Saturday, May 25, 2019

ಮರಗಳು ತೋರುವ ಅಮರಭಾವ (Maragalu thoruva amarabhava)

ಲೇಖಕರು: ಡಾ. ಕೆ. ಎಸ್. ಕಣ್ಣನ್


ಮರದ ಬುಡ ಮೊದಲು ಗಟ್ಟಿಯಾದಲ್ಲಿ ಮರವು ಸ್ಥಿರವಾಗಿರಬಲ್ಲುದು, ಚೆನ್ನಾಗಿ ಬೆಳೆಯಬಲ್ಲುದು. ಸೊಂಪಾಗಿ ವಿಸ್ತರಿಸಬಲ್ಲುದು. ಮುಂದೆ ಚೆನ್ನಾಗಿ ಬೆಳೆಯಲು ಬೇಕಾಗುವ ವ್ಯವಸ್ಥೆಯೆಲ್ಲಾ ಬೇರಿನ ಬೆಳವಣಿಗೆಯಲ್ಲೇ ನಿಗೂಢವಾಗಿ ಸಿದ್ಧವಾಗುತ್ತಿರುತ್ತದೆ – ಎಂದೆವಲ್ಲವೇ?

ಗಿಡವೇನು, ಮನುಷ್ಯ ಸೃಷ್ಟಿಯೂ ಹೀಗೆಯೇ, ಅಲ್ಲವೆ? ಇದನ್ನು ಗರ್ಭಶಾಸ್ತ್ರವು (ಎಂಬ್ರಿಯಾಲಜಿ embryology) ಸ್ಪಷ್ಟಪಡಿಸುತ್ತದೆ. ಮುಂದೆ ನೆರವೇರಬೇಕಾದ ಬೆಳವಣಿಗೆಗಾಗಿ ಎಲ್ಲ ಏರ್ಪಾಡೂ ಗರ್ಭದಲ್ಲಿಯೇ ಆಗಿರುತ್ತದೆ. ಸ್ತ್ರೀಯ ಗರ್ಭವನ್ನು ಸೇರಿದ ಪುರುಷನ ವೀರ್ಯವು ತಾಳುವ ಮೊದಲ ಆಕಾರವೇ ಮಸ್ತಿಷ್ಕ ಹಾಗೂ ಮೆದುಳುಬಳ್ಳಿಯದು. ಯಾವುದೇ ಶಿಶುವು ಬೆಳೆದುಕೊಳ್ಳಲೂ ಮೊದಲ ಹೆಜ್ಜೆಯೆಂದರೆ ತಲೆಯೇ ಸರಿ. ಮೊದಮೊದಲು ತಲೆಯೇ ದಪ್ಪನಾಗಿ ದೊಡ್ಡದಾಗಿರುವುದು. ಅಲ್ಲಿಯ ಅಂಶಗಳೇ ಕ್ರಮಕ್ರಮವಾಗಿ ಇಡೀ ಶರೀರವಾಗಿ ಬೆಳೆದುಕೊಳ್ಳುವುದು. ಸಹಜ ಸಾರೋಗ್ಯ ಹೆರಿಗೆಯೆಂದರೆ ಮೊದಲು ಹೊರಬರುವುದೂ ತಲೆಯೇ ಸರಿ. ಮಗುವು ಜನಿಸಿದ ಮೇಲೂ “ತಲೆ ನಿಲ್ಲುವ ತನಕ” ಮಗುವನ್ನು ಬಹಳ ಎಚ್ಚರಿಕೆಯಿಂದಲೇ ನೋಡಿಕೊಳ್ಳಬೇಕಾಗುತ್ತದೆ. ಹೀಗೆ ಮೂಲವು ಸ್ಥಿರವಾಗುವ ಪರ್ಯಂತ ಬೇರೆಯ ಬೆಳವಣಿಗೆಗಳು ಮಂದಗತಿಯಿಂದಲೇ ಘಟಿಸುತ್ತವೆ. ಮಿಕ್ಕ ಪ್ರಾಣಿಗಳಲ್ಲೂ ಈ ಅಂಶವು ಸಮಾನವಾಗಿದ್ದರೂ, ಮನುಷ್ಯರಲ್ಲಿ ಇದೊಂದು ವಿಶೇಷವೇ ಸರಿ. ಮಿಕ್ಕ ಪ್ರಾಣಿಗಳು ಹುಟ್ಟಿದ ಕೆಲವೇ ಕ್ಷಣಗಳಲ್ಲೇ ಅವು ಮನುಷ್ಯಶಿಶುವಿಗಿಂತಲೂ ಹೆಚ್ಚಾಗಿ ಹಾಗೂ ಶೀಘ್ರತರವಾಗಿ ಸ್ವಾವಲಂಬಿಯಾಗಿರುತ್ತವೆ.

ಹೀಗೆ ಬುಡವನ್ನು ಗಟ್ಟಿಮಾಡಿಕೊಂಡೇ ಉಳಿದ ಬೆಳವಣಿಗೆಗೆ ಕೈಹಾಕುವುದೆಂಬ ತತ್ತ್ವವನ್ನು ಸಸ್ಯಗಳಲ್ಲೂ ಮನುಷ್ಯರಲ್ಲೂ ನಾವು ಕಾಣಬಲ್ಲೆವು.ಭಾರತೀಯಸಂಸ್ಕೃತಿಯ ಹಿರಿಮೆಯೆಂಬುದು ಋಷಿಗಳಿಂದ ಆದುದೆಂಬುದು ನಿರ್ವಿವಾದವೇ ಸರಿ. ಏಕೆ? ಏಕೆಂದರೆ ಈ ಸಂಸ್ಕೃತಿಯು ಶ್ರೇಷ್ಠಜ್ಞಾನವನ್ನು ಆಧರಿಸಿದುದು. ಶ್ರೇಷ್ಠಜ್ಞಾನವೆಂದರೇನು? ಸಾಧಾರಣವಾದ ಜ್ಞಾನವೆಂದರೆ ನಮ್ಮ ಐದು ಇಂದ್ರಿಯಗಳಿಗೆ ಏನೇನು ತಿಳಿಯುತ್ತದೋ ಅಷ್ಟೇ. ಶ್ರೇಷ್ಠಜ್ಞಾನವೆಂದರೆ ಸೃಷ್ಟಿಯ ಸೂಕ್ಷ್ಮಗಳನ್ನು ಅರಿಯುವ ಜ್ಞಾನ. ಆಧುನಿಕ ವಿಜ್ಞಾನವೂ ಸೃಷ್ಟಿಯ ಅನೇಕ ಸೂಕ್ಷ್ಮಗಳನ್ನು ಹೊರಗೆಡಹಿದೆಯಷ್ಟೆ. ಆದರೆ ಮತ್ತೂ ಮುಖ್ಯವಾದ ಸೃಷ್ಟಿಯ ಅನೇಕ ಮರ್ಮಗಳನ್ನು ಋಷಿಗಳು ಕಂಡುಕೊಂಡರು.

ಋಷಿಗಳು ಇವನ್ನು ಎಲ್ಲಿ ಕಂಡುಕೊಂಡರು, ಹೇಗೆ ಕಂಡುಕೊಂಡರು? – ಎಂಬ ಪ್ರಶ್ನೆಗಳು ಬರುವುವಷ್ಟೆ? ಅವರು ಕಂಡುಕೊಂಡದ್ದು ತಮ್ಮ ತಪೋವನಗಳಲ್ಲಿ. ತಪಸ್ಸು ಮಾಡಿ ಕಂಡುಕೊಂಡರು.

ತಪೋವನಗಳೆಂದರೇನು? ಅವುಗಳು ಮರದ ರಾಶಿಗಳೇ ಸರಿ. ಮರಗಳು ತೋರುವ ಆದರ್ಶವು ಸಾಮಾನ್ಯವೇನಲ್ಲ. ಮೇಲ್ನೋಟಕ್ಕೇ ಗೋಚರವಾಗುವ ಅಂಶವೆಂದರೆ ಮರಗಳ ಪರೋಪಕಾರಪರತೆ. ಮರಗಳ ನೆರಳಲ್ಲಿ ಪ್ರಾಣಿಗಳು ಮಲಗುತ್ತವೆ. ಮರಗಳ ಮೇಲ್ಭಾಗದಲ್ಲಿ ಪಕ್ಷಿಗಳು ಗೂಡು ಕಟ್ಟಿಕೊಳ್ಳುತ್ತವೆ. ಪೊಟರೆಗಳಲ್ಲಿ ಕೀಟಗಳು ತುಂಬಿರುತ್ತವೆ. ಕೊಂಬೆಗಳಲ್ಲಿ ಕಪಿಗಳು ನೆಲೆಗಾಣುತ್ತವೆ. ಹೂಗಳಿಗೆ ದುಂಬಿಗಳು ಬಂದು ಮಧುಪಾನವನ್ನು ಮಾಡಿಕೊಳ್ಳುತ್ತವೆ. ಹೀಗೆ ಮರವೊಂದರ ಅಂಗಗಳೆಲ್ಲವೂ ನಾನಾ ಪ್ರಾಣಿಗಳಿಗೆ ಸುಖವನ್ನು ಕೊಡುವಂತಹವೇ. ಈ ಆದರ್ಶವನ್ನು ಪಾಲಿಸದವರೇ ಭೂಮಿಗೆ ಭಾರ – ಎಂಬ ಮಾತು ಪಂಚತಂತ್ರದಲ್ಲಿ ಬರುತ್ತದೆ.

ಮತ್ತೊಂದು ಸುಭಾಷಿತವು ಚಂದನವೃಕ್ಷದ ಆದರ್ಶವನ್ನು ಹೇಳುತ್ತದೆ. ಬುಡದಲ್ಲಿ ಭುಜಂಗ(ಹಾವು)ಗಳು, ಶಿಖರದಲ್ಲಿ ವಿಹಂಗ(ಪಕ್ಷಿ)ಗಳು, ಕೊಂಬೆಗಳಲ್ಲಿ ಪ್ಲವಂಗ(ಕೋತಿ)ಗಳು, ಹೂಗಳಲ್ಲಿ ಭೃಂಗ(ದುಂಬಿ)ಗಳು – ಹೀಗಾಗಿ, ಪರೋಪಕಾರಕ್ಕಾಗಿಯೇ ಸಜ್ಜನರಿರುವುದು – ಎಂದು. ಇಂತಹ ಆದರ್ಶಗಳು ಸದಾ ಕಣ್ಣಮುಂದೆ ಇರುವುದೂ ಒಂದು ಉತ್ಕೃಷ್ಟ ಸಂನಿವೇಶವೇ. ಕಾಳಿದಾಸನು ತನ್ನ ಕುಮಾರಸಂಭವ ಕಾವ್ಯದಲ್ಲಿ ಪಾರ್ವತಿಯ ತಪಸ್ಸಿನ ವರ್ಣನೆಯನ್ನು ಮಾಡುತ್ತಾನೆ. ಗಿಡಗಳಿಗೆ ನೀರೆರೆಯುವುದರಲ್ಲಿ ಆಕೆ ತಾಯ್ತನದ ಸವಿಯನ್ನು ಕಂಡಳು – ಎನ್ನುತ್ತಾನೆ. ಯಾವುದೇ ಗಿಡ ಮೊದಲ ಬಾರಿ ಹೂಬಿಟ್ಟಂದು ಅದೊಂದು ಹಬ್ಬವೇ ಆಗಿರುತ್ತಿತ್ತು, ಶಕುಂತಲೆಗೆ – ಎಂದೂ ತನ್ನ ಶಾಕುಂತಲ ನಾಟಕದಲ್ಲಿ ಹೇಳುತ್ತಾನೆ. ಗಿಡಮರಗಳ ಬಗೆಗಿನ ಪ್ರೀತಿ ಸಹಜವಾಗಿ ಉಕ್ಕೇರಿದುದು ನಮ್ಮ ದೇಶದಲ್ಲಿ. ವನಸಂಪತ್ತಿಲ್ಲದಿದ್ದಲ್ಲಿ ನಮಗೆ ಉಳಿಗಾಲವಿಲ್ಲ – ಎಂಬ ಇಂದಿನ ಭೀತಿಯಿಂದ ಜನಿಸಿದುದಲ್ಲ! ಇವೆಲ್ಲಕ್ಕಿಂತಲೂ ಮಿಗಿಲಾಗಿ, ಗಿಡಮರಗಳ ’ಮಿತಾಹಾರಸೇವನೆ’ಯೂ ಒಂದು ಆದರ್ಶವೇ. ತಾನಾಗಿ ಒದಗಿದ ನೀರು, ಚಂದ್ರನ ಕಿರಣಗಳು – ಇವೇ ತಮ್ಮ ಆಹಾರ! ಈ ಆದರ್ಶವೂ ಪಾರ್ವತಿಯ ತಪಸ್ಸಿಗೆ ಮಾದರಿಯಾಯಿತಂತೆ!

ಇಷ್ಟಲ್ಲದೆ ತಪಸ್ಸಿಗೆ ಆದರ್ಶವೆನಿಸುವ ನಿಶ್ಚಲತೆಯನ್ನೂ ಪಾಠವಾಗಿ ತೆಗೆದುಕೊಳ್ಳಬಹುದು. ಎಲ್ಲಕ್ಕಿಂತಲೂ ಮಿಗಿಲಾಗಿ, ಜೀವರಸವನ್ನು ಮೇಲ್ಮುಖವಾಗಿ ಹರಿಸುವ ಮಾದರಿಯು ಋಷಿಗಳ ಊರ್ಧ್ವರೇತಸ್ಕತೆಗೂ ಆದರ್ಶವಾಯಿತೆಂಬುದನ್ನು ಗಮನಿಸಬಹುದು.

ಹೀಗೆ ಮರಗಳ ಜೀವನವು ನಮಗೆ ಅಮರಜೀವನಕ್ಕೇ ಆದರ್ಶವಾಗಿದೆಯಲ್ಲವೆ!?


ಸೂಚನೆ: 25/05/2019 ರಂದು ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.