Thursday, May 2, 2019

ಅಹಂ ಸಿಂಹೋSಸ್ಮಿ! ನಾನು ಸಿಂಹ! ನರಿಯಲ್ಲ (Aham simhosmi! nanu simha! nariyalla)

ಲೇಖಕರು:  ತಾರೋಡಿ ಸುರೇಶ   



ಸಿಂಹವೊಂದು ತನ್ನ ಆಹಾರಕ್ಕಾಗಿ ಅಲೆಯುತ್ತಿತ್ತು. ಹಾಗೆ ಹೊಂಚು ಹಾಕುತ್ತಾ ಇರುವಾಗ  ಆಶ್ಚರ್ಯಕರವಾದ ದೃಶ್ಯವೊಂದನ್ನು ನೋಡಿತು. ಅನತಿ ದೂರದಲ್ಲಿ ನರಿಯ ಪರಿವಾರವೊಂದು ಗುಂಪಾಗಿ ಸಾಗುತ್ತಿತ್ತು. ಗುಂಪಿನ ಯಜಮಾನ, ಯಜಮಾನಿ ಹಾಗೂ ಅದರ ಮಕ್ಕಳು ಜೊತೆಯಲ್ಲಿ ನಲಿಯುತ್ತಾ ಕುಣಿಯುತ್ತಾ ಹೋಗುತ್ತಿದ್ದವು. ಇಷ್ಟೇ ಆಗಿದ್ದರೆ  ಆಶ್ಚರ್ಯವೇನೂ ಇರುತ್ತಿರಲಿಲ್ಲ. ಆದರೆ ಈ ಪರಿವಾರದೊಂದಿಗೆ ಒಂದು ಸಿಂಹದ ಮರಿಯೂ ಸೇರಿಕೊಂಡಿತ್ತು. ವಿಚಿತ್ರವೆಂದರೆ ಅದೂ ಕೂಡ ನರಿಗಳಂತೆಯೇ ವರ್ತಿಸುತ್ತಾ ಅವುಗಳೊಂದಿಗೆ ಬೆರೆತುಹೋಗಿತ್ತು. ನರಿಗಳಂತೆಯೇ ಆಡುತ್ತಿತ್ತು. ಜಿಗಿಯುತ್ತಿತ್ತು. ಕೂಗುತ್ತಿತ್ತು. ಅವುಗಳು ತಿನ್ನುವ ಆಹಾರವನ್ನೇ ಸೇವಿಸಿ ಸಂತೋಷಪಡುತ್ತಿತ್ತು. ನರಿಗಳ ತಂದೆ-ತಾಯಿಗಳನ್ನೇ ತನ್ನ ತಂದೆ- ತಾಯಿಗಳೆಂದು ಭಾವಿಸಿತ್ತು.

ಸಿಂಹವು ಒಮ್ಮೆ ಗರ್ಜಿಸಿತು. ನರಿಗಳೆಲ್ಲಾ ಪಲಾಯನಗೊಂಡವು. ಸಿಂಹದ ಮರಿಯೂ ಓಡಲು ಆರಂಭಿಸಿತು. ಆಗ ಸಿಂಹವು ಅದನ್ನು ನಿಲ್ಲಿಸಿ “ನೀನು ಏಕೆ ಓಡುತ್ತಿದ್ದೀಯೆ? ನೀನು ನನ್ನ ವಂಶಕ್ಕೇ ಸೇರಿದವನಪ್ಪಾ” ಎಂದು ಅರ್ಥಮಾಡಿಸಲು ಪ್ರಯತ್ನಿಸಿತು. ಆದರೆ ಮರಿಸಿಂಹಕ್ಕೆ ನಂಬಿಕೆ ಬರಲಿಲ್ಲ. ಅದು ಭಯದಿಂದ ತನ್ನನ್ನು ಬಿಟ್ಟುಬಿಡಬೇಕೆಂದು ಕಣ್ಣೀರಿಡತೊಡಗಿತು. ಆಗ ದೊಡ್ಡ ಸಿಂಹವು ಯೋಚಿಸಿ ಒಂದು ಉಪಾಯ ಮಾಡಿತು. ಆ ಮರಿಸಿಂಹವನ್ನು ಬಲವಂತವಾಗಿ ಪಕ್ಕದಲ್ಲಿ ಇದ್ದ ಕೆರೆಯ ಬಳಿ ಕರೆದುಕೊಂಡು ಹೋಯಿತು. ನೀರಿನಲ್ಲಿ ಮೊದಲು ತನ್ನ ಪ್ರತಿಬಿಂಬವನ್ನು ತೋರಿಸಿತು. ನಂತರ ಸಿಂಹದ ಮರಿಗೆ ಅದರದೇ ಪ್ರತಿಬಿಂಬವನ್ನು ತೋರಿಸಿತು. ಮರಿಸಿಂಹವು ತನ್ನ ಪ್ರತಿಬಿಂಬವನ್ನು ಪರಮಾಶ್ಚರ್ಯದಿಂದ ಗಮನಿಸಿತು. ಮರುಕ್ಷಣದಲ್ಲಿ ಅರಣ್ಯದಲ್ಲೆಲ್ಲಾ ಪ್ರತಿಧ್ವನಿಸುವಂತೆ ಗರ್ಜಿಸಿತು “ಅಹಂ ಸಿಂಹೋSಸ್ಮಿ- ನಾನು ಸಿಂಹ, ನರಿಯಲ್ಲ”.

ಈ ಕಥೆಯ ನೀತಿ ಏನು? 

ಮಾನವ ತನ್ನ ಜನ್ಮದ ವೈಶಿಷ್ಟ್ಯವನ್ನು  ಮರೆತುಬಿಟ್ಟಿದ್ದಾನೆ. ತಾನು ಉಳಿದ ಪ್ರಾಣಿಗಳಂತೆ ಅಲ್ಲ ಎಂಬುದನ್ನು ಅವನಿಗೆ ನೆನಪಿಸಬೇಕಾಗಿದೆ. ತನ್ನ ದೇಹರಚನೆಯಲ್ಲಿ ಇಹ-ಪರ ಜೀವನವೆರಡನ್ನೂ ನಡೆಸುವ ಸೌಲಭ್ಯವಿದೆ ಎಂಬ ವಿವೇಕವನ್ನು ಕೊಡಬೇಕಾಗಿದೆ. “ಮಾನವದೇಹದಲ್ಲಿ ರಸರೂಪಿಯಾದ ಪರಮಾತ್ಮನನ್ನು ಸೇರಲು ಒಂದು ವ್ಯವಸ್ತೆಯಿದೆಯಪ್ಪಾ” ಎಂದು ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು.  ಹಾಗೆ ನೆನಪಾಗಿ ಅವನು ಸಾಧನೆ ಮಾಡಿದರೆ ಅವನಿಗೆ ಸಿಗುವ ಲಾಭವೇನು? ಮೊದಲನೆಯದಾಗಿ ಇಡಿ ಜಗತ್ತಿಗೇ ತಂದೆಯಾದ ದೇವ ದೇವನ ದರ್ಶನ. ಅಂತಹ ದರ್ಶನದಿಂದ ದೊರೆಯುವ ಬಹು ದೊಡ್ಡ ಸುಖ. ಇಲ್ಲದಿದ್ದರೆ ಮಾನವ ದೇಹವೆಂಬ ಉತ್ತಮವಾದ ಸಾಧನವು ವ್ಯರ್ಥಮಾಡಿದಂತಾಗುವುದು. ಮುಂದಿನ ಜನ್ಮಗಳಲ್ಲಿ ಮತ್ತೆ ಮಾನವದೇಹ ದೊರೆಯುವುದೋ ಇಲ್ಲವೋ.

 ಹಾಗೆ ನಮ್ಮ ಸ್ವಸ್ವರೂಪವಾದ  ದೇವರನ್ನು ಮರೆತಿರುವಂತೆ ಸಿಂಹದ ಮರಿಯೂ ತಾನು ಸಿಂಹ ಎನ್ನುವುದನ್ನೇ ಮರೆತುಬಿಟ್ಟಿತ್ತು. ಕಾರಣ ಸದಾ ನರಿಗಳ ಒಡನಾಟ. ಯಾವಾಗ ದೊಡ್ಡ ಸಿಂಹವು ನೆನಪಿಸಿತೋ ಆಗ ‘ಸ್ವಯಮೇವಮೃಗೇಂದ್ರತಾ’ ಎಂಬ ತನ್ನ ಸ್ವರೂಪಜ್ಞಾನ ಉಂಟಾಯಿತು. ನಮ್ಮ ಜೀವನದಲ್ಲಿಯೂ ನಮ್ಮ ಮೂಲಸ್ವರೂಪ ದೇವರೆಂಬುದನ್ನು ಮರೆತುಬಿಟ್ಟಿದ್ದೇವೆ. ಅವತಾರಪುರುಷರ, ಜ್ಞಾನಿಗಳ ಮಾರ್ಗದರ್ಶನಕ್ಕೊಳಪಟ್ಟಾಗ  ಮರಭಾವವು ಮರೆಯಾಗಿ ಅಮರಭಾವವನ್ನು ಪಡೆದು  ಅಸೀಮರಾಗುತ್ತೇವೆ.  ‘ಅಹಂ ಬ್ರಹ್ಮಾಸ್ಮಿ’ ಎಂಬ ಪರಮಾನಂದದಘೋಷವು ನಮ್ಮಿಂದಲೂ ಹೊಮ್ಮುವುದು. ಇಹ-ಪರ ಜೀವನವೆರಡನ್ನೂ ಬಲ್ಲ ಮಹಾತ್ಮರ ಗುರುತ್ವಕ್ಕೆ ತಲೆಬಾಗಿ ನಡೆದಾಗ ಜೀವನ ಸಾರ್ಥಕ.


ಸೂಚನೆ:  2/05/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.