ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೪೩ಈ ಜಗತ್ತು ಯಾರಿಂದ ಗೆಲ್ಲಲ್ಪಟ್ಟಿದೆ?
ಸತ್ಯದಲ್ಲಿ ನೆಲೆನಿಂತ ಸಹನಶೀಲ ಪುರುಷನಿಂದ.
ಈ ಪ್ರಶ್ನೆಯು ತುಂಬಾ ಸ್ವಾರಸ್ಯದಿಂದ ಕೂಡಿದೆ. ಏಕೆಂದರೆ ಒಂದು ಜಗತ್ತನ್ನು ಗೆಲ್ಲುವುದು ಎಂದರೇನು? ಮತ್ತು ಅದು ಸಹನಶೀಲ ಪುರುಷನಿಂದ ಗೆಲ್ಲುವುದು ಎಂದರೇನು? ಎಂಬ ಈ ಎರಡು ಪ್ರಧಾನವಾದ ವಿಷಯ ಇದಕ್ಕೆ ಕಾರಣ. ಹಾಗಾಗಿ ಇಲ್ಲಿ ನಾವು ಚಿಂತಿಸಬೇಕಾದ ವಿಷಯ ಇಷ್ಟು - ಒಬ್ಬ ಸತ್ಯದಲ್ಲಿ ನೆಲೆ ನಿಂತ ಪುರುಷ ಎಂದರೆ ಅವನಲ್ಲಿರುವ ಗುಣ ಸ್ವಭಾವಗಳೇನು? ಅವು ಅವನ ನಡವಳಿಕೆಯಲ್ಲಿ ಹೇಗೆ ಪ್ರತಿಫಲಿಸುತ್ತವೆ? ಸತ್ಯದಲ್ಲಿ ನೆಲೆಯಲ್ಲುವಿಕೆಯಿಂದ ಈ ಜಗತ್ತಿಗೆ ಆಗುವ ಪರಿಣಾಮಗಳೇನು? ಇದರಿಂದ ಜಗತ್ತಿಗೆ ಹೇಗೆ ಅನುಕೂಲವಾಗುತ್ತದೆ? ಜಗತ್ತು ಇದರಿಂದ ಹೇಗೆ ನಿಲ್ಲಲು ಸಾಧ್ಯ? ಎಂಬಿತ್ಯಾದಿ ಪೂರಕ ಸಂಗತಿಗಳನ್ನು ಇದರ ಜೊತೆಗೆ ಚಿಂತಿಸಬೇಕಾಗಿದೆ.
ಸತ್ಯ ಎಂದರೆ ಯಾವುದು ಸರ್ವವಿಧದಲ್ಲೂ, ಸರ್ವಕಾಲದಲ್ಲೂ ಏಕರೂಪವಾಗಿರುತ್ತದೆಯೋ, ವಿಕಾರವನ್ನು ಹೊಂದುವುದೇ ಇಲವೋ ಅಂತಹದ್ದು. ಅಂದರೆ ಪರಬ್ರಹ್ಮ ಮಾತ್ರ ಸತ್ಯ. ಇದು ಎಂದೂ, ಯಾವುದೇ ಕಾರಣಕ್ಕೂ ವಿಕಾರವನ್ನು ಹೊಂದುವುದಿಲ್ಲ. ಆದ್ದರಿಂದ ಇಂತಹ ಸತ್ಯದಲ್ಲಿ ನೆಲೆನಿಲ್ಲುವವನು ಅವನು ಸತ್ಪುರುಷನೇ ಆಗಿರಬೇಕು. ಅಂದರೆ ಅವನು ಸಹನಶೀಲನೇ ಆಗಿರುತ್ತಾನೆ. ಅವನಲ್ಲಿ ಯಾವುದೇ ವಿಧವಾದ ಮಾನಸಿಕ ಕ್ಷೋಭೆಯು ಇರುವುದಿಲ್ಲ ಎಂದರ್ಥ. ಹಾಗಾಗಿ ಅವನು ಎಲ್ಲಿರುವನೋ, ಆ ಸುತ್ತಮುತ್ತಲಿನ ಪರಿಸರವೆಲ್ಲವೂ ಶಾಂತಿ, ನೆಮ್ಮದಿ, ಅಹಿಂಸೆ ಮೊದಲಾದ ಗುಣಗಳಿಂದ ಕೂಡಿರುತ್ತದೆ. ಇವು ತಾನೆ ಸುಖದ ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವ ಸಹಕಾರಿ ಸಾಮಗ್ರಿಗಳು!. ಇವುಗಳು ಮಾತ್ರ ಆ ವ್ಯಕ್ತಿಯ ಅಥವಾ ಆ ಸಮಾಜದ ಶಾಂತಿಯ ತಾಣಕ್ಕೆ ಕಾರಣೀಭೂತವಾಗುತ್ತವೆ!. ಹಾಗಾಗಿ ಒಬ್ಬ ಸತ್ಪುರುಷನು ಅಥವಾ ಜ್ಞಾನಿಯು ಎಲ್ಲಿರುವನೋ ಅಲ್ಲಿ ಸಹಜವಾಗಿಯೇ ಮಳೆ-ಬೆಳೆಗಳು ಎಲ್ಲವೂ ಸಮೃದ್ಧವಾಗಿ ಆಗುತ್ತವೆ ಎಂಬುದಾಗಿ ನಾವು ಪುರಾಣ, ಇತಿಹಾಸ ಕಥೆಗಳಲ್ಲಿ ನಾವು ಕೇಳುತ್ತೇವೆ. ವಿಭಾಂಡಕ ಮುನಿಯ ಮಗನಾದ ಋಷ್ಯಶೃಂಗನು ಅಂತಹ ಅತ್ಯಂತ ಪ್ರಭಾವಿಯಾದ, ಸತ್ಯನಿಷ್ಠನಾದ ಮಹರ್ಷಿಯಾಗಿದ್ದನು. ಅವನು ಎಲ್ಲೆಲ್ಲಿ ಹೋಗುತ್ತಾನೋ ಅಲ್ಲೆಲ್ಲವೂ ಅತಿವೃಷ್ಟಿ ಅನಾವೃಷ್ಟಿಗಳು ದೂರಸರಿದು ಸುವೃಷ್ಟಿಯಾಗಿ ಆ ದೇಶ ಸುಭಿಕ್ಷೆಯಿಂದ ಕೊಡಿರುತ್ತಿತ್ತು ಎಂಬುದಾಗಿ ರಾಮಾಯಣದಲ್ಲಿ ಆ ಕಥೆಯನ್ನು ನಾವು ನೋಡುತ್ತೇವೆ. ಒಬ್ಬ ರಾಜನಾದವನ ಕರ್ತವ್ಯವೆಂದರೆ ಪ್ರಜೆಗಳು ಸತ್ಯದಲ್ಲಿ ಅಂದರೆ ಭಗವಂತನ ವಿಷಯದಲ್ಲಿ ಶ್ರದ್ಧೆ ಹೊಂದಿದವರಾಗಿರಬೇಕು. ಆಸ್ತಿಕ್ಯಬುದ್ಧಿಯುಳ್ಳವರಾಗಿರಬೇಕು. ಅದಕ್ಕೆ ರಾಜನಾದನು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುತ್ತಿದ್ದನು. ಇದಕ್ಕೆ ವಿರೋಧಿಯಾದವರನ್ನು ಹತ್ತಿಕ್ಕುತ್ತಿದ್ದನು. ಸತ್ಯನಿಷ್ಠರಾದ ಮಹಾಪುರುಷರು ತಮಗೆ ಬಂದ ಕಷ್ಟವನ್ನು ಸಹಿಸಿಕೊಂಡು ಜಗತ್ತಿನ ಒಳಿತಿಗೆ ಚಿಂತಿಸುವವರಾಗಿರುತ್ತಿದ್ದರು. ಇಂತಹ ಸತ್ಯನಿಷ್ಠರ ಅನೇಕ ಚರಿತ್ರಗಳನ್ನು ನಾವು ಇತಿಹಾಸ ಪುಟಗಳಲ್ಲಿ ಕಾಣಬಹುದು. ಇಂಥವರು ಇದ್ದಾಗ ತಾನೇ ಮಳೆ ಬೆಳೆಗಳೆಲ್ಲವೂ ಚೆನ್ನಾಗಿ ಆಗಿ ಜೀವಿಗಳಿಗೆ ಬೇಕಾದ ಆಹಾರವು ಸಕಾಲದಲ್ಲಿ ಸಾಕಷ್ಟು ದೊರೆತು, ಭೂತಕೋಟಿಯು ಸಮೃದ್ಧವಾದ ಜೀವನವನ್ನು ಮಾಡಲು ಅನುಕೂಲವಾಗುತ್ತದೆ. ಜಗತ್ತಿನ ಸಮೃದ್ಧಿಯ ಕ್ಷಣ ಅದೇ ತಾನೇ!. ಜಗತ್ತಿನ ಸಮೃದ್ಧಿಯ ಇರುವಿಕೆ ಅಂದರೆ ಇದು. ಆಗ ಜಗತ್ತು ಗೆದ್ದಂತೆ ಎಂಬುದಾಗಿ ನಾವು ಭಾವಿಸಬಹುದು.
ಸೂಚನೆ : 7/12/2025 ರಂದು ಈ ಲೇಖನವು ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.