Saturday, December 20, 2025

ಕೃಷ್ಣಕರ್ಣಾಮೃತ 86 ನಾನಾಶ್ರಯಿಸುವುದು ಭುವನಾಶ್ರಯನನ್ನೇ!(Krishakarnamrta 86)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀಕೃಷ್ಣನನ್ನು ನಾನು ಆಶ್ರಯಿಸುತ್ತೇನೆ - ಎನ್ನುತ್ತಾನೆ ಲೀಲಾಶುಕ. ಏಕೆ ಶ್ರೀಕೃಷ್ಣನನ್ನು ಆಶ್ರಯಿಸಬೇಕು? - ಎನ್ನುವುದನ್ನು ಕಂಠೋಕ್ತವಾಗಿ, ಎಂದರೆ ಬಾಯಿಬಿಟ್ಟು, ಹೇಳಿಲ್ಲ. ಪುಟ್ಟಶ್ಲೋಕದಲ್ಲಿ ಕೃಷ್ಣನಿಗೆ ನಾಲ್ಕು ವಿಶೇಷಣಗಳನ್ನು ಬಳಸಿದ್ದಾನೆ. ಆ ವಿಶೇಷಣಗಳನ್ನು ಪರಿಭಾವಿಸಿದರೆ ನಮಗೇ ಗೊತ್ತಾಗುತ್ತದೆ, ಏಕೆ ಆಶ್ರಯಿಸಬೇಕೆಂದು.

ಅವನು ಕೊಡುವ ವಿಶೇಷಣಗಳಲ್ಲಿ ನಾಲ್ಕನೆಯದನ್ನು, ಎಂದರೆ ಕೊನೆಯದನ್ನೇ, ಮೊದಲು ಗಮನಿಸಬಹುದು. ಅದೆಂದರೆ ಕೃಷ್ಣನು ಭುವನಾಶ್ರಯ - ಎಂಬುದು. ಭುವನಕ್ಕೇ ಆಶ್ರಯನಾದವನು ಭುವನಾಶ್ರಯ.

ಭುವನವೆಂದರೆ ಲೋಕ. ಲೋಕವೇನು ಒಂದೇ ಇರುವುದೆ? ಮೂರು ಲೋಕಗಳುಂಟು - ಸ್ವರ್ಗ, ಮರ್ತ್ಯ, ಪಾತಾಳಗಳೆಂದು. ಕೆಲವೊಮ್ಮೆ ಭೂಃ, ಭುವಃ, ಸುವಃ - ಎಂಬುದನ್ನೇ ಭುವನ-ತ್ರಯ ಎನ್ನುವುದುಂಟು.

ಕೆಲವೊಮ್ಮೆ ಇನ್ನು ನಾಲ್ಕನ್ನು ಸೇರಿಸಿ ಲೋಕಗಳನ್ನು ಏಳೆಂದು ಹೇಳುವುದುಂಟು. ಆ ನಾಲ್ಕೆಂದರೆ ಮಹಃ ಜನಃ ತಪಃ ಮತ್ತು ಸತ್ಯಂ – ಎಂಬುದಾಗಿ. ಕೊನೆಯದನ್ನು ಸತ್ಯಲೋಕವೆನ್ನುವ ಬದಲು ಬ್ರಹ್ಮಲೋಕವೆನ್ನುವುದೂ ಉಂಟು.

ಕೆಲವೊಮ್ಮೆ ಲೋಕಗಳು ಹದಿನಾಲ್ಕೆಂದು ಸಹ ಹೇಳುವುದುಂಟು. ಅದು ಹೇಗೆ? ಮೇಲೆ ಹೇಳಿದವು ಊರ್ಧ್ವಲೋಕಗಳು, ಎಂದರೆ ಮೇಲಿರುವ ಲೋಕಗಳು. ಅಧೋಲೋಕಗಳೂ ಏಳುಂಟು. ಕೆಳಗಣ ಲೋಕಗಳೆಂದರೆ - ಅತಲ, ವಿತಲ, ಸುತಲ, ತಲಾತಲ, ರಸಾತಲ, ಮಹಾತಲ, ಮತ್ತು ಪಾತಾಲಗಳು.

ಇವೆಲ್ಲಾ ಸೇರಿ ಬ್ರಹ್ಮಾಂಡವೆನಿಸುತ್ತದೆ. ಆದರೆ, ಸಾವಿರಾರು ಬ್ರಹ್ಮಾಂಡಗಳೇ ಉಂಟೆನ್ನುವರು! ಸಾವಿರಾರೇನು, ಅನಂತಕೋಟಿ-ಬ್ರಹ್ಮಾಂಡಗಳೇ ಇವೆಯೆಂದೂ ಹೇಳುವುದುಂಟಲ್ಲವೇ? ಇವೆಲ್ಲವೂ ಸೇರಿಯೇ ಭುವನ.

ಹೀಗಾಗಿ, ಇಡೀ ಜಗತ್ತಿನ ಸಮಸ್ತ-ಜೀವಿಗಳಿಗೆ ಕೃಷ್ಣನು ಆಶ್ರಯನೆಂದೇ ಅರ್ಥ. ಹೀಗೆ ಎಲ್ಲರಿಗೂ ಯಾವನು ಆಶ್ರಯನೋ ನನಗೂ ಆತನೇ ಆಶ್ರಯ ಎಂಬ ಅಭಿಪ್ರಾಯವಿಲ್ಲಿದೆ.

ಇದರ ತಾತ್ಪರ್ಯವೆಂದರೆ, ನಾನು ಹಿಡಿದಿರುವ ಸ್ವಾಮಿಯು ಸಾಧಾರಣನಲ್ಲ, ಬದಲಾಗಿ ಸರ್ವ-ಜೀವ-ಕೋಟಿಗೂ ನೆಮ್ಮದಿಯನ್ನು ಕೊಡಬಲ್ಲವನು - ಎಂದು. ಆತನು ಅಷ್ಟು ವಿಶಿಷ್ಟನೆಂಬ ಕಾರಣಕ್ಕೇ ಆತನನ್ನೇ ಆಶ್ರಯಿಸಿರುವುದು.

ಆಶ್ರಯಿಸುವುದೆಂದರೆ ಆಸರೆ ಬೇಡುವುದೆಂಬ ಅರ್ಥ. ವಾಸ್ತವವಾಗಿ, "ಶ್ರಯೇ" ಎಂದರೇ ನೆಲೆಹೊಂದುವೆ – ಎಂದು. "ಆ" ಎಂದರೆ ಚೆನ್ನಾಗಿ. ಆ-ಶ್ರಯೇ ಎಂದರೆ ಚೆನ್ನಾಗಿ ಸೇವಿಸುವೆ – ಎಂದು.

ಆಶ್ರಯಕ್ಕಾಗಿ ಯಾರಾರನ್ನೋ ಬೇಡುವುದಲ್ಲ. ಸರ್ವ-ಸ್ವಾಮಿಯೇ ನನ್ನ ಸ್ವಾಮಿ - ಎಂದು ಹೇಳುವಲ್ಲಿ ಹೆಮ್ಮೆಯಿದೆ. ಎಂದೂ ನೀಚರನ್ನು ಆಶ್ರಯಿಸುವುದಲ್ಲ, ಮಹೋನ್ನತನಾದವನನ್ನೇ ಆಶ್ರಯಿಸತಕ್ಕದ್ದು - ಎಂಬ ಲೆಕ್ಕದ ನೀತಿ ಇಲ್ಲಿದೆ. ಧನಾಢ್ಯರನ್ನೋ, ರಾಜರುಗಳನ್ನೋ ಆಶ್ರಯಿಸುವವರುಂಟು. ಹಾಗೆಯೇ ದೇವತಾಸ್ತೋಮವು ವಿಸ್ತಾರವಾದುದರಿಂದ ಅವರಲ್ಲೊಬ್ಬರಲ್ಲಿ ಆಶ್ರಯ ಪಡೆಯುವವರುಂಟು. ಆದರೆ ನಾನಾಶ್ರಯಿಸುವುದು ಭುವನಾಶ್ರಯನನ್ನೇ!

ಇದಲ್ಲದೆ, ಆತನು ಶೃಂಗಾರರಸ-ಸರ್ವಸ್ವ. ಸರ್ವಸ್ವವೆಂದರೆ ಸಮಸ್ತ-ಸಂಪತ್ತು. ಸ್ವ ಎಂಬುದೇ ಸ್ವತ್ತಾಗಿರುವುದು. ಆಸ್ತಿಗೆ ಸೊತ್ತು ಎನ್ನುವುದಿಲ್ಲವೇ? ಅದೇ ಅದು. ಆಸ್ತಿಯನ್ನು ಸ್ಥಿರ ಮತ್ತು ಚರವೆಂದು ವಿಭಾಗಿಸುವುದುಂಟು. ಹೀಗಾಗಿ ಇಲ್ಲಿ ಸರ್ವ-ಸ್ವವೆಂದರೆ ಎಲ್ಲ ಬಗೆಯ ಸಿರಿ.

ಹಾಗಾದರೆ ಶೃಂಗಾರರಸಕ್ಕೆ "ಆಸ್ತಿ"ಯುಂಟೇ? ಉಂಟು. ಮತ್ತಾವ ರಸಕ್ಕೂ ಇಲ್ಲದಷ್ಟು! ಎಂದೇ ಕಾವ್ಯಗಳಲ್ಲಿ ಶೃಂಗಾರ-ರಸವನ್ನು, ಅಥವಾ ವೀರರಸವನ್ನು, ಮಾತ್ರವೇ ಪ್ರಧಾನ-ರಸವಾಗಿ ನಿರೂಪಿಸುವುದು. ಉಳಿದ ರಸಗಳು ಅಂಗ-ರಸಗಳಾಗಿ ಬಂದು ಹೋಗಬಹುದು. ಆದರೆ ಶೃಂಗಾರವೇ ಅಂಗಿ-ರಸವೆನಿಸುವುದು. ಅಂಗವು ಗೌಣ, ಅಂಗಿಯು ಪ್ರಧಾನ.

ಶೃಂಗಾರವನ್ನೇ "ರಸ-ರಾಜ"ವೆನ್ನುವುದು. ಅದಕ್ಕಿರುವ ವ್ಯಾಪ್ತಿ ಮತ್ತಾವ ರಸಕ್ಕೂ ಇಲ್ಲ. ಶೃಂಗಾರ-ಭಾವವು ಇತ್ತ ಪ್ರಾಣಿಗಳಲ್ಲೂ ಆಡುವುದುಂಟು, ಅತ್ತ ದೇವತೆಗಳಲ್ಲೂ ಉಂಟು. ಮನುಷ್ಯರಲ್ಲಂತೂ ಶೃಂಗಾರಕ್ಕೆ ಎಡೆಗೊಡದವರ ಸಂಖ್ಯೆ ಅತ್ಯಲ್ಪವೇ ಸರಿ. ಕಾವ್ಯ-ನಾಟಕಗಳಲ್ಲೂ ಶೃಂಗಾರರಸದ ಮೆರೆತವೇ ಹೆಚ್ಚು. ಶೃಂಗಾರ-ರಸಾಸ್ವಾದನ-ಸಾಮರ್ಥ್ಯವು ಯೌವನೋದಯವಾಗುತ್ತಲೇ ಉದಯಿಸುವುದಾಗಿದ್ದು, ಜೀವನದ ಕೊನೆಯವರೆಗೂ ಇರಬಲ್ಲದು!

ಇನ್ನು ಶ್ರೀಕೃಷ್ಣನ ಜೀವಿತವೋ, ಯೌವನೋದಯಕ್ಕೆ ಮೊದಲೇ ಗೋಪಿಕೆಯರ ಮನಸ್ಸನ್ನು ಸೂರೆಗೊಂಡದ್ದು. ವಯೋಮಾಧುರ್ಯ, ವರ್ಣ-ಮಾಧುರ್ಯ, ವಚೋಮಾಧುರ್ಯ, ಮನೋಮಾಧುರ್ಯ, ವಿಲಾಸ-ಮಾಧುರ್ಯ - ಇವೆಲ್ಲವೂ ಮಧುರವಾಗಿ ಮೇಳೈಸಿರುವ ಈ ಸುಂದರಾಂಗನನ್ನು ಕಂಡರೆ ಯಾರ ಮನಸ್ಸಿಗೆ ಸೆಳೆತವುಂಟಾಗದು? ಇವೆಲ್ಲಕ್ಕೆ ಕಿರೀಟ-ಪ್ರಾಯವಾಗಿ, ತನ್ನಲ್ಲಿಗೆ ಬಂದ ಪ್ರತಿಯೊಬ್ಬರಿಗೂ ಪ್ರಿಯವನ್ನೂ ಹಿತವನ್ನೂ ಉಂಟುಮಾಡುವ ಸಾಮರ್ಥ್ಯವೂ ಪ್ರವೃತ್ತಿಯೂ ಇತ್ತಾಗಿ, ಎಲ್ಲರ ಮನಸ್ಸೂ ಆತನತ್ತ ದ್ರುತಿಗೊಳ್ಳುತ್ತಿದ್ದದ್ದೇ - ಎಂದರೆ ಕರಗಿ ಹರಿಯುತ್ತಿದ್ದದ್ದೇ. ಹೀಗಾಗಿ ಲೋಕಹಿತ-ಕಾರಿಯೇ ಲೋಕಪ್ರಿಯ-ಕಾರಿಯೂ ಆಗಿ ಬಂದ ಆತನನ್ನು ಕಣ್ಮನಗಳಲ್ಲಿ ತುಂಬಿಕೊಳ್ಳುವ ತವಕ ಯಾರ ಮನಸ್ಸಿಗಿರುತ್ತಿರಲಿಲ್ಲ?

ಯಾವ ವೇಷ-ಭೂಷಣಗಳಿಲ್ಲದಿದ್ದರೂ ಆಕರ್ಷಕ ನಮ್ಮ ಕೃಷ್ಣ. ಆದರೂ ಆತನಿಗೆ ಒಂದು ಭೂಷಾ-ವಿಶೇಷವೇ ಉಂಟು. ಅದೆಂದರೆ ಆತನ ನವಿಲುಗರಿ, ಶಿಖಿ-ಪಿಂಛ.

ಕೃಷ್ಣನು ಮೇಘ-ಶ್ಯಾಮನಲ್ಲವೇ? ಎಂದೇ ಆತನನ್ನು ಕಂಡೊಡನೆ ಮೋಡವನ್ನೇ ಕಂಡಂತಾಗಿ ನವಿಲುಗಳು ನಲಿಯುತ್ತಿದ್ದುವಂತೆ, ಕೆಲ ಗರಿಗಳನ್ನು ಉದುರಿಸುತ್ತಿದ್ದುವಂತೆ - ತಮ್ಮ ಆನಂದಾತಿರೇಕದಿಂದಾಗಿ; ಆತನಲ್ಲಿಯ ಪ್ರೇಮಾತಿಶಯದಿಂದಾಗಿ! ಆ ಗರಿಗಳೇ ಆತನ ಶಿರೋಲಂಕಾರವಾಗುತ್ತಿದ್ದವು.

ನವಿಲಿನ ಗರಿಗಿಂತಲೂ ಸುಂದರತರವೆನಿಸುವ ಗರಿಯು ಮತ್ತಾವ ಹಕ್ಕಿಗಾದರೂ ಉಂಟೇ? ಹೀಗೆ ಸ್ವತಃ ಸುಂದರನಾಗಿರುವವನಿಗೆ ಸುಂದರಾಭೂಷಣವೂ ಸೇರಿಕೊಂಡರೆ ಆ ಸೊಗಸಿಗೆ ಸಮನುಂಟೆ? ಅಂತಹವನನ್ನು ಶೃಂಗಾರರಸ-ಸರ್ವಸ್ವವೆನ್ನಲು ಅಡ್ಡಿಯೆಲ್ಲಿಯದು? ಶೃಂಗಾರವೇ ಮೂರ್ತವಾಗಿ ಬಂದಿರುವವನೇ ಕೃಷ್ಣ - ಎಂದು ಗೀತಗೋವಿಂದವೂ ಹೇಳುವುದಲ್ಲವೇ?

ಮೂರು ವಿಶೇಷಣಗಳಾದವು. ಇನ್ನೊಂದು ಬಾಕಿಯಿದೆ. ಅದೆಂದರೆ ಕೃಷ್ಣನು ನರಾಕಾರನಾಗಿರುವುದು.

ವಾಸ್ತವವಾಗಿ ಪರಬ್ರಹ್ಮಕ್ಕೆ ಯಾವ ರೂಪ, ಯಾವ ಆಕಾರ? ಆದರೆ ಅಚಿಂತ್ಯವಾದ ಅಂತಹ ಸ್ವರೂಪವನ್ನು ಯಾರು ಭಾವಿಸಬಲ್ಲರು? ಎಂದೇ ಆ ಅನೂಹ್ಯ-ಸ್ವರೂಪವು ಭಾವುಕರಿಗೆ ಭಾವ್ಯವಾಗಲೆಂದು ಸುರೂಪವಾಗಿ ಅವತರಿಸಿದೆ.

ನರರನ್ನು ಉದ್ಧಾರಮಾಡಲೆಂದು ಬಂದ ತತ್ತ್ವವು ನರಾಕಾರವಾಗಿಯೇ ಬಂದಿದೆ: ನರರ ಆಕಾರವನ್ನೇ ಅಂಗೀಕರಿಸಿದೆ.


ತಾವು ದೇವಾಧಿಪತಿಗಳೆಂಬ ಅಹಂಕಾರವು ಇಂದ್ರನಿಗೂ ಬ್ರಹ್ಮನಿಗೂ ಬಂದಿತ್ತಾಗಿ, ಸಾಧಾರಣವೆನಿಸುವ ನರರೂಪವನ್ನೇ ಧರಿಸಿ, ಅವರಿಗೆ ತಮ್ಮ ಸ್ಥಾನ-ಮಾನಗಳ ವಿವೇಕವನ್ನು ಮೂಡಿಸಿದವನೇ ಕೃಷ್ಣ. ಕರ್ಮ-ಫಲವಾಗಿ ಬಂದುದಲ್ಲ, ಆತನ ನರಜನ್ಮ. ಸ್ವೇಚ್ಛೆಯಿಂದಲೇ, ತನ್ನ ಲೀಲಾ-ವಿಭೂತಿಯಾಗಿಯೇ, ಸ್ವೀಕಾರಮಾಡಿದ ಆಕಾರವದು.

ಅಲ್ಲದೆ, ನರರೂಪದಲ್ಲೂ ಅತಿಸಾಧಾರಣವೆನಿಸುವ ಗೋಪ-ರೂಪವನ್ನೇ ತಳೆದು, ತನ್ನ ಎಳವಿನಿಂದಲೇ ಮಹಾ-ಮಹಿಮೆಗಳನ್ನು ತೋರಿಸಿದವನು, ಶ್ರೀಕೃಷ್ಣ.

ಭಗವಂತನಿಗೆ ತನ್ನ ಮಹಾವೈಭವವನ್ನು ತೋರಿಸಿಕೊಳ್ಳಲೂ ಗೊತ್ತು, ಮರೆಮಾಚಲೂ ಗೊತ್ತು. ಎಂದೇ ಅತ್ತ ಅರ್ಜುನನಿಗೆ ವಿಶ್ವರೂಪವನ್ನೇ ತೋರಿಸಿದುದು; ಇತ್ತ ಗೊಲ್ಲನ ವೇಷ ಧರಿಸಿ, ಎಲ್ಲರಿಗೂ ಅತಿಸುಲಭನಾಗಿ ಸರಳನಾಗಿಯೂ ಇದ್ದುದು.

ಗೊಲ್ಲರು, ಕಿರಾತರು – ಇವರುಗಳೇ, ಎಂದರೆ ಅತಿಸಾಧಾರಣರೇ, ತಮ್ಮ ಭೂಷಣವಾಗಿ ನವಿಲುಗರಿಯನ್ನು ಧರಿಸುವುದು. ಹೀಗೆ ನರಾಕಾರವನ್ನೇ ತಾಳಿದ್ದರೂ, ಆತನು ಲೋಕಾಶ್ರಯನೇ ಹೌದೆಂಬುದನ್ನು ಬಲ್ಲವರೆಲ್ಲೋ ಕೆಲವರು ಮಾತ್ರವೇ! ಅಂತಹವರಲ್ಲೊಬ್ಬನೇ ಧನ್ಯ-ಲೀಲಾಶುಕನೂ!

ಹೊಟ್ಟೆಪಾಡಿಗೋಸ್ಕರ ಯಾರೋ ಧನಿಕ, ಯಾರೋ ರಾಜ - ಇವರುಗಳನ್ನು ಆಶ್ರಯಿಸುತ್ತೇವೆ. ಅಂತರಂಗದಲ್ಲಿ ಆಶ್ರಯಿಸಬೇಕಾದುದು ಈ ಭುವನಾಶ್ರಯನನ್ನಲ್ಲದೆ ಮತ್ತಾರನ್ನು?

ಶ್ಲೋಕವನ್ನೀಗ ಆಸ್ವಾದಿಸಿ:

ಶೃಂಗಾರ-ರಸ-ಸರ್ವಸ್ವಂ/

ಶಿಖಿಪಿಂಛ-ವಿಭೂಷಣಂ |

ಅಂಗೀಕೃತ-ನರಾಕಾರಂ/

ಆಶ್ರಯೇ ಭುವನಾಶ್ರಯಂ ||

ಸೂಚನೆ : 20/12/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.