ಲೇಖಕರು: ಡಾ. ಕೆ. ಎಸ್. ಕಣ್ಣನ್
ಹೀಗೇಕೆ? ಏಕೆಂದರೆ ತಪಸ್ಸನ್ನು ಆರಂಭಮಾಡುವಾಗ ಅವರವರ ಮನಸ್ಸಿನಲ್ಲಿ ಏನೇನು ಸಂಕಲ್ಪವಿತ್ತೋ ಅದರಂತೆಯೇ ಫಲವು ಬರುವುದೂ. ಮೂವರ ಮುಂದೆಯೂ ಒಬ್ಬರಾದ ಮೇಲೊಬ್ಬರಿಗೆ ಬ್ರಹ್ಮನು ವರಕೊಡಲು ಪ್ರತ್ಯಕ್ಷನಾದನಷ್ಟೆ. ಮೂವರೂ ಕೇಳಿಕೊಂಡ ವರಗಳೂ ಬೇರೆ ಬೇರೆ. ರಾವಣನು ಕೇಳಿದ ವರವಿದು: “ಬ್ರಹ್ಮನೇ, ಎಲ್ಲರಿಗೂ ಸಾವೇ ಭಯ. ನನಗೆ ಅಮರತ್ವವನ್ನು ಕೊಡು”. ಅದಕ್ಕೆ ಬ್ರಹ್ಮನು “ಅದಾಗದು. ಬೇರೆ ವರವನ್ನು ಕೇಳಿಕೋ” ಎಂದ. ಅದಕ್ಕೆ ರಾವಣ ಹೇಳಿದ “ಯಾವ ದೇವ-ದಾನವರಿಂದಲೂ ನನಗೆ ಸಾವು ಬರಬಾರದು. ಮನುಷ್ಯರು ನನಗೆ ಲೆಕ್ಕವಿಲ್ಲ, ಅವರು ಹುಲ್ಲುಕಡ್ಡಿಯಂತೆ”.
ವಿಭೀಷಣನು ಕೇಳಿದುದು ಹೀಗೆ: “ಬ್ರಹ್ಮನೇ, ನೀನು ಲೋಕಗುರು. ನೀನೇ ವರಕೊಡಲು ಬಂದಿರುವೆ. ಅಷ್ಟಕ್ಕೇ ನಾನು ಕೃತಕೃತ್ಯನಾದೆ. ಧರ್ಮದಲ್ಲಿ ನಿರತರಾದವರಿಗೆ ಏನು ತಾನೆ ಎಟುಕದು? ಆದ್ದರಿಂದ ಬಹಳ ದೊಡ್ಡ ಆಪತ್ತೇ ಬಂದರೂ ನನ್ನ ಮನಸ್ಸು ಧರ್ಮದಲ್ಲಿ ನೆಲೆಸಿರಲಿ”. ಕೊನೆಯದಾಗಿ ಕುಂಭಕರ್ಣನ ಸರದಿ. ಆತ ಕೇಳಿದ: “ಅನೇಕ ವರ್ಷಗಳ ಕಾಲ ನಾ ನಿದ್ದೆ ಮಾಡಬೇಕು! ಎಲ್ಲರಿಗೂ “ಹಾಗೆಯೇ ಆಗಲಿ” ಎಂದು ಹೇಳಿ ಬ್ರಹ್ಮನು ಅಂತರ್ಧಾನ ಹೊಂದಿದ.
ಮೂವರೂ ಅಸುರರೇ. ಸಮಕಾಲ ತಪಸ್ಸು ಮಾಡಿದವರೇ. ಆದರೆ ಅವರವರು ವರಿಸಿದ ವರಗಳೇ ಬೇರೆಬೇರೆಯಾದವು. ಹೀಗೇಕಾಯಿತು? ಏಕೆಂದರೆ, ಮೂವರ ಪ್ರವೃತ್ತಿಗಳೂ ಬೇರೆ ಬೇರೆ. ಕುಂಭಕರ್ಣನು ಕೇಳಿಕೊಂಡದ್ದು ಆತನ ತಾಮಸ-ಸ್ವಭಾವವನ್ನು ಹೇಳುತ್ತದೆ. ರಾವಣನು ಕೇಳಿಕೊಂಡದ್ದು ಆತನ ರಾಜಸ-ಸ್ವಭಾವವನ್ನು ತೋರಿಸುತ್ತದೆ. ವಿಭೀಷಣನು ಕೇಳಿಕೊಂಡದ್ದು ಆತನ ಸಾತ್ತ್ವಿಕ-ಸ್ವಭಾವವನ್ನು ತಿಳಿಯಗೊಡಿಸುತ್ತದೆ.
ಹೀಗೆ ಒಡಹುಟ್ಟಿದವರಾದ ಅಸುರರಲ್ಲೇ ಒಬ್ಬ ಸಾತ್ತ್ವಿಕ, ಒಬ್ಬ ರಾಜಸ, ಒಬ್ಬ ತಾಮಸ. ಸತ್ತ್ವಗುಣವುಳ್ಳವನು ಸಾತ್ತ್ವಿಕ. ರಜೋಗುಣವುಳ್ಳವನು ರಾಜಸ. ತಮೋಗುಣವುಳ್ಳವನು ತಾಮಸ. ಈ ತ್ರಿಗುಣಗಳನ್ನುಕುರಿತು ಗೀತೆಯ ಕೊನೆಯ ಐದು ಅಧ್ಯಾಯಗಳಲ್ಲಿ ಅಲ್ಲಲ್ಲಿ ಹೇಳಿದೆ. ಸತ್ತ್ವಗುಣವು ಹೆಚ್ಚಾಗಿರುವವರು ಧರ್ಮಪರರಾಗಿರುತ್ತಾರೆ. ರಜೋಗುಣವು ಪ್ರಧಾನವಾಗಿರುವವರು ಲೋಭಿಗಳಾಗಿದ್ದು ತಮ್ಮ ನಾನಾ ಅಪೇಕ್ಷೆಗಳ ಪೂರೈಕೆಗಾಗಿ ಹಾತೊರೆದು ಹೊಡೆದಾಡುವವರು. ಇನ್ನು ತಮೋಗುಣವು ಯಾರಲ್ಲಿ ಅಧಿಕವೋ ಅವರು ಸೋಮಾರಿಗಳಾಗಿದ್ದುಕೊಂಡು ಯಾವ ಸಾಧನೆಯನ್ನೂ ಮಾಡಲಾರದವರಾಗಿರುತ್ತಾರೆ.
ಧರ್ಮವನ್ನು ಬಿಟ್ಟು ದರ್ಪದಿಂದ ಲೋಕಕಂಟಕನಾದ ರಾವಣ ಸಾವನ್ನಪ್ಪಿದ. ಇತ್ತ ಧರ್ಮವನ್ನು ಹಿಡಿದ ವಿಭೀಷಣನನ್ನು ಚಿರಂಜೀವಿಯೆಂದೇ ಹೇಳುವರಲ್ಲವೇ? ಕುಂಭಕರ್ಣನ ತಪಸ್ಸು ಸಾಧಿಸಿದುದಾದರೂ ತಮಸ್ಸನ್ನೇ!
ಹಾಗಿದ್ದರೆ ಈ ಮೂವರ ಪರಿಗಳಲ್ಲಿ ನಮಗೆ ಆದರ್ಶ ಯಾವುದೆಂದು ಬಾಯಿಬಿಟ್ಟು ಹೇಳಬೇಕೆ?