Tuesday, May 14, 2019

ನಾವೇಕೆ “ಬುದ್ಧ”ರಾಗಿಲ್ಲ? (Naveke budhdharagilla?)

ಲೇಖಕರು:   ಸುಬ್ರಹ್ಮಣ್ಯ ಸೋಮಯಾಜಿಕಪಿಲವಸ್ತುವಿನಲ್ಲಿ ಒಂದು ದಿನ ಸಿದ್ಧಾರ್ಥ ರಾಜಕುಮಾರನು ವಿಹಾರಕ್ಕೆಂದು ಹೊರಟ. ಅವನ ತಂದೆ ಶುದ್ಧೋಧನ ಮಹಾರಾಜ ಮಗನ ವಿಹಾರಕ್ಕೆಂದು ಅತ್ಯಂತ ವೈಭವದ ವ್ಯವಸ್ಥೆಯನ್ನೇ ಮಾಡಿದ್ದ. ಎಲ್ಲೆಲ್ಲಿಯೂ ಸಂಭ್ರಮ, ನೃತ್ಯ, ಮೋಜು. ದುಃಖದ ಪರಿಚಯವೇ ಮಗನಿಗೆ ಆಗಕೂಡದು ಎಂಬಲ್ಲಿ ಬಹಳ ಕಾಳಜಿ ವಹಿಸಿದ್ದ.

ಆದರೂ ನಿಯತಿಯ ನಿರ್ಧಾರ ಬೇರೆಯೇ ಆಗಿತ್ತು. ಸಿದ್ಧಾರ್ಥ ಒಬ್ಬ ಮುದುಕನನ್ನು ನೋಡಿದ.ಒಬ್ಬ ರೋಗಿಯನ್ನು ನೋಡಿದ. ಒಂದು ಶವವನ್ನು ನೋಡಿದ. ತನ್ನ ಜೀವನದಲ್ಲಿ ಈ ದೃಶ್ಯಗಳನ್ನು ಅವನು ಕಂಡಿರಲೇ ಇಲ್ಲ. ಬಹಳ ಆತಂಕವಾಯಿತು. ಸಾರಥಿಯನ್ನು ಪ್ರಶ್ನಿಸಿದ. ಸಾರಥಿಯು ಎಲ್ಲರಿಗೂ ಜೀವನದಲ್ಲಿ ಈ ಅವಸ್ಥೆಗಳು ಬರುತ್ತವೆ ಎಂದು ಪರಿಚಯಿಸಿದ. ಅದಾದ ನಂತರ ಸಿದ್ಧಾರ್ಥನಿಗೆ ಯಾವ ವೈಭವವೂ ಸುಖ ಸಂತೋಷಗಳೂ ಬೇಡವಾದವು. ರಥವನ್ನು ಹಿಂತಿರುಗಿಸುವಂತೆ ಹೇಳಿದ. ಈ ಬಗೆಯ ಭೌತಿಕ ಜೀವನ ಅವನಿಗೆ ನಿರರ್ಥಕವೆನಿಸಿತು. ರಾತೋರಾತ್ರಿ ಎಲ್ಲರನ್ನೂ, ಎಲ್ಲವನ್ನೂ ತೊರೆದು ತಪಸ್ಸಿಗೆ ನಡೆದ. ಬುದ್ಧನಾದ. ಈ ಕಥೆ ನಮಗೆಲ್ಲರಿಗೂ ಗೊತ್ತಿದೆ.

ಶ್ರೀರಂಗಮಹಾಗುರುಗಳು ಹೇಳುತ್ತಿದ್ದರು. ಅಪ್ಪಾ, ನಮ್ಮ ಜೀವನದಲ್ಲಿ ನಾವು ದಿನ ಬೆಳಗಾದರೆ ಎಷ್ಟು ಜನ ಮುದುಕರನ್ನು,ರೋಗಿಗಳನ್ನು ಮತ್ತು ಶವಗಳನ್ನು ನೋಡುತ್ತೇವಲ್ಲಾ, ಏಕೆ ನಾವೂ ಬುದ್ಧರಾಗಿಲ್ಲ? ಅಷ್ಟು ಸುಖ ಸಂತೋಷಗಳಲ್ಲಿ ಬೆಳೆದ ಸಿದ್ಧಾರ್ಥನೇಕೆ ಈ ಮೂರು ದೃಶ್ಯಗಳಿಂದ ಮಹಾ ಸನ್ಯಾಸಿಯಾಗಲು ನಿಶ್ಚಯಿಸಿದ? ಜೀವನದ ಪರಮ ಸತ್ಯವನ್ನು ಕಂಡುಕೊಳ್ಳಲು ಇನ್ನಿಲ್ಲದ ಕಷ್ಟಗಳನ್ನು ಎದುರಿಸಲು ತಯಾರಾದ? ಘಟನೆಯೇ ಪರಿಣಾಮ ಮಾಡುವ ಹಾಗಿದ್ದರೆ ನಮಗೂ ಮಾಡಬೇಕಿತ್ತಲ್ಲವೇ? ಪ್ರಶ್ನೆ ಸಹಜ. ಆದರೆ ಎಲ್ಲರಿಗೂ ಒಂದು ಪೂರ್ವಸ್ಥಿತಿ ಇರುತ್ತದೆ. ನಮಗೆ ಆ ಪೂರ್ವ ಸ್ಥಿತಿಯ ಪರಿಚಯವಿರುವುದಿಲ್ಲ. ಸ್ವಿಚ್ ಹಾಕಿದರೆ ಬಲ್ಬ್ ಉರಿಯುತ್ತದೆ ಎಂಬುದು ಸತ್ಯವಾದರೂ ವಿದ್ಯುತ್ತಿನ ಸಂಪರ್ಕ ಎರಡಕ್ಕೂ ಸರಿಯಾಗಿದ್ದಾಗ ಮಾತ್ರ  ಇದು ಸಾಧ್ಯ ಎಂಬುದು ಅಲಿಖಿತ ನಿಯಮ. ಅಂಗಡಿಯಲ್ಲಿ ಮಾರಾಟಕ್ಕೆಂದು ಇಟ್ಟ ಸ್ವಿಚ್ ನ್ನು ಸುಮ್ಮನೇ ಒತ್ತಿದರೆ ಯಾವ ಬಲ್ಬೂ ಉರಿಯದು. ಹಾಗೆ  ಸಿದ್ಧಾರ್ಥನಿಗೆ ಜನ್ಮ ಜನ್ಮಾಂತರಗಳ ಸಂಸ್ಕಾರದಿಂದ ಒಳಜೀವನಕ್ಕೆ ಬೇಕಾದ ಪೂರ್ವತಯಾರಿ ಸಿದ್ಧವಾಗಿತ್ತು. ಈ ಮೂರು ದೃಶ್ಯಗಳು ಕೇವಲ ಸ್ವಿಚ್ ಒತ್ತುವ ಕೆಲಸವನ್ನು ಮಾಡಿದವು. ಅಷ್ಟೇ. ಆದರೆ ನಮಗೆ ಒಳಗೆ ಜೀವನದ ಪರಮ ಸತ್ಯವನ್ನು ಅರಿಯುವ ನಿಟ್ಟಿನಲ್ಲಿ ಯಾವ ಪೂರ್ವ ಸಿದ್ಧತೆಗಳೂ ಇಲ್ಲ. ಹಾಗೆಂದೇ ನಮಗೆ ಈ ಘಟನೆಗಳು ಯಾವ ಗಂಭೀರವಾದ ಪರಿಣಾಮವನ್ನೂ ಮಾಡಿಲ್ಲವೆಂದೇ ಉತ್ತರ. ಯಾವುದೇ ವಿಷಯಗಳು  ಸಂಸ್ಕಾರಿಗಳಿಗೆ ಮಾಡುವ ಪರಿಣಾಮವೇ ಬೇರೆ, ಸಾಮಾನ್ಯರಿಗೇ ಬೇರೆಯಾಗಿರುತ್ತದೆ.

ನಾವು ಮನುಷ್ಯ ಶರೀರವನ್ನು ಹೊತ್ತು ಓಡಾಡುತ್ತಿದ್ದರೂ ಈ ದೇಹದ ಸಾಮರ್ಥ್ಯ,ವಿಶೇಷತೆಗಳನ್ನು ಕೇವಲ ಇಂದ್ರಿಯ ಜೀವನಕ್ಕಾಗಿ ಮಾತ್ರ ಬಳಸಿಕೊಂಡಿದ್ದೇವೆ. ಇಲ್ಲಿ ಇಂದ್ರಿಯಗಳನ್ನು ಮೀರಿದ ಆನಂದದ ಸೆಲೆಯನ್ನು ಅನುಭವಿಸುವ ವ್ಯವಸ್ಥೆಯುಂಟು. ಯೋಗದ ಅಂತಹ ಕೇಂದ್ರಗಳುಂಟು. ಅವುಗಳು ತೆರೆದಾಗ ನಮಗಾಗುವ  ಅನುಭವವು ಇಂದ್ರಿಯ ಸುಖಗಳಿಗಿಂತ ಕೋಟಿ ಪಾಲು ಹೆಚ್ಚಿನದು ಎಂದೆಲ್ಲ ಅಂತಹ ಪರಮ ಸುಖವನ್ನು ಅನುಭವಿಸಿದ ಈ ದೇಶದ ಜ್ಞಾನಿಗಳ ಮಾತು. ಅವರು ತಮ್ಮ ತಪಸ್ಯೆಯಿಂದ ಈ ದೇಹಯಂತ್ರದ ಪೂರ್ಣ ಪ್ರಯೋಜನವನ್ನು ಪಡೆದುಕೊಂಡು ತುಂಬು ಜೀವನವನ್ನು ನಡೆಸಿದವರಾಗಿದ್ದರು. ಅಂತಹ ಪೂರ್ವ ಸಿದ್ಧತೆ ಇದ್ದಾಗ ಸೃಷ್ಟಿಯನ್ನೂ ಅಲ್ಲಿನ ವಿಷಯಗಳನ್ನೂ ನೋಡುವ ನೋಟವು ಸಮಗ್ರವಾದ ನೋಟವಾಗುತ್ತದೆ. ಅದಿಲ್ಲದಿದ್ದಾಗ ಕುರುಡರು ಒಂದು ಆನೆಯ ಬೇರೆ ಬೇರೆ ಭಾಗಗಳನ್ನು ಮುಟ್ಟಿ ಆನೆ ಕಂಬದಂತಿದೆ, ಹಾವಿನಂತಿದೆ ಎಂದೆಲ್ಲ ಹೇಳಿದಂತೆ ಅಪೂರ್ಣವಾದ ನೋಟವಾಗುತ್ತದೆ.

ನಾವು ಅಂತಹ ಕೇಂದ್ರಗಳನ್ನು ಬಳಸದೇ ಜನ್ಮಾಂತರಗಳನ್ನು ಕಳೆದಿದ್ದೇವೆ. ಯಾವುದನ್ನೂ ಬಳಸದೇ ಬಿಟ್ಟಾಗ ತುಕ್ಕು ಹಿಡಿಯುತ್ತದೆ. ಅದರ ಉಪಯೋಗ ನಿತ್ಯದಲ್ಲಿದ್ದಾಗ ಮಾತ್ರ ಅಂತಹ ಸೌಖ್ಯವನ್ನು ನಮ್ಮ ದೇಹವು ಅನುಭವಿಸಲು ಸಾಧ್ಯವಾಗುವುದು.

ಅಂತಹ ಪೂರ್ವಸಿದ್ಧತೆಗಾಗಿ ಪ್ರಯತ್ನಿಸುವ ಬುದ್ಧಿಯನ್ನು ಭಗವಂತನು ನಮಗೆಲ್ಲ ಕರುಣಿಸಲಿ ಎಂದು ಪ್ರಾರ್ಥಿಸೋಣ. ಸಿದ್ಧಾರ್ಥ ಬುದ್ಧನಾದಂತೆ ನಮ್ಮ ಮನಸ್ಸುಗಳೂ ಜೀವನದ ಆ ಅತ್ಯುನ್ನತ  ಸ್ಥಾನಕ್ಕೆ ಏರುವಂತಾಗಲಿ ಎಂದು ಹಾರೈಸೋಣ.

ಸೂಚನೆ:  12/05/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.