Tuesday, December 16, 2025

ವ್ಯಾಸ ವೀಕ್ಷಿತ 166 ಉಗ್ರತಪಸ್ವಿ ಜರಾಸಂಧನ ಭೀಕರ ಆಂತರ್ಯ (Vyaasa Vikshita 166)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)



ಯುಧಿಷ್ಠಿರನು ಮಾಡಬೇಕೆಂದುಕೊಂಡಿರುವ ರಾಜಸೂಯಯಾಗಕ್ಕೆ ಯಾರು ಅನುಕೂಲ, ಯಾರು ಪ್ರತಿಕೂಲ – ಎಂಬುದನ್ನು ಶ್ರೀಕೃಷ್ಣನು ತಿಳಿಸುತ್ತಾ, ಜರಾಸಂಧನ ಬಗ್ಗೆ ಹೇಳುತ್ತಿದ್ದಾನೆ. ಜರಾಸಂಧನ ಮಗಳು ತನ್ನ ಪತಿಯು ಗತಿಸಿದುದರಿಂದಾದ ದುಃಖಕ್ಕೆ ಪ್ರತೀಕಾರವಾಗಿ "ನನ್ನ ಪತಿಯನ್ನು ಕೊಂದವರನ್ನು ಕೊಲ್ಲು" - ಎಂಬುದಾಗಿ ಮತ್ತೆ ಮತ್ತೆ ಜರಾಸಂಧನನ್ನು ಪೀಡಿಸಿದಳು.

ಅದು ತಿಳಿಯುತ್ತಲೇ ನಾವುಗಳು ಇನ್ನು ಕಷ್ಟವೆಂದು ನಿಶ್ಚಯಿಸಿದೆವು. "ಇಲ್ಲಿಯ ಮಹತ್ತಾದ ಸಂಪತ್ತನ್ನು ಬೇರೆಬೇರೆಯಾಗಿ ಹೊತ್ತುಕೊಂಡು, ಮಕ್ಕಳು-ಮರಿ-ಬಂಧುಗಳೊಂದಿಗೆ ಓಡಿಹೋಗಿಬಿಡೋಣ" - ಎಂದು ಮಾತನಾಡಿಕೊಂಡು, ಮಕ್ಕಳು-ಜ್ಞಾತಿಗಳು-ಬಂಧುಗಳೊಂದಿಗೆ ಪಶ್ಚಿಮದಿಕ್ಕಿಗೆ ಸಾಗಿದೆವು. ಅಲ್ಲಿ ಕುಶಸ್ಥಲೀ - ಎಂಬ ಹೆಸರಿನ ನಗರಿಗೆ ಪಲಾಯನ ಮಾಡಿದೆವು.

ಅಲ್ಲಿಗೆ ಹೋದ ನಾವು ಎಂತಹ ಕೋಟೆಯನ್ನು ಕಟ್ಟಿಕೊಂಡೆವು ಗೊತ್ತೇ, ಯುಧಿಷ್ಠಿರಾ? ದೇವತೆಗಳಿಗೆ ಸಹ ಅದರೊಳಗೆ ಪ್ರವೇಶ ಮಾಡುವುದು ಸಾಧ್ಯವಿಲ್ಲ. ಅದರೊಳಗೆ ನಿಂತು ಸ್ತ್ರೀಯರು ಸಹ ಯುದ್ಧವನ್ನು ಮಾಡಬಹುದು, ಹಾಗಿರಲು ವೃಷ್ಣಿವಂಶದ ಮಹಾರಥರ ಬಗ್ಗೆ ಹೇಳುವುದೇನಿದೆ? ಅದರೊಳಗೆ ಇದ್ದುಕೊಂಡೇ ನಾವು ನಿರ್ಭಯರಾಗಿರುವುದು. ಈ ರೈವತಕಪರ್ವತವು ಅದೆಷ್ಟು ದುರ್ಗಮವೆಂದರೆ, ಜರಾಸಂಧನ ಭಯವು ಇನ್ನಿಲ್ಲವೆಂದು ಬಗೆದು, ನಾವುಗಳೆಲ್ಲರೂ ಆನಂದವಾಗಿದ್ದೇವೆ.

ಶಕ್ತಿಶಾಲಿಗಳಾಗಿದ್ದರೂ ಗೋಮಂತ(ಅಥವಾ ರೈವತಕ)ವನ್ನು ಆಶ್ರಯಿಸಿಕೊಂಡಿದ್ದೇವೆ. ಆ ರೈವತಕದಲ್ಲಿಯ ಅಳತೆಗಳನ್ನು ನೀ ಕೇಳಬೇಕು. ಮೂರು ಯೋಜನಗಳಷ್ಟು ಅಗಲವದು, ಒಂದೊಂದು ಯೋಜನಕ್ಕೂ ಸೇನೆಗಳ ಮೂರು ಮೂರು ದಳಗಳಿವೆ. ಯೋಜನದ ಕೊನೆಗೆ ಶತದ್ವಾರಗಳು. ಅಲ್ಲೆಲ್ಲ ಪರಾಕ್ರಮಿ ಸೈನಿಕರ ರಕ್ಷೆಯಿದೆ. ಹದಿನೆಂಟಕ್ಕೆ ಕಡಿಮೆಯಿಲ್ಲದ ವೀರಯೋಧರು ಸಂನದ್ಧರಾಗಿರುವರು, ಪ್ರತಿಘಟ್ಟದಲ್ಲಿಯೂ. ನಮ್ಮ ಕುಲದಲ್ಲಿ ಹದಿನೆಂಟು ಸಾವಿರ ಯೋಧರಿದ್ದಾರೆ. ಸಾತ್ಯಕಿ, ನನ್ನಣ್ಣನಾದ ಬಲರಾಮ, ನನ್ನಿಬ್ಬರು ಮಕ್ಕಳು - ಇವರೇ ಅಲ್ಲದೆ ಹಲವು ಮಹಾರಥರಿದ್ದಾರೆ. ನಾವೆಲ್ಲರೂ ಹೀಗಿರಬೇಕೆಂದರೆ ಜರಾಸಂಧನ ಶೌರ್ಯವಿನ್ನೆಷ್ಟಿರಬೇಕೆಂಬುದನ್ನು ನೀನು ಊಹಿಸಬಹುದು.

ಯುಧಿಷ್ಠಿರನೇ, ಸಮ್ರಾಟನಾಗುವವನ ಗುಣಗಳು ನಿನ್ನಲ್ಲಿವೆ. ಹೀಗಾಗಿ ನೀನು ನಿನ್ನನ್ನು ಕ್ಷತ್ರಿಯರಲ್ಲಿ ಸಮ್ರಾಟನನ್ನಾಗಿ ಆಗಿಸಿಕೊಳ್ಳಬೇಕಾದದ್ದು ಇದೆ. ಜರಾಸಂಧನು ಎಲ್ಲಿಯವರೆಗೂ ಜೀವಿಸಿರುವನೋ ಅಲ್ಲಿಯವರೆವಿಗೂ ನೀನು ರಾಜಸೂಯವನ್ನು ಮಾಡಲಾರೆ - ಎಂಬುದೇ ನನ್ನ ಅಭಿಪ್ರಾಯ. ಅನೇಕ ರಾಜರನ್ನು ಸೆರೆಹಿಡಿದು ಆತನು ಗಿರಿವ್ರಜದಲ್ಲಿ ಕೈದಿಗಳನ್ನಾಗಿಸಿದ್ದಾನೆ - ಸಿಂಹವು ಗಜರಾಜಗಳನ್ನು ಗುಹೆಯೊಳಗೆ ಹೇಗೆ ಅಡಗಿಸಿಡುವುದೋ ಹಾಗೆ.

ಉಮಾಪತಿಯಾದ ಮಹಾದೇವನನ್ನು ಕುರಿತು ಉಗ್ರತಪಸ್ಸನ್ನು ಮಾಡಿದ್ದಾನೆ, ಈ ಜರಾಸಂಧ. ಆತನನ್ನು ಆರಾಧಿಸಿರುವುದರಿಂದಲೇ ಬಲಗೊಂಡು ರಾಜರುಗಳನ್ನೆಲ್ಲ ವಶಪಡಿಸಿಕೊಂಡಿದ್ದಾನೆ. ಅವರನ್ನೆಲ್ಲ ಬಲಿಗೊಡುವ ಉದ್ದೇಶವೂ ಆತನಿಗಿದೆ. ಒಬ್ಬೊಬ್ಬರನ್ನಾಗಿ ರಾಜರನ್ನು ಗೆದ್ದು ಗೆದ್ದು ತನ್ನ ನಗರಕ್ಕೆ ಸೆರೆಯಾಳುಗಳನ್ನಾಗಿ ತಂದಿರಿಸಿದ್ದಾನೆ. ಜರಾಸಂಧ-ಭಯದಿಂದಲೇ ನಾವೂ ಮಥುರೆಯನ್ನು ತೊರೆದು ದ್ವಾರವತೀಪುರಿಗೆ ಬಂದಿರುವುದು.

ಯುಧಿಷ್ಠಿರನೇ, ಈ ಯಜ್ಞವನ್ನು ನೆರವೇರಿಸಲು ನೀನು ಬಯಸುವೆಯಾದರೆ, ಅವರೆಲ್ಲರನ್ನೂ ಬಿಡಿಸಲು ಯತ್ನಿಸು, ಹಾಗೂ ಜರಾಸಂಧನ ಸಂಹಾರಕ್ಕಾಗಿಯೂ ಪ್ರಯತ್ನಿಸು. ಇದನ್ನು ಮೊದಲು ಸಾಧಿಸದಿದ್ದರೆ ರಾಜಸೂಯವನ್ನು ಸಮಗ್ರವಾಗಿ ನೀ ನೆರವೇರಿಸಲಾರೆ.

ಜರಾಸಂಧನನ್ನು ವಧಿಸುವ ಮಾರ್ಗವನ್ನು ಮೊದಲು ಹುಡುಕು, ಯುಧಿಷ್ಠಿರ. ಆತನೊಬ್ಬನನ್ನು ಸೋಲಿಸಿದಲ್ಲಿ ಎಲ್ಲರನ್ನೂ ಸೋಲಿಸಿದಂತೆಯೇ ಸರಿ.

ಇದಿಷ್ಟು ನನ್ನ ಮತಿಗೆ ತೋರುವ ವಿಚಾರ. ನಿನಗೆ ಏನು ತೋರುತ್ತದೆಂಬುದನ್ನು ಕಾರಣಸಹಿತವಾಗಿ ನಿಶ್ಚಯಿಸಿ ನನಗೆ ಹೇಳು, ಯುಧಿಷ್ಠಿರಾ" – ಎಂದು ತನ್ನ ಮಾತನ್ನು ಮುಗಿಸಿದನು.

ಸೂಚನೆ : 14/12/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.