Tuesday, April 16, 2019

ಹಬ್ಬಗಳ ಆಚರಣೆ (Habbagala Acharane)

ಲೇಖಕರು:  ಮೈಥಿಲೀ ರಾಘವನ್ಬೆಂಗಳೂರು

ಭಾರತೀಯ ಸಂಸ್ಕೃತಿಯಲ್ಲಿ ವಿವಿಧ ಹಬ್ಬಗಳ ಆಚರಣೆಗಳು ರೂಢಿಯಲ್ಲಿವೆ. ಪ್ರತಿಯೊಂದು ಹಬ್ಬಕ್ಕೂ ನಿರ್ದಿಷ್ಠವಾದ ಕಾಲ, ಅಂದು ಬಳಸಲ್ಪಡಬೇಕಾದ ಪುಷ್ಪಗಳು, ನೈವೇದ್ಯ ಪದಾರ್ಥಗಳು ಇವುಗಳ ಪಟ್ಟಿಯನ್ನು ಶಾಸ್ತ್ರಗಳು ನೀಡುತ್ತವೆ. ಹಬ್ಬಗಳ ಸಂಖ್ಯೆಯು ಹೆಚ್ಚಾಗಿರುವುದರಿಂದ ನಿರ್ದಿಷ್ಟವಾದ ದಿನದಲ್ಲೇ ಆಚರಿಸುವುದಕ್ಕಿಂತಲೂ ಅವರವರಿಗೆ ಅನುಕೂಲವಾದಂದು ಆಚರಿಸುವುದು ಒಳಿತಲ್ಲವೆ? ನಮಗೆ ಇಷ್ಟವಾದ ಪದಾರ್ಥಗಳನ್ನೇ ಏಕೆ ನೈವೇದ್ಯಕ್ಕೆ ಬಳಸಬಾರದು? ಎಂದನಿಸುವುದು ಸಹಜ. ಈ ನೇರದಲ್ಲಿ ಶಾಸ್ತ್ರಗಳ ಉಲ್ಲೇಖದ ಹಿಂದಿರುವ ತತ್ತ್ವವೇನೆನ್ನುವುದರ ಬಗ್ಗೆ ಗಮನಹರಿಸುವುದು ಉಚಿತವೇ ಆಗಿದೆ. ಶ್ರೀರಂಗಮಹಾಗುರುಗಳೆಂಬ ಯೋಗಿವರೇಣ್ಯರು ಈ ದಿಕ್ಕಿನಲ್ಲಿ ಬೆಳಕನ್ನು ಚೆಲ್ಲಿ ವಿವರಿಸಿದ್ದನ್ನು ಇಲ್ಲಿ ಸ್ಮರಿಸುತ್ತೇವೆ.

ಕಾಲದ ನಿರ್ಣಯ:
ಭಾರತೀಯ ಮಹರ್ಷಿಗಳು ತಮ್ಮ ತಪೋಬಲದಿಂದ ಕಾಲಚಕ್ರದ ಕೆಲವು ಭಾಗಗಳು ವಿಶೇಷಶಕ್ತಿಯಿಂದ ಕೂಡಿದ್ದು ನಮ್ಮೊಳಗೆ ದೇವತೆಗಳನ್ನು ತೋರುವ ಕೇಂದ್ರಗಳನ್ನು ತೆರೆಯುತ್ತವೆ ಎಂಬುದನ್ನು ಪತ್ತೆ ಮಾಡಿದರು. ಅಂತಹ ದಿನಗಳನ್ನು ’ಪರ್ವಗಳು’ ಎಂದು ಕರೆದರು. ’ಪರ್ವ’ ಎಂದರೆ ಗಿಣ್ಣು. ಎಲ್ಲರಿಗೂ ತಿಳಿದಿರುವಂತೆ ಗಿಡಗಳಲ್ಲಿನ ಗಿಣ್ಣುಗಳು ರಸಭರಿತವಾಗಿ, ಮುಂದಿನ ವಿಕಾಸಕ್ಕೆ ಅಣಿಮಾಡಿಕೊಡುವುದಾಗಿವೆ. ಕಾಲಚಕ್ರದಲ್ಲೂ ಶಕ್ತಿತುಂಬಿರುವ ಜಾಗಗಳನ್ನು ಪರ್ವಗಳೆಂದೇ ಹೆಸರಿಸಿದ್ದಾರೆ. ಪರ್ವವೆಂಬುದೇ ’ಪಬ್ಬ’ ಎಂದಾಗಿ ಮುಂದೆ ’ಹಬ್ಬ’ವೆಂದು ರೂಪಾಂತರಗೊಂಡಿದೆ.

ಮಹಾಮೇಧಾವಿಗಳಾದ ಮಹರ್ಷಿಗಳು ಪ್ರತಿಯೊಂದು ಪರ್ವವೂ ಯಾವ ದೇವತೆಯ ಸಾಕ್ಷಾತ್ಕಾರಕ್ಕೆ ಸಹಾಯಕವಾಗಿದೆಯೆಂಬುದನ್ನು ಗುರುತಿಸಿ ಅಂದು ಆ ದೇವತೆಯ ಪೂಜೆಯನ್ನು ಮಾಡುವ ಪದ್ಧತಿಯನ್ನು ರೂಪಿಸಿದ್ದಾರೆ. ಹಬ್ಬದಂದಿನ ಪೂಜೆಯು ದೈನಂದಿನ ಪೂಜೆಗಿಂತಲೂ ಅಮೋಘವಾದ ಫಲಪ್ರಾಪ್ತಿಯನ್ನು ದೊರಕಿಸುವುದೆಂಬುದನ್ನೂ ಮನಗಂಡವರಾಗಿ ಹಬ್ಬಗಳ ಆಚರಣೆಯನ್ನು ತಂದರು.ನೈವೇದ್ಯಪದಾರ್ಥಗಳ ಆಯ್ಕೆ:
ಕಾಲದ ಮರ್ಮವನ್ನು ಅರಿತಂತೆಯೇ ಪದಾರ್ಥಗಳ ಗುಣಧರ್ಮವನ್ನೂ ಶೋಧಿಸಿ ಪತ್ತೆ ಮಾಡಿದ್ದ ಋಷಿಗಳು ಯಾವ ಪದಾರ್ಥ ಅಥವ ಯಾವ ಯಾವ ಪದಾರ್ಥಗಳ ಸೇರುವೆ ಯಾವ ದೇವತೆಯತ್ತ ನಮ್ಮ ಮನಸ್ಸನ್ನು ಸೆಳೆಯುವುದೆಂಬುದನ್ನು ನಿರ್ಣಯಾತ್ಮಕವಾಗಿ ಅರಿತು ಅದಕ್ಕನುಗುಣವಾಗಿ ಪದಾರ್ಥಗಳನ್ನು ಆಯ್ಕೆ ಮಾಡಿದ್ದಾರೆ. ಉದಾಹರಣೆಗೆ, ಕೋಸಂಬರಿ, ಪಾನಕ, ಶುಂಠಿ-ಬೆಲ್ಲ ಮುಂತಾದ ಪದಾರ್ಥಗಳು ಅಂತರಂಗದಲ್ಲಿ ಶ್ರೀರಾಮನ ದರ್ಶನಕ್ಕೆ ಸಹಾಯ  ಮಾಡುವುದೆಂಬುದನ್ನು ಮನಗಂಡು ಶ್ರೀರಾಮನವಮಿಯಂದು ಅವುಗಳನ್ನೇ ನೈವೇದ್ಯಕ್ಕೆ ವಿಧಿಸಿದ್ದಾರೆ. ಅವುಗಳನ್ನು ಭಗವದರ್ಪಣೆ ಮಾಡಿ ಪ್ರಸಾದರೂಪವಾಗಿ ಸೇವಿಸದಾಗ ಅವು ಶ್ರೀರಾಮನ ಪ್ರಸನ್ನತೆಯನ್ನು ನಮ್ಮಲ್ಲಿ ತುಂಬುತ್ತವೆ. ಯುಗಾದಿಯಂದಿನ ಬೇವು-ಬೆಲ್ಲ ನೈವೇದ್ಯವೂ ಇದೇ ವಿಜ್ಞಾನವನ್ನಾಧರಿಸಿದೆ. ಇವುಗಳ ಸೇವನೆಯು ಅಧ್ಯಾತ್ಮದಜೊತೆಗೆ ಈ ಹಬ್ಬಗಳು ಕೂಡಿಬರುವ ಬೇಸಿಗೆಯ ಕಾಲಕ್ಕೂ ಪೋಷಕವಾಗಿವೆ. ಈ ಪದಾರ್ಥಯೋಗವನ್ನು ಆಯುರ್ವೇದವೂ ಸಹ ಕೊಂಡಾಡುತ್ತದೆ.

ಸಂಸ್ಕೃತಿಯಲ್ಲಿ ಸಂಭ್ರಮಕ್ಕೊಂದು ಸ್ಥಾನ:

ಭಾರತೀಯ ಮಹರ್ಷಿಗಳು ಅಧ್ಯಾತ್ಮಕ್ಕೆ ಪ್ರಾಮುಖ್ಯತೆಯನ್ನು ನೀಡಿದ್ದರೂ ಹೊರಜೀವನದಲ್ಲಿ ಸಂತೋಷ-ಸಂಭ್ರಮಗಳನ್ನು ವರ್ಜಿಸಲಿಲ್ಲ. ಇಂದ್ರಿಯಗಳೆಲ್ಲವನ್ನೂ ಭಗವತ್ಪ್ರಸಾದವಾಗಿ ಭಾವಿಸಿ, ಕಣ್ಣು, ಮೂಗು, ನಾಲಿಗೆ ಇತ್ಯಾದಿಗಳಿಗೂ ತೃಪ್ತಿಯನ್ನುಂಟುಮಾಡುವಕಡೆ ಗಮನಹರಿಸಿದ್ದಷ್ಟೇ ಅಲ್ಲದೆ ಇಂದ್ರಿಯತೃಪ್ತಿಯ ಜೊತೆಜೊತೆಗೇ ನಮ್ಮನ್ನು ಭಗವಂತನೆಡೆಗೂ ಸಾಗಿಸುವ ಅದ್ಭುತ ವ್ಯವಸ್ಥೆಯನ್ನು ತಂದರು. (ಪೂಜಾಸಾಮಗ್ರಿಗಳೆಲ್ಲವೂ ಕೂಡ ಈ ತತ್ತ್ವವನ್ನೇ ಆಧರಿಸಿವೆ).

ಉದಾಹರಣೆಗೆ, ಯುಗಾದಿ, ಶ್ರೀರಾಮನವಮಿ ಮುಂತಾದ ಹಬ್ಬಗಳಲ್ಲಿ ತೋರಣಗಳು, ನಾನಾರೀತಿಯ ಅಲಂಕಾರ-ವಿನ್ಯಾಸಗಳು ಕಣ್ಣಿಗೆ ಹಬ್ಬವಾದರೆ, ಶ್ರವಣಕ್ಕೆ ಭಗವಂತನೆಡೆ ಮನಸರಿಸುವ ಮಧುರಗಾನದ ವ್ಯವಸ್ಥೆ. ಶ್ರೀರಾಮನವಮಿಯ ಅಂಗವಾಗಿ ಯುಗಾದಿಯಿಂದಲೇ ಪ್ರಾರಂಭವಾಗಿ ರಾಮನವಮಿಯವರೆಗೂ (ಕೆಲವೆಡೆಗಳಲ್ಲಿ ಇನ್ನು ಹೆಚ್ಚುಕಾಲ) ಪ್ರತಿನಿತ್ಯವೂ ಸುಮಧುರ ಸಂಗೀತ-ಉಪನ್ಯಾಸ ಕಾರ್ಯಕ್ರಮಗಳ ಅಳವಡಿಕೆಯು ನಡೆಯುವುದು ಎಲ್ಲರಿಗೂ ತಿಳಿದಿದೆಯಷ್ಟೆ. ಇವು ಮನಸ್ಸನ್ನು ಭಗವಂತನೆಡೆ ಸೆಳೆಯುವ ಅದ್ಭುತ ಮನೋರಂಜನೆಯ ಸಾಧನಗಳು. ರುಚಿಕರವಾದ ಬಗೆಬಗೆಯ ತಿಂಡಿ-ತಿನಿಸುಗಳು ನಾಲಿಗೆಗೆ ಔತಣವಾದರೂ ಇವುಗಳ ಸೇವನೆ ಉದರತೃಪ್ತಿಯಲ್ಲೇ ಪರ್ಯವಸಾನವಾಗದೆ ದಾಮೋದರನ ತೃಪ್ತಿಗೂ ದಾರಿಮಾಡಿಕೊಡುವಂತಹ ಪದಾರ್ಥಗಳ ಆಯ್ಕೆ!  ಹಬ್ಬಗಳ ಆಚರಣೆಯಲ್ಲಿ ಆತ್ಮೇಂದ್ರಿಯಗಳೆರಡರ ಹಿತವನ್ನೂ ತುಂಬಿದ ಮಹರ್ಷಿಗಳಿಗೆ ಕೃತಜ್ಞತೆಯಿಂದ ನಮಿಸಿ ಭಕ್ತಿ-ಸಂಭ್ರಮ-ಸಂತೋಷಗಳನ್ನು ಮೇಳೈಸಿ ನಲಿಯೋಣ.


ಸೂಚನೆ: ಈ ಲೇಖನದ ಆಯ್ದ ಭಾಗಗಳು ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.