Tuesday, December 16, 2025

ಭಗವಂತನು ಯೋಗನಿದ್ರೆಯನ್ನೇ ಏಕೆ ಅಲಂಕರಿಸಿದ್ದಾನೆ ? (Bhagavantanu Yoganidreyanne Eke Alaṅkarisiddane?)

ಲೇಖಕರು: ಡಾ. ರಾಮಮೂರ್ತಿ  ಟಿ.ವಿ. 
(ಪ್ರತಿಕ್ರಿಯಿಸಿರಿ lekhana@ayvm.in)



ಬಲಿಚಕ್ರವರ್ತಿಯಕಥೆ, ವಾಮನನ ಅವತಾರ, ಚಾತುರ್ಮಾಸ್ಯದ ವಿವರಗಳು ಪುರಾಣಗಳಲ್ಲಿ ಲಭ್ಯವಿದೆ. ಅಸುರನಾದ ಬಲಿರಾಜನು ಮೂರೂ ಲೋಕಗಳನ್ನು ಗೆದ್ದು ಇಂದ್ರಾದಿ ದೇವತೆಗಳನ್ನು ಪಲ್ಲಟಗೊಳಿಸಿದ್ದ. ದೇವತೆಗಳ ಪ್ರಾರ್ಥನೆಯಂತೆ ಮಹಾವಿಷ್ಣುವು ವಾಮನನಾಗಿ ಅವತರಿಸಿದ್ದ. ಬಲಿಯು ಯಜ್ಞಮಾಡುವಾಗ ವಾಮನ ಆತನ ಬಳಿ ಮೂರು ಹೆಜ್ಜೆ ಭೂಮಿಗಾಗಿ ಯಾಚಿಸಿದ. ಬಲಿಯು ತಾನೇ ಮೂಜಗದ ಒಡೆಯನೆಂದು ಅಹಂಕಾರದಿಂದ ನಕ್ಕು , ಅವನ ಗುರುಗಳ ಎಚ್ಚರಿಕೆಯ ಮಾತನ್ನು ತಿರಸ್ಕರಿಸಿ, ಅವನಿಗೆ ದಾನ ಮಾಡಲು ಒಪ್ಪಿಕೊಂಡ. ವಾಮನ ತ್ರಿವಿಕ್ರಮನಾಗಿ ಬೆಳೆದು, ತನ್ನ ಮೊದಲೆರಡು ಹೆಜ್ಜೆಯಿಂದ ಭೂಮಿ, ಆಕಾಶವನ್ನು ಅಳೆದು ಮೂರನೆಯ ಹೆಜ್ಜೆ ಎಲ್ಲಿಡಲಿ ಎಂದಾಗ, ಬಲಿಯು ಶರಣಾಗಿ ತನ್ನ ತಲೆಯ ಮೇಲಿಡಲು ಪ್ರಾರ್ಥಿಸಿದ. ಬಲಿಯ ತ್ಯಾಗವನ್ನು ಮೆಚ್ಚಿ ವಿಷ್ಣುವು ಅವನಿಗೆ ಸ್ವರ್ಗಲೋಕಕ್ಕೆಣೆಯಾದ , ಈತಿಬಾದೆಗಳಿಲ್ಲದ, ಸುಖಸಂಪತ್ತಿನಿಂದ ಕೂಡಿದ, ತನ್ನ ಸಾನ್ನಿಧ್ಯಸಮೇತ, ಸುದರ್ಶನಚಕ್ರದ ರಕ್ಷಣೆಯೊಂದಿಗೆ ಬಲಿಯ ಬಂಧುಮಿತ್ರರೊಂದಿಗೆ ಪಾತಾಳಲೋಕದ ಅಧಿಪತ್ಯವನ್ನು ಕೊಟ್ಟನು. ಬಲಿಚಕ್ರವರ್ತಿಗೆ ಮುಂದೆ ಬರುವ ಸಾವರ್ಣಿಕ ಮನ್ವನ್ತತರದಲ್ಲಿ ಇಂದ್ರಪದವಿಯ ವರವನ್ನೂಅನುಗ್ರಹಿಸಿದ. ಇನ್ನೊಂದು ಪುರಾಣದ ಕಥೆ- ಶ್ರಾವಣ ಹುಣ್ಣಿಮೆಯ ರಕ್ಷಾಬಂಧನದ ಪ್ರಕರಣ. ಮಹಾಲಕ್ಶ್ಮಿಯು , ವಿಷ್ಣುವಿಗಾಗಿ ಬಲಿಯ ಸಹೋದರಿಯೆಂದು ಬಂದು ಅವನ ಕೈಗೆ ರಕ್ಷಾಬಂಧನದ ಕುರುಹಾಗಿ ಪವಿತ್ರ ದಾರವನ್ನು (ರಾಖಿ) ಕಟ್ಟಲು, ಬಲಿಯು ಅವಳಿಗೆ ವರವನ್ನಿತ್ತನು. ಬಲಿಚಕ್ರವರ್ತಿಯ ಸೋದರಿಯಾಗಿ ಬಂದ ಮಹಾಲಕ್ಷ್ಮಿಯು, ತನ್ನ ಪತಿಯಾದ ವಿಷ್ಣುವು ಪ್ರತಿವರ್ಷ ನಾಲಕ್ಕು ತಿಂಗಳು ಬಲಿಯ ಲೋಕದಲ್ಲಿರಲಿ, ಉಳಿದ ಎಂಟು ತಿಂಗಳು ವೈಕುಂಠದಲ್ಲಿರಲಿ ಎಂದು ವರವಾಗಿ ಕೇಳಿದಳು. ಈ ನಾಲಕ್ಕು ತಿಂಗಳು- ಆಷಾಡ ಶುದ್ಧ ದೇವಶಯನಿ ಏಕಾದಶಿಯಿಂದ ಕಾರ್ತಿಕಶುದ್ಧ ಪ್ರಬೋಧಿನಿ ಏಕಾದಶಿವರೆಗೆ ಮಹಾವಿಷ್ಣುವು ಯೋಗನಿದ್ರೆಯಲ್ಲಿ ಶೇಷಶಾಯಿಯಾಗಿರುತ್ತಾನೆ. ಈ ನಾಲಕ್ಕು ತಿಂಗಳು ಚಾತುರ್ಮಾಸ್ಯವೆಂದು ಭಕ್ತರು ವಿಶೇಷ ಭಗವತ್ಸ್ಮರಣೆ, ಉಪವಾಸ, ಸ್ತೋತ್ರಪಠಣ, ಅನ್ನಾಹಾರಗಳಲ್ಲಿ ಶಿಸ್ತು ಇತ್ಯಾದಿ ನಿವೃತ್ತಿಮಾರ್ಗವನ್ನು ಪಾಲಿಸುತ್ತಾರೆ. ಈ ನಾಲಕ್ಕು ತಿಂಗಳು ಹೊರಪ್ರಪಂಚದ ಮಳೆಗಾಲವಾಗಿರುತ್ತದೆ ಎಂಬುದನ್ನು ಗಮನಿಸಬೇಕು.

ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಇಡೀ ಬ್ರಹ್ಮಾಂಡದ ಸೃಷ್ಟಿ, ಸ್ಥಿತಿ ಮತ್ತು ಲಯ(ಸಂಹಾರ) ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸ್ಥಿತಿಕಾರನಾಗಿರುವ ಮಹಾವಿಷ್ಣುವು ಯೋಗನಿದ್ರೆಯಲ್ಲಿರುವ ನಾಲಕ್ಕು ತಿಂಗಳು, ಅವನ ಆಜ್ಞೆ ಮತ್ತು ಶಕ್ತಿಯನ್ನು ಹೊಂದಿ, ಶಿವ ಮತ್ತು ಇತರ ದೇವತೆಗಳು ಜಗತ್ಪಾಲನೆಯ ಕಾರ್ಯವನ್ನು ನಿರ್ವಹಿಸುತ್ತಾರೆ ಎಂಬುದಾಗಿ ಪುರಾಣಗಳು ತಿಳಿಸುತ್ತವೆ. ಯೋಗನಿದ್ರಾ ಎಂಬ ಪದಕ್ಕೆ ಅಜಾಢ್ಯನಿದ್ರಾ, ತುರೀಯ ಎಂಬ ಪದಗಳನ್ನು ಪರ್ಯಾಯಪದಗಳಂತೆ ಆರ್ಷಸಾಹಿತ್ಯದಲ್ಲಿ ಉಪಯೋಗಿಸಿದ್ದಾರೆ. ಕೆಲವೆಡೆ ಬಹಳ ನಿಕಟವಾದ ಆಂತರಿಕ ಸ್ಥಿತಿಗಳ ಅರ್ಥದಲ್ಲಿ ಬಳಸಲ್ಪಿಟ್ಟಿದೆ. ಈ ಪದಗಳು ಕೇವಲ ದೇಹ, ಮನಸ್ಸಿನ ವಿಶ್ರಾಂತಿಯ ಅರ್ಥದಲ್ಲಿ ಉಪಯೋಗಿಸಿಲ್ಲ. ಈ ಯೋಗನಿದ್ರೆಯು ಪ್ರಾಕೃತರ ನಿದ್ದೆಯಂತಲ್ಲ. ಯೋಗನಿದ್ರೆಯಲ್ಲಿರುವ ಭಗವಂತನು ಅತಿಶಯವಾದ ಸೌಂದರ್ಯ ಲಾವಣ್ಯದಿಂದ ಕಂಗೊಳಿಸುತ್ತಾನೆ.

ನಿದ್ರೆಯಾಭಿಮಾನಿ ದೇವತೆಗಳು ಅವನಿಗೆ ವಶವೇ ಹೊರತು ಅವನು ಅವರಿಗೆ ವಶನಲ್ಲ. ಪುರಾಣದಕಥೆಯ ಪ್ರಕಾರ ಈ ವಿಶಿಷ್ಟನಿದ್ರೆಯೂ ಯೋಗನಿದ್ರಾದೇವಿಗೆ ಕೊಟ್ಟ ವರವಂತೆ. ಭಗವಂತನು ಯೋಗನಿದ್ರೆಯನ್ನೇ ಏಕೆ ಅಲಂಕರಿಸಿದ್ದಾನೆ ಎಂಬ ಪ್ರಶ್ನೆ ಮೂಡುವುದು ಸಹಜ. . ಚೇತನನಿಗೆ ನಾಲಕ್ಕು ಅವಸ್ಥೆಗಳಿವೆ. ಸಾಮಾನ್ಯರು ಕೇವಲ ಮೂರು ಸ್ಥಿತಿಗಳನ್ನು ಅನುಭವಿಸುತ್ತಾರೆ. ಋಷಿ, ಮುನಿಗಳು, ಜ್ಞಾನಿಗಳು ನಾಲಕ್ಕೂ ಸ್ಥಿತಿಗಳನ್ನು ಅನುಭವಿಸುತ್ತಾರೆಂದು ಮಾಂಡೂಕ್ಯ ಉಪನಿಷತ್ತು ತಿಳಿಸುತ್ತದೆ. ಈ ಸ್ಥಿತಿಗಳು-ಜಾಗ್ರತ್ತು, ಸ್ವಪ್ನ,ಸುಷುಪ್ತಿ (ಗಾಢ ನಿದ್ರೆ) ಮತ್ತು ತುರೀಯ. ಜಾಗ್ರತ್ತಿನಲ್ಲಿ , ಮನುಜ ತನ್ನ ಇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಯ ಮೂಲಕ ಎಚ್ಚರದಿಂದ ಪ್ರಪಂಚದ ಸಂಬ೦ಧವನ್ನಿಟ್ಟುಕೊಂಡಿರುತ್ತಾನೆ. ಸ್ವಪ್ನಾವಸ್ಥೆಯಲ್ಲಿ ಜೀವಕ್ಕೆ ಹೊರಪ್ರಪಂಚದ ಅರಿವೇ ಇಲ್ಲದೆ ಕಾಲ್ಪನಿಕವಾದ ಚಿತ್ರ, ದೃಶ್ಯ,ಸಂಭಾಷಣೆ, ಪರಿಣಾಮ , ಆಸೆಗಳ ಅನುಭವಗಳು ಉಂಟಾಗುತ್ತದೆ. ಸುಷುಪ್ತಿಯಲ್ಲಿ ಯಾವುದೇ ಒಳ, ಹೊರ ಪ್ರಪಂಚದ ಅನುಭವವಿಲ್ಲದೆ ವಿಶ್ರಾಂತಿಯ ಆದರೆ ಅಂಧಕಾರದಿಂದ ಕೂಡಿದ ಸ್ಥಿತಿಯಿರುತ್ತದೆ. ಅವಿದ್ಯೆಯಿಂದ ಜೀವನು ತನ್ನನ್ನು ಶರೀರ, ಇಂದ್ರಿಯ ಮತ್ತು ಮನಸ್ಸೇ ತಾನೆಂದು ತಪ್ಪಾಗಿ ಗ್ರಹಿಸುತ್ತಾನೆ. ಈ ಮೂರೂ ಸ್ಥಿತಿಗಳು ಮಿಥ್ಯೆ ಮತ್ತು ಅಶಾಶ್ವತ ಎಂಬುದು ನಾಲ್ಕೂ ಸ್ಥಿತಿಗಳನ್ನು ಅನುಭವಿಸಿದ ಮುನಿಜನರ ಮಾತು. ನಾಲ್ಕನೆಯ ತುರೀಯಾ ಸ್ಥಿತಿಯೇ ಜೀವಿಯ ಸಹಜಾವಸ್ಥಾ ಎಂಬುದು ಜ್ಞಾನಿಗಳ ನಿಷ್ಕರ್ಷೆ. ಭಗವಂತನ ಯೋಗನಿದ್ರೆಯಲ್ಲಿ ಅಜ್ಞಾನ, ಮೋಹ, ಜಾಡ್ಯ ಮುಂತಾದ ವಿಕಾರಗಳಿರುವುದಿಲ್ಲ. ಈ ನಿದ್ರೆಯಲ್ಲಿ ಸಾಮಾನ್ಯ ಜೀವಿಗಳ ನಿದ್ರೆಯಲ್ಲಾಗುವ ದೇಹದ ಕಾಂತಿಯು ಕುಂದುವುದಾಗಲಿ, ಜೋತುಬೀಳುವುದಾಗಲಿ ಇರುವುದಿಲ್ಲ. ಜಾಗ್ರದವಸ್ಥೆಯಂತೆ ಭಕ್ತರನ್ನು ಪೊರೆಯುವದರಲ್ಲಿ ಎಚ್ಚರವಿರುತ್ತದೆ. ಸ್ವಪ್ನಾವಸ್ಥೆಯಂತೆ ಇಲ್ಲೂ ಅತಿಂದ್ರೀಯ ದರ್ಶನ-ಶ್ರವಣಗಳಾಗಬಹುದು ಮತ್ತು ಸುಷುಪ್ತಿಯ ಹಾಗೆ ಕಣ್ಮುಚ್ಚಿರುತ್ತದೆ. ಎಚ್ಚರದಲ್ಲಿ ಕಣ್ಣು ಬಿಟ್ಟಿದ್ದರೆ ತುರೀಯದಲ್ಲಿ ಕಣ್ಣು ಮುಚ್ಚಿರುತ್ತದೆ. ಸ್ವಪ್ನ ಮತ್ತು ಸುಷುಪ್ತಿಯಲ್ಲಿ ಶರೀರವು ಜಾಢ್ಯತೆಯಿಂದ ಕೂಡಿದ್ದರೆ, ತುರೀಯದಲ್ಲಿ ಕಾಂತಿಯುಕ್ತಿಯಿಂದ ಕೂಡಿರುತ್ತದೆ. ತುರೀಯಸ್ಥಿತಿ ದ್ವಂದಾತೀತ , ಸಚ್ಚಿದಾನಂದ ಸ್ವರೂಪ. ತಾನೇ ತಾನಾಗಿ ಬೆಳಗುವ ಅಂತಿಮಸತ್ಯದರ್ಶನವಾಗುತ್ತದೆ. ಈ ಸ್ಥಿತಿಯನ್ನು ಅನುಭವಿಸಿದಾತನಿಗೆ ಇದಕ್ಕಿಂತ ಮಿಗಿಲಾದ ಭಾಗ್ಯ ಅಥವಾ ಲಾಭ ಬೇಕಾಗಿರುವುದಿಲ್ಲ ಮತ್ತು ಆತ ಆ ಸ್ಥಿತಿಯನ್ನು ತನ್ನಿಚ್ಛೆಗೆ ಬಂದಾಗ ಏರಬಲ್ಲ ಎಂಬುದೆಲ್ಲ ಅನುಭವಿಗಳ ಮಾತು. ಶ್ರೀರಂಗಸದ್ಗುರುಗಳ ವಾಣೀ ಸ್ಮರಣೀಯ. ";ಜೀವವು ದೇವನಲ್ಲಿ ಹೋಗಿ ಸೇರಿ, ಅವನು ಒಪ್ಪಿಕೊಳ್ಳುವಂತೆ ಅಪ್ಪಿ, ಅವನ ಯೋಗನಿದ್ರೆಯಲ್ಲಿ, ಮನೋಹರವಾದ ಮೂರ್ತಿಯಲ್ಲಿ ಒಂದಾಗಿ ಹೋಗುವ ವಿಷಯಯವುಂಟಪ್ಪ, ಇದೇ ಅನುಗ್ರಹದ ಅಂತಿಮ ಫಲ" ಅಂತಹ ಯೋಗನಿದ್ರೆಯಿಂದ ಹೊರಬಂದು ಅರಳಿದ ಭಗವಂತನ ಅನುಗ್ರಹದ ದೃಷ್ಟಿಪ್ರಸಾದ ನಮ್ಮೆಲ್ಲರನ್ನೂ ಸನ್ಮಾರ್ಗದಲ್ಲಿ ನಡೆಯಲು ಪ್ರೇರಿಸಲಿ ಎಂದು ಪ್ರಾರ್ಥಿಸೋಣ.

ಸೂಚನೆ : 14/12/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.