Monday, December 29, 2025

ವ್ಯಾಸ ವೀಕ್ಷಿತ 168 ಐವರು ಸಮ್ರಾಟರ ಸಾಧನೆ – ಈಗ ಜರಾಸಂಧನ ಬಾಧನೆ ( Vyaasa Vikshita 168)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ರಾಜಸೂಯಯಾಗವನ್ನು ಕುರಿತಾಗಿ ಶ್ರೀಕೃಷ್ಣನಾಡಿದ ಮಾತಿಗೆ ಪ್ರತ್ಯುತ್ತರವಾಗಿ ಯುಧಿಷ್ಠಿರನು ತನ್ನ ಅಧೈರ್ಯವನ್ನು ತೋಡಿಕೊಂಡನಷ್ಟೆ. ಆಗ ಭೀಮನು ತನ್ನ ಪ್ರತಿವಾದವನ್ನು ಮಂಡಿಸಿ, ತನ್ನ ಮಾತನ್ನು ಹೀಗೆ ಮುಗಿಸಿದನು:

"ಕೃಷ್ಣ-ಅರ್ಜುನ-ನಾನು – ಈ ಮೂವರಲ್ಲಿ ನಯ-ಬಲ-ವಿಜಯಶಾಲಿತೆಗಳಿವೆ.  ನಾವು ಮೂರು ಜನ, ಮೂರು ಅಗ್ನಿಗಳ ಹಾಗೆ (ದಕ್ಷಿಣಾಗ್ನಿ- ಗಾರ್ಹಪತ್ಯ- ಆಹವನೀಯ - ಎಂಬಿವು ಮೂರು ಅಗ್ನಿಗಳು; ಆ ಮೂರರಿಂದಲೇ ಯಾಗವು ಸಂಪೂರ್ಣವಾಗುವುದು). ಹಾಗಿದ್ದು ಈ ಮಾಗಧ-ವಧವನ್ನು, ಎಂದರೆ ಜರಾಸಂಧನ ವಧವನ್ನು, ಸಾಧಿಸಿಬಿಡಬಹುದು".

ಆಗ ಕೃಷ್ಣನು ಹೇಳಿದನು:

"ಬಾಲಕನೆನಿಸುವವನು, ಎಂದರೆ ತಿಳಿವಳಿಕೆ ಸಾಲದವನು, ದೊಡ್ಡ ದೊಡ್ಡ ಕೆಲಸಗಳನ್ನೇನೋ ಆರಂಭಿಸಿಬಿಡುವನು; ಆದರೆ ಮುಂದಕ್ಕೆ ಅದರಿಂದಾಗುವ ಪರಿಣಾಮವೇನು? - ಎಂಬುದರತ್ತ ದೃಷ್ಟಿಯನ್ನು ಹರಿಸುವುದಿಲ್ಲ. ಆದುದರಿಂದ ಸ್ವಾರ್ಥ-ಸಾಧನ-ಮಾತ್ರದತ್ತ ಮಾತ್ರ ಮನಸ್ಸು ಕೊಡುವ ಅವಿವೇಕಿ-ಶತ್ರುವನ್ನು ವೀರರು ಸಹಿಸಲಾರರು.

ನಾನು ಕೊಡುವ ನಿದರ್ಶನಗಳನ್ನು ಗಮನಿಸಿ. ಯುವನಾಶ್ವನ ಮಗ ಯೌವನಾಶ್ವಿ ಎಂಬುವನು; ಆತನು ತಾನು ಜಯಿಸಬಲ್ಲ ರಾಜರುಗಳನ್ನು ಗೆದ್ದೇ ರಾಜಸೂಯ-ಯಾಗವನ್ನು ಮಾಡಿದುದು. ಹಾಗೆಯೇ ಭಗೀರಥನೂ; ಪ್ರಜಾ-ಪಾಲನವನ್ನು ಚೆನ್ನಾಗಿ ನೆರವೇರಿಸಿಯೇ ಆತನು ಸಮ್ರಾಟ್ ಆದುದು. ರಾಜಾ ಕಾರ್ತವೀರ್ಯನಾದರೂ ತನ್ನ ತಪೋವೀರ್ಯದಿಂದಲೇ ಸಮ್ರಾಟನಾದದ್ದು. ಭರತನೂ ಸಹ ಸಮ್ರಾಟ್ ಎನಿಸಿಕೊಂಡದ್ದು ತನ್ನ ಬಲದಿಂದಲೇ. ಇದೇ ರೀತಿ ಮರುತ್ತನೆಂಬ ರಾಜನೂ ತನ್ನ ಸಮೃದ್ಧಿಯಿಂದಲೇ ಸಮ್ರಾಟ್ ಪದವಿಯನ್ನು ಪಡೆದದ್ದು.

ಹೀಗೆ ಐದು ಮಂದಿ ಸಮ್ರಾಟರ ಬಗ್ಗೆ ಕೇಳಿ ಬಲ್ಲೆವು ನಾವು. ಇವರುಗಳೆಲ್ಲ ಒಂದೊಂದು ಗುಣಾತಿಶಯದಿಂದ ಸಮ್ರಾಟ್-ಪದವಿಯನ್ನು ಪಡೆದರು.

ಆದರೆ ಯುಧಿಷ್ಠಿರಾ, ನಿನ್ನಲ್ಲಿ ಈ ಎಲ್ಲ ಗುಣಗಳೂ ಇವೆ! ಶತ್ರುನಿಗ್ರಹ-ಸಾಮರ್ಥ್ಯ, ಪ್ರಜಾ-ಪಾಲನ, ತಪಃಶಕ್ತಿ, ವಿತ್ತ-ಸಮೃದ್ಧಿ, ಹಾಗೂ ಉತ್ತಮವಾದ ನೀತಿ - ಎಂಬಿವೈದು ಗುಣಗಳೂ ನಿನ್ನಲ್ಲಿವೆ, ಯುಧಿಷ್ಠಿರಾ!

ನಮಗೀಗ ಬಾಧಕನಾಗಿರುವುದೆಂದರೆ ಬೃಹದ್ರಥ-ಪುತ್ರನಾದ ಜರಾಸಂಧನಿರುವನಲ್ಲಾ, ಆತನೇ. ಅದನ್ನರಿತುಕೋ, ಭರತಶ್ರೇಷ್ಠನೇ. ನೂರು ರಾಜರ ಸಮೂಹವೂ ಆತನನ್ನು ಬಲ-ಪರಾಕ್ರಮಗಳಲ್ಲಿ ಅನುಸರಿಸಲಾಗದು. ಎಂದೇ ಆತನು ಬಲ-ಪ್ರಯೋಗದಿಂದಲೇ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿರುವುದು.

ರತ್ನ-ಸಂಪನ್ನರಾದ ರಾಜರುಗಳೆಲ್ಲ ಜರಾಸಂಧನ ಉಪಾಸನೆಯನ್ನು ಮಾಡುತ್ತಾರೆ, ಎಂದರೆ ಕಾಣಿಕೆಗಳನ್ನು ಆಗಾಗ್ಗೆ ಸಲ್ಲಿಸಿ ಆದರಿಸುತ್ತಿರುತ್ತಾರೆ. ಆದರೆ ಆತನು ಮಾತ್ರ ಅವುಗಳಿಂದ ಸಂತೋಷಪಡತಕ್ಕವನಲ್ಲ. ಏಕೆಂದರೆ ಬಾಲ್ಯದಿಂದಲೂ ಸಹ ಆತನಲ್ಲಿ ನಯವೆಂಬುದಿಲ್ಲವಾಗಿದೆ.

ಎಂದೇ, ತಾನು ಪ್ರಧಾನ-ಪುರುಷನೆಂದಾಗಿಬಿಟ್ಟು, ಮೂರ್ಧಾಭಿಷಿಕ್ತ-ರಾಜರನ್ನು ಸಹ ಆತನು ಬಂದಿಗಳನ್ನಾಗಿ ಮಾಡಿಟ್ಟಿದ್ದಾನೆ: ಹತ್ತಿರ ಹತ್ತಿರ ನೂರರಷ್ಟು ಅರಸರನ್ನು ಈ ಜರಾಸಂಧನು ತನ್ನ ವಶದಲ್ಲಿ ಇಟ್ಟುಕೊಂಡಿದ್ದಾನೆ. ಹಾಗಿರಲು, ಅತಿದುರ್ಬಲನಾದ ಯಾವುದೇ ರಾಜನು ಆತನ ಬಳಿ ಸಾರಲಾದರೂ, ಎಂದರೆ ರಣದಲ್ಲಿ ಎದುರಿಸಲಾದರೂ, ಹೇಗೆ ತಾನೆ ಸಮರ್ಥನಾದಾನು? ಪಶುಗಳನ್ನು ಪ್ರೋಕ್ಷಿಸಿ ಒರೆಸಿ ರುದ್ರ-ಗೃಹದಲ್ಲಿ ಇಟ್ಟಿರುವರಲ್ಲವೇ – ಬಲಿಗೊಡಲೆಂದು? ಹಾಗಿದೆ ಆ ರಾಜರುಗಳ ಪರಿಸ್ಥಿತಿ! ಜೀವನದಲ್ಲಿ ಇನ್ನದಾವ ಪ್ರೀತಿ-ಸಂತೋಷಗಳನ್ನು ಅವರು ಕಂಡಾರು, ಭರತಶ್ರೇಷ್ಠನೇ?

ಕ್ಷತ್ರಿಯನಾದವನಿಗೆ ಶಸ್ತ್ರದಿಂದ ಮರಣವೆಂಬುದೇ ಪ್ರಶಸ್ತವೆನಿಸುವುದು; ಅದರಿಂದಲೇ ಆತನು ಸತ್ಕಾರವೆಂಬುದನ್ನು ಹೊಂದುವುದು! ಆ ಕಾರಣಕ್ಕಾಗಿ ಯುದ್ಧದಲ್ಲಿ ಜರಾಸಂಧನನ್ನು ನಾವು ಸಂಹರಿಸೋಣ. ಈಗ ಜರಾಸಂಧನು ಮಾಡಲಿರುವುದನ್ನು ಹೇಳುತ್ತೇನೆ" ಎಂದನು.

ಸೂಚನೆ : 28/12/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.