Saturday, May 25, 2019

ಗುರುನಿಷ್ಠೆಯ ಪರಮ ಫಲ (Gurunshteya parama phala)

ಲೇಖಕರು: ತಾರೋಡಿ ಸುರೇಶ
ಶ್ರೀ ಶಂಕರಭಗವತ್ಪಾದರ ಜೀವನದ ಒಂದು ಸಂದರ್ಭ. ಶ್ರೀಶಂಕರರ , ಮಹಾ ಮೆಧಾವಿಗಳಾದ ಮೂವರು ಶಿಷ್ಯರು ಗುರುಗಳಿಂದ ಪಾಠದ ಅನುಗ್ರಹಕ್ಕಾಗಿ ಕಾಯುತ್ತಿದ್ದಾರೆ. ಗುರುಗಳೂ ಸಹ ಸಿದ್ಧರಾಗಿಯೇ ಕುಳಿತಿದ್ದಾರೆ. ಆದರೆ ಪಾಠವನ್ನು ಮಾತ್ರ ಆರಂಭಿಸುತ್ತಿಲ್ಲ. ಶಿಷ್ಯರಿಗೆ ಈ ನಡೆ ಅರ್ಥವಾಗಲಿಲ್ಲ, ಮೌನವನ್ನು ಮುರಿದು ಒಬ್ಬರು ಕೇಳಿದರು” ಗುರುಗಳೇ ಎಲ್ಲರೂ ಬಂದಾಗಿದೆ, ಪಾಠವನ್ನು ಪ್ರಾರಂಭಿಸಬಹುದಲ್ಲಾ” ಎಂದು. ಆಗ ಶಂಕರರು- ಗಿರಿ  ಎಲ್ಲಿ? ಅವನೂ ಬರಲಿ ಎಂದರು. ಆಗ ಆ ಶಿಷ್ಯರು-ವಸ್ತ್ರಗಳನ್ನು ಒಗೆಯಲು ಹೋಗಿರಬೇಕು, ಇನ್ನೂ ಬಹಳ ಹೊತ್ತಾಗಬಹುದು. ಅಲ್ಲದೇ, ಗುರುಗಳೇ, ಗಿರಿ ಎಂದೂ ಗಂಭೀರವಾಗಿ ಪಾಠ ಕೇಳಿ ಒಪ್ಪಿಸಿದವನಲ್ಲ. ಅವನ ಮೇಧಾ ಶಕ್ತಿಯೂ ಕಡಿಮೆ. ಪಾಠದ ಸಂದರ್ಭದಲ್ಲಿ ಅನ್ಯಮನಸ್ಕನಂತೆ ಗೋಡೆಗೆ ಒರಗಿ ಕುಳಿತಿರುತ್ತಾನೆ. ಅವನನ್ನು ಕಾಯುವುದರಲ್ಲಿ ಅರ್ಥವಿಲ್ಲ ಸಮಯ ವ್ಯರ್ಥ.  ಎಂದು ಗೋಡೆಯ ಕಡೆಗೆ ನೋಡಿದರು. ಅಂದರೆ ಅವನಿಗೆ ಪಾಠ ಮಾಡುವುದು ಗೋಡೆಗೆ ಹೇಳಿದಂತೆ ಎನ್ನುವ ಧೋರಣೆ ಅವರದು. ಈ ಮಾತು ಶಂಕರರಿಗೆ ಇಷ್ಟವಾಗಲಿಲ್ಲ. ನಿಮೀಲಿತ ನೇತ್ರರಾಗಿ ಕುಳಿತಲ್ಲಿಂದಲೇ ಗಿರಿಯನ್ನು ಅನುಗ್ರಹಿಸಿದರು.

ಏನಾಶ್ಚರ್ಯ! ಎಂದೂ ಚರ್ಚೆಯಲ್ಲಿ ಭಾಗವಹಿಸದ, ಸಂದೇಹವನ್ನೂ ಕೇಳದ ಗಿರಿಯು ತೋಟಕ ವೃತ್ತದಲ್ಲಿ ಗುರುಸ್ತುತಿಯನ್ನು ಹೇಳುತ್ತಾ ಬರುತ್ತಿದ್ದಾನೆ! ವಿದಿತಾಖಿಲ ಶಾಸ್ತ್ರ ಸುಧಾಜಲಧೇ ಮಹಿತೊಪನಿಷತ್ ಕಥಿತಾರ್ಥನಿಧೇ, ಹೃದಯೇ ಕಲಯೇ ವಿಮಲಂ ಚರಣಂ ಭವ ಶಂಕರದೇಶಿಕ ಮೇ ಶರಣಂ” ಎಂದು ಆರಂಭಗೊಳ್ಳುವ ಅಷ್ಟಕ ಇಂದಿಗೂ ಬಹಳ ಪ್ರಸಿದ್ಧವಾಗಿದೆ. ಭಗವತ್ಪಾದರು ಗಿರಿಯನ್ನು ಹರಸಿ – ಈ ಸ್ತೋತ್ರವು ತೋಟಕಾಷ್ಟಕವೆಂದೇ ಪ್ರಸಿದ್ಧವಾಗಲಿ, ಇಂದಿನಿಂದ ನೀನು ತೋಟಕಾಚಾರ್ಯನೆಂಬ ಹೆಸರಿನಿಂದ ಪ್ರಸಿದ್ಧನಾಗು ಎಂದು ಆಶೀರ್ವದಿಸಿದರು.

ವಾಸ್ತವವಾಗಿ ಗಿರಿ ದಡ್ದನಾಗಿರಲಿಲ್ಲ. ನಾವು ಹೊರ ಪ್ರವೃತ್ತಿಯಿಂದ ವ್ಯಕ್ತಿಗಳನ್ನು ಅಳೆಯುವ ತಪ್ಪುಮಾಡುತ್ತೇವೆ. ಗಿರಿಯ ಗುರುನಿಷ್ಠೆ ಪ್ರಶ್ನಾತೀತವಾದದ್ದು. ಶಂಕರಭಗವತ್ಪಾದರಂತಹ ಜ್ಞಾನೀ ಗುರುವಿನ ಸೇವೆ ಶುಶ್ರುಷೆಗಳೇ ಅವನ ಅಂತರ್ಬಾಹ್ಯ ಪ್ರಕೃತಿಯನ್ನು ಪವಿತ್ರಗೊಳಿಸಿತ್ತು. ಮನೋಬುದ್ಧಿಗಳು ಗುರುವಿನ ಅನುಗ್ರಹವನ್ನು ಗ್ರಹಿಸಲು ಸಿದ್ಧವಾಗಿದ್ದವು. ಈ ವಿಷಯವನ್ನು ಉಳಿದ ಶಿಷ್ಯರು ಗಮನಿಸಿರಲಿಲ್ಲ. ಅನುಗ್ರಹವಾದೊಡನೆಯೇ ಅವನ ಒಳಗಿನ ಸಿದ್ಧತೆಗೆ ಶಕ್ತಿಸಂಚಾರವಾಯಿತು. ಗಿರಿ ತೋಟಕಾಚಾರ್ಯನಾದ.

ನಮ್ಮ ಬದುಕು ಇಂದ್ರಿಯ ಪ್ರಪಂಚದಲ್ಲಿಯೇ ಸಾಗುತ್ತಾ ಮಲಿನವಾಗಿರುತ್ತದೆ. ಸತ್ಪುರುಷನಾದ ಗುರುವಿನ ಸೇವೆ, ಅವನ ಚರಣಕಮಲಗಳ ಪೂಜೆ, ಅವನಲ್ಲಿ ವಿಭಕ್ತವಾಗದ ಅನನ್ಯ ಭಕ್ತಿ ಇವೆಲ್ಲವೂ ನಮ್ಮ ಪ್ರಕೃತಿಯನ್ನು ನಿರ್ಮಲವಾಗಿಸುತ್ತವೆ. ಈ ಕಥೆಯಲ್ಲಿ ಗುರುಭಕ್ತಿಯ ಪಾಠವಿದೆ. ನಾನು ತಿಳಿದವನು, ಅವನಿಗೆ ಬುದ್ಧಿ ಕಡಿಮೆ ಎಂಬ ಅಹಂಕಾರವನ್ನು ತೊರೆಯಬೇಕೆಂಬ ಪಾಠವಿದೆ. ಮೇಲು ಮೇಲಿನ ತಿಳುವಳಿಕೆಯಿಂದ ಒಬ್ಬರನ್ನು ಅಳೆಯಬಾರದು ಎಂಬ ಪಾಠವಿದೆ.

ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ನಮಗೆಲ್ಲರಿಗೂ ಕೈದೀವಿಗೆಯಾಗುವ ಈ ಕಥೆಯನ್ನು ಮರೆಯದಿರೋಣ.


ಸೂಚನೆ:  25/05/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.