Tuesday, May 14, 2019

ವಿವೇಕದ ದಾರಿ (vivekada daari)

ಲೇಖಕರು:  ಮೈಥಿಲೀ ರಾಘವನ್


ಹಿಂದೊಮ್ಮೆ ಕಾಶೀ ನಗರದಲ್ಲಿ ಹೀಗೊಂದು ವಿಚಿತ್ರ ಪದ್ಧತಿ ಜಾರಿನಲ್ಲಿತ್ತು. ಅಲ್ಲಿಯ ಪ್ರಜೆಗಳಲ್ಲಿ ಯಾರಾದರೂ ಸಿಂಹಾಸನವನ್ನೇರಿ ಐದು ವರ್ಷಗಳಕಾಲ ತಮ್ಮಿಚ್ಚೆಯಂತೆ ರಾಜ್ಯವಾಳಬಹುದು. ಆ ಕಾಲಾವಧಿಯ ನಂತರ ಅವರನ್ನು ಗಂಗಾನದಿಯ ಆಚೆಯ ದಡದಲ್ಲಿದ್ದ ದಟ್ಟವಾದ ಕಾಡಿನಲ್ಲಿ ಕೈಕಾಲುಗಳನ್ನು ಬಂಧಿಸಿ ಕಾಡುಮೃಗಗಳ ಪಾಲಿಗೆ ಎಸೆದುಬಿಡಲಾಗುವುದು. ಅನೇಕರು ಅಧಿಕಾರದ ಆಸೆಯಿಂದಾಗಿ ರಾಜನಾಗಲು ಮುಂಬಂದು ನಂತರ ಘೋರವಾದ ಸಾವನ್ನೆದುರಿಸಿದರು. ಒಮ್ಮೆ ಯುವಕನೊಬ್ಬನು ಈ ಸಾಹಸದ ಕಾರ್ಯಕ್ಕೆ ಕೈ ಹಾಕಿದ. ಐದು ವರ್ಷಗಳಕಾಲ ಅತ್ಯಂತ ಶ್ರದ್ಧೆಯಿಂದ ಪ್ರಜೆಗಳ ಹಿತದೃಷ್ಟಿಯೊಂದಿಗೆ ರಾಜ್ಯವಾಳಿದ. ಆಡಳಿತದ ಅವಧಿ ಮುಗಿದಂತೆಯೇ ಅವನನ್ನು ದೋಣಿಯಲ್ಲಿ ಕುಳ್ಳಿರಿಸಿ ಕರೆದೊಯ್ಯ ಬೇಕಿತ್ತು. ಗಂಗೆಯ ದಡದವರೆಗೂ ಸಂಭ್ರಮದ ಮೆರವಣಿಗೆ ಸಾಗಿತು. ರಾಜನು ಹಸನ್ಮುಖನಾಗಿ ರಥದಲ್ಲಿ ಆಸೀನನಾಗಿದ್ದ. ಪ್ರಜೆಗಳೆಲ್ಲರಿಗೂ ಆತನನ್ನು ನೋಡಿ ಅತ್ಯಾಶ್ಚರ್ಯವಾಯಿತು. ಕ್ರೂರವಾದ ಸಾವನ್ನಪ್ಪಲು ತೆರಳಿರುವವನಲ್ಲಿ ಈ ನಗುಮುಖ, ಸಂತೋಷವೇ!? ದೋಣಿಯು ಮುಂದೆ ಸಾಗಿತು. ಆದರೂ ಅವನು ಹಸನ್ಮುಖಿಯಾಗಿಯೇ ಇದ್ದ. ನಾವಿಗನು ಸಂಶಯದಿಂದ ಕೇಳಿದ- ನದಿಯಲ್ಲಿ ದುಮುಕಿ ತಪ್ಪಿಸಿಕೊಳ್ಳುವ ಉಪಾಯವೇನಾದರೂ ಹೂಡಿದ್ದೀಯೋ? ಅದು ಸಾಧ್ಯವಿಲ್ಲ. ರಾಜನು ಉತ್ತರಿಸಿದ ನಾನೆಲ್ಲಿಗೆ ತಪ್ಪಿಸಿಕೊಂಡು ಹೋಗಬೇಕಾಗಿದೆ? ಖಂಡಿತವಾಗಿಯೂ ಇಲ್ಲ ನಾವಿದನು ಅಚ್ಚರಿಯಿಂದ ಬೆರಗಾದನು ಅಯ್ಯಾ, ನಿನ್ನ ಮುಂದಿನ ಭವಿಷ್ಯ ತಿಳಿದಿದ್ದರೂ ಹೇಗೆ ಇಷ್ಟು ಪ್ರಸನ್ನನಾಗಿರುವೆ? ರಾಜನೆಂದ ಆಚೆಯ ದಡ ಸಮೀಪಿಸಿದಂತೆ ನಿನಗೇ ತಿಳಿಯುವುದು.

ದಡ ಸಮೀಪಿಸಿದಂತೆ ಎದುರಾದ ದೃಶ್ಯದಿಂದ ನಾವಿಕನ ಆಶ್ಚರ್ಯ ಎಣೆಯಿಲ್ಲದಾಯಿತು. ಅಲ್ಲಿ ಇದ್ದ ದಟ್ಟವಾದ ವನಪ್ರದೇಶ ಮರೆಯಾಗಿ ಸುಂದರವಾದದ್ದೊಂದು ಪಟ್ಟಣ ಕಾಣಿಸುತ್ತಿತ್ತು. ದಡದಲ್ಲಿ ಅನೇಕ ಜನ ಮಂತ್ರಿ-ಪ್ರಮುಖರು ರಾಜನನ್ನು ಸ್ವಾಗತಿಸಲು ಪೂರ್ಣಕುಂಭದೊಂದಿಗೆ ಕಾದಿದ್ದರು! ರಾಜನು ಮುಗುಳ್ನಗೆಯೊಂದಿಗೆ ವಿವರಿಸಿದ ನಾನು ನನ್ನ ಆಡಳಿತದಕಾಲದಲ್ಲಿ
ಕಾಶೀ ರಾಜ್ಯವನ್ನಾಳುವುದರ ಜೊತೆಜೊತೆಗೆ ರಹಸ್ಯವಾಗಿ ಕಾಡನ್ನು ಪಟ್ಟಣವನ್ನಾಗಿ ಮಾರ್‍ಪಡಿಸುವ ಕೆಲಸವನ್ನೂ ಕೈಗೊಂಡೆ. ಆಪ್ತರಾದ ಕೆಲವರನ್ನೂ ರಹಸ್ಯವಾಗಿ ಇಲ್ಲಿ ಕಳುಹಿಸಿದೆ; ಈಗ ನಾನು ಈ ಪಟ್ಟಣದ ಅರಸ!

ಜೀವನದ ಗುಟ್ಟನ್ನು ತಿಳಿಸುವ ಕಥೆಯಿದು. ’ಕಾಶೀಕ್ಷೇತ್ರಂ ಶರೀರಂ’ ಎಂದು ಶಂಕರಭಗವದ್ಪಾದರು ಕೊಂಡಾಡಿದಂತೆ ಈ ಶರೀರವೇ ಕಾಶೀಕ್ಷೇತ್ರ. ಇದರೊಳಗೆ ವಾಸವಾಗಿರುವ ಜೀವನೇ ಸಕಲ ಭೋಗಗಳನ್ನನುಭವಿಸುವ ಅರಸ. ಭೋಗಗಳಷ್ಟನ್ನೇ ಅರಸಿ ಮನಸೋಚ್ಚೆ ವರ್ತಿಸಿದರೆ ಜೀವಿತಾವಧಿ ಕಳೆದಾಗ ತನ್ನ ಕರ್ಮಗಳೆಂಬ ಪಾಶಗಳಿಂದಲೇ ಕಟ್ಟಲ್ಪಟ್ಟು ಅದರ ಫಲವನ್ನು ಅನುಭವಿಸಬೇಕಾಗುವುದು. ಆದರೆ ವಿವೇಕಿಯಾದವನು ಇಹಲೋಕದ ಸುಖಾನುಭವದ ಜೊತೆಯಲ್ಲಿಯೇ ಪರಲೋಕದ ಸುಖಚಿಂತೆಯನ್ನೂ ಸಹ ಮಾಡುತ್ತಾನೆ. ಸತ್ಕರ್ಮಗಳ ಆಚರಣೆಯಿಂದಾಗಿ ಜೀವಿಯು ಕರ್ಮಬಂಧನದಿಂದ ಬಿಡಿಸಿಕೊಂಡು ದೇಹಾವಸಾನದನಂತರವೂ ಸುಖವನ್ನೇ ಪಡೆಯುತ್ತಾನೆ.

ಶ್ರೀರಂಗಮಹಾಗುರುಗಳು  “ ಪರಮಾತ್ಮದರ್ಶನವು ಎಲ್ಲ ಮಾನವರ ಜನ್ಮಸಿದ್ಧವಾದ ಹಕ್ಕು. ಇದಕ್ಕಾಗಿ ಹೋರಾಡಬೇಕು. ಮಾನವ ದೇಹ ಯೋಗ(ಭಗವಂತನೊಡನೆ ಕೂಡುವುದು)-ಭೋಗಗಳೆರಡಕ್ಕು ನೆಲೆಮನೆಯಾಗಿದೆ” ಎಂಬುದನ್ನು ಒತ್ತಿ ಹೇಳಿದ್ದಾರೆ. ವಿವೇಕದ ದಾರಿಹಿಡಿದು ಭೋಗವನ್ನು ಅನುಭವಿಸುತ್ತ ಜೊತೆ ಜೊತೆಯಲ್ಲೇ ಯೋಗಕ್ಕೂ ದಾರಿಮಾಡಿಕೊಳ್ಳೋಣ. ಆಗ ನಮಗೆ
ಲಭಿಸುವುದು ಇಹದಲ್ಲಿ ಸುಖ, ಪರದಲ್ಲಿ ಪರಮಸುಖ!

ಸೂಚನೆ:  13/05/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.