ಲೇಖಕರು: ತಾರೋಡಿ ಸುರೇಶ
ಹಿಂದಿನ ಲೇಖನದಲ್ಲಿ ಪದಕ್ಕೂ ಪದಾರ್ಥಕ್ಕೂ ಇರುವ ಮೌಲಿಕ ಸಂಬಂಧವನ್ನು ಸಂಕ್ಷಿಪ್ತವಾಗಿ ನೋಡಿದೆವು. ಈ ಲೇಖನದಲ್ಲಿ ನಾಮಕರಣವು ಹೇಗೆ ಸಂಸ್ಕಾರವಾಗುತ್ತದೆ ಎಂಬುದನ್ನು ಸ್ವಲ್ಪ ವಿವೇಚಿಸೋಣ.
ಪದಪದಾರ್ಥಗಳಿಗೆ ಒಂದು ಅವಿನಾಭಾವ ಸಂಬಂಧವಿರುವುದನ್ನು ನಮ್ಮ ರಾಷ್ಟ್ರಕವಿಯಾದ ಕಾಳಿದಾಸನು “ ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ! ಜಗತಃ ಪಿತರೌವಂದೌ ಪಾರ್ವತೀಪರಮೇಶ್ವರೌ!! ಎಂದು ವರ್ಣಿಸಿದ್ದಾನೆ. ಅದು ಪ್ರಕೃತಿ-ಪುರುಷರಂತೆ ಒಂದನ್ನು ಬಿಟ್ಟು ಇನ್ನೊಂದು ಇರದು. ಪುರುಷನ ಅಭಿವ್ಯಕ್ತಿಯಾಗಿ ಪರಕೃತಿಯಿದ್ದರೆ, ಪ್ರಕೃತಿಯ ಮೂಲನೆಲೆಯಾಗಿ ಪುರುಷನಿರುತ್ತಾನೆ. ಅದೇ ರೀತಿ ಪದಾರ್ಥವು ವಿಕಾಸದ ಹಾದಿಯಲ್ಲಿ ಶಬ್ಧರೂಪವನ್ನು ತಾಳಿ ತನ್ನನ್ನು ಯಥಾವತ್ತಾಗಿ ಪತ್ರಿನಿಧಿಸಬಲ್ಲ ಪದವಾಗುತ್ತದೆ. ಒಂದನ್ನು ಅರಿತರೆ ಇನ್ನೊಂದನ್ನು ಪಡೆದಂತೆಯೇ.
ಇಲ್ಲಿ ನಾಮವು ಜೀವಸಮೇತವಾದ ದೇಹಕ್ಕೆ ಒಂದು ಒಡಲಾಗಿರುವುದು. ಅದು ಚೇತನಕ್ಕೆ ಶಬ್ಧರೂಪವಾದ ಒಂದು ಮೂರ್ತಿ. ಇಂತಹ ಋಷಿಪ್ರೋಕ್ತವಾದ ಹೆಸರುಗಳನ್ನು ಉಚ್ಛರಿಸುವಾಗ ಕೂಡ ತಕ್ಕ ವಿಜ್ಞಾನದೊಡನೆ ಉಚ್ಛರಿಸಬೇಕು. ಆಗ ಅದು ಮಂತ್ರವಾಗುತ್ತದೆ. ನಮ್ಮ ಹೆಸರನ್ನು ಹೇಳುವುದು, ಇನ್ನೊಬ್ಬರು ಉಚ್ಛರಿಸಿದಾಗ ಶ್ರವಣ ಮಾಡುವುದು ಇವು ಅಸಂಖ್ಯವಾಗಿ ಆಗುವುದರಿಂದ ಅದರ ಒಂದು ವಿಶೇಷ ಪರಿಣಾಮವಾಗಿ, ಅದು ಶುದ್ಧಿಗೊಳಿಸುವ ಸಂಸ್ಕಾರವಾಗಿ ನಮ್ಮನ್ನು ಮೂಲಚೈತನ್ಯದತ್ತ ನಯನ ಮಾಡುತ್ತದೆ. ಉದಾಹರಣೆಗೆ ನಾರಾಯಣ ಎಂಬ ನಾಮವು ಪರಂಜ್ಯೋತಿಯ ಪ್ರತಿಮೆ. ಹೀಗೆ ಇಟ್ಟ ಹೆಸರು ತಕ್ಕ ವರ್ಣಶುದ್ಧಿ, ಅರ್ಥಶುದ್ಧಿ ಮತ್ತು ಮಂತ್ರಶುದ್ಧಿಯನ್ನು ಹೊಂದಿ ನಾಮರೂಪ ವಿಭಾಗವಿಲ್ಲದ ಬೀಜಸ್ಥಾನದಲ್ಲಿರುವ ಭಗವಂತನೊಂದಿಗೆ ಸೇರಿಸುತ್ತದೆ.
ವಾಸ್ತವಿಕವಾಗಿ ಇದೊಂದು ಪೂಜೆಯೂ ಹೌದು. ಈ ಕಾರಣದಿಂದಲೇ, ನಾಮವನ್ನು ತಪ್ಪಾಗಿ ಉಚ್ಛರಿಸಬಾರದು. ಆತ್ಮನಾಮ,ಗುರೋರ್ನಾಮ,ಭಾರ್ಯಾನಾಮ. ಜ್ಯೇಷ್ಠಪುತ್ರ ನಾಮಗಳನ್ನು ಎಲ್ಲರಿಗೂ ಹೇಳಬಾರದು ಎಂದೆಲ್ಲ ನಿಯಮಗಳಿವೆ. ಕೆಲವರು ಹೆಸರು ತುಂಬಾ ಮುಖ್ಯ, ಏಕೆಂದರೆ ಅದು ಜೀವನದುದ್ದಕ್ಕೂ ಬರುತ್ತದೆ ಎನ್ನುತ್ತಾರೆ. ಆದರೆ ಋಷಿಗಳು ಮರಣಾನಂತರವೂ ಬರುತ್ತದೆ ಎನ್ನುತ್ತಾರೆ. ಪಿತೃಕರ್ಮದಲ್ಲಿಯೂ ನಾಮದ ಪಾತ್ರವಿದೆ.
ಸ್ತ್ರೀಪುರುಷರ ಹೆಸರುಗಳಲ್ಲಿರಬೇಕಾದ ವ್ಯತ್ಯಾಸಗಳ ಬಗ್ಗೆಯೂ ಆಳವಾದ ತಾತ್ವಿಕ ಚಿಂತನೆಯಿರುವುದನ್ನು ನೋಡಬಹುದು. ವರ್ಣಗಳ ಸಂಖ್ಯೆ,ಮೃದುತ್ವ, ವರ್ಣಸಂಯೋಜನೆ.ಅರ್ಥ ಎಲ್ಲವುದನ್ನೂ ವಿಮರ್ಶಿಸಿದ್ದಾರೆ. ಮಾಸನಾಮ, ನಕ್ಷತ್ರನಾಮ, ವ್ಯವಹಾರನಾಮ ಮತ್ತು ಯಾಜ್ಞೀಯವಾದ ನಾಮ ಎಂಬುದಾಗಿ ನಾಲ್ಕು ವಿಧದ ನಾಮಗಳಿವೆ. ಒಂದೊಂದು ಮಾಸ, ನಕ್ಷತ್ರಗಳಿಗೂ ಅಧಿಷ್ಠಾತೃ ದೇವತೆಗಳಿರುತ್ತಾರೆ. ಆಯಾ ದೇವತೆಗಳಿಗೆ ಸಂಬಂಧಿಸಿರುವ ಹೆಸರನ್ನು ಇಡಬೇಕು.
ಗುಹ್ಯನಾಮವೆಂಬುದೊಂದಿದೆ. ಇದನ್ನು ತಂದೆತಾಯಿಗಳು ಮಾತ್ರ ತಿಳಿದಿರಬೇಕು. ಶತೃಗಳಿಂದ ಇದನ್ನು ಬಹಳ ರಹಸ್ಯವಾಗಿಟ್ಟುಕೊಂಡಿರಬೇಕು. ಸಾಮಾನ್ಯವಾಗಿ ಹನ್ನೊಂದು ಅಥವಾ ಹನ್ನೆರಡನೆಯ ದಿನ ಈ ಸಂಸ್ಕಾರವನ್ನು ನಡೆಸಬೇಕು.ತಂದೆಯೇ ಮಾಡಬೇಕು. ತಂದೆಯಿಲ್ಲದಿದ್ದರೆ ಕುಲವೃದ್ಧರು,ಆಚಾರ್ಯರು ಮಾಡಬಹುದು. ಒಟ್ಟು 13 ಮಂತ್ರಗಳಿವೆ.ಮಗುವಿನ ತಾಯಿಯು ಪತಿಯ ಬಲಭಾಗದಲ್ಲಿ ಕುಳಿತು ಶಿಶುವನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಳ್ಳುತ್ತಾಳೆ. ನಂತರ ಚಿನ್ನ ಅಥವಾ ಕಂಚಿನಪಾತ್ರೆಯಲ್ಲಿ ಪುಷ್ಕಳವಾಗಿ ಅಕ್ಕಿಯನ್ನು ಹಾಕಿ ಅದರ ಮೇಲೆ ಕುಲದೇವತೆ, ಗಣಪತಿ, ನಾಮದೇವತೆಗಳ ಹೆಸರುಗಳನ್ನು ಬರೆದು ಪೂಜಿಸಬೇಕು. ನಂತರ ಹೆಸರಿಡುವ ಸಂಕಲ್ಪ. ಮಗುವಿನ ಹೆಸರನ್ನು ಬಲಗಿವಿಯಲ್ಲಿ ಹೇಳಬೇಕು. ಎಲ್ಲ ಹೆಸರುಗಳಿಗೂ ಹಿರಿಯರ ಆಶೀರ್ವಚನ, ನೆತ್ತಿಯ (ಬ್ರಹ್ಮರಂದ್ರದ) ಆಘ್ರಾಣ ಇವೆಲ್ಲವುದರೊಂದಿಗೆ ನಾಮಕರಣ ಪ್ರಯೋಗವು ಸಂಪನ್ನವಾಗುವುದು.
ಶುಭ, ಭಾಗ್ಯ, ಕೀರ್ತಿ ಎಲ್ಲವನ್ನೂ ನಾಮವು ಕೊಡುತ್ತದೆ. ಸರಿಯಾಗಿ ಉಪಾಸನೆ ಮಾಡಲ್ಪಟ್ಟಾಗ ಅದು ರೂಪದ ಉಪಾಸನೆಯೇ ಆಗಿ, ಮುಂದಕ್ಕೆ ದೇವತಾಪ್ರಸನ್ನತೆಗೂ ಕಾರಣವಾಗಿ ಜೀವನವನ್ನು ಉತ್ಕರ್ಷದಲ್ಲಿ ನಿಲ್ಲಿಸುತ್ತದೆ.