Monday, December 8, 2025

ವ್ಯಾಸ ವೀಕ್ಷಿತ 165 ಜರಾಸಂಧ-ಪ್ರತಾಪ, ಹಂಸ-ಡಿಂಭಕರ ವಿಚಿತ್ರ ಮರಣ! (Vyaasa Vikshita 165)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಯುಧಿಷ್ಠಿರನು ಮಾಡಬೇಕೆಂದಿರುವ ರಾಜಸೂಯ ಯಾಗಕ್ಕೆ ಯಾರು ಹಿತರು, ಯಾರಲ್ಲ? - ಎಂಬುದನ್ನು ಆತನಿಗೆ ತಿಳಿಸಿಕೊಡುತ್ತಾ ಶ್ರೀಕೃಷ್ಣನು ಹೇಳಿದ ಮಾತು: "ಜರಾಸಂಧನ ಭಯದಿಂದಾಗಿಯೇ ಮತ್ಸ್ಯದೇಶದ ರಾಜರು ದಕ್ಷಿಣ ದಿಕ್ಕಿನತ್ತ ಓಡಿಹೋಗಿದ್ದಾರೆ., ಪಂಚಾಲದೇಶದ ರಾಜರಂತೂ ಸ್ವರಾಜ್ಯವನ್ನು ತೊರೆದು ದಿಕ್ಕಾಪಾಲಾಗಿ ಓಡಿಹೋಗಿರುವರು.

ಇದೆಲ್ಲಾ ಆಗಿ ಕೆಲಕಾಲಾನಂತರ, ಕಂಸನು ಯಾದವರನ್ನೆಲ್ಲಾ ಕಂಗೆಡಿಸಿ ಜರಾಸಂಧನ ಇಬ್ಬರು ಪುತ್ರಿಯರನ್ನು ಮದುವೆಯಾದನು. ಒಬ್ಬಳ ಹೆಸರು ಅಸ್ತಿ, ಮತ್ತೊಬ್ಬಳು ಪ್ರಾಪ್ತಿ. ವ್ಯರ್ಥಮತಿಯಾದ ಆ ಕಂಸನು, ಈ ಜರಾಸಂಧನ ಬಲದ ಮೇರೆಗೇ ತನ್ನ ಜ್ಞಾತಿಗಳನ್ನೇ ಪರಾಭವಗೊಳಿಸಿ ಅವರೆಲ್ಲರಿಗಿಂತಲೂ ತಾನೇ ಹೆಚ್ಚೆಂದು ಕುಳಿತನು. ಇದುವೇ ಆತನ ಮಹಾಪಚಾರ.

ಭೋಜರಾಜವಂಶಕ್ಕೆ ಸೇರಿದ ವೃದ್ಧರನೇಕರನ್ನು ದುರಾತ್ಮನಾದ ಕಂಸನು ಬಹಳ ಪೀಡಿಸಿದ್ದ. ಎಂದೇ ಅವರು ಆತಂಕಗೊಂಡು, ತಮ್ಮ ಆತ್ಮೀಯ ಬಂಧುಗಳಿಗೆ ರಕ್ಷಣೆ ಬೇಕೆಂದು ನಮ್ಮಲ್ಲಿಗೆ ಬಂದು ಕೋರಿದರು. ಆಗಲೇ ಬಲರಾಮನೊಂದಿಗೆ ನಾನು ಹೋಗಿ ಜ್ಞಾತಿಕಾರ್ಯವನ್ನು ಮಾಡಿದುದು: ಕಂಸ ಮತ್ತು ಸುನಾಮ - ಇವರಿಬ್ಬರನ್ನು ನಾನೂ ಬಲರಾಮನೂ ಕೊಂದೆವು.

ಕಂಸಭಯವೇನೋ ಹೋಯಿತು. ಆದರೆ ಪ್ರತೀಕಾರ ಮಾಡಬೇಕೆಂದು ಜರಾಸಂಧನು ಸನ್ನದ್ಧನಾಗತೊಡಗಿದನು. ಆಗಲೇ ಆ ಹದಿನೆಂಟು ಮಂದಿ ರಾಜರೊಂದಿಗೆ ಮಂತ್ರಾಲೋಚನೆಯನ್ನು ನಾವು ಮಾಡಿದುದು: "ಶತ್ರುಘಾತಕವಾದ ಮಹಾಸ್ತ್ರಗಳಿಂದ ಯುದ್ಧಮಾಡಿದರೂ, ಮುನ್ನೂರು ವರ್ಷಗಳ ಸತತವಾಗಿ ಸೆಣಸಿದರೂ ಈ ಜರಾಸಂಧನ ಸೈನ್ಯವನ್ನು ನಾವು ನಾಶಮಾಡಲಾರೆವು".

ನಾವು ಹಾಗೆಂದುಕೊಳ್ಳಲು ಕಾರಣವೆಂದರೆ ಜರಾಸಂಧನಿಗೆ ಇಬ್ಬರು ಮಿತ್ರರಿದ್ದರು. ಹಂಸ ಎಂದೊಬ್ಬ, ಡಿಂಭಕ ಎಂದು ಮತ್ತೊಬ್ಬ. ಬಲದಲ್ಲಿ ಇಬ್ಬರೂ ದೇವತೆಗಳಿಗೆ ಸಮಾನರು. ಯಾವುದೇ ಶಸ್ತ್ರದಿಂದಲೂ ಸಾಯಿಸಲಾಗದವರು ಅವರಿಬ್ಬರೂ. ಜರಾಸಂಧನೂ ಸೇರಿದರೆಂದರೆ ಮೂರು ಲೋಕಗಳನ್ನೂ ಗೆಲ್ಲಬಲ್ಲವರೇ ಸರಿ. ಇದು ಕೇವಲ ನನ್ನ ಅಭಿಪ್ರಾಯವಾಗಿರಲಿಲ್ಲ, ಉಳಿದ ರಾಜರ ಅಭಿಪ್ರಾಯವೂ ಆಗಿತ್ತು.

ಈ ಸಂದರ್ಭದಲ್ಲಿ ಅವರಿಬ್ಬರ ಸಾವು ಹೇಗೆ ಇದ್ದಕ್ಕಿದ್ದಂತೆ ನಡೆದುಹೋಯಿತೆಂಬುದನ್ನು ಕೇಳು. ಹಂಸ ಎಂದೇ ಹೆಸರುಳ್ಳ ಮತ್ತೂ ಒಬ್ಬ ರಾಜನಿದ್ದ. ಹದಿನೆಂಟು ದಿನಗಳ ಕಾಲ ಅವನೊಡನೆ ಹೋರಾಡಿ ಬಲರಾಮನು ಆತನನ್ನು ಸಂಹರಿಸಿದ.

"ಹಂಸರಾಜನು ಸತ್ತ" ಎಂಬ ಈ ಸಮಾಚಾರವನ್ನು ಯಾರೋ ಹೇಳಿದರು, ಡಿಂಭಕನಿಗೆ. ಆ ಡಿಂಭಕನೋ, ಸತ್ತದ್ದು ತನ್ನ ಆಪ್ತನಾದ ಹಂಸನೆಂದೇ ಭಾವಿಸಿಕೊಂಡುಬಿಟ್ಟ! ಅದರಿಂದಾಗಿ ಆತನಿಗೆ ಅತೀವ ದುಃಖವಾಯಿತು. ಆ ದುಃಖಭರದಲ್ಲಿ ಆತ ಯಮುನೆಯಲ್ಲಿ ಬಿದ್ದು ಪ್ರಾಣ ಬಿಟ್ಟ, ಹಂಸನಿಲ್ಲದೆ ತಾನು ಬದುಕಿರಲಾರೆ - ಎಂಬ ಖೇದದಿಂದ.

ಡಿಂಭಕನು ಹಾಗೆ ತನಗಾಗಿ ಸತ್ತನೆಂಬುದನ್ನು ಕೇಳಿದ ಹಂಸನಿಗೂ ದುಃಖವು ಉಕ್ಕಿಬಂದಿತು.  ಆ ಖೇದದಲ್ಲಿ ತಾನೂ ಅದೇ ಯಮುನೆಯಲ್ಲೇ ಬಿದ್ದು ಪ್ರಾಣತೊರೆದ. ಹಂಸ-ಡಿಂಭಕರಿಬ್ಬರೂ ಸತ್ತರೆಂಬುದನ್ನು ಕೇಳಿದ ಜರಾಸಂಧನಿಗೂ ಪರಮಖೇದವಾಯಿತು. ನಿರುತ್ಸಾಹನಾಗಿ ತನ್ನ ರಾಜಧಾನಿಗೆ ಹಿಂದಿರುಗಿ ಬಂದ.

ಜರಾಸಂಧನು ಹೀಗೆ ಹಿಂದಿರುಗಿದುದು ನಮಗೆ ಗೊತ್ತಾಯಿತು. ಅದರಿಂದಾಗಿ ನಾವೆಲ್ಲರೂ ಆನಂದಭರಿತರಾಗಿ ಮತ್ತೆ ಮಥುರೆಯಲ್ಲೇ ವಾಸ ಮಾಡತೊಡಗಿದೆವು. ಆದರೆ ಅದು ಬಹುಕಾಲ ನಿಲ್ಲಲಿಲ್ಲ.

ಜರಾಸಂಧನ ಮಗಳು ತನ್ನ ತಂದೆಯ ಬಳಿಗೆ ಹೋಗಿ, ತನ್ನ ಗೋಳನ್ನು ಹೇಳಿಕೊಂಡಳು.

ಸೂಚನೆ : 7/12/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.