Tuesday, April 30, 2019

ಕರ್ಣವೇಧ ಸಂಸ್ಕಾರ-ಶಿಶುವನ್ನು ಹಿಂಸಿಸುವುದು ತರವೇ? (Karnavedha samskara- shishuvannu himsisuvudu tarave?)

ಲೇಖಕರು: ತಾರೋಡಿ ಸುರೇಶ



ಕರ್ಣವೇಧ ಎಂದರೆ ಕಿವಿ ಚುಚ್ಚುವುದು ಎಂದರ್ಥ. ಚತುರ್ಭದ್ರಮಯವಾದ ಬಾಳ್ವೆಗೆ ಬೇಕಾದ ಮುಖ್ಯ ಸಂಸ್ಕಾರಗಳಲ್ಲಿ ಕರ್ಣವೇಧವೂ ಒಂದು. ಇದು ಸ್ತ್ರೀಪುರುಷ ಶಿಶು- ಇಬ್ಬರಿಗೂ ಮಾಡಬೇಕಾದ್ದು. ಅನ್ಯಾನ್ಯ ದೇಶ-ಜನಾಂಗಗಳಲ್ಲಿ ಇದು ಕಂಡುಬಂದರೂ ಪುರುಷಾರ್ಥಮಯ ಜೀವನದ ಪರಿಕಲ್ಪನೆ ಅಲ್ಲಿ ಇಲ್ಲವಾದುದರಿಂದ ಅವುಗಳನ್ನು ಮಹರ್ಷಿಗಳು ಕೊಟ್ಟ ಸಂಸ್ಕಾರಗಳಿಗೆ ಹೋಲಿಸುವಂತಿಲ್ಲ. ಚುಚ್ಚುವುದರಿಂದ ಎಳೇ ಶಿಶುವಿಗೆ ಹಿಂಸೆಯಾದರೂ, ಔಷಧವು ಕಹಿಯಾದರೂ ಆರೋಗ್ಯಕ್ಕಾಗಿ ಸೇವಿಸುವಂತೆ, ಆಚರಿಸಲೇಬೇಕಾದ ಸಂಸ್ಕಾರವಿದು.

ಕಲಾಪ: 

ಮಗುವಿಗೆ ಹಲ್ಲು ಹುಟ್ಟುವ ಮೊದಲೇ ಮಾಡಬೇಕು. ಕಾಲ ಮತ್ತು ಕಲಾಪಗಳಲ್ಲಿ ವಿಭಿನ್ನ ಸಂಪ್ರದಾಯಗಳಲ್ಲಿ ಚಿಕ್ಕಪುಟ್ಟ  ಭೇದಗಳಿರುತ್ತವೆ. ತಮ್ಮ ತಮ್ಮ ಸಂಪ್ರದಾಯಗಳಿಗನುಗುಣವಾಗಿ ಆಚರಿಸಬಹುದು. ಅನ್ಯ ಸಂಪ್ರದಾಯಗಳಲ್ಲಿರುವ  ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡರೆ ಉತ್ತಮ ಕಲ್ಪ. ಪೂರ್ವಾಹ್ನದಲ್ಲಿ, ತಂದೆಯು ಮಗುವನ್ನು ತೊಡೆಯಮೇಲೆ ಕೂರಿಸಿಕೊಂಡು “ಭದ್ರಂ ಕರ್ಣೇಭಿ ಶೃಣುಯಾಮ ದೇವಾಃ,,,,,,,”ಮಂತ್ರಗಳನ್ನು ಪಠಿಸಬೇಕು. ಪುರುಷಶಿಶುವಾದರೆ ಮೊದಲು ಬಲಗಿವಿಯನ್ನೂ ನಂತರ ಎಡಗಿವಿಯನ್ನೂ ಚುಚ್ಚಬೇಕು. ಹೆಣ್ಣುಮಗುವಾದರೆ ಮೊದಲು ಎಡಗಿವಿ ನಂತರ ಬಲಕಿವಿ. ವೇಧನಕ್ರಿಯೆಯನ್ನು ಶರೀರ-ಶಾರೀರ ಮರ್ಮಜ್ಞನೇ ಮಾಡಬೇಕು. ಈಗ ಅಕ್ಕಸಾಲಿಗನಿಂದ ಸ್ವರ್ಣತಂತಿಯಿಂದ ಚುಚ್ಚಿಸಿ ಆ ತಂತಿಯನ್ನು ಹಾಗೆಯೇ ಸುತ್ತಿ ಇಡುವುದು ರೂಢಿ. ಸುಮಂಗಲಿಯರಿಂದಲೂ ಮಾಡಿಸುವುದುಂಟು. ನಂತರ ಕೊಬ್ಬರಿಯನ್ನು ಒಡೆದು ಮಗುವಿನ ಕಿವಿಯಮೇಲೆ ಊದುತ್ತಾರೆ.ಇದರಿಂದ ನೋವು ಕಡಿಮೆಯಾಗುತ್ತದೆ. ಕೊಬ್ಬರಿಯನ್ನು ಸೇವಿಸಿ ಸಂತೋಷವಾದ ಮನಸ್ಸಿನಿಂದ ಊದುವುದೂ ಉಂಟು. ಇದು ಆಶೀರ್ವಾದವೂ ಆಗುವುದು. ನಂತರ ಸತ್ಪಾತ್ರರಿಗೆ ದಾನ,ಭೋಜನ ಇತ್ಯಾದಿ ಯೋಗ-ಭೋಗಮಯವಾದ ಜೀವನಕ್ಕಾಗಿ ಎರಡು ಕಿವಿಗೂ ಎರೆಡೆರಡು ಸೂತ್ರವನ್ನು ಹಾಕುತ್ತಾರೆ. ಚುಚ್ಚುವ ಮುನ್ನ ಅರಗನ್ನು ಹಚ್ಚುತ್ತಾರೆ, ಕಾರಣ ಅರಗಿನಲ್ಲಿ ಗಾಯವನ್ನು ಬೇಗ ಒಣಗಿಸುವ ಗುಣವಿದೆ.ಜೊತೆಗೆ ವಾತ-ಪಿತ್ತ-ಕಫ ಸಂಬಂಧವಾದ ಇನ್ನೂ ಕೆಲವು ದೋಷಗಳನ್ನು ಅದು ನಿವಾರಿಸುವುದು. ಮಗುವು ಎಳೆಯದಾದಷ್ಟೂ ಚುಚ್ಚುವುದು ಸುಲಭ. ಹಿಂಸೆ ಕಡಿಮೆ. ಬಹುಮುಖ್ಯವಾದದ್ದು ಆ ರಂಧ್ರದ ಮೂಲಕ ಸೂರ್ಯರಶ್ಮಿ ಪ್ರವೇಶಿಸುವಂತಿರಬೇಕು. ಇಲ್ಲದಿದ್ದರೆ ಕೇವಲ ಹಿಂಸೆಯಲ್ಲಿ ಪರ್ಯವಸಾನವಾಗುತ್ತದೆ.  

ಕರ್ಮದ ಉದ್ಧೇಶ: 

ಈ ಸಂಸ್ಕಾರದಿಂದ ಆಧಿ-ವ್ಯಾಧಿಗಳ ನಿವಾರಣೆಯಾಗುತ್ತದೆ. “ರಕ್ಷಾಭೂಷಣ ನಿಮಿತ್ತಂ ಬಾಲಸ್ಯ ಕರ್ಣೌ ವಿಧ್ಯೇತ್”ಎಂದು ಸುಶ್ರುತನು ಹೇಳು ತ್ತಾನೆ.  ಆಯುರ್ವೇದ, ಜ್ಯೋತಿಷ ಹಾಗೆಯೇ ಧರ್ಮಶಾಸ್ತ್ರಗಳೆಲ್ಲದರಲ್ಲಿಯೂ ಕೊಂಡಾಡಲ್ಪಟ್ಟಿದೆ. ಭೂಷಣವೂ ಜೊತೆಗೆ ರಕ್ಷಕವೂ ಆಗಿದೆ. ಅನೇಕ ರೋಗಗಳನ್ನು, ವಿಶೇಷವಾಗಿ ಸ್ತ್ರೀಸಂಬಂಧವಾದ  ರೋಗಗಳನ್ನು ಇದು ತಡೆಗಟ್ಟುತ್ತದೆ.

ಶರೀರದಲ್ಲಿ ಯೋಗವಿಘ್ನಕಾರಕಗಳಾದ ಕೆಲವು ಕೇಂದ್ರಗಳಿರುತ್ತವೆ. ಅವು ಕಾಲವಿಶೇಷದಲ್ಲಿ ಪ್ರಬಲಗೊಂಡು ಆಕ್ರಮಿಸುತ್ತವೆ. ಮರ್ಮಜ್ಞನು ನಡೆಸುವ ಕರ್ಣವೇಧನ ಸಂಸ್ಕಾರದಿಂದ ಅಂತಹ ಕೇಂದ್ರಗಳು ನಿರ್ವೀರ್ಯಗೊಂಡು ಸಾಧನೆಗೆ  ಪೋಷಕವಾಗಿ ಪರಿಣಮಿಸುತ್ತದೆ.

ಆಭರಣಗಳನ್ನು ಧರಿಸುವುದೂ ಆವಶ್ಯಕವೇ? ಇಲ್ಲದಿದ್ದರೆ ರಂಧ್ರಗಳು ಮುಚ್ಚಿಹೋಗುತ್ತವೆ ಎನ್ನುವುದು ಒಂದು ಕಾರಣ. ಸ್ತ್ರೀಪುರುಷರಿಬ್ಬರೂ ಧರಿಸಬೇಕು. ಶಾಸ್ತ್ರೀಯವಾದ ಆಭರಣಗಳಿಂದ ವಿಶೇಷ ಲಾಭ. ಮರ್ಮವರಿತು ಆಯಾ ಸ್ಥಾನದಲ್ಲಿ ಯುಕ್ತವಾದದ್ದನ್ನೇ ಧರಿಸಬೇಕು.ಆಭರಣಗಳು ಬಾಹ್ಯಾಭ್ಯಂತರ ದೋಷಗಳಿಂದ ರಕ್ಷಿಸುತ್ತವೆ.

ಹೀಗೆ ಕರ್ಣವೇಧ ಸಂಸ್ಕಾರವು ಭೂಷಣವೂ ಆಗಿದ್ದು, ಆಧಿವ್ಯಾಧಿಗಳಿಂದ ರಕ್ಷಿಸುವ ಎಲ್ಲರೂ ಆಚರಿಸಬಹುದಾದ ಮುಖ್ಯತಮ ಸಂಸ್ಕಾರಗಳಲ್ಲಿ ಒಂದಾಗಿದೆ. ಇಂದು ಲುಪ್ತವಾಗುತ್ತಿರುವುದು ಖೇದದ ಸಂಗತಿ.


ಸೂಚನೆ: 30/04/2019 ರಂದುಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.