Tuesday, April 9, 2019

ಅಭಿಜಾತ ಶಿಶುವಿಗೆ ಜಾತಕರ್ಮಸಂಸ್ಕಾರ-3 (Abhijata shishuvige jatakakarma samskara-3)

ಲೇಖಕರು: ತಾರೋಡಿ ಸುರೇಶ


ನಂತರ ಮಗುವಿಗೆ ಜೇನು,ಗೋಘೃತ ಮತ್ತು ಚಿನ್ನದ ಅಂಶವನ್ನು ವಿಧ್ಯುಕ್ತ ಮಂತ್ರದೊಂದಿಗೆ ಪ್ರಾಶನಮಾಡಿಸಬೇಕು.ಇಲ್ಲಿ ಜೇನು ಮತ್ತು ತುಪ್ಪ ವಿಷಮ ಪ್ರಮಾಣದಲ್ಲಿರಬೇಕು. ಸಮಪ್ರಮಾಣದಲ್ಲಿ ಬೆರೆಸಿದರೆ ವಿಷವಾಗುತ್ತದೆ.  ದಧಿಘೃತಗಳನ್ನೂ, ಅಕ್ಕಿ, ಯವೆ, ಆಲದಕಾಯಿಯ ರಸಕ್ಕೆ ಬೆಲ್ಲವನ್ನು ಸೇರಿಸಿ  ಪ್ರಾಶನ ಮಾಡಿಸುವುದೂ ಇದೆ. ಪ್ರಾಶನ ಮಾಡಿಸುವಾಗ ಅಂಗುಷ್ಠ ಮತ್ತು ಅನಾಮಿಕಾ ಬೆರಳುಗಳನ್ನು ಸೇರಿಸಿ ಮಾಡಬೇಕು.ಇಲ್ಲಿ ಅಂಗುಷ್ಠವು ಭಗವಂತನನ್ನು ಪ್ರತಿನಿಧಿಸಿದರೆ ಅನಾಮಿಕವು ಸುಷುಮ್ನಾನಾಡಿಯೊಂದಿಗೆ ಸಂಬಂಧವಿರಿಸಿಕೊಂಡಿದೆ. ಇದನ್ನು ಶ್ರೀರಂಗಮಹಾಗುರುಗಳು ಜೀವದೇವರ ಸಂಯೋಗವೆಂದು ಹೇಳುತ್ತಿದ್ದರು. ಹೆಚ್ಚಿನ ವಿವರವನ್ನು ಈ ಪುಟ್ಟಲೇಖನದಲ್ಲಿ ಕೊಡಲು ಸಾಧ್ಯವಿಲ್ಲ.

ಒಟ್ಟಿನಲ್ಲಿ ಮೇಧೆ, ಆಯುಸ್ಸು, ಧೃತಿಯನ್ನು ದಯಪಾಲಿಸುವ ಮತ್ತು ಶಿಶುವಿನ ಆತ್ಮಮೂಲವನ್ನು ಜ್ಞಾಪಿಸುವ, ಯೋಗಭೋಗಮಯವಾದ ಜೀವನವನ್ನು ನಡೆಸಲು ಬೇಕಾದ ಧರ್ಮವನ್ನು ಕೂಡಿಸಿಕೊಡುವಂತಹ ಕ್ರಿಯಾಕಲಾಪಗಳು, ಮಂತ್ರಗಳ ಅನುಸಂಧಾನ, ಸೂಕ್ತಸ್ಥಾನಸ್ಪರ್ಷ ಇವೆಲ್ಲ ವಿಧಿಗಳನ್ನು ನೋಡುತ್ತೇವೆ. ನಂತರ ಆಘ್ರಾಣಿಸುವಿಕೆ. ಇದರ ವಿವರಣೆಯು ಹಿಂದಿನ ಲೇಖನದಲ್ಲಿಯೇ ಬಂದಿದೆ.

ಮುಂದಕ್ಕೆ ಪ್ರಥಮ ಸ್ತನ್ಯಪಾನವನ್ನು, ತಾಯಿಯ ಬಲಸ್ತನದಿಂದ ಮಾಡಿಸಬೇಕು. ಇದರಿಂದ ದೀರ್ಘಾಯುಸ್ಸು ಮತ್ತು ವರ್ಚಸ್ಸು ಒದಗಿಬರುತ್ತದೆ ಎಂದು ಶಾಸ್ತ್ರಗಳು ವಿವರಿಸುತ್ತವೆ. ಪಿತೃಗಳ ತೃಪ್ತಿಗಾಗಿ ದಾನ ಮಾಡಬೇಕು. ಜ್ಞಾನಿಯು ತಾನು ಸಮಾಧಿಸ್ಥಿತಿಗೇರಿ ಪುನಃ ಪ್ರಕೃತಿಕ್ಷೇತ್ರಕ್ಕೆ ಹಿಂದಿರುಗುವಾಗ ಮಾರ್ಗದಲ್ಲಿರುವ ಸಮಸ್ತ ದೇವತೆಗಳಿಗೂ ತೃಪ್ತಿಯಾಗುವುದು.ಏಕೆಂದರೆ ಎಲ್ಲ ದೇವತೆಗಳೂ ಜ್ಞಾನಿಯ ಸಪ್ತಧಾತುಗಳಲ್ಲಿ ತಮತಮಗೆ ನಿಯತವಾದ ಕೇಂದ್ರಗಳಲ್ಲಿ ನೆಲೆಸಿರುತ್ತಾರೆ. ಬ್ರಹ್ಮಜ್ಞಾನಿಯು ಪರಿಪೂರ್ಣವಾದ ಬ್ರಹ್ಮಾನಂದವನ್ನು ಅನುಭವಿಸಿ ಮರಳುವಾಗ ಇವರೆಲ್ಲರಿಗೂ ಗುಟುಕು ಕೊಡುತ್ತಾನೆ. 

ಮಗುವಿನ ಪಕ್ಕದಲ್ಲಿ ಪೂರ್ಣಕುಂಭವನ್ನು ಇರಿಸುತ್ತಾರೆ. ಇಲ್ಲಿ ಇರಿಸುವ ಕುಂಭವಾದರೋ ರಸಪೂರ್ಣವೂ ಆದ ಜ್ಞಾನಿಯ ಶಿರಸ್ಸನ್ನು ಪ್ರತಿನಿಧಿಸುವ ಊರ್ಧ್ವಮುಖವಾದ ಕುಂಭ. ಅಂತಹ ಜ್ಞಾನಸ್ಥಾನವನ್ನು ನೆನಪಿಸುತ್ತದೆ. ಇದು ಶಿಶುವಿನಲ್ಲಿ ಪರಮಾತ್ಮದರ್ಶನಕ್ಕೆ ಬೇಕಾದ ಧರ್ಮಗಳನ್ನು ಪ್ರಬೋಧಗೊಳಿಸುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಸಂಸ್ಕಾರವನ್ನುಂಟುಮಾಡುವುದು.

ಸಂಪ್ರದಾಯದಲ್ಲಿ ಇನ್ನೊಂದು ಅದ್ಭುತವಾದ ಕಲಾಪವಿದೆ. ಶಿಶುವಿನ ಜನನವಾದೊಡನೆಯೇ ಮುಕ್ಕೋಣದ ಹಣತೆಯಲ್ಲಿ ದೀಪವನ್ನು ಬೆಳಗಿಸಿ, ಘಂಟಾನಾದವನ್ನು ಮಾಡುವ ಪದ್ಧತಿ ಇದೆ. ಈಗ ಇದು ಕೆಲವೆಡೆ ಮಾತ್ರ ಉಳಿದುಕೊಂಡಿದೆ.  “ಶಿಶುವು, ಗರ್ಭದಲ್ಲಿರುವಾಗ ತನ್ನ ಏಳು-ಎಂಟನೆಯ ತಿಂಗಳಲ್ಲಿ ಜ್ಯೋತೀರೂಪನಾದ ಭಗವಂತನನ್ನು ದರ್ಶನ ಮಾಡುತ್ತ. ಅದರ ಪರಮಾನಂದದಲ್ಲಿ ತಲ್ಲೀನವಾಗುವುದಂತೆ. ಅದಕ್ಕೆ ತನ್ನ ಹಿಂದಿನ ಜನ್ಮಗಳ ನೆನಪೂ ಉಂಟಾಗಿ  ಭೂಮಿಗೆ ಬಂದಮೇಲೆ ಪರಮಾತ್ಮನನ್ನು ಮರೆಯದೇ ಬಾಳುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತದೆಯಂತೆ. ಆದರೆ ಜನ್ಮಾಂತರದ ಕರ್ಮಗಳ,  ಶಠ ಎಂಬ ಮಾಯೆಯ ಕಾರಣದಿಂದ ಪುನಃ ಮರೆತುಬಿಡುತ್ತದೆ”ಎಂದು ಗರ್ಭೋಪನಿಷತ್ತಿನಲ್ಲಿ ನೋಡುತ್ತೇವೆ. ಆಗ ತಾನೇ ಅದು ನೋಡಿದ ಒಳಜ್ಯೋತಿಯನ್ನು ನೆನಪಿಸಲು ದೀಪ ಬೆಳಗುತ್ತಾರೆ. ಹಾಗೆಯೇ ಯೋಗಿಯು ತನ್ನೊಳಗೇ ಅಲಿಸುವ ಪ್ರಣವನಾದವನ್ನು ಜ್ಞಾಪಿಸುವ ಘಂಟಾನಾದವನ್ನು ಮೊಳಗಿಸುತ್ತಾರೆ.ಶ್ರೀರಂಗಮಹಾಗುರುಗಳು ಶಿಶುವು ಹೇಗೆ ತನ್ನ ತಂದೆತಾಯಿಯರನ್ನೂ ಗಮನಿಸದೆ ದೀಪವನ್ನೇ ನೋಡುತ್ತದೆ ಎಂಬುದನ್ನು ಪ್ರಯೋಗರೂಪದಲ್ಲಿಯೂ ತೋರಿಸಿದ್ದುಂಟು. ಜಾತಕರ್ಮವು ಅಭಿಜಾತ ಶಿಶುವಿಗೂ, ಭಾಗವಹಿಸುವ ಎಲ್ಲರಿಗೂ ವಿಸ್ಮೃತಿಯನ್ನು ಹೋಗಲಾಡಿಸುವ, ತನ್ನ ಸ್ವರೂಪವನ್ನು ನೆನಪಿಸುವ ಅದ್ಭುತವಾದ ಸಂಸ್ಕಾರವಾಗಿದೆ.


ಸೂಚನೆ: ಈ ಲೇಖನ ಪ್ರಜಾ ವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ.