Friday, May 24, 2019

ಅಹಂಕಾರ ಬಿಡೋಣ (Ahankara bidona)

ಲೇಖಕರು: ಕೆ. ಎಸ್. ರಾಜಗೋಪಾಲನ್  ಜಯ-ವಿಜಯರು ವೈಕುಂಠದ ದ್ವಾರಪಾಲಕರು. ಒಮ್ಮೆ ಸನಕಾದಿ ಮುನಿಗಳು ಮಹಾವಿಷ್ಣುವನ್ನು ನೋಡಲು ಬಂದರು. ಅಹಂಕಾರವಶರಾಗಿದ್ದ ಈ ದ್ವಾರಪಾಲಕರು, ಬಂದವರು ಯಾರೆಂದು ತಿಳಿದಿದ್ದರೂ ಅವರನ್ನು ತಡೆದುಬಿಟ್ಟರು. ಸನಕಾದಿಗಳಿಗೆ ಕೋಪ ಬಂತು. “ನೀವು ಇಂತಹ ಶುದ್ಧವಾದ ಜಾಗದಲ್ಲಿರಲು ಯೋಗ್ಯರಲ್ಲ; ರಾಕ್ಷಸರಾಗಿ ಜನ್ಮವೆತ್ತಿ” ಎಂದು ಶಪಿಸಿದರು. ಮಹಾವಿಷ್ಣುವೇ ಬಂದು ಜಯವಿಜಯರನ್ನು “ನೀವು ಮೂರು ಜನ್ಮ ನನ್ನ ಶತ್ರುಗಳಾಗಿದ್ದು ಮತ್ತೆ ನನ್ನ ಬಳಿಗೆ ಬರುವಿರೋ ಅಥವಾ ಏಳು ಜನ್ಮ ಮಿತ್ರರಾಗಿದ್ದು ಬರುವಿರೋ?” ಎಂದು ಕೇಳಿದನು. ಜಯವಿಜಯರು “ಮೂರು ಜನ್ಮ ಶತ್ರುಗಳಾಗಿದ್ದುಕೊಂಡು ಬೇಗ ಮತ್ತೆ ಹಿಂದಿರುಗುತ್ತೇವೆ” ಎಂದರು. ಸನಕಾದಿ ಮುನಿಗಳು ಕ್ರೋಧವಶರಾದದ್ದೂ ತಪ್ಪೇ! ಅದರ ಬಗ್ಗೆ ತಿಳಿವಳಿಕೆ ಕೊಡಲೆಂದು ವಿಷ್ಣುವು ಆ ಮುನಿಗಳನ್ನು ಕುರಿತು “ಜಿತೇಂದ್ರಿಯರಾದ ನಿಮ್ಮಂತಹವರನ್ನು ನಮ್ಮ ದ್ವಾರಪಾಲಕರು ಒಳಗೆ ಬಿಡದಿದ್ದುದು ತಪ್ಪು.  ಅವರ ತಪ್ಪಿಗಾಗಿ ನಿಮ್ಮಲ್ಲಿ ನಾನು ಕ್ಷಮೆ ಕೋರುತ್ತೇನೆ” ಎಂದನಂತೆ. ಸನಕಾದಿಗಳಿಗೆ ತಮ್ಮ ತಪ್ಪಿನ ಅರಿವಾಯಿತು! ಇದು ಪ್ರಸಿದ್ಧ ಕತೆ.

 ವಿಷ್ಣುಭಕ್ತರಾದ ಜಯವಿಜಯರಿಗೆ ಭಗವಂತನ ವಿರಹ ಸಹಿಸಿಕೊಳ್ಳಲಾಗದೇ ಹೀಗೆಂದಿರಬೇಕೆಂದು ಎಷ್ಟೋ ಜನ ಭಾವಿಸಿಯಾರು!  ಶ್ರೀರಂಗಮಹಾಗುರುಗಳು ಈ ಕಥೆಯನ್ನು ಸುಂದರವಾಗಿ ವಿವರಿಸಿದ್ದರು. ಜಯವಿಜಯರಿಗೆ ಎರಡು ಆಯ್ಕೆಗಳಿದ್ದವು-- ಶತ್ರುಗಳಾಗಿರುವುದು ಅಥವಾ ಮಿತ್ರರಾಗಿರುವುದು. ಅವರು ಆರಿಸಿದುದು ಶತ್ರುಗಳಾಗಿರುವ ಮಾರ್ಗವನ್ನೇ!  ಹಾಗೆ ಮಾಡಲು ಕಾರಣ, ಶಾಪವು ಆಗಲೇ ಅವರನ್ನು ಆವರಿಸಿಬಿಟ್ಟು, ಅವರ ಬುದ್ಧಿಯು ಸನ್ಮಾರ್ಗದಲ್ಲಿ ಓಡದಂತಾಗಿತ್ತು. ಭಗವಂತನ ಮಿತ್ರರಾಗಿ ಏಳು ಜನ್ಮವಲ್ಲ, ನೂರು ಜನ್ಮವಾದರೂ ಇರಬಹುದಿತ್ತು. ವೈಕುಂಠದಲ್ಲಿದ್ದ ಅವರ ಮನಸ್ಸು ಸದಾ  ಭಗವಂತನಲ್ಲೇ ಇರಬೇಕಿತ್ತು. ಹೋಗಲಿ! ಶಾಪದ ದೆಸೆಯಿಂದಾಗಿ ಭೂಲೋಕಕ್ಕೇ ಬಂದರೂ, ಅವರ ಮನಸ್ಸು  ನಿರಂತರವಾಗಿ ಭಗವಂತನಲ್ಲೇ ರಮಿಸುವುದಾದಲ್ಲಿ ಎಲ್ಲಿದ್ದರೇನು? ಇದನ್ನು ಅವರು ತಿಳಿಯದೇ ಹೋದರು. ಸ್ವರ್ಗನರಕಗಳಲ್ಲಿ ಎಲ್ಲೇ ಇದ್ದರೂ, ಸುಖವೇ ಇರಲಿ, ದುಃಖವೇ ಇರಲಿ ಎಂತಹ ಸನ್ನಿವೇಶದಲ್ಲೂ ಓ ನರಕಾಂತಕನಾದ ಭಗವಂತನೇ! ನಿನ್ನ ಚರಣಗಳ ಸ್ಮರಣೆ ನನಗೆ ತಪ್ಪದಿರಲಿ ಎಂದು ಪ್ರಾರ್ಥಿಸುವುದು ಭಾರತೀಯ ಸಂಸ್ಕೃತಿಯ ಹಿರಿಮೆಯಾಗಿದೆ.

ಎಂತಹ ಭಕ್ತನಾಗಿದ್ದರೂ ಪದವಿಯ ಆಸೆ, ಕೀರ್ತಿಕಾಮನೆ ಇತ್ಯಾದಿ ಸ್ವಾರ್ಥ ಹುಟ್ಟಿಕೊಂಡರೆ ಜೀವನದ ಲಕ್ಷ್ಯವೇ ಮರೆತು ಹೋಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಜಯವಿಜಯರ ಕಥೆ ದಾರಿದೀಪವಾಗಿದೆ. ಸದಾ ಭಗವಚ್ಚಿಂತನೆಯಲ್ಲಿರುವ ಮಹಾಪುರುಷರಿಗೇ ಹೀಗಾಗುತ್ತದೆಯೆಂದರೆ ಉಳಿದವರ ಪಾಡೇನು! ಅದಕ್ಕೇ ಹಿರಿಯರು ಹೇಳುವುದು--”ಪ್ರತ್ಯಹಂ ಪ್ರತ್ಯವೇಕ್ಷೇತ ನರಶ್ಚರಿತಮಾತ್ಮನಃ| ಕಿಂ ನು ಮೇ ಪಶುಭಿಸ್ತುಲ್ಯಂ ಕಿಂ ನು ಸತ್ಪುರುಷೈರಿತಿ||” (ಪ್ರತಿದಿನವೂ ಮನುಷ್ಯನು ತನ್ನ ನಡೆಯನ್ನು ಅವಲೋಕಿಸಬೇಕು. ನಾನು ಪಶುವಿನಂತೆ ಇದ್ದೆನೇ? ಅಥವಾ ಸಜ್ಜನನ ಹಾಗೆ ನಡೆದೆನೇ?) ಎಂದು. ಪಶುಗಳು ತಮ್ಮ ಸಹಜಪ್ರವೃತ್ತಿಯಿಂದಷ್ಟೇ (instinct) ಕೆಲಸಮಾಡಬಲ್ಲವು. ಮನುಷ್ಯನು ವಿವೇಚನೆಯನ್ನು ಮಾಡಬಲ್ಲ ಸೌಲಭ್ಯವನ್ನು ಹೊಂದಿದ್ದಾನೆ. ದುಷ್ಟ ಸಂಸ್ಕಾರಗಳ ಪ್ರಭಾವ, ಸಹವಾಸ ದೋಷದಿಂದಾಗಿ ಒಂದು ಕ್ಷಣ ಅಧರ್ಮದಲ್ಲೇ ಮನಸ್ಸು ಆಡಿದರೂ, ವಿವೇಕದಿಂದ ತನ್ನನ್ನು ಸರಿಪಡಿಸಿಕೊಂಡು ಲಕ್ಷ್ಯದತ್ತ ಮುಂದಡಿ ಇಡುವುದರಲ್ಲಿ ಜಾಣ್ಮೆಯಿದೆ.

ಸೂಚನೆ:  23/05/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.