Wednesday, May 15, 2019

ಕ್ಷೌರಕರ್ಮವೂ ಒಂದು ಸಂಸ್ಕಾರವೇ - 1? (Kshoura karmavu ondu samskarave - 1?)

ಲೇಖಕರು: ತಾರೋಡಿ ಸುರೇಶಚೂಡಾಕರ್ಮವು ಈ ಸಂಸ್ಕಾರದ ಶಾಸ್ತ್ರೀಯವಾದ ನಾಮಧೇಯ.ಇದನ್ನು ರೂಢಿಯಲ್ಲಿ ಚೌಲ ಎಂದೂ ಕರೆಯುತ್ತಾರೆ.ಎಲ್ಲ ಗೃಹ್ಯ-ಧರ್ಮಸೂತ್ರಕಾರರು ಮಾನ್ಯ ಮಾಡಿದ್ದಾರೆ.ಚೂಡಾ ಎಂದರೆ ಶಿಖೆ ಎಂದರ್ಥ. ಮೊಟ್ಟಮೊದಲನೆಯ ಶಿಖೆಯನ್ನು ಇಡಿಸುವ ಕರ್ಮವಾಗಿರುವುದರಿಂದ ಮಹತ್ವವುಳ್ಳದ್ದಾಗಿದೆ.

ಆಧುನಿಕರು  ಸೌಕರ್ಯ ಮತ್ತು ಸೌಂದರ್ಯಕ್ಕಾಗಿ ಬಂದ ಪದ್ಧತಿ ಎನ್ನುತ್ತಾರೆ. ಕೇಶವು ಹೆಚ್ಚಿದ್ದರೆ ಹೇನುಗಳು ಮತ್ತು ಇತರ ಕೊಳೆಗಳು ಮಲಿನಗೊಳಿಸುವದರಿಂದ ಕೇಶವಪನವು ಸೌಕರ್ಯ. ತಲೆಭಾರ ಕಡಿಮೆ ಮಾಡುವುದರಿಂದ ಸೌಕರ್ಯ. ನರಬಲಿಗೆ ಪರ್ಯಾಯ. ಕ್ರಮೇಣ ಮಂತ್ರ ಇತ್ಯಾದಿಗಳನ್ನು ಭಯದ ಕಾರಣದಿಂದ ಸೇರಿಸಿ ಧಾರ್ಮಿಕ ರೂಪ ಕೊಟ್ಟರು ಎಂದು ಅಭಿಪ್ರಾಯಪಡುತ್ತಾರೆ. ಋಷಿಗಳು ಸೌಂದರ್ಯವನ್ನು, ಸೌಕರ್ಯವನ್ನು ತಿರಸ್ಕರಿಸಿಲ್ಲ. ಆದರೆ ಅಷ್ಟೇ ಆದರೆ ಅದನ್ನು ಸಂಸ್ಕಾರವೆಂದು ಕರೆದು ಇಷ್ಟು ಮಹತ್ವವನ್ನು ಕೊಡಬೇಕಾಗಿರಲಿಲ್ಲ. ಕೇವಲ ಲೌಕಿಕ ಸಂಸ್ಕಾರವೇ ಸಾಕಾಗುತ್ತಿತ್ತು. ನಾವು ಹಿಂದಿನ ಸಂಸ್ಕಾರಗಳಲ್ಲಿ ಗಮನಿಸಿರುವಂತೆ ದೀರ್ಘಾಯುಸ್ಸು, ಸಾತ್ವಿಕವಾದ ಕೀರ್ತಿ, ಮತ್ತು ಮಾಂಗಲ್ಯಕ್ಕೋಸ್ಕರ ಮಾಡಬೇಕು ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ. ಮಂತ್ರಗಳ ಅಭಿಪ್ರಾಯವೂ ಇದನ್ನೇ ಹೇಳುತ್ತವೆ. ಕ್ಷೌರದ ಅಂಗಡಿಯನ್ನು ನಮ್ಮ ದೇಶದಲ್ಲಿ ‘ಆಯುಷ್ಕರ್ಮಶಾಲಾ’ ಎಂದೂ, ಕೇಶವಪನವನ್ನು ‘ಆಯುಷ್ಕರ್ಮ’ವೆಂದೂ ಕರೆಯುತ್ತಿದ್ದರು. “ಇದು ದೀರ್ಘಾಯಸ್ಸು ಮತ್ತು ಶುದ್ಧಿಯನ್ನು ಉಂಟುಮಾಡುವ ಕರ್ಮ” ಎಂದು ಶ್ರೀರಂಗಮಹಾಗುರುಗಳು, ಚಿಕ್ಕದಾಗಿ, ಚೊಕ್ಕವಾಗಿ ಒಂದೇ ವಾಕ್ಯದಲ್ಲಿ ಸಾರಸರ್ವಸ್ವವನ್ನೂ ಹೇಳಿದ್ದಾರೆ.

ಈ ಸಂಸ್ಕಾರದ ಸಾಮಾನ್ಯವಾದ ಆಚರಣೆ ಹೀಗಿದೆ. ಮೂರನೆಯ ವರ್ಷದಲ್ಲಿ, ಪುನರ್ವಸು ನಕ್ಷತ್ರದಲ್ಲಿ, ಅಥವಾ ಐದನೆಯ ವರ್ಷದಲ್ಲಿ ಮಾಡಬೇಕು. ಕೊನೇಪಕ್ಷ ಉಪನಯನದ ಜೊತೆಯಲ್ಲಿಯಾದರೂ ಮಾಡಲೇಬೇಕಾದ ಕರ್ಮವಿದು. ಶ್ರೀರಂಗಮಹಾಗುರುಗಳ ಮೂರನೆಯ ವರ್ಷ ಎಂದಿದ್ದರು. ಇದನ್ನು ವಿಷಮಸಂಖ್ಯೆಯ ವರ್ಷದಲ್ಲಿ ಮತ್ತು ಹಗಲಿನಲ್ಲಿಯೇ ಮಾಡಬೇಕು. ತಾಯಿಯು ಗರ್ಭವತಿಯಾಗಿದ್ದರೆ ಮಾಡಬಾರದು ಎಂದೂ ಶಾಸ್ತ್ರಗಳು ಎಚ್ಚರಿಸುತ್ತವೆ. ತಣ್ಣೀರಿಗೆ ಬಿಸಿನೀರನ್ನು ಸೇರಿಸಿ ಅದಕ್ಕೆ ಬೆಣ್ಣೆ,ತುಪ್ಪ ಮತ್ತು ಮೊಸರನ್ನು ಬೆರೆಸಬೇಕು. ಕ್ಷೌರ ಮಾಡಬೇಕಾದ ಜಾಗಕ್ಕೆ ಈ ದ್ರವ್ಯವನ್ನು ಸವರಬೇಕು. ಶಲಲೀ ಔದುಂಬರ ಮತ್ತು ಧರ್ಭೆಯನ್ನು ಸೇರಿಸಿ ಕೇಶವನ್ನು ಮೇಲಕ್ಕೆತ್ತಬೇಕು. ಮೊದಲು ತಂದೆಯು ಮೂರು ಕೂದಲನ್ನು ದರ್ಭೆಯೊಂದಿಗೆ ಹಿಡಿದು ನಾಲ್ಕು ದಿಕ್ಕುಗಳಲ್ಲಿಯೂ ಕತ್ತರಿಸಬೇಕು. ಉಳಿದ ಕೂದಲನ್ನು ನಾಪಿತನು ಕತ್ತರಿಸುತ್ತಾನೆ. ತಾಯಿಯು ಗೋಮಯವಿರುವ ಪಾತ್ರೆಯಲ್ಲಿ ಕತ್ತರಿಸಿದ ಕೂದಲನ್ನು ಸಂಗ್ರಹಿಸಿ ಅತ್ತಿಮರದ ಬುಡದಲ್ಲಿ ಹೂಳುತ್ತಾಳೆ ಅಥವಾ ಹಸುವಿನ ಕೊಟ್ಟಿಗೆಯಲ್ಲಿ ಹಾಕುವ ರೂಢಿಯೂ ಇದೆ. ನಂತರ ತಂದೆಯು ಸವಿತೃ ದೇವತೆಯನ್ನು ಧ್ಯಾನಿಸುತ್ತಾ ನಾಪಿತನನ್ನು ನೋಡುತ್ತಾನೆ.  ಮಗುವಿಗೆ ಬಿಸಿ ನೀರಿನ ಸ್ನಾನ,ಅಲಂಕಾರ ಮಾಡಿ ದಕ್ಷಿಣದಲ್ಲಿ ಕುಳಿತಿರುವ ಬ್ರಹ್ಮನಿಗೆ ಗೋದಾನ ಕೊಡಬೇಕು. ಅನಂತರ ಬ್ರಹ್ಮೋದ್ವಾಸನ, ಅಗ್ನಿಯ ಉಪಸ್ಥಾನ, ಭೋಜನ ಮಾಡಿಸಿ ಆಶೀರ್ವಾದವನ್ನು ಪಡೆಯಬೇಕು. ಅನ್ಯಾನ್ಯ ಸಂಪ್ರದಾಯಗಳಲ್ಲಿ ಸಣ್ಣ-ಪುಟ್ಟ ವ್ಯತ್ಯಾಸಗಳು ಇದ್ದರೂ ಇವಿಷ್ಟೂ ಸ್ಥೂಲವಾದ ಕಲಾಪಗಳು. ಎಲ್ಲ ಘಟ್ಟಗಳಲ್ಲಿಯೂ ಸೂಕ್ತವಾದ ಮಂತ್ರ ಪ್ರಯೋಗವಿರುತ್ತದೆ. ಆಯುರ್ವೇದವು  ಚೂಡಾಕರ್ಮವು ಆಯುರ್ವೃದ್ಧಿ, ಪಾಪಪರಿಹಾರಕ, ಹರ್ಷಪ್ರದಾಯಕ, ಸೌಭಾಗ್ಯದಾಯಕ ಎಂದು ಪ್ರಶಂಸೆ ಮಾಡಿದೆ. 

ಪೌಷ್ಟಿಕಂ ವೃಷ್ಯಂ ಆಯುಷ್ಯಂ ಶುಚಿರೂಪಂ ವಿರಾಜನಂ!
ಕೇಶಶ್ಮಶ್ರುನಖಾದೀನಾಂ ಕರ್ತನಂ ಸಂಪ್ರಸಾದನಂ!!
ಎಂದು ಚರಕಮುನಿಯು ಹೇಳುತ್ತಾನೆ. ಆತನ ಮಾತಿನಲ್ಲಿ ತಾತ್ವಿಕವಾದ ಅಂಶ, ಭೌತಿಕ ಆರೋಗ್ಯ, ಸೌಂದರ್ಯ, ಸೌಕರ್ಯಗಳೆಲ್ಲವೂ ಸೇರಿದೆ. ಅವುಗಳ ವಿವರಗಳನ್ನು ಮುಂದೆ  ಗಮನಿಸೋಣ. (ಮುಂದುವರೆಯುವುದು).


ಸೂಚನೆ: 14/05/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.