ಲೇಖಕರು : ಡಾ. ಹಚ್.ಆರ್. ಮೀರಾ(ಪ್ರತಿಕ್ರಿಯಿಸಿರಿ lekhana@ayvm.in)
ನೀನು ಕಾಡಿಗೆ ಹೋಗು - ಎಂಬ ಮಾತನ್ನು ರಾಮನಿಗೆ ಹೇಳಿದ್ದು ಕೈಕೇಯಿ, ದಶರಥನಲ್ಲ! ರಾಮಾಯಣದ ಒಂದು ದೊಡ್ಡ ದಯನೀಯ ಪರಿಸ್ಥಿತಿಯಿದು. ರಾಮನೋ ಆಗ ಯುವರಾಜನಾಗಲು ಅನುವಾಗುತ್ತಿದ್ದ. ಏಕಾಏಕಿ ಬಂದಿತು, ಅರಣ್ಯವಾಸದ ಆದೇಶ! ಪಟ್ಟೆಪೀತಾಂಬರ ಧರಿಸುವವನಿಗೆ ನಾರುಮಡಿಯ ವಸ್ತ್ರಗಳು. ಹೀಗಿದ್ದಾಗಲೂ ಸ್ವಲ್ಪವೂ ವಿಚಲಿತನಾಗಲಿಲ್ಲ ರಾಮ.
ಆದರೆ ಅಂತಃಪುರದಲ್ಲೇ ಹಾಹಾಕಾರವೆದ್ದಿತು! ಹೆತ್ತ ತಾಯಿಗಿತ್ತ ಗೌರವವನ್ನೇ ಬೇರೆಲ್ಲರಿಗೂ ಕೊಡುತ್ತಿದ್ದವನಿಗೆ ಹೀಗಾಯಿತಲ್ಲ ! - ಎಂದು ರಾಜಸ್ತ್ರೀಯರು ಮರುಗಿದರು; ದಶರಥನನ್ನೇ ಹಳಿದರು. ಮೊದಲು ಕೌಸಲ್ಯೆಯನ್ನು ಕಂಡು ವಿಷಯ ತಿಳಿಸಲು ಹೋದ, ರಾಮ. ಅವಳೋ ಅವನ ಶ್ರೇಯಸ್ಸಿಗಾಗಿ ಹೋಮ-ಪೂಜೆಗಳಲ್ಲಿ ತೊಡಗಿದ್ದಳು. ಅಭಿಷೇಕವು ನಿಂತಿದೆಯಷ್ಟೇ ಅಲ್ಲ; ದಂಡಕಾರಣ್ಯಕ್ಕೆ ತಾನು ಹೋಗಬೇಕಾಗಿ ಬಂದಿದೆ - ಎಂಬುದಾಗಿ ಆಜ್ಞೆಯಾಗಿದೆ - ಎಂಬುದನ್ನು ಆಕೆಗೆ ತಿಳಿಸಿದ ರಾಮ. ಅದನ್ನು ಕೇಳಿ ತತ್ತರಿಸಿಹೋದಳು, ಕುಸಿದುಬಿದ್ದಳವಳು. ತನ್ನ ಭಾಗ್ಯವನ್ನು ಹಳಿದುಕೊಂಡು ರೋದಿಸಿದಳು. ದಶರಥನಿಂದ ತಾನನುಭವಿಸಿದ ಅಸಡ್ಡೆಯನ್ನು ನೆನೆದು ಅತ್ತಳು. ತಾನು ಕೈಕೇಯಿಯ ದಾಸಿಯೆಂಬಂತಾಗುತ್ತದೆ - ಎಂದು ಬೇಸರಿಸಿದಳು. ಮಗನ ಮುಖವನ್ನು ನೋಡಿಕೊಂಡಿದ್ದು, ಕೈಕೇಯಿಯ ಸಿಡುಕನ್ನೂ ಸವತಿಯರ ನಿಂದೆಯನ್ನೂ ಸಹಿಸಿಕೊಳ್ಳಬಹುದಾಗಿತ್ತೇನೋ. ಆದರಿದೋ ಈಗ ಅವನೂ ವನವಾಸಕ್ಕೆ ತೆರಳಲಿದ್ದಾನೆ! ತಾನೇಕೆ ಸತ್ತುಹೋಗುವುದಿಲ್ಲವೆಂದು ಗೋಳಿಟ್ಟಳು!
ಅದನ್ನು ಕಂಡ ಲಕ್ಷ್ಮಣನು ತಂದೆಯ ತೀರ್ಮಾನವನ್ನು ಧಿಕ್ಕರಿಸಿದ. ರಾಜ್ಯಾಧಿಕಾರವನ್ನು ಬಲದಿಂದ ನಿನ್ನ ಕೈಗೆ ತೆಗೆದುಕೊಂಡುಬಿಡು - ಎಂದು ಆಕ್ರೋಶದಿಂದ ಹೇಳಿದ, ರಾಮನಿಗೆ! ವಿರೋಧಿಸುವವರನ್ನು ಅಗತ್ಯ ಬಂದಲ್ಲಿ ತಾನು ಕೊಲ್ಲುವುದಾಗಿಯೂ ಹೇಳಿದ. ಅಣ್ಣನ ಸಾಮರ್ಥ್ಯ-ಗುಣ-ಯೋಗ್ಯತೆಗಳಲ್ಲಿ ಅಂತಹ ನಂಬಿಕೆ ಅವನಿಗೆ! ಕೌಸಲ್ಯೆಯೂ ರಾಮನಿಗೆ ಕಾಡಿಗೆ ಹೋಗದಂತೆ ಕೇಳಿಕೊಂಡಳು. ತನ್ನನ್ನಗಲಿದರೆ ತನಗೆ ಪ್ರಾಣಹೋಗುವುದೆಂದೂ ಹೇಳಿದಳು.
ಪರಿಸ್ಥಿತಿ ಹೀಗೆಲ್ಲ ಇದ್ದರೂ, ರಾಮನ ನಿಲುವೇ ಬೇರೆಯಾಗಿತ್ತು. ಎಷ್ಟಾದರೂ ಧರ್ಮವನ್ನರಿತವನು ಮತ್ತು ಅನುಪಮವಾದ ಸ್ಪಷ್ಟತೆ ಇದ್ದವನು, ರಾಮ. ತಾನು ಮಾಡಹೊರಟಿರುವ ಪಿತೃವಾಕ್ಯಪರಿಪಾಲನವು ನಿಶ್ಚಯವಾಗಿಯೂ ಧರ್ಮಸಂಮತವಾದದ್ದೇ - ಎಂಬುದನ್ನು ತಾಯಿಗೂ ಲಕ್ಷ್ಮಣನಿಗೂ ತಿಳಿಯಹೇಳಿದ. ಜನರೆಷ್ಟೇ ಬೆಂಕಿಯ ಕೊಳ್ಳಿಗಳಿಂದ ದೂರಸರಿಸಲು ಯತ್ನಿಸಿದರೂ ಅದು ತನ್ನ ಹಾದಿಯನ್ನು ಬಿಡುವುದಿಲ್ಲ! ಅದೇ ರೀತಿಯಲ್ಲಿಯೇ, ರಾಮನೂ ತನ್ನ ನಿರ್ಣಯವನ್ನು ಬದಲಿಸಲಿಲ್ಲ - ಎಂದು ವಾಲ್ಮೀಕಿಗಳು ವರ್ಣಿಸುತ್ತಾರೆ!
ಮನೋವೈಜ್ಞಾನಿಕವಾಗಿ ಇಲ್ಲಿಯ ಸನ್ನಿವೇಶವನ್ನು ವಿಶ್ಲೇಷಿಸೋಣ. ಮೊದಲಿಗೆ ಅಂತಃಪುರದ ರಾಜಸ್ತ್ರೀಯರ ತೀವ್ರ ದುಃಖ. ಅವರಿಗೆ ರಾಮನ ವಿಷಯವಾಗಿ ಇದ್ದ ಪ್ರೀತಿಯೇ ಅದರ ಕಾರಣ.
ಇನ್ನು ಕೌಸಲ್ಯೆ. ಆಕೆಯ ದುಃಖವಂತೂ ಸಹಜವೇ. ತನ್ನ ಮಗ ಯುವರಾಜನಾಗುವ ಸಂತೋಷ ಅವಳಿಗೆ ಈವರೆಗಿತ್ತು; ಜೊತೆಗೆ ತನಗೂ ಅದರಿಂದಾಗಿ ಹೆಚ್ಚು ಗೌರವದ ನಿರೀಕ್ಷೆಯೂ ಇತ್ತು; ಹಾಗೆಂದು ಅವಳೇ ಹೇಳಿಕೊಂಡಿದ್ದಾಳೆ. ಈಗಾದ ಆಘಾತದಿಂದಾಗಿ ಅವಳೊಳಗಿದ್ದ ನೋವುಗಳು ಹೊರಬಂದವು: ಪಟ್ಟಮಹಿಷಿಯೇ ಆಗಿದ್ದಿರಬಹುದು, ಕೌಸಲ್ಯೆ. ಆದರೆ ಸವತಿಯರಿಂದಾಗಿ, ಮುಖ್ಯವಾಗಿ ಕೈಕೇಯಿಯಿಂದಾಗಿ, ಗಂಡನ ಸ್ನೇಹಾದರಗಳನ್ನು ಕಳೆದುಕೊಂಡಿದ್ದ ಅವಳಿಗೆ, ರಾಮನ ಕಾರಣದಿಂದಾಗಿ ಅವು ಸಿಕ್ಕಂತಾಗಿತ್ತು. ಈಗಂತೂ ಕೈಗೆ ಬಂದದ್ದು ಬಾಯಿಗೆ ಬರದೇ ಹೋದಂತಾಯಿತು. ರಾಮನು ದೂರವಾಗುವನೆಂಬ ಮುಖ್ಯವಾದ ದುಃಖವಿದ್ದರೂ, ಈ ನೋವುಗಳೂ ಜೊತೆಗೇ ಆಕೆಗೆ ಇದ್ದವು.
ಲಕ್ಷ್ಮಣನಿಗೆ ದುಃಖವಲ್ಲ, ರೋಷವೇ ಉಕ್ಕಿತ್ತು. ಮೊದಲೇ ಕ್ಷತ್ತ್ರಿಯ, ಜೊತೆಗೆ ಎಳೆಯ ರಕ್ತ; ತಂದೆಯ ಬಗ್ಗೆಯೇ ಅವನಿಗೆ ಕೋಪ. ಕೈಕೇಯಿಯ ಬಗ್ಗೆಯಂತೂ ಉರಿಗೋಪ; ಭರತನ ಬಗ್ಗೆಯೂ ಸಂದೇಹವೇ! ಕೋಪದ ಮಾತುಗಳನ್ನು ಸ್ವಲ್ಪ ದುಡುಕಿನಿಂದಲೇ ಆಡಿದ ಲಕ್ಷ್ಮಣ.
ಇವಕ್ಕೆಲ್ಲ ವಿರುದ್ಧವಾದದ್ದು ರಾಮನ ಪ್ರತಿಕ್ರಿಯೆ: ಯುವರಾಜನಾಗದಿರುವುದರ ಬಗ್ಗೆ ಅವನಿಗೆ ದುಃಖವಾಗುವುದಿರಲಿ, ಮನಸ್ಸು ಕೂಡ ಒಂದಿಷ್ಟೂ ಕಲಕಲಿಲ್ಲ! ತಂದೆ ಕೊಟ್ಟ ಮಾತನ್ನು ಉಳಿಸುವುದೇ ತನ್ನ ಧರ್ಮ - ಎಂಬ ನಿಶ್ಚಿತಮತಿ ಅವನಿಗಿತ್ತು. ತಾಯಿ, ಲಕ್ಷ್ಮಣ, ಸೀತೆ ಮುಂತಾದವರಿಗೆಲ್ಲ ಬಹಳವೇ ದುಃಖವಾಗುವುದು - ಎಂದು ತಿಳಿದೂ, ತನ್ನ ನಿಶ್ಚಯದಿಂದ ಕದಲಲಿಲ್ಲ, ರಾಮ. ರಾಮನಿಗೆ ಈ ಸ್ಪಷ್ಟತೆ ಇದ್ದದ್ದರಿಂದಲೇ ಕೌಸಲ್ಯೆಗೂ ತನ್ನ ದುಃಖವನ್ನು ಮೀರಲು ಸಾಧ್ಯವಾಯಿತು; ಲಕ್ಷ್ಮಣನು ದುಡುಕು-ಕ್ರೋಧಗಳಿಂದ ತಪ್ಪು ಹೆಜ್ಜೆ ಇಡುವುದು ತಪ್ಪಿತು.
ಶ್ರೀರಂಗಮಹಾಗುರುಗಳು ನಚಿಕೇತನ ಬಗ್ಗೆ ಹೇಳಿದ ಮಾತು ಇಲ್ಲಿ ರಾಮನಿಗೆ ಚೆನ್ನಾಗಿ ಅನ್ವಯವಾಗುತ್ತದೆ. "ಎಷ್ಟೇ ಉದ್ವೇಗ, ಆಕ್ರೋಶಗಳಿಂದ ಅವನತ್ತ ಹರಿಹಾಯ್ದರೂ ಶಾಂತಚಿತ್ತದಿಂದಲೇ ಅದನ್ನು ಸ್ವೀಕರಿಸಿ, ವಿಚಾರದೃಷ್ಟಿಯಿಂದಲೇ ಸತ್ಯದತ್ತ ಎದುರಾಳಿಯ ಮನ ಸೆಳೆದು, ಕೊನೆಗೆ ಅವನಲ್ಲಿಯೂ ವಿವೇಕವನ್ನು ಮೂಡಿಸುತ್ತಿದ್ದ ಅವನ ವಿಚಾರನೈಪುಣ್ಯ ಅಸಾಧಾರಣವಾದುದು!"
ಇಂತಹ ಸಮಚಿತ್ತತೆ ಸರ್ವರಿಗೂ ಅನುಕರಣಯೋಗ್ಯವಲ್ಲವೇ?
ಸೂಚನೆ: 4/12//2025 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ.