ಲೇಖಕರು : ಪ್ರೊ. ಕೆ. ಎಸ್. ಕಣ್ಣನ್
ಅದಕ್ಕೆ ಯುಧಿಷ್ಠಿರನು ಹೀಗೆ ಉತ್ತರವಿತ್ತನು: "ಶ್ರೀಕೃಷ್ಣಾ, ನೀನು ಧೀಮಂತ. ಬೇರಾರಿಗೂ ಹೇಳಲಾಗದುದನ್ನು ನೀನು ಹೇಳಿದ್ದೀಯೇ. ಅಲ್ಲದೆ, ಇಂತಹ ವಿಷಯಗಳಲ್ಲಿ ಸಂಶಯಗಳನ್ನು ಪರಿಹರಿಸತಕ್ಕವನು ನಿನಗಿಂತಲೂ ಮತ್ತಾರೂ ಭೂಮಿಯಲ್ಲಿರಲಾರರು.
ಈಗೆಲ್ಲ ಮನೆಮನೆಗೂ ರಾಜರಿರುತ್ತಾರೆ, ತಮತಮಗೆ ಪ್ರಿಯವಾದ ಕೆಲಸಗಳನ್ನು ಮಾಡಿಕೊಳ್ಳುತ್ತಾರೆ! ಅವರಾರೂ ಸಾಮ್ರಾಜ್ಯವನ್ನು ಸಂಪಾದಿಸಿಕೊಂಡಿಲ್ಲ. ಸಮ್ರಾಟ್ - ಎಂಬ ಪದವಿಯು ಬರುವುದಾದರೂ ಕಡುಕಷ್ಟದಿಂದಲೇ ಸರಿ!
ಅನ್ಯರಾಜರ ಪರಾಕ್ರಮವೆಷ್ಟು ಹೆಚ್ಚು ಎಂಬುದನ್ನು ತಿಳಿದೂ, ತನ್ನನ್ನೇ ತಾನು ಯಾರು ಪ್ರಶಂಸಿಸಿಕೊಂಡಾನು? ಮತ್ತೊಬ್ಬನಾದರೂ ನಮ್ಮ ಸಾಮರ್ಥ್ಯವನ್ನು ಅರಿತಿದ್ದವನಾಗಿದ್ದೂ ನಮ್ಮನ್ನು ಪ್ರಶಂಸಿಸುವುದಾದರೆ, ಆವಾಗ ನಾವು ಆದರಣೀಯರೆನ್ನಬಹುದೇನೋ? ಸಾರಾಂಶವಾಗಿ ತನ್ನ ಬಗ್ಗೆ ತಾನೇ ಮಾಡಿಕೊಳ್ಳುವ ಪ್ರಶಂಸೆಯಾಗಲಿ, ಪರರು ತನ್ನ ಬಗ್ಗೆ ಮಾಡುವ ಪ್ರಶಂಸೆಯಾಗಲಿ, ಅರಿವಿನ ಆಧಾರದ ಮೇಲೆ ಬಂದಿರುವುದಾಗಿರಬೇಕು. ಕೃಷ್ಣಾ, ಈ ಭೂಮಿಯೆಂಬುದು ಬಹಳ ವಿಶಾಲವಾದುದು. ಅನೇಕ ರಾಜರತ್ನಗಳಿಂದ ತುಂಬಿರುವುದು. ದೂರದೂರದ ದೇಶಗಳಿಗೆ ಹೋದವನಿಗೆ ತಾನೆ ಶ್ರೇಯಸ್ಸೆನ್ನುವುದೇನು? - ಎಂಬುದು ತಿಳಿಯುವುದು?
ಇರಲಿ. ಶಮವೇ, ಎಂದರೆ ಮನಸ್ಸಿನ ಶಾಂತಿಯೇ, ಶ್ರೇಷ್ಠ - ಎಂದು ನನಗೀಗ ಅನಿಸಹತ್ತಿದೆ, ಕೃಷ್ಣಾ. ಶಮದಿಂದಲೇ ನನಗೆ ಕ್ಷೇಮವೆಂಬುದುಂಟಾಗುವುದು.
ಇದನ್ನೇಕೆ ಹೇಳುತ್ತಿದ್ದೇನೆಂದರೆ, ರಾಜಸೂಯದ ಆರಂಭವನ್ನು ನಾನೇನೋ ಮಾಡಿಬಿಡಬಹುದು; ಆದರೆ ಅದರ ಫಲವಾದ ಪಾರಮೇಷ್ಠ್ಯವೆಂಬುದಿದೆಯೆಲ್ಲಾ - ಅರ್ಥಾತ್ ಎಲ್ಲರಿಗಿಂತಲೂ ಮೇಲಾಗಿರುವಿಕೆ - ಎಂಬುದಿದೆಯೆಲ್ಲಾ? – ಅದು ನನಗೆ ಅಸಾಧ್ಯವೆಂದೇ ತೋರುವುದು.
ಸತ್ಕುಲ-ಪ್ರಸೂತರೂ ಮನಸ್ವಿಗಳೂ ಆದ ಅನೇಕ-ರಾಜರು ಇಲ್ಲಿರುವರಷ್ಟೆ? ಇವರುಗಳಲ್ಲೇ ಯಾರಾದರೊಬ್ಬರು ಅದನ್ನು ಸಾಧಿಸುವ ಶ್ರೇಷ್ಠರಿರಬಹುದಲ್ಲವೇ?
ಈಗ ನೀನು ಹೇಳಿದ ಜರಾಸಂಧ-ವೃತ್ತಾಂತದಿಂದ ನಾನೂ ಭಯಗೊಂಡಿದ್ದೇನೆ, ಕೃಷ್ಣಾ. ಆತನ ದೌರಾತ್ಮ್ಯದಿಂದ, ಅರ್ಥಾತ್ ದುಷ್ಟತನದಿಂದ, ಚಿಂತೆಗೊಳಗಾಗಿದ್ದೇನೆ. ಕೃಷ್ಣಾ, ನೀನಾದರೋ ದುರ್ಧರ್ಷ - ಎಂದರೆ ನಿನ್ನನ್ನಾರೂ ಘಾಸಿಗೊಳಿಸಲಾರರು. ಅಂತಹ ನಿನ್ನ ಭುಜ-ಬಲವನ್ನಾಶ್ರಯಿಸಿಕೊಂಡೇ ನಾವುಗಳು ಇರುವುದು.
'ನಾನು ಬಲಶಾಲಿ'ಯೆಂಬುದಾಗಿ ನನ್ನ ಬಗ್ಗೆ ನಾನಂದುಕೊಂಡಿಲ್ಲ, ಕೃಷ್ಣಾ. ಅದೂ ಆ ಜರಾಸಂಧನ ವಿಷಯದಲ್ಲಿ ನೀನೇ ಅತಂಕಪಡುತ್ತಿರುವಾಗ!
ನಿನ್ನಿಂದಾಗಲಿ ಬಲರಾಮನಿಂದಾಗಲಿ ಭೀಮನಿಂದಾಗಲಿ ಅರ್ಜುನನಿಂದಾಗಲಿ ಆ ಜರಾಸಂಧನನ್ನು ಸೋಲಿಸಲು ಆದೀತೋ ಆಗುವುದಿಲ್ಲವೋ? - ಎಂಬ ಯೋಚನೆಯಾಗುತ್ತದೆ, ನನಗೆ. ಇದನ್ನೆಲ್ಲಾ ಅರಿತ ಮೇಲೆ, ರಾಜಸೂಯ ಯಾಗವನ್ನು ನಾನು ಮಾಡಬೇಕೇ? - ಎಂಬುದಾಗಿ ಮತ್ತೆ ಮತ್ತೆ ವಿಮರ್ಶಿಸುವಂತಾಗುತ್ತಿದೆ; ಕೇಶವ, ನಮ್ಮ ಎಲ್ಲ ಕೆಲಸ-ಕಾರ್ಯಗಳಿಗೂ ನೀನೇ ಪ್ರಮಾಣ" ಎಂದು ತನ್ನ ಮಾತನ್ನು ಮುಗಿಸಿದನು.
ಮಾತಿನಲ್ಲಿ ಚತುರನಾದ ಭೀಮನು, ಯುಧಿಷ್ಠಿರನ ಈ ಮಾತುಗಳನ್ನು ಕೇಳಿದವನೇ ಹೀಗೆ ಹೇಳಿದನು:
"ಯಾವ ರಾಜನು ಪ್ರಯತ್ನವನ್ನೇ ಮಾಡನೋ, ಹಾಗೆಯೇ ತಾನು ದುರ್ಬಲನಾಗಿದ್ದೂ ಸರಿಯಾದ ಯುಕ್ತಿಯನ್ನು ಬಳಸನೋ, ಅಂತಹ ರಾಜನು ಹಾಳಾಗುವನು - ಮಣ್ಣಿನ ಹುತ್ತವು ಹೇಗೆ ನಾಶಹೊಂದುವುದೋ ಹಾಗೆ. ಇನ್ನು ತಾನು ದುರ್ಬಲನಾಗಿದ್ದರೂ ಅತಂದ್ರಿತನೇ ಆಗಿದ್ದರೆ, ಎಂದರೆ ಜಾಗರೂಕನೂ ಪ್ರಯತ್ನಶೀಲನೂ ಆಗಿದ್ದರೆ, ಹಾಗಿದ್ದರಷ್ಟೇ ಬಲಶಾಲಿಯಾದ ರಿಪುವನ್ನೂ ಹತ್ತಿಕ್ಕುವನು - ಯುಕ್ತಿಯಿಂದ ಶಕ್ತಿ-ಪ್ರಯೋಗವನ್ನು ಆತನು ಮಾಡಿದಲ್ಲಿ; ಅಲ್ಲದೆ ಸ್ವ-ಹಿತವಾದ ಸಂಪತ್ತನ್ನೂ ಗಳಿಸಿಕೊಳ್ಳುವನು.
ಕೃಷ್ಣನಲ್ಲಿ ನಯವಿದೆ, ಎಂದರೆ ರಾಜನೀತಿಯಿದೆ; ನನ್ನಲ್ಲಿ ಬಲವಿದೆ; ಅರ್ಜುನನಲ್ಲಿ ಎಲ್ಲವನ್ನೂ ಜಯಿಸಿಕೊಂಡು ಬರುವ ಶಕ್ತಿಯಿದೆ. ಹೀಗಿರುವುದರಿಂದ ನಾವೀಗ ಸಾಧಿಸುವಂತಹುದಿದೆಯಲ್ಲವೇ?"
ಸೂಚನೆ : 21/12/2025 ರಂದು ಈ ಲೇಖನವು ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.