Saturday, April 27, 2019

ಅಂಧಕಾಸುರ (Andhakasura)

ಲೇಖಕರು : ವಿದ್ವಾನ್ ಅನಂತ. ಬಿ. ಜಿ


ಒಂದಾನೊಂದು ಕಾಲದಲ್ಲಿ ಅಂಧಕಾಸುರ ಎಂಬ ಹೆಸರಿನ ಒಬ್ಬ ರಾಕ್ಷಸನಿದ್ದನು. ಅವನು ಬಹಳ ಶಕ್ತಿವಂತನಾಗಿದ್ದನು.  ಆದರೆ ಚಿಕ್ಕಂದಿನಲ್ಲಿ ಅವನಿಗೆ ಬಹಳ ದುಷ್ಟಬುದ್ಧಿಯೂ, ದುಷ್ಟ ಸ್ವಭಾವವೂ ಇದ್ದಿತು.  ಯಾವಾಗಲೂ ಬೇರೆಯವರಿಗೆ ಹಿಂಸೆ ಕೊಡುವುದು, ದೊಡ್ಡವರು ಮಾಡಬಾರದು ಎಂಬ ಕೆಲಸಗಳನ್ನು ಉದ್ದೇಶಪೂರ್ವಕವಾಗಿ ಮಾಡುವುದು, ಯಾವುದೇ ಒಳ್ಳೆಯ ಕೆಲಸಕ್ಕೆ ಅಡ್ಡಿ ಆತಂಕಗಳನ್ನು ಉಂಟುಮಾಡುವುದು ಅವನಿಗೆ ಬಹಳ ಸಂತೋಷ ಕೊಡುತ್ತಿದ್ದ ಕೆಲಸಗಳಾಗಿದ್ದವು.

ಅವನ ತಂದೆ ಒಬ್ಬ ರಾಜನಾಗಿದ್ದನು.  ಹಾಗಾಗಿ ಅಂಧಕನಿಗೆ ಅಧಿಕಾರದ ಮದವೂ ತುಂಬಿಕೊಂಡಿತ್ತು.ಇಷ್ಟು ಸಾಲದೆಂಬಂತೆ ಅವನು ಹುಟ್ಟುವಾಗಲೇ ಈಶ್ವರನಿಂದ ಒಂದು ವಿಶಿಷ್ಠವಾದ  ವರವನ್ನು ಪಡೆದುಕೊಂಡು ಬಂದಿದ್ದನು. ಈಶ್ವರನಿಂದ ಅಲ್ಲದೆ ಮತ್ತೆ ಯಾರಿಂದಲೂ ತನಗೆ ಸಾವಿಲ್ಲ ಎಂಬುದೇ  ಆ ವರ.  ಅಂಧಕನಿಗೆ ಇದು ಮತ್ತಷ್ಟು ದುಷ್ಟತನವನ್ನು ಹೆಚ್ಚಿಸಿಕೊಳ್ಳಲು ಕಾರಣವಾಯಿತು. ಇದರ ಪರಿಣಾಮವಾಗಿ ಸಜ್ಜನರು ಯಾರಿಗೂ ಅವನ ರಾಜ್ಯದಲ್ಲಿ ನೆಮ್ಮದಿಯಾಗಿ ಬದುಕಲು ಸಾಧ್ಯವಿಲ್ಲದೇ ಹೋಯಿತು.   ಶಿವನೊಬ್ಬನು ಮಾತ್ರವೇ ತನ್ನನ್ನು ಸಂಹರಿಸಬಲ್ಲನು ಎಂಬುದನ್ನು ಅರಿತಿದ್ದ ಅಂಧಕನು ದೇವ ಲೋಕದ ಮೇಲೆ ದಾಳಿ ನಡೆಸಿ ಅಲ್ಲಿದ್ದ ದೇವತೆಗಳನ್ನೆಲ್ಲ ಹಿಂಸಿಸಲು ಪ್ರಾರಂಭಿಸಿದನು.   ದೇವೇಂದ್ರನ ಸಿಂಹಾಸನದಲ್ಲಿ ತಾನೇ ಕುಳಿತು ತನ್ನ ಅಧರ್ಮದ ರಾಜ್ಯಭಾರವನ್ನು ನಡೆಸಲು ಮೊದಲು ಮಾಡಿದನು.  ಬಲ ಮತ್ತು ಅಧಿಕಾರಗಳು ಎಂಥವರನ್ನೂ ತಪ್ಪು ದಾರಿಗೆ ಎಳೆಯುತ್ತವೆ ಎಂಬ ಮಾತಿಗೆ ಅಂಧಕನು ಮತ್ತೊಂದು ಉದಾಹರಣೆಯಾಗಿ ನಿಂತನು.

ದೇವತೆಗಳೆಲ್ಲರೂ ಗುಪ್ತವಾಗಿ ಸಭೆ ಸೇರಿದರು.  ಹೇಗಾದರೂ ಮಾಡಿ ಅಂಧಕನ ಕಾಟವನ್ನು ನಿವಾರಿಸಿಕೊಳ್ಳಬೇಕು ಎಂದು ನಿರ್ಧಾರ ಮಾಡಿದರು.  ಆದರೆ ಹೇಗೆ? ಅವನನ್ನು ಯುದ್ಧದಲ್ಲಿ ಸೋಲಿಸುವ ಮಾತೇ ಇಲ್ಲ.  ಕೊಲ್ಲುವುದಂತೂ  ಕೇವಲ ಪರಮೇಶ್ವರನಿಂದ ಆಗುವ ಕೆಲಸ.

ಪರಮೇಶ್ವರನಾದರೋ ಮಂದರ ಎಂಬ ಗಿರಿಯ ಶಿಖರದ ಮೇಲೆ ಆಳವಾದ ತಪಸ್ಸಿನಲ್ಲಿ ಮುಳುಗಿ ಹೋಗಿದ್ದಾನೆ. ಅವನನ್ನು ಎಚ್ಚರಿಸುವ ಧೈರ್ಯವು ಯಾರಿಗೂ ಇಲ್ಲ.  ಹಾಗಾದರೆ ಈ ಸಮಸ್ಯೆಗೆ ಪರಿಹಾರವೆಂತು?  ಎಂದು ಎಲ್ಲರೂ ಚಿಂತಾಮಗ್ನರಾದರು. ಆಗ ನಾರದ ಮಹರ್ಷಿಗಳು,  ‘ತಾವೆಲ್ಲರೂ ಇನ್ನು ಅಂಧಕಾಸುರನ ವಿಷಯದಲ್ಲಿ ನಿಶ್ಚಿಂತರಾಗಿರಿ, ನಾನು ಅವನ ಕಾಟವನ್ನು ನಿವಾರಿಸುತ್ತೇನೆ’ ಎಂದು ಆಶ್ವಾಸನೆಯನ್ನು ಕೊಟ್ಟರು.

ಪರಮೇಶ್ವರನು ಮಂದರ ಪರ್ವತ ಎಂಬ ಎತ್ತರವೂ, ಪವಿತ್ರವೂ ಆದ ಸ್ಥಳದಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದನು. ಅಲ್ಲಿಗೆ ಸಾಧುಗಳನ್ನು ಬಿಟ್ಟು ಉಳಿದವರಿಗೆ ಪ್ರವೇಶಕ್ಕೆ ಅನುಮತಿಯಿರಲಿಲ್ಲ.  ಅಲ್ಲಿನ ಮತ್ತೊಂದು ವಿಶೇಷ ಎಂದರೆ ಮಂದಾರ ಪುಷ್ಪ.  ಅದು ಅಲ್ಲಿ ಮಾತ್ರ ದೊರೆಯುತ್ತಿದ್ದಂತಹ ಸುಗಂಧ ಪುಷ್ಪ.  ನೇರವಾಗಿ ಮಂದರ ಪರ್ವತಕ್ಕೆ ತೆರಳಿದ ನಾರದರು ಮಂದಾರ ಪುಷ್ಪದ ಘಮಘಮಿಸುವ ಮಾಲೆಯನ್ನು ಧರಿಸಿದವರಾಗಿ ಅಂಧಕಾಸುರನ ಮನೆಗೆ ತೆರಳಿದರು.

ನಾರದರು ಬಂದಕೂಡಲೇ ಮಂದಾರ ಪುಷ್ಪದ ಪರಿಮಳವು ಅರಮನೆಯನ್ನೆಲ್ಲ ತುಂಬಿಬಿಟ್ಟಿತು. ಅದರ ಸೌಂದರ್ಯಕ್ಕೂ ಸುಗಂಧಕ್ಕೂ ಮನಸೋತ ಅಂಧಕನು,  ಆ ಪುಷ್ಪವು ಎಲ್ಲಿ ಸಿಗುತ್ತದೆ ಎಂದು ಕಾತರನಾಗಿ ಕೇಳಿದನು.  ಆದರೆ ನಾರದರು ಬುದ್ಧಿವಂತಿಕೆಯಿಂದ, ‘ಆ ಒಂದು ವಿಷಯವನ್ನು ಮಾತ್ರ ಕೇಳಬೇಡ ಅಂಧಕ! ಏಕೆಂದರೆ ಅದು ನಿನಗೆ ಯಾವ ಕಾರಣಕ್ಕೂ ಸಿಗುವ ವಸ್ತುವಲ್ಲ’ ಎಂದು ಕೆಣಕುತ್ತಾರೆ.  ಅತ್ಯಂತ ಕೋಪಗೊಂಡ ಅಂಧಕನು, ‘ತಾವು ಆ ಪುಷ್ಪವು ಸಿಗುವ ಸ್ಥಳವನ್ನು ಹೇಳಲೇಬೇಕು ‘ ಎಂದು ಬಲವಂತ ಪಡಿಸುತ್ತಾನೆ. ಆಗ ನಾರದರು ಹೆದರಿದವರಂತೆ ನಟಿಸಿ ಮಂದರ ಪರ್ವತವು ಇರುವ ಸ್ಥಳವನ್ನು ತಿಳಿಸುತ್ತಾರೆ.

ತನ್ನನ್ನು ಗೆಲ್ಲುವವರು ಯಾರು? ಎಂಬ ಅಹಂಕಾರದೊಂದಿಗೆ ಮಂದರ ಪರ್ವತಕ್ಕೆ ತೆರಳಿದ ಅಂಧಕನನ್ನು ಅಲ್ಲಿರುವ ಕಾವಲು ಭಟರು ತಡೆಯುತ್ತಾರೆ. ಇದರಿಂದ ಕೋಪಗೊಂಡ ಅಂಧಕನು ತನ್ನ ಗದೆಯಿಂದ ಮಂದರ ಪರ್ವತವನ್ನೇ  ಹೊಡೆಯಲು ಯತ್ನಿಸುತ್ತಾನೆ. ಮಹಾ ಬಲಶಾಲಿಯಾದ ಅವನ ಗದೆಯ ಪ್ರಹಾರದಿಂದ ಮಂದರ ಪರ್ವತವು ಕಂಪಿಸತೊಡಗುತ್ತದೆ. ಇದರಿಂದ ಪರಮೇಶ್ವರನ ತಪಸ್ಸಿಗೆ ಭಂಗವುಂಟಾಗುತ್ತದೆ.  ಇದೆಲ್ಲದಕ್ಕೂ  ಅಂಧಕನೇ ಕಾರಣ ಎಂದು ತಿಳಿದುಕೊಂಡ ಪರಮೇಶ್ವರನು, ಮಹಾ ಕೋಪದಿಂದ ತನ್ನ ಶೂಲವನ್ನು ಎತ್ತಿ ಅಂಧಕಾಸುರನ ಕಡೆಗೆ ಎಸೆಯುತ್ತಾನೆ.  ಆ ಶೂಲವು ಅಂಧಕನ ಎದೆಯನ್ನು ಸೀಳಿ ಅವನನ್ನು  ಕೊಲ್ಲುತ್ತದೆ.

ಅಂಧ ಎಂದರೆ ಕಣ್ಣು ಕಾಣಿಸದವನು ಎಂದರ್ಥ. ಇಲ್ಲಿ ಅಂಧಕನಿಗೆ ಹೊರಗಿನ ಕಣ್ಣುಗಳು ಚೆನ್ನಾಗಿಯೇ ಕಾಣಿಸುತ್ತಿದ್ದವು.  ಆದರೆ ಬುದ್ಧಿಯಲ್ಲಿ ವಿವೇಕವಿಲ್ಲದೆ ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದುದರಿಂದ ಎಲ್ಲರೂ ಅವನನ್ನು ಅಂಧಕ ಎಂದು ಕರೆದರು.  ದೊಡ್ಡವರು, ‘ಮಾಡಬೇಡ’ ಎಂಬ ಕೆಲಸವನ್ನು ಮಾಡಿದರೆ, ಅದರಿಂದ ಅನಾಹುತ ನಿಶ್ಚಿತ.  ಅಂತೆಯೇ ದೇವರು ಕೊಟ್ಟ ದೇಹಬಲ ಬುದ್ಧಿಬಲ ಇತ್ಯಾದಿಗಳನ್ನು ಸಮಾಜದ ಒಳಿತಿಗಾಗಿ ಬಳಸಿದರೆ ಅದರಿಂದ ಎಲ್ಲರಿಗೂ ಕ್ಷೇಮ. ಹಾಗಲ್ಲದೆ ಬೇರೆಯವರಿಗೆ ತೊಂದರೆ ಉಂಟು ಮಾಡಿದರೆ, ಮುಂದೆ ಅದಕ್ಕಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ.

ಸೂಚನೆ:  26/04/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.