Sunday, May 5, 2019

ಭಗವದ್ರಾಮಾನುಜರು (Bhagavadramanujaru)



ಶ್ರೀಮನ್ನಾರಾಯಣನಿಗೆ ಹಾಸಿಗೆಯಾಗಿದ್ದು ಸೇವೆಸಲ್ಲಿಸುವ ಆದಿಶೇಷನೇ ರಾಮಾನುಜರಾಗಿ ಅವತರಿಸಿಬಂದನೆಂದು ಪ್ರತೀತಿ. ದರ್ಶನ-ಸ್ಥಾಪಕಾಚಾರ್ಯರೂ, ಆಚಾರ್ಯವರಿಷ್ಠರು, ಅನುಷ್ಠಾನಪರರೂ, ಯೋಗಿವರೇಣ್ಯರೂ, ಪರಮಕರುಣಾಳುವೂ, ಯತಿಶ್ರೇಷ್ಠರೂ ಆದ ಮಹಾಪುರುಷರ ವೈಭವದ ಅಮೃತಬಿಂದುಗಳನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತೇವೆ.

ಅವತಾರ-ಪ್ರತಿಭೆ:

ಚೆನ್ನೈಯಿನ ಸಮೀಪದಲ್ಲಿರುವ ಶ್ರೀಪೆರುಂಬೂದೂರ್ ಪಟ್ಟಣದಲ್ಲಿ ಆಸೂರಿ ಕೇಶವಾಚಾರ್ಯ-ಕಾಂತಿಮತಿ ದಂಪತಿಯರಿಗೆ ಕ್ರಿ.ಶ.1017ರಲ್ಲಿ ಚೈತ್ರಮಾಸ-ಆರ್ದ್ರಾನಕ್ಷತ್ರ ಕೂಡಿದ ಶುಭದಿನದಲ್ಲಿ ಜನಿಸಿದರು. ಬಾಲ್ಯದಿಂದಲೇ ಪ್ರಚಂಡ ಬುದ್ಧಿವಂತರಾಗಿದ್ದ ರಾಮನುಜರು ದೈವಭಕ್ತಿ, ಗುರುಹಿರಿಯರ ಭಕ್ತಿಯಿಂದ ಕೂಡಿದ್ದರು. ಮುಂದೆ ಕಾಂಚೀಪುರಕ್ಕೆ ಬಂದು ನೆಲೆಸಿದವರು. ಯಾದವ ಪ್ರಕಾಶರೆಂಬ ಪ್ರಸಿದ್ಧಅದ್ವೈತಾಚಾರ್ಯರ ಶಿಷ್ಯರಾದರು. ಗುರುವಿನ ವ್ಯಾಖ್ಯಾನಗಳು ಇವರ ಭಕ್ತಿಯುತವಾದ ಮನಸ್ಸಿಗೆ ಹೊಂದಿಕೆಯಾಗದೆ ನೋವನ್ನುಂಟು ಮಾಡಿದವು. ವಿನಯದಿಂದ ಗುರುವಿನಲ್ಲಿ ತಮ್ಮ ವ್ಯಾಖ್ಯಾನವನ್ನು ಅರಿಕೆ ಮಾಡಿಕೊಳ್ಳುತ್ತಿದ್ದರು. ಗುರುವಿಗೆ ಈ ಪ್ರಚಂಡವಾದ ಪ್ರತಿಭೆಯ ಅರಿವಾದರೂ ಅಸೂಯೆ ವೃದ್ಧಿಯಾಗಿ ಇವರ ಪ್ರಾಣವನ್ನೇ ತೆಗೆಯುವ ಸಂಚುಹೂಡಿದರು. ಆದರೆ ಶ್ರೀಸಮೇತನಾದ ಕಂಚಿ ವರದನೇ ಬೇಡ-ದಂಪತಿಗಳ ವೇಷದಲ್ಲಿ ಬಂದು ಕಾಪಾಡಿದ ವೃತ್ತಾಂತವು ಸೊಗಸಾದುದು. ಭಕ್ತಶ್ರೇಷ್ಠರೂ-ಆಚಾರ್ಯಶ್ರೇಷ್ಠರೂ ಆದ ವೃದ್ಧ ಯಾಮುನಾಚಾರ್ಯರು ಇವರ ಹಿರಿಮೆಯನ್ನೂ ಭವಿಷ್ಯವನ್ನೂ ಗುರುತಿಸಿ ಅವಸಾನ ಕಾಲದಲ್ಲಿ ತಮ್ಮ ಮೂರು ಬೆರಳುಗಳಿಂದ ರಾಮನುಜರಿಗೆ ಸಂದೇಶವನ್ನು ನೀಡಿದ ಸಂಗತಿ ಸ್ವಾರಸ್ಯಕರವಾದದ್ದು.  

ಶ್ರೀಕಾಂಚೀಪೂರ್ಣರೆಂಬ ಪರಮಭಕ್ತರು ವರದರಾಜಸ್ವಾಮಿಯೊಡನೆ ನೇರವಾಗಿ ಮಾತನಾಡಿ ಅಜ್ಞೆಗಳನ್ನು ಪಡೆಯುತ್ತಿದುದು ಸುಪ್ರಸಿದ್ಧ. ಇವರ ಮೂಲಕವೇ ರಾಮಾನುಜರು ತಮ್ಮಲ್ಲಿ ಕಾಡುತ್ತಿದ್ದ ಮೂಲಭೂತವಾದ ಪ್ರಶ್ನೆಗಳಿಗೆ ಉತ್ತರಗಳನ್ನು ಸಾಕ್ಷಾತ್ ವರದರಾಜನಿಂದಲೇ ಪಡೆದುಕೊಂಡರು. ಇದನ್ನೇ ಆಧಾರವಾಗಿಟ್ಟುಕೊಂಡು ಮುಂದೆ ತಮ್ಮ ವಿಶಿಷ್ಟಾದ್ವೈತ-ಸಿದ್ಧಾಂತವನ್ನು ಸ್ಥಾಪಿಸಿದರು. 

ಅದ್ಭುತ ಗುಣಸಂಪನ್ನರು:

ಶ್ರೀಯಾಮುನಾಚಾರ್ಯರ ಶಿಷ್ಯರುಗಳಾದ ಅನೇಕ ಆಚಾರ್ಯರುಗಳಿಂದ ರಾಮಾನುಜರು ವಿವಿಧ ಶಾಸ್ತ್ರ ಪಾಠಪ್ರವಚನಗಳನ್ನು ಅಧ್ಯಯನಮಾಡಿ ಪಾರಂಗತರಾದರು. ಗೋಷ್ಠೀಪೂರ್ಣರಿಂದ (ಹದಿನೇಳುಬಾರಿ ವಿಫಲರಾಗಿ ಕೊನೆಗೆ) ತಾರಕ ಮಂತ್ರೊಪದೇಶವನ್ನು ಪಡೆದರು. ಇತರರಿಗೆ ತಿಳಿಸಿದ ಪಕ್ಷದಲ್ಲಿ ನರಕಪ್ರಾಪ್ತಿಯೇ ಆಗುವುದೆಂದು ಗುರುಗಳು ಕಟ್ಟಾಜ್ಞೆ ವಿಧಿಸಿದ್ದರೂ ಭಕ್ತಜನ ಸಮೂಹಕ್ಕೆ ಆ ಮಹಾಮಂತ್ರವನ್ನು ಧಾರೆಯೆರೆದ ಮಹಾಕರುಣಾಳುಗಳು. ಕೋಪಗೊಂಡ ಗುರುವಿಗೆ ಅವರು ನೀಡಿದ ಉತ್ತರ ಇಷ್ಟೇ: “ಇಷ್ಟುಜನ ಉದ್ಧಾರವಾಗುವಪಕ್ಷೆ ನಾನೊಬ್ಬ ನರಕಕ್ಕೆ ಹೋಗಲು ಸಿದ್ಧ”!! ಜೈನದೊರೆಯ ಮಗಳಿಗೆ ಹಿಡಿದಿದ್ದ ದುಷ್ಟಶಕ್ತಿಯನ್ನು ಯಾವ ತಾಂತ್ರಿಕರಿಂದಲೂ ನಿವಾರಿಸಲಾಗದಿದ್ದಾಗ ತಮ್ಮ ಅದ್ಭುತವಾದ ತಪೋಬಲದಿಂದ ನಿವಾರಿಸಿದ ಸಿದ್ಧಪುರುಷರು, ಪವಾಡಪುರುಷರು. ಅತ್ಯಂತ ಕಾಮುಕನಾದ ಧನುರ್ದಾಸನಿಗೆ ಶ್ರೀರಂಗನಾಥನ ದಿವ್ಯನೇತ್ರ ದರ್ಶನಮಾಡಿಸಿ ತನ್ಮೂಲಕ ಭಗವತ್‌ ಕಾಮವನ್ನು ತುಂಬಿ ಶ್ರೇಷ್ಠ ಶಿಷ್ಯನನ್ನಾಗಿಸಿಕೊಂಡ ಕರುಣಾಳು ಯೋಗಿಪುಂಗವರು. ಕರ್ನಾಟಕದ ಮೇಲುಕೋಟೆ ಕ್ಷೇತ್ರಕ್ಕೆ ಆಗಮಿಸಿ, ಹುದುಗಿದ್ದ ತಿರುನಾರಾಯಣನ ಮೂರ್ತಿಯನ್ನು ಪತ್ತೆಮಾಡಿ ಪ್ರತಿಷ್ಠಿಸಿದರು. ದೇಶದಾದ್ಯಂತ ಸಂಚರಿಸಿ ಪ್ರತಿಸ್ಪರ್ಧಿಗಳನ್ನು ವಾದ-ವಿವಾದಗಳಲ್ಲಿ ಲೀಲಾಜಾಲವಾಗಿ ಗೆದ್ದು ಮತ ಸ್ಥಾಪನೆ ಮಾಡಿದ ನಿಗರ್ವಿ-ತಾರ್ಕಿಕರು.

ದರ್ಶನ-ಸ್ಥಾಪನಾಚಾರ್ಯರು:

ಭಗವದ್ರಾಮಾನುಜರು ಶ್ರೀಭಾಷ್ಯ, ಗೀತಾಭಾಷ್ಯಾದಿ ಒಂಭತ್ತು ಗ್ರಂಥಗಳ ಮೂಲಕ ವಿಶಿಷ್ಟಾದೈತ-ಸಿದ್ಧಾಂತ ಪ್ರತಿಪಾದನೆಯನ್ನುಮಾಡಿದರು. ಲಕ್ಷ್ಮೀ ಸಮೇತನಾದ ನಾರಾಯಣನೊಬ್ಬನೇ ಪರತತ್ತ್ವ ಎಂದು ಸಾರಿದರು(ಆದ್ದರಿಂದ ಅದ್ವೈತ). ಆದರೆ ಜೀವ-ಜಗತ್ತು ಸತ್ಯವಾದದ್ದು, ಮಾಯೆಯಲ್ಲ. ಅವೆಲ್ಲವೂ ಅವನ ದೇಹವೇ ಆಗಿವೆ; ಈಶ್ವರನು ಜಗತ್ತು-ಜೀವಗಳ ಆತ್ಮನಾಗಿ ಆವರಿಸಿದ್ದಾನೆ. ಆತನು ಅನಂತ ಕಲ್ಯಾಣ ಗುಣಪರಿಪೂರ್ಣ-ಸೌಂದರ್ಯ ಸ್ವರೂಪಿ. ಸಗುಣ-ಸಾಕಾರನೆಂದು ಪ್ರತಿಪಾದಿಸಿದುದರಿಂದ ಈ ಸಿದ್ಧಾಂತವು ವಿಶಿಷ್ಟ-ಅದ್ವೈತವೆನಿಸಿಕೊಂಡಿತು. ಅವನೇ ಅಂತಿಮ ಗುರಿ ಮತ್ತು ಗುರಿಯನ್ನುಹೊಂದಿಸುವ ದಾರಿ. ಮೋಕ್ಷಕ್ಕೆ ಉಪಾಯವೆಂದರೆ ಅವನಲ್ಲಿ  ಅನನ್ಯ ಭಕ್ತಿಯಿಂದಿರುವುದು; ಕರ್ಮ-ಜ್ಞಾನಗಳನ್ನು ಭಕ್ತಿಗೆ ಪೂರಕವಾಗಿರಿಸಿಕೊಂಡು ಅವನಲ್ಲೇ ಸಂಪೂರ್ಣ ಶರಣಾಗತರಾಗಿ ಸಮರ್ಪಿಸಿಕೊಂಡು ಭಕ್ತಿಯಿಂದ ಒಲಿಸಿಕೊಂಡರೆ ಶ್ರೀವೈಕುಂಠವನ್ನು ಸೇರಬಹುದು ಎನ್ನುತ್ತದೆ ಈ ಸಿದ್ಧಾಂತ. ಭಗವಂತನಿಗೂ ಜೀವ-ಜಗತ್ತುಗಳಿಗೂ ಇರುವ ವಿಶಿಷ್ಟ ಸಂಬಂಧವನ್ನು ವಿವರಿಸಿ, ವಿಶಿಷ್ಟಾದ್ವೈತಕ್ಕೆ ಅಚ್ಚುಕಟ್ಟಾದ ರೀತಿ-ನೀತಿ-ಚೌಕಟ್ಟನ್ನು ನಿರ್ಮಿಸಿದರು. 

ಹೀಗೆ 120 ವರ್ಷಕಾಲ ಈ ಭೂಲೋಕವನ್ನಲಂಕರಿಸಿ, ಪರಿಪೂರ್ಣಜೀವನದಿಂದ ಜಾತಿ-ಮತಭೇದವಿಲ್ಲದೇ ಭಕ್ತಜನರ ಉದ್ಧಾರಕ್ಕಾಗಿಯೇ ಶ್ರಮಿಸಿ, ದೇವಾಲಯಗಳಲ್ಲಿಯೂ ಮನೆ-ಮನೆಗಳಲ್ಲಿಯೂ ವ್ಯವಸ್ಥೆಯನ್ನು ಜಾರಿಗೆ ತಂದ ಮಹಾಯೋಜಕ-ಯತಿಶ್ರೇಷ್ಠರಿಗೆ ಭೂರಿ-ಭೂರಿ ಸಾಷ್ಟಾಂಗ ಪ್ರಣಾಮಗಳು. 

ಸೂಚನೆ: 04/05/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.