ಲೇಖಕರು: ತಾರೋಡಿ ಸುರೇಶ
ನಿಷ್ಕ್ರಮಣದ ನಂತರ ಅನ್ನಪ್ರಾಶನ ಸಂಸ್ಕಾರವನ್ನು ಮಾಡಬೇಕು. ವಾಸ್ತವಿಕವಾಗಿ ಈ ಸಂಸ್ಕಾರಕ್ಕೆ ‘ನವಾನ್ನಪ್ರಾಶನ’ ಎಂದು ಹೆಸರು. ಮೊಟ್ಟಮೊದಲಿಗೆ ಸಂಸ್ಕಾರರೂಪವಾಗಿ ಘನಾಹಾರವನ್ನು ಮಗುವಿಗೆ ತಿನ್ನಿಸುವ ಪ್ರಕ್ರಿಯೆ ಇದು. ಹಸಿವಾದಾಗ ಮಗುವು ತಾನೇ ತಿನ್ನುವಾಗ ಇಂತಹ ಕ್ರಿಯೆಯ ಅಗತ್ಯವೇನು? ಎಂಬ ಪ್ರಶ್ನೆ ಬರಬಹುದು. ಅದು ಸಂಸ್ಕಾರವಾಗಬೇಕಾದರೆ ಈ ಕರ್ಮ ಅಗತ್ಯ ಎಂದು ಅದಕ್ಕೆ ಸಂಕ್ಷಿಪ್ತ ಉತ್ತರ.
“ಹಿಂದಿನ ಸಂಸ್ಕಾರಗಳಂತೆಯೇ ಆಯುರ್ವೃದ್ಧಿ, ಬ್ರಹ್ಮವರ್ಚಸ್ಸು, ಗರ್ಭ-ಬೀಜಗಳಿಗೆ ಸಂಬಂಧಿಸಿದ ದೋಷನಿವಾರಣೆ, ಮಗು ಮುಂದೆ ಒಳ್ಳೆಯ ಅನ್ನವನ್ನು ಸಂಪಾದಿಸುವ ಶಕ್ತಿಗಾಗಿ ಮತ್ತು ಅಂತಿಮವಾಗಿ ಪರಮೇಶ್ವರಪ್ರೀತಿಗಾಗಿ ಅನ್ನಪ್ರಾಶನ ಸಂಸ್ಕಾರವಪ್ಪಾ”ಎಂದು ಶ್ರೀರಂಗಮಹಾಗುರುಗಳು ವಿವರಿಸಿದ್ದರು. 6- 8ನೇ ತಿಂಗಳಲ್ಲಿ ಗಂಡು ಮಗುವಿಗೂ, 5-7ನೇ ತಿಂಗಳಲ್ಲಿ ಸ್ತ್ರೀ ಶಿಶುವಿಗೂ ಅನ್ನಪ್ರಾಶನದ ಸಂಸ್ಕಾರವನ್ನು ಮಾಡಬೇಕು. 12ನೇ ತಿಂಗಳೊಳಗಂತೂ ನಡೆಸಲೇಬೇಕು. ಸೂಕ್ತ ತಿಥಿವಾರ ನಕ್ಷತ್ರಗಳನ್ನೂ ಋಷಿಗಳು ನಿರ್ದೇಶಿಸಿದ್ದಾರೆ. ತಾಯಿಯ ತೊಡೆಯ ಮೇಲೆ ಅಲಂಕೃತ ಮಗುವನ್ನು ಕೂರಿಸಬೇಕು. ಅನ್ನದ ಜೊತೆ ಮಧು, ಆಜ್ಯ, ಕನಕದಿಂದ ಕೂಡಿದ ಪಾಯಸವನ್ನು, ಚಿನ್ನದ ಪಾತ್ರೆಯಲ್ಲಿಟ್ಟು, ಮಂತ್ರಪೂತವಾಗಿ ಪ್ರಾಶನ ಮಾಡಿಸಬೇಕು. ದೇವತಾಪೂಜೆಯನ್ನು ಮಾಡಿ ದೇವರಿಗೆ ನಿವೇದಿಸಿರಬೇಕು. ಹಾಲಿನಿಂದ ಮಾಡಿದ ಓದನವೇ ಪಾಯಸ.
ಮಗುವು ಗರ್ಭದಲ್ಲಿರುವಾಗ ತಾಯಿಯು ಅಶುದ್ಧವಾದ ಆಹಾರವನ್ನು ಸೇವಿಸಿದ್ದಲ್ಲಿ ಆ ದೋಷವೂ ಈ ಸಂಸ್ಕಾರದಿಂದ ಪರಿಹಾರವಾಗುವುದು. ಇಲ್ಲಿ ವಿನಿಯೋಗಿಸುವ ಮಂತ್ರಗಳ ಭಾವದೊಂದಿಗೆ ದ್ರವ್ಯಗಳು ತಮ್ಮ ರಸದಿಂದಾಗಿ(ಸಾರ) ಹೊಂದಿಕೊಳ್ಳುತ್ತವೆ. ಹಾಗೆಯೇ ಮಂತ್ರಗಳೂ ವಿಜ್ಞಾನಯುತವಾಗಿದ್ದು ಆಯಾ ಸ್ಥಾನ,ದೇವತೆಗಳನ್ನೂ ಮುಟ್ಟಿ ಬಂದಾಗ ಪದಾರ್ಥಗಳು ಪ್ರಸಾದವಾಗುತ್ತವೆ. ಭೂಃ ಭುವಃ ಮತ್ತು ಸುವಃ ಎಂಬ ಮೂರುಲೋಕಗಳ ದೇವತೆಗಳು ಮೇಧೆಯ ವೃದ್ಧಿ, ಆಯುರ್ವೃದ್ಧಿಗಳನ್ನು ದಯಪಾಲಿಸಿ, ಪರಮಾತ್ಮನ ಸಮಾಧಿಸ್ಥಾನಕ್ಕೆ ಸೋಪಾನವಾಗುತ್ತದೆ. ಇಲ್ಲಿ ಮೇಧೆಯೆಂದರೆ “ಪ್ರಣವ ತತ್ವವನ್ನು ಪಾರದರ್ಶಕವಾಗಿ ಆವರಿಸಿಕೊಂಡಿರುವ ಪ್ರಾಣತತ್ವ” ಎಂದು ಶ್ರೀರಂಗಮಹಾಗುರುಗಳು ತಿಳಿಸಿಕೊಟ್ಟಿದ್ದರು.
ಉಪನಿಷತ್ತುಗಳು ಹೇಳುವಂತೆ ಅನ್ನವು ಬ್ರಹ್ಮವೇ ಆಗಿದೆ. ಸೃಷ್ಟಿ-ಸ್ಥಿತಿ-ಲಯಗಳು ಯಾವುದರಿಂದ ಆಗುತ್ತದೆಯೋ ಅದೇ ಬ್ರಹ್ಮ. “ಪರಮಾತ್ಮನಿಂದ ಆಕಾಶ, ಆಕಾಶದಿಂದ ವಾಯು,ವಾಯುವಿನಿಂದ ಅಗ್ನಿ,ಅಗ್ನಿಯಿಂದ ಜಲತತ್ವವೂ, ಜಲದಿಂದ ಪೃಥ್ವಿಯೂ, ಪೃಥ್ವಿಯಿಂದ ಓಷಧಿಗಳು,ಓಷಧಿಗಳಿಂದ ಅನ್ನವು ಹುಟ್ಟುತ್ತದೆ”ಎಂದು ಆರ್ಷಸಾಹಿತ್ಯಗಳು ಸೃಷ್ಟಿಪ್ರಕ್ರಿಯೆಯನ್ನು ವರ್ಣಿಸುತ್ತವೆ. ಲಯವಾಗುವಾಗಲೂ ತನ್ನ ಹಿಂದಿನ ತತ್ವದೊಡನೆ ವಿಲೀನಗೊಳ್ಳುತ್ತಾ ಪರಬ್ರಹ್ಮವಸ್ತುವಿನಲ್ಲಿ ನೆಲೆಗೊಳ್ಳುತ್ತವೆ. ಆದ್ದರಿಂದ ಅನ್ನವು ಬ್ರಹ್ಮವೇ ಆಗಿದೆ. ಈ ಪ್ರಕ್ರಿಯೆಯ ಸ್ಮರಣೆಯೇ ಯಜ್ಞದ ಫಲವನ್ನು ಕೊಡುತ್ತದೆ ಎಂಬುದು ಅನುಭವಿಗಳ ಮಾತು.
ಅನ್ನಪ್ರಾಶನವು ಅವಶ್ಯವಾಗಿ ಮಾಡಲೇಬೇಕಾದ ಸಂಸ್ಕಾರ. ಶುದ್ಧವಾದ ಅನ್ನವು ಶುದ್ಧವಾದ ಮನಸ್ಸನ್ನು ಉಂಟುಮಾಡುವುದು ಎಂದು ಯೋಗ, ಆಯುರ್ವೇದ ಇತ್ಯಾದಿ ಶಾಸ್ತ್ರಗಳು ಒತ್ತಿ ಹೇಳುತ್ತವೆ. ಅನ್ನಪ್ರಾಶನವು ಬ್ರಹ್ಮಪ್ರಾಶನ(ಯೋಗ)ದಲ್ಲಿ ಪರ್ಯವಸಾನಗೊಳ್ಳುವ ಬಹುಶ್ರೇಷ್ಠವಾದ ಸಂಸ್ಕಾರವಾಗಿದೆ.