ಲೇಖಕರು : ಡಾ|| ಕೆ. ಎಸ್. ಕಣ್ಣನ್
(ಪ್ರತಿಕ್ರಿಯಿಸಿರಿ lekhana@ayvm.in)
ಯಾವ ಭಾಷೆಗಳಲ್ಲಿ ಗಾದೆಗಳಿಲ್ಲ? ಗಾದೆಗಳು ಜೀವನಾನುಭವಗಳನ್ನು ಆಧರಿಸಿ ಬಂದವು. ಅನುಭವಗಳು ಬಗೆಬಗೆಯಾಗಿರುವ ಕಾರಣ, ಗಾದೆಗಳಲ್ಲೂ ವೈವಿಧ್ಯವು ಸಹಜವೇ. ಆಯಾ ಸಂಸ್ಕೃತಿಯ ಮಂದಿಯ ಜೀವನಾನುಭವದ ವ್ಯಾಪ್ತಿಯೆಂತಹುದೋ ಅವರ ಗಾದೆಗಳ ವ್ಯಾಪ್ತಿಯೂ ಅಂತಹುದೇ ಆಗಿರುತ್ತದೆಯಷ್ಟೆ.
ವೈವಿಧ್ಯವಿರಲಿ, ಒಂದೇ ಭಾಷೆಯ ಗಾದೆಗಳಲ್ಲೇ ವೈರುಧ್ಯವನ್ನೂ ಕಾಣಬಹುದು. ಹಣದ ಬಗ್ಗೆಯೋ ವಿದ್ಯೆಯ ಬಗ್ಗೆಯೋ ಪರಸ್ಪರ-ವಿರುದ್ಧ ಗಾದೆಗಳಿಗೇನು ಕಡಿಮೆಯೇ? "ಅಲ್ಪವಿದ್ಯ, ಮಹಾಗರ್ವಿ"ಗೆ ವಿರೋಧಿಯೋ ಎನಿಸುವಂತಹುದು "ಓದಿ ಓದಿ ಮರುಳಾದ ಕೂಚಭಟ್ಟ." ಹಾಗೆಯೇ, "ದುಡ್ಡೇ ದೊಡ್ಡಪ್ಪ"ಕ್ಕೆ ಪ್ರತಿಯಾಗಿ, "ಧನವಿದ್ದರೆ ಫಲವೇನು, ಮನವಿಲ್ಲದನಕ" - ಇತ್ಯಾದಿ.
ಆದರೆ ಅದೃಷ್ಟವನ್ನು ಕುರಿತಾದ ಗಾದೆಗಳಲ್ಲಿ, ವಿಧಿಯನ್ನು ಹೊಗಳುವ ಗಾದೆಗಳೇ ಎಲ್ಲ ಭಾಷೆಗಳಲ್ಲೂ ಹೆಚ್ಚೆಂದು ತೋರುತ್ತದೆ. "ತಾನೊಂದು ಬಗೆದರೆ ದೈವವೊಂದು ಬಗೆಯಿತು," "ಕೈಗೆ ಬಂದದ್ದು ಬಾಯಿಗಿಲ್ಲ" - ಎಂಬ ಬಗೆಯ ಗಾದೆಗಳನ್ನು ಕೇಳಿದ್ದೇವಲ್ಲವೇ? ವಿಧಿಯ ಆಟ, ಹಣೆಬರಹಗಳನ್ನೇ ಹೆಚ್ಚೆಂದು ಹೇಳುವ ಗಾದೆಗಳನ್ನು ನಾನಾಭಾಷೆಗಳಲ್ಲಿ ಕಾಣಬಲ್ಲೆವು. ವಿಧಿಯೇ ಹೆಚ್ಚು, ಅದರ ಮುಂದೆ ಮನುಷ್ಯ-ಪ್ರಯತ್ನವೇನು? - ಎಂಬ ತೆರನ ನುಡಿಗಳು ಸಂಸ್ಕೃತದಲ್ಲೂ ಸಾಕಷ್ಟಿವೆ.
ಹಾಗೆಂದು ನಮ್ಮ ಕೈಯಲ್ಲೇನೂ ಇಲ್ಲವೆಂದು ಕೊಳ್ಳುವುದೂ ತರವಲ್ಲವಷ್ಟೆ? ಜೀವನದಲ್ಲಿ ಮಹಾ-ಸಾಧನೆಗಳನ್ನು ಮಾಡಿದವರಾರೂ ತೀವ್ರ-ಶ್ರಮಪಡದೆ ಏನನ್ನೂ ಸಾಧಿಸಿಲ್ಲವೆನ್ನುವ ಗಾದೆಗಳೂ ಉಂಟು.
ಏನನ್ನೂ ಮಾಡದೆ ಸುಮ್ಮನಿದ್ದುಬಿಡುವುದು ಯಾರಿಗೂ ಸಾಧ್ಯವಿಲ್ಲವೆಂಬ ಮಾತನ್ನು ಭಗವದ್ಗೀತೆಯೇ ಹೇಳುತ್ತದೆ. ಅಷ್ಟೇ ಅಲ್ಲ, ಏನೂ ಕೆಲಸಮಾಡದವನಿಗೆ ಶರೀರ-ಯಾತ್ರೆಯೂ ಸಿದ್ಧಿಸದು - ಎನ್ನುತ್ತದೆ. ಶರೀರ-ಯಾತ್ರೆಯೆಂದರೆ ಜೀವನ-ನಿರ್ವಹಣೆ.
ತಾತ್ತ್ವಿಕವಾಗಿ ಹೇಳುವುದಾದರೆ, ಪ್ರಕೃತಿಯೆಲ್ಲವೂ ತ್ರಿಗುಣಮಯ. ಪ್ರಕೃತಿಯಲ್ಲಿ ಸತ್ತ್ವ, ರಜಸ್, ತಮಸ್ - ಎಂಬ ಮೂರು ಗುಣಗಳುಂಟು. ಅವು ಸುಮ್ಮನಿರಗೊಡಿಸವು, ನಮ್ಮನ್ನು; ಏನನ್ನಾದರೂ ಮಾಡಿಸುತ್ತಲೇ ಇರುತ್ತವೆ. ಏನನ್ನೂ ಮಾಡದೇ ಒಂದು ಕ್ಷಣವಾದರೂ ಇದ್ದುಬಿಡಲು ಜೀವನು ಸ್ವತಂತ್ರನಲ್ಲ: ಪ್ರಕೃತಿ-ಪ್ರೇರಿತನಾಗಿ ಏನಾದರೂ ಕೆಲಸಗಳನ್ನು ಅವಶನಾಗಿ ಮಾಡುತ್ತಲೇ ಇರುವನು; ಅಂತೆಯೇ ಸೃಷ್ಟಿ-ವ್ಯವಸ್ಥೆಯಿರುವುದು!
ಹಾಗೆಂದ ಮೇಲೆ ಸುಮ್ಮನಿರುವ ಪ್ರಶ್ನೆಯೇ ಇಲ್ಲವೆಂದಾಯಿತು. ಸದಾ ಕೆಲಸವೆಂದರೆ, ಕೊನೆಯ ಪಕ್ಷ, ಏನನ್ನು ಮಾಡಬಾರದು, ಏನನ್ನು ಮಾಡಬೇಕು? – ಎಂಬುದು ಗೊತ್ತಿರುವುದೊಳ್ಳೆಯದಲ್ಲವೆ?
ವ್ಯರ್ಥವಾದ ಕೆಲಸವನ್ನು ಮಾಡಬಾರದೆನ್ನುತ್ತಾರೆ. ಯಾವುದೇ ನಿರ್ದಿಷ್ಟ-ಪ್ರಯೋಜನವಿಲ್ಲದೆ ಕೆಲವರು ನೀರನ್ನು ತಟ್ಟುವುದು, ನೀರಲ್ಲಿ ಕೈ-ಕಾಲಾಡಿಸುವುದು ಉಂಟಲ್ಲವೇ? ಪಾರ್ಕಿನಲ್ಲಿ ಕುಳಿತು ಸುಮ್ಮನೆಯೇ ಹುಲ್ಲನ್ನು ಕೀಳುವುದೋ ಕತ್ತರಿಸುವುದೋ ಮಾಡುತ್ತಿರುವುದುಂಟಲ್ಲವೇ? ಹಾಗೆ ಜಲತಾಡನ-ತೃಣಚ್ಛೇದನಗಳನ್ನು ಕೂಡ ಮಾಡಕೂಡದೆಂದಿವೆ, ಶಾಸ್ತ್ರಗಳು!
ಪೌರುಷವೆಂದರೆ ಪರಾಕ್ರಮ ಎಂಬುದು ಪ್ರಸಿದ್ಧಾರ್ಥ. ಆದರೆ ಪುರುಷ-ಪ್ರಯತ್ನವೆಲ್ಲಕ್ಕೂ ಪೌರುಷವೆಂದು ಹೇಳುವುದು ಸಂಸ್ಕೃತದಲ್ಲುಂಟು. ಮತ್ತು ಪುರುಷನೆಂದರೂ ಗಂಡಸು - ಎಂಬರ್ಥ ಮಾತ್ರವಲ್ಲ; ಸ್ತ್ರೀಯರೂ ಪುರುಷರೇ! ಪುರುಷ ಎಂಬುದಕ್ಕೆ ಜೀವ ಎಂಬುದೇ ಸಾರಭೂತವಾದ ಅರ್ಥ. ಆದುದರಿಂದ ಪುರುಷ-ಪ್ರಯತ್ನಕ್ಕೆಲ್ಲ, ಎಂದರೆ ಮನುಷ್ಯರು ಮಾಡುವುದಕ್ಕೆಲ್ಲಾ, ಪೌರುಷವೆಂಬ ಪದದ ಬಳಕೆಯು ಸಲ್ಲುತ್ತದೆ.
ಪೌರುಷವೆಂಬುದು ಎರಡು ಬಗೆ (ಪೌರುಷಂ ದ್ವಿವಿಧಂ ಸ್ಮೃತಂ) - ಎಂದು ಶಾಸ್ತ್ರಗಳು ಹೇಳುತ್ತವೆ: ಉಚ್ಛಾಸ್ತ್ರ ಮತ್ತು ಶಾಸ್ತ್ರಿತ - ಎಂಬುದಾಗಿ. ಶಾಸ್ತ್ರಿತ ಎಂದರೆ ಶಾಸ್ತ್ರಾನುಸಾರಿಯಾದದ್ದು. ಉಚ್ಛಾಸ್ತ್ರ - ಎಂದರೆ ಶಾಸ್ತ್ರಗಳನ್ನು ಮೀರುವಂತಹುದು.
ಇವುಗಳಲ್ಲಿ ಉಚ್ಛಾಸ್ತ್ರ-ಪೌರುಷವು ಅನರ್ಥಕ್ಕೆ ಕಾರಣವಾಗುವುದೆಂದೂ ಶಾಸ್ತ್ರಿತ-ಪೌರುಷವು ಪರಮಾರ್ಥಕ್ಕೆ ಕಾರಣವಾಗುವುದೆಂದೂ ಮುಕ್ತಿಕೋಪನಿಷತ್ತು ಹೇಳುತ್ತದೆ.
ಏನು ಹಾಗೆಂದರೆ? ಮೂಲತಃ ಶಾಸ್ತ್ರವೆಂಬುದು ನಮ್ಮ ಹಿತಕ್ಕಾಗಿ ನಿಯಮಗಳನ್ನು ಹೇಳುವಂತಹುದು - ಏನನ್ನು ಮಾಡಬೇಕು/ಬಾರದೆಂದು. ಶಾಸ್ತ್ರವೆಂದರೆ ಕೇವಲ ಪುಸ್ತಕಗಳೆಂದೇ ಬಹುಮಂದಿಯ ಭಾವನೆ. ಹಾಗಲ್ಲ. ಯಾವುದೇ ಕ್ಷೇತ್ರದಲ್ಲಿ ನುರಿತವರ ಅನುಭವ-ವಾಣಿಯೇ ಶಾಸ್ತ್ರವೆನಿಸುವುದು.
ಶ್ರೀರಂಗಮಹಾಗುರುಗಳು ಶಾಸ್ತ್ರದ ಪಾತ್ರವನ್ನು ಈಜುವಿಕೆಯ ನಿದರ್ಶನದ ಮೂಲಕ ತಿಳಿಸುತ್ತಿದ್ದರು. ಈಜಿನಲ್ಲಿ ಪರಿಣತರು ಈಜುಕಲಿಯುವವನಿಗೆ ಹೀಗೆ ಮಾಡು, ಹೀಗೆ ಮಾಡಬೇಡ - ಎಂದೆಲ್ಲ ಹೇಳಿಕೊಡುವುದುಂಟಲ್ಲವೆ? ಆ ಮಾಡು-ಬೇಡಗಳೇ ವಿಧಿ-ನಿಷೇಧಗಳು, ಅರ್ಥಾತ್ ನಿಯಮಗಳು. ಆ ನಿಯಮಗಳೇ ಶಾಸ್ತ್ರ.
ಶಾಸ್ತ್ರಾನುಸಾರಿಯಾಗಿ ಈಜಬಲ್ಲವನೇ ದಡಸೇರಬಲ್ಲನು; ನಿಷ್ಣಾತನೇ ಆಗಿದ್ದರೆ ಬೇರೆಯವರನ್ನೂ ದಾಟಿಸಬಲ್ಲನು. ಆದರೆ ಆ ಶಾಸ್ತ್ರವನ್ನರಿಯದೆ ಎರ್ರಾಬಿರ್ರಿಯಾಗಿ ವರ್ತಿಸುವವನಿಗೆ ನೀರಲ್ಲಿ ಮುಳುಗುವುದೇ ಗತಿ.
ಅಧ್ಯಾತ್ಮಶಾಸ್ತ್ರಗಳೂ ಅಂತೆಯೇ. ಶಾಸ್ತ್ರ ಮೀರಿ ನಡೆದಲ್ಲಿ ಈಗಲೋ ಆಮೇಲೋ ಅನರ್ಥವು ಸಿದ್ಧ. ಶಾಸ್ತ್ರಾನುಸಾರ ನಡೆಯುವವನು ಪರಮಾರ್ಥವನ್ನು, ಎಂದರೆ ಪರಮ-ಪ್ರಯೋಜನವಾದ ಬಂಧ-ಮುಕ್ತಿಯನ್ನೇ, ಹೊಂದುವನು.
ಮುಕ್ತಿಯೆಂದರೆ ಸ್ವಾತಂತ್ರ್ಯವೇ ಅಲ್ಲವೇ? ಅದು ಬೇಕೇ?: ಶಾಸ್ತ್ರಗಳತ್ತ ಗಮನ ಹರಿಸಿ. ಪುರುಷ-ಪ್ರಯತ್ನದ ಸಾಫಲ್ಯವಿಲ್ಲಿದೆ.
ಸೂಚನೆ: 27/12//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.