ಲೇಖಕರು: ತಾರೋಡಿ ಸುರೇಶ
ನಾಮಕರಣ ಎಂದರೆ ಹೆಸರಿಡುವುದು ಎಂದರ್ಥ. ವ್ಯವಹಾರಕ್ಕೆ ಹೆಸರು ಬೇಕೇ ಬೇಕು. ಹಾಗೆ ಹೆಸರಿಡದಿದ್ದರೆ ಏನಾಗುತ್ತದೆ? ಹೆಸರೊಂದು ತಾನೇ ಹುಟ್ಟಿಕೊಳ್ಳುತ್ತದೆ. ಉದಾಹರಣೆಗೆ, ಕಾಲಿಲ್ಲದವನೊಬ್ಬನಿಗೆ ಹೆಸರಿಲ್ಲದಿದ್ದರೆ ಅವನಿಗೆ ಕುಂಟ ಎಂದೇ ನಾಮಕರಣವಾಗಿಬಿಡುತ್ತದೆ. ಹಲ್ಲು ಮುಂದೆ ಬಂದಿದ್ದರೆ ಹಲ್ಲುಬ್ಬ ಎಂಬ ಹೆಸರು ಹುಟ್ಟಿಕೊಂಡುಬಿಡುತ್ತದೆ. ಹೀಗೆ ಹೆಸರು ಅನಿವಾರ್ಯ. ವ್ಯಕ್ತಿಗಳಿಗೆ ಮಾತ್ರವಲ್ಲ. ಪ್ರತಿಯೊಂದು ಪದಾರ್ಥಕ್ಕೂ ಅಂದರೆ ವಸ್ತು,ವಿಷಯ ಮತ್ತು ಘಟನೆಗಳೆಲ್ಲವಕ್ಕೂ ಹೆಸರು ಅನಿವಾರ್ಯವೇ.ಇಲ್ಲದಿದ್ದರೆ ವ್ಯವಹಾರ ಅಸಂಭವ.
ಪ್ರಾಣಿಗಳೇನಾದರು ಹೆಸರಿಟ್ಟುಕೊಳ್ಳುತ್ತವೆಯೇ? ನಮಗೆ ತಿಳಿಯದ ವಿಷಯವದು.ತಥಾಕಥಿತ ವಿಚಾರವಂತನಾದ ಮಾನವನಂತೂ ಇಟ್ಟುಕೊಳ್ಳಲೇಬೇಕು. ಆದರೆ ಋಷಿಗಳು ತಮ್ಮ ಸಂಸ್ಕೃತಿಯಲ್ಲಿ ಇದಕ್ಕೊಂದು ವಿಶೇಷವಾದ ಮಹತ್ವವನ್ನು ಕೊಟ್ಟು ಸಂಸ್ಕಾರ ಎಂಬುದಾಗಿ ಕರೆದಿದ್ದಾರೆ. ಗುರುತಿಸುವ ಸಾಧನಮಾತ್ರ ಆಗದೆ ಸಂಸ್ಕಾರವಾಗಬೇಕಾದರೆ ಅದರಲ್ಲಿ ಸೇರಿಕೊಂಡಿರುವ ವಿಶಿಷ್ಟತೆಗಳೇನು?
ಪ್ರಪಂಚದಲ್ಲಿ ತಮತಮಗೆ ಇಷ್ಟವಾದ ಹೆಸರುಗಳನ್ನು ಇಡುತ್ತಾರೆ. ಹೆಸರಾಂತ ಆಂಗ್ಲ ಸಾಹಿತಿ ಷೇಕ್ಸಫಿಯರ್ “what is in the name? A rose by any other name would smell as sweet?” ಎಂಬ ಪ್ರಸಿದ್ಧವಾದ ಮಾತಿದೆ. ಗುಲಾಬಿಯನ್ನು ಬೇರೆ ಹೆಸರಿನಿಂದ ಕರೆದರೂ ಅದರತನವೇನೂ ವ್ಯತ್ಯಾಸವಾಗದಷ್ಟೆ. ಇದು ನಿಜವಾದರೂ, ಅದರ ಸುವಾಸನೆ, ವರ್ಣ, ಅದರ ಸೊಬಗಿಗನುಗುಣವಾಗಿ ಹೆಸರು ಕೊಟ್ಟರೆ ಅದು ಕಲೆಯಲ್ಲವೇ? ಅದು ಮನುಷ್ಯನ ಜ್ಞಾನ-ವಿಜ್ಞಾನಗಳನ್ನು ತೋರಿಸುತ್ತದೆ. ಆದರೆ ಜೀವನದ ಮಹಾಧ್ಯೇಯಪ್ರಾಪ್ತಿಗಾಗಿ ಹೆಸರನ್ನೂ ಸಾಧನವನ್ನಾಗಿ ಬಳಸಿಕೊಂಡಿರುವುದು ನಮ್ಮ ಪೂರ್ವಜರಾದ ಋಷಿಗಳ ವೈಶಿಷ್ಟ್ಯ. ವ್ಯವಹಾರದಲ್ಲಿ ಎರಡು ವಿಧಗಳಿವೆ. ಒಂದು ಲೌಕಿಕ ಇನ್ನೊಂದು ಪಾರಮಾರ್ಥಿಕ. ಮಹರ್ಷಿಗಳು ಪಾರಮಾರ್ಥಿಕ ವ್ಯವಹಾರಕ್ಕೆ ಹೊಂದುವಂತೆ ಲೌಕಿಕ ವ್ಯವಹಾರವಿರಬೇಕು ಎನ್ನುತ್ತಾರೆ. ಆದ್ದರಿಂದಲೇ ಹೆಸರೂ ಕೂಡ ಪಾರಮಾರ್ಥಿಕ-ಲೌಕಿಕವೆರಡಕ್ಕೂ ಹೊಂದುವಂತೆ ಇರಬೇಕು.
ಅಜಾಮಿಳನ ಕಥೆ ಪ್ರಸಿದ್ಧವಾದದ್ದು. ಮರಣಕಾಲದಲ್ಲಿ ಮಗನನ್ನು ನಾರಾಯಣ ಎಂದು ಕರೆದ. ಅಷ್ಟಕ್ಕೇ ವಿಷ್ಣುದೂತರು ಮತ್ತು ಯಮದೂತರಲ್ಲಿ ನಡೆದ ಸಂಭಾಷಣೆಯಿಂದ ಅವನಿಗೆ ತನ್ನ ಹಿಂದಿನ ಅನೈತಿಕ ಜೀವನದ ಬಗ್ಗೆ ಪಶ್ಚಾತ್ತಾಪವಾಯಿತು. ಹಾಗೆಯೇ ‘ನಾರಾಯಣ’ ಎಂಬ ನಾಮಧೇಯದ ಉಚ್ಛಾರದಿಂದ ಪೂರ್ವಸಂಸ್ಕಾರಗಳು ಜಾಗೃತವಾಗಿ ಪುನಃ ತಪಸ್ಸು ಮಾಡಿ ಸದ್ಗತಿ ಪಡೆದನು.ಹೀಗೆ ಶುಭ ನಾಮೋಚ್ಛಾರಣೆಯಿಂದ ಮುಕ್ತಿಯನ್ನು ಪಡೆಯಲು ಸಹಾಯವಾಯಿತು. ಆದರೆ ದುಷ್ಟಜೀವನ ಮಾಡುತ್ತಾ ಹೆಸರು ಮಾತ್ರ ಒಳ್ಳೆಯದಾಗಿದ್ದರೆ ಸತ್ಫಲ ದೊರೆಯದು ಎಂಬುದು ಖಚಿತವೇ.
ಈ ನಾಮ-ರೂಪಗಳು (ಪದ-ಪದಾರ್ಥ) ದೇವರ ಸೃಷ್ಟಿಯಲ್ಲಿ ”ನಾಮರೂಪಂ ವ್ಯಾಕರವಾಣಿ” ಎಂದು ಅರಳಿಬಂದಂತಹವು. ಸೃಷ್ಟಿಪೂರ್ವದಲ್ಲಿ ಯಾವ ವಿಭಾಗಗಳೂ ಇರಲಿಲ್ಲ. ಬೀಜವೊಂದೇ ಇದ್ದಾಗ ಯಾವ ವೈವಿಧ್ಯವೂ ಇಲ್ಲ. ಅದು ಮುಂದೆ ವೃಕ್ಷವಾಗಿ ವಿಕಾಸಗೊಂಡಾಗ ಕಾಂಡ, ಶಾಖೆ, ಎಲೆ ಹೂವು ಹಣ್ಣು ಹೀಗೆ ವಿವಿಧವಾದ ಪದಗಳೂ ಮತ್ತು ಪದಾರ್ಥಗಳೂ ಗೋಚರವಾಗುತ್ತವೆ. ಅವೆರಡೂ ಜೊತೆಜೊತೆಯಲ್ಲಿಯೇ ಅರಳಿಬಂದವು. ಪದಾರ್ಥದ ಧರ್ಮವನ್ನು ಒಳಗೆ ಗೂಢವಾಗಿಟ್ಟುಕೊಂಡು ಅದನ್ನು ಕನ್ನಡಿಸುವ ಶಬ್ಧವೊಂದನ್ನು ಅದೇ ಹೊತ್ತು ತರುತ್ತದೆ. ನೋವನ್ನು ಅಭಿವ್ಯಕ್ತಪಡಿಸುವಾಗ ಅದೇ ಒಂದು ನರಳುವ ಧರ್ಮವನ್ನು ಹೊತ್ತು ಬರುತ್ತದೆ. ಅಂತಹ ಪದಾರ್ಥಧರ್ಮವನ್ನು ಪ್ರತಿನಿದಿಸಬಲ್ಲ ಹೆಸರನ್ನು ಇಡುವಂತಹ ಪದ್ಧತಿಯನ್ನು ತಂದದ್ದು ಮಹರ್ಷಿಗಳ ವಿಶೇಷ.(ಮುಂದುವರೆಯುತ್ತದೆ).