Friday, December 19, 2025

ಪ್ರಶ್ನೋತ್ತರ ರತ್ನಮಾಲಿಕೆ 46

ಲೇಖಕರು : ವಿದ್ವಾನ್ ನರಸಿಂಹ ಭಟ್  

ಸಂಸ್ಕೃತಿ ಚಿಂತಕರು 

ಅಷ್ಟಾಂಗಯೋಗ ವಿಜ್ಞಾನಮಂದಿರಂ

ಪ್ರಶ್ನೆ ೪೫. ಬುದ್ಧಿಮಂತನಾದ ವಿವೇಕಿಯು ಯಾವುದಕ್ಕೆ ಭಯಪಡುತ್ತಾನೆ

ಸಂಸಾರವೆಂಬ ಅರಣ್ಯಕ್ಕೆ.

ಈ ಪ್ರಶ್ನೋತ್ತರದಲ್ಲಿ ಒಂದು ದೃಷ್ಟಾಂತದ ಮೂಲಕ ವಿವರಣೆಯನ್ನು ಕೊಡಲಾಗಿದೆ. ಸಂಸಾರವೆಂಬುದು ಒಂದು ಅರಣ್ಯ ಎಂಬುದಾಗಿ ಭಾವಿಸಲಾಗಿದೆ. ಅರಣ್ಯವು ಪ್ರವೇಶ ಮಾಡುವುದಕ್ಕೆ ಭಯಾನಕವಾಗಿತ್ತದೆ. ಅಲ್ಲಿ ಜೀವಿಸುವುದು ಕಷ್ಟಸಾಧ್ಯವೇ ಸರಿ. ಅಲ್ಲಿನ ಜೀವಿಕೆಗೆ ಅವಧಿ ಇಷ್ಟೇ! ಎಂಬುದು ತೀರ್ಮಾನವಾಗುವುದು ಕಷ್ಟವೇ. ಏಕೆಂದರೆ ಯಾವಾಗ ಜೀವಕ್ಕೆ ಕುತ್ತು ಬರುತ್ತದೆ? ಎಂಬುದನ್ನು ತಿಳಿಯುವುದು ಕಷ್ಟವಾದ್ದರಿಂದ. ಒಂದು ಜೀವವು ಮತ್ತೊಂದು ಜೀವವನ್ನು ಬಳಸಿ ಜೀವಿಸುವ ಅನಿವಾರ್ಯ ಅಲ್ಲಿರುತ್ತದೆ. ಹಾಗಾಗಿ ಭಯವೆಂಬುದು ಅರಣ್ಯದಲ್ಲಿ ಅತ್ಯಂತ ಸಹಜ. ಹಾಗೆಯೇ ಈ ಸಂಸಾರವೂ ಕೂಡ ಅರಣ್ಯದಂತೆ ಭಯಾನಕವಾದದ್ದು ಎಂಬ ದೃಷ್ಟಾಂತದ ವಿವರಣೆ ಇಲ್ಲಿದೆ. ಆದ್ದರಿಂದ 'ವಿವೇಕಿಯಾದವನಿಗೆ ಸಂಸಾರವು ಹೇಗೆ ಅರಣ್ಯಸದೃಶವಾಗಿದೆ?' ಎಂಬುದನ್ನು ನಾವು ಚಿಂತಿಸಬೇಕಾಗಿದೆ.

ಬುದ್ಧಿಮಂತನಾದ ವ್ಯಕ್ತಿ ಏಕೆ ಸಂಸಾರಕ್ಕೆ ಭಯಪಡಬೇಕು? 'ಅದು ಭಯಾನಕ ಅರಣ್ಯದಂತೆ' ಎಂಬುದಾಗಿ ಭಯಪಡಿಸಲು ಕಾರಣವೇನು? ಹಾಗಾದರೆ ಸಂಸಾರವು ಬೇಡವೇ? ಭಗವಂತ ಸಂಸಾರವನ್ನು ಸೃಷ್ಟಿ ಮಾಡಿದ್ದಾದರೂ ಏಕೆ? ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿ ಉದ್ಭವಿಸುತ್ತವೆ. ವಿವೇಕವು ಹೇಗೆ ನಿಜವಾದ ಬುದ್ಧಮತ್ತೆ ಎಂದು ಪರಿಗಣಿತವಾಗುತ್ತದೆ? ಇದಕ್ಕೆ ಸಂಸಾರವೆಂಬುದು ಹೇಗೆ ವಿರೋಧಿಯಾಗುತ್ತದೆ? ಎಂಬ ಪ್ರಶ್ನೆಗಳೂ ಇದರ ಜೊತೆ ಸೇರಿಕೊಳ್ಳುತ್ತವೆ. ಈ ಕಾರಣಗಳಿಂದ ಈ ಪ್ರಶ್ನೋತ್ತರವು ಕೆಲವೇ ಕೆಲವು ಶಬ್ದಗಳಿಂದ ವಿವರಿಸಲು ಕಷ್ಟ ಸಾಧ್ಯವಾದುದು. ಸಂದರ್ಭಕ್ಕೆ ಅನುಗುಣವಾಗಿ ಸಂಕ್ಷಿಪ್ತವಾಗಿ ವಿವರಿಸುವ ಪ್ರಯತ್ನವಿದಾಗಿದೆ. 

ಶಾಸ್ತ್ರದಲ್ಲಿ 'ಸಂಸಾರ' ಎಂಬುದಕ್ಕೆ ಹೀಗೆ ಒಂದು ವಿವರಣೆ ಇದೆ - "ಮಿಥ್ಯಾಜ್ಞಾನದಿಂದ ಬರುವ ವಾಸನಾರೂಪವಾದ ಸಂಸ್ಕಾರವನ್ನು 'ಸಂಸಾರ' ಎಂಬುದಾಗಿ ಕರೆಯಬೇಕು" ಎಂದು. ಅಂದರೆ ಇದೊಂದು ವಿಪರೀತವಾದ ಅರಿವು ಅಷ್ಟೇ. ಆದರೆ ಈ ಅರಿವೂ ಕೂಡ ಮುಂದಿನ ಅನುಭವಕ್ಕೂ ವಿಷಯವಾಗುತ್ತದೆ ಎಂಬುದೂ ಅಷ್ಟೇ ಸಹಜ. ಏಕೆಂದರೆ ಅನುಭವವೂ ಒಂದು ಅರಿವಷ್ಟೇ. "ಯಾವುದು ಸಂಸರಣ ಶೀಲವಾದದ್ದೋ, ಅಂದರೆ ನಿತ್ಯವೂ ಗತಿಶೀಲವಾದದ್ದೋ ಅದು 'ಸಂಸಾರ' ಎಂಬುದಾಗಿ ಕರೆಸಿಕೊಳ್ಳುತ್ತದೆ" ಎಂಬ ವಿವರಣೆ ಇನ್ನೊಂದು ಕಡೆ ಸಿಗುತ್ತದೆ. ಈ ಸಂಸಾರ ಎಂಬ ಪದಕ್ಕೆ 'ದುಃಖಲೋಕ' ಎಂಬ ಅರ್ಥವಿವರಣೆಯೂ ಇದೆ. ಅದರಿಂದ ನಮಗೆ ತಿಳಿಯುವುದು ಇಷ್ಟೇ - ಸಂಸಾರವು ಸದಾ ದುಃಖಕಾರಿ ಎಂಬುದಾಗಿ. "ಸಂಸಾರವೆಂಬುದು ಅಜ್ಞಾನಮೂಲವಾದುದು. ಆದ್ದರಿಂದ ಇದು ಸರ್ವದಾ ದುಃಖಕಾರಿ" ಎಂಬುದಾಗಿ ಇನ್ನೊಂದು ಕಡೆ ವಿವರಣೆಯನ್ನು ನೋಡಬಹುದು. ಇಷ್ಟೆಲ್ಲಾ ಸಂಸಾರದ ಬಗ್ಗೆ ಹೇಯವಾದ ವಿವರಣೆ ಇರುವುದರಿಂದಲೇ ಒಬ್ಬ ವಿವೇಕಿಯಾದವನು ಈ ಸಂಸಾರವನ್ನು ಭಯದಿಂದ ನೋಡುತ್ತಾನೆ. ಈ ಸಂಸಾರದಲ್ಲಿ ಸಿಲುಕದೆ ಇರುವಂತೆ ಅವನು ಎಚ್ಚರಿಕೆಯನ್ನು ವಹಿಸುತ್ತಾನೆ. ಕೆಲವರು ಈ ಸಂಸಾರದಲ್ಲಿ ಇದ್ದು, ಸಂಸಾರವನ್ನು ಜಯಿಸುವ ಕಾರ್ಯವನ್ನು ಮಾಡುತ್ತಾರೆ. ಇಂತಹವರೇ ನಿಜವಾದ ವಿವೇಕಿಯಾಗುತ್ತಾರೆ. ಇನ್ನು ಕೆಲವೊಮ್ಮೆ ವಿವೇಕಿಯಾದವನು ಸಂಸಾರಿಯಾಗಿ, ಧ್ಯೇಯವಾದುದನ್ನು ನಿಶ್ಚಯಿಸಿ, ಸಂಸಾರವನ್ನು ತ್ಯಜಿಸಿ, ಸಂಸಾರದಿಂದ ಮುಕ್ತಿಯನ್ನು ಪಡೆದು, ಭವವೆಂಬ ಬಂಧನದಿಂದ ಪಾರಾಗುವುದನ್ನು ನೋಡುತ್ತೇವೆ. ಆಶ್ಚರ್ಯವಾದರೂ ಸತ್ಯವಾದ ವಿಷಯವೇನೆಂದರೆ, ಸಂಸಾರವು ಎಷ್ಟೇ ಹೇಯವೆಂದಾದರೂ ಅಲ್ಲೇ ಇದ್ದು, ಅದನ್ನೇ ಬಳಸಿ, ಅದನ್ನು ಪೂರಕವಾಗಿ ಮಾಡಿಕೊಂಡು, ಅದನ್ನು ದಾಟಬೇಕು ಎಂಬುದು ಜ್ಞಾನಿಗಳ ಉಪದೇಶದ ಸಾರವಾಗಿದೆ. ಹಾಗಾಗಿ ಈ ಪ್ರಶ್ನೋತ್ತರದಲ್ಲಿ ಇದರ ಬಗ್ಗೆ ಅಂತಹ ಎಚ್ಚರಿಕೆಯನ್ನು ಕೊಡಲಾಗಿದೆ ಎಂಬುದಾಗಿ ಭಾವಿಸಬೇಕು. ಹಾಗಾದಾಗ ಮಾತ್ರ ಈ ಸಂಸಾರವು ಸಾರವಾಗಿ ಕಾಣುತ್ತದೆ. ಹಾಗಿಲ್ಲದಿದ್ದರೆ ಅದು ಅರಣ್ಯಸದೃಶವೇ ಸರಿ.