಬೇಕಾದ ಅಹೋರಾತ್ರಿ ಪರಿಶ್ರಮವನ್ನು ಅಧ್ಯಾತ್ಮ ಕ್ಷೇತ್ರದಲ್ಲಿ ತೊಡಗಿಸಿ ಬ್ರಹ್ಮ ಸಾಕ್ಷಾತ್ಕಾರಕ್ಕಾಗಿ ಪ್ರಯತ್ನಿಸಿದರೆ, ಅದಕ್ಕೆ ಸಿಗುವ ಪ್ರತಿಫಲ ಸಹಸ್ರ ಕೋಟಿ ಪಾಲು ಹೆಚ್ಚಿನ ಬ್ರಹ್ಮಾನಂದವೇ ಆಗಿದೆ. ಪ್ರತಿಯೊಬ್ಬ ಮನುಷ್ಯನೂ ಕೇವಲ ಮನುಷ್ಯ ಜನ್ಮದ ಕಾರಣದಿಂದ ಈ ಬ್ರಹ್ಮಾನಂದವನ್ನು ಅನುಭವಿಸುವುದಕ್ಕೆ ಅಧಿಕಾರವನ್ನು ಹೊಂದಿರುವುದೇ ಮನುಷ್ಯ ಜನ್ಮದ ವಿಶೇಷತೆಯೂ ಆಗಿದೆ.

ಅಧ್ಯಾತ್ಮ ಜೀವನದ ಜೊತೆ ಪ್ರಾಪಂಚಿಕ ಜೀವನವೂ ಸಾಧ್ಯ

ಅಧ್ಯಾತ್ಮ ಕ್ಷೇತ್ರದಲ್ಲಿ ಪರಿಶ್ರಮ ಪಟ್ಟರೆ ಅದಕ್ಕಾಗಿ ಲೌಕಿಕ ಜೀವನವನ್ನು ನಿರ್ಲಕ್ಷ್ಯ ಮಾಡಬೇಕೆಂದೇನಿಲ್ಲಾ! ಪ್ರಥಮ ಆದ್ಯತೆ ಅಧ್ಯಾತ್ಮಕ್ಕೆ ಕೊಟ್ಟು ದ್ವಿತೀಯ ಆದ್ಯತೆಯಾಗಿ ಲೌಕಿಕ ಸಾಧನೆಗಾಗಿಯೂ ಪರಿಶ್ರಮ ಪಡಬಹುದಾಗಿದೆ. ಅಧ್ಯಾತ್ಮ ಸಾಧನೆಯಿಂದ ನಮ್ಮ ದೇಹ, ಮನಸ್ಸುಗಳಲ್ಲಿ ಏರ್ಪಡುವ ಪರಿಷ್ಕಾರಗಳು ಲೌಕಿಕ ಜೀವನದ ಸಾಧನೆಗೂ ಸಹಾಯಕವಾಗಿರುತ್ತದೆ. ಎಷ್ಟೋ ಜನ ಸಾಧಕರು ಅಧ್ಯಾತ್ಮ ಕ್ಷೇತ್ರದಲ್ಲಿ ಔನ್ನತ್ಯವನ್ನು ಸಾಧಿಸಿ ಲೌಕಿಕ ಜೀವನದಲ್ಲಿಯೂ ಸಾಧನೆಯನ್ನು ಮೆರೆದಿರುತ್ತಾರೆ. ಇತಿಹಾಸ ಪುರಾಣಗಳಲ್ಲಿ ಇಂತಹಾ ಅನೇಕ ವ್ಯಕ್ತಿಗಳ ಉಲ್ಲೇಖವನ್ನು ಕಾಣಬಹುದು. ಅಂತಹ ವ್ಯಕ್ತಿಗಳ ಪೈಕಿ ಜನಕ ಮಹಾರಾಜ ಹಾಗೂ ಭೀಷ್ಮರು ಬಹಳ ಪ್ರಸಿಧ್ಧರು - ಅವರು ಅಧ್ಯಾತ್ಮ ಸಾಧನೆಯ ತುಟ್ಟ ತುದಿಯಾದ ಬ್ರಹ್ಮ ಸಾಕ್ಷಾತ್ಕಾರವನ್ನು ಪಡೆದಿದ್ದಲ್ಲದೇ ಲೌಕಿಕವಾಗಿಯೂ ರಾಜ ಅಥವಾ ರಾಜ ಸಿಂಹಾಸನಕ್ಕೆ ಹತ್ತಿರವಿರುವ ಪದವಿಗಳಲ್ಲಿದ್ದು ಧರ್ಮರಕ್ಷಣೆಯಲ್ಲಿ ನಿರತರಾಗಿದ್ದರು. ಇತ್ತೀಚಿನ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಮಹಾತ್ಮ ಗಾಂಧೀಜೆ ಹಾಗೂ Apple ಕಂಪೆನಿಯ ಹಿಂದಿನ CEO Steve Jobs ಇವರು ಅಧ್ಯಾತ್ಮ ಸಾಧನೆಯಲ್ಲಿ ಗಣನೀಯ ಪರಿಶ್ರಮವನ್ನು ಹೊಂದಿದ್ದು ಮತ್ತು ಲೌಕಿಕ ಜೀವನದಲ್ಲೂ ಗಣನೀಯ ಗುರಿಗಳನ್ನು ಸಾಧಿಸಿದ್ದರು.

ಹೀಗೆ, ಮಹರ್ಷಿಗಳು ಕೊಟ್ಟಿರುವ ಆನಂದದ ಸೂಚ್ಯಂಕದ ಹಿನ್ನೆಲೆಗೆ ಇಂದಿನ Return On Investment ಚಿಂತನೆಯನ್ನು ಅನ್ವಯಿಸಿದರೆ, ಅಧ್ಯಾತ್ಮ ಸಾಧನೆಯೇ ಯಾವುದೇ ವ್ಯಕ್ತಿ ಕೈಗೊಳ್ಳಬಹುದಾದ ಅತ್ಯಂತ ಶ್ರೇಷ್ಠ ಪ್ರತಿಫಲದಾಯಕವಾದ ಪ್ರಯತ್ನ ಎನ್ನುವ ನಿಶ್ಚಯ ಹೊರಬರುತ್ತದೆ. ಈ ನಿಶ್ಚಯವನ್ನು ಕಾರ್ಯರೂಪಕ್ಕೆ ತಂದರೆ ಅದರಿಂದ ಆತ್ಮ ಕಲ್ಯಾಣ ಮತ್ತು ಸಮಾಜ ಕಲ್ಯಾಣವೆರಡೂ ಉಂಟಾಗಿ ವಿಶ್ವಕ್ಕೆಲ್ಲಾ ಆದರ್ಶವಾದ ಸ್ಥಿತಿಯು ವೈಯಕ್ತಿಕ ಜೀವನ ಹಾಗೂ ಸಮಾಜದಲ್ಲಿ ಮೂಡಿ ಪರಮ ಶಾಂತಿ ನೆಮ್ಮದಿಗಳು ನೆಲೆಸುತ್ತವೆ.