ಲೇಖಕರು : ವಿದ್ವಾನ್ ನರಸಿಂಹ ಭಟ್
ಪ್ರತಿಕ್ರಿಯಿಸಿರಿ (lekhana@ayvm.in)
ಪ್ರಶ್ನೆ ೪೬. ಸಕಲಪ್ರಾಣಿ ಸಂಕುಲ ಯಾರ ವಶದಲ್ಲಿರುತ್ತದೆ ?
ಸತ್ಯ, ಪ್ರಿಯಭಾಷಿ ಮತ್ತು ವಿನೀತನಾದ ವ್ಯಕ್ತಿಯ ವಶದಲ್ಲಿ.
ಎಲ್ಲಾ ಪ್ರಾಣಿಗಳು ಯಾರ ವಶದಲ್ಲಿ ಇರುತ್ತವೆ? ಎಂಬ ಪ್ರಶ್ನೆಯ ಆಶಯ ಹೀಗಿದೆ ಎಂಬುದಾಗಿ ಮೊದಲು ಭಾವಿಸಿಕೊಳ್ಳಬೇಕು. ವಶದಲ್ಲಿ ಇಟ್ಟುಕೊಳ್ಳುವುದು ಎರಡು ಬಗೆಯಲ್ಲಿ. ಬಲಾತ್ಕಾರವಾಗಿ ವಶದಲ್ಲಿ ಇಟ್ಟುಕೊಳ್ಳುವಂಥದ್ದು ಒಂದು ವಿಧಾನವಾದರೆ, ಸಾತ್ವಿಕತೆಯಿಂದ ವಶಪಡಿಸಿಕೊಳ್ಳುವುದು ಇನ್ನೊಂದು. ಸಾತ್ವಿಕತೆಯ ಸಾಧನೆಯಿಂದ ಸಹಜವಾಗಿ ಎಲ್ಲವೂ ಅವನ ವಶದಲ್ಲಿ ಬರುತ್ತವೆ ಎಂಬುದು ಈ ಪ್ರಶ್ನೋತ್ತರದ ಆಶಯವಾಗಿದೆ. ಅಂದರೆ ವಶಪಡಿಸಿಕೊಳ್ಳುವುದಕೋಸ್ಕರ ಯಾವುದೇ ಪ್ರಯತ್ನವು ಇಲ್ಲ. ಯಾವುದೋ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಬೇಕು ಎಂದು ಮಾಡುವ ಸಾಧನೆನದಿಂದ ಎಲ್ಲವು ತಾನಾಗಿಯೇ ವಶಕ್ಕೆ ಬರುತ್ತವೆ ಎಂಬುದು ತಾತ್ಪರ್ಯ. ಅಂತಹ ಗುಣಗಳು ಯಾವುವು? ಎಂಬುದು ಈ ಪ್ರಶ್ನೆಯಲ್ಲಿ ಹೇಳಿರುವ ವಿಷಯ. ಸತ್ಯವನ್ನು ಮಾತನಾಡುವುದು, ಪ್ರಿಯವಾದುದನ್ನು ಮಾತನಾಡುವುದು ಮತ್ತು ಆ ಮಾತು ವಿನಯದಿಂದ ಕೂಡಿರಬೇಕಾದುದು. ಹೀಗೆ ಇದ್ದಾಗ ಎಲ್ಲ ಪ್ರಾಣಿಗಳು ಅಪ್ರಯತ್ನಪೂರ್ವಕವಾಗಿ ವಶವಾಗುತ್ತವೆ. ಆ ಮಾತಿನಲ್ಲಿ ಎಷ್ಟು ಶಕ್ತಿ ಅಡಗಿದೆ ಎಂಬುದನ್ನು ಈ ಪ್ರಶ್ನೋತ್ತರದಿಂದ ಭಾವಿಸಬಹುದಾಗಿದೆ.
ಒಂದು ಮಾತಿನಿಂದ ಇಡೀ ಪ್ರಪಂಚವನ್ನೇ ವಶದಲ್ಲಿ ಇಟ್ಟುಕೊಳ್ಳಲು ಸಾಧ್ಯ. ಆದರೆ ಆ ಮಾತಿನಲ್ಲಿ ಈ ಅಂಶಗಳು ಅಡಕವಾಗಿರಬೇಕು. ಅದಕ್ಕೆ ಒಂದು ಸುಭಾಷಿತ ಹೀಗೆ ಹೇಳುತ್ತದೆ - "ಸತ್ಯಂ ಪ್ರಿಯಂ ಬ್ರೂಯಾದ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್ । ಪ್ರಿಯಂ ಚ ನ ಅನೃತಂ ಬ್ರೂಯಾತ್ ಏಷ ಧರ್ಮಃ ಸನಾತನಃ" ಎಂದು. ಮಾತಿನಲ್ಲಿ ಸತ್ಯ ಇರಬೇಕು; ಅದು ಪ್ರಿಯವಾಗುವಂತೆ ಇರಬೇಕು ಅಪ್ರಿಯವಾದರೆ ಅದು ಸತ್ಯವೇ ಆದರೂ ಅದು ಮಾತಿಗೆ ಯೋಗ್ಯವಲ್ಲ. ಹೀಗೆ ಮಾತನಾಡಿದರೆ ಯಾರು ತಾನೆ ವಶವಾಗುವುದಿಲ್ಲ! ಎಲ್ಲರೂ ವಶರಾಗುತ್ತಾರೆ. ಹಾಗಾಗಿ ಒಳ್ಳೆ ಮಾತಿಗೆ ಏಕೆ ದಾರಿದ್ರ್ಯ ಎಂಬ ಅರ್ಥ ಈ ಸುಭಾಷಿತದಲ್ಲಿ ಇದೆ. ಮಾತು ಹೇಗಿರಬೇಕು? ಹೇಗಿದ್ದರೆ ಚೆನ್ನು? ಹೇಗಿದ್ದರೆ ಅಪಾಯ? ಎಂಬುದನ್ನು ತುಂಬಾ ವಿಸ್ತಾರವಾಗಿ ಮಾತಿನ ಬಗ್ಗೆ ನಮ್ಮ ಆರ್ಷಸಾಹಿತ್ಯಗಳು, ಗಾದೆ ಮಾತುಗಳು ಎಲ್ಲವೂ ಬಹಳ ವಿಮರ್ಶಾತ್ಮಕವಾದ ವಿಚಾರವನ್ನು ನೀಡುತ್ತವೆ. ಆದ್ದರಿಂದ ಒಂದು ಮಾತು ಇಷ್ಟು ಸಮರ್ಪಕವಾಗಿದ್ದರೆ ಅವನು ಏನನ್ನು ಬೇಕಾದರೂ ಸಾಧಿಸಬಹುದು. ಅದೇ ಮಾತು ವಿಪರೀತವಾದರೆ ಅಪಾಯವು ಕಟ್ಟಿಟ್ಟಿದ್ದು ಎಂಬುದನ್ನು ಈ ಸುಭಾಷಿತವೇ ಸಾರುತ್ತದೆ. ಅತಿಯಾದ ಮಾತು ಅನಾಹುತಕ್ಕೆ ದಾರಿ ಎಂಬಂತೆ ಮಾತು ಮಿತವಾಗಿರಬೇಕು; ಇಲ್ಲದಿದ್ದರೆ ಮಾತೇ ನಮಗೆ ಕೆಡುಕಾದೀತು. "ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು", "ಮಾತು ಮನೆಯನ್ನು ಕೆಡಿಸೀತು" ಇತ್ಯಾದಿ ಮಾತುಗಳು ಈ ಮಾತಿನ ಬಗ್ಗೆ ಎಚ್ಚರಿಕೆನ್ನು ನೀಡುತ್ತಿವೆ. ಯಾರ ಮಾತಿನಲ್ಲಿ ಸತ್ಯ, ಪ್ರಿಯ ಮತ್ತು ವಿನಯಗಳು ಈ ಮೂರೂ ಬೆರೆತುಕೊಂಡಿರುತ್ತವೆಯೋ, ಅವರ ಭಾವವೂ ಅಂತಯೇ ಬದಲಾಗುತ್ತಾ ಹೋಗುತ್ತದೆ. ಆ ಮಾತು ಹೇಳುವುವವನ್ನು, ಕೇಳುವವನನ್ನು ಸತ್ಯದಲ್ಲೇ ನೆಲೆನಿಲ್ಲಿಸುವಂತೆ ಮಾಡುತ್ತದೆ. ಭಾಗವತ ಮೊದಲಾದ ಮಹಾಪುರಾಣ ಪುರಾಣಗಪುಣ್ಯ ಕಥಾನಕಗಳು ಹುಟ್ಟಿದ್ದೆ ಹೀಗೆ ಮಾತಿನಿಂದಲೇ. ಎದುರುಗಡೆ ಇರುವನನ್ನು ಪರಿವರ್ತಿಸುವಂತಿರುತ್ತದೆ. ಒಬ್ಬ ಪರೀಕ್ಷಿತ್ ಮಹಾರಾಜನು ಶುಕಮುನಿಗಳ ಉಪದೇಶಾಮೃತವನ್ನು ಕೇಳಿ ಉದ್ಧಾರನಾದ. ಕೇವಲ ಮನುಷ್ಯ ಮಾತ್ರನಲ್ಲ, ಪ್ರಾಣಿ ಪಶುಪಕ್ಷಿಗಳು ಕೂಡ ಅವನ ಭಾವಕ್ಕೆ ಸಹಕರಿಸುತ್ತವೆ. ಅವನು ಸತ್ಯದಲ್ಲಿ ಪ್ರತಿಷ್ಠಿತನಾಗುತ್ತಾ ಸಾಗುತ್ತಾನೆ. ಹಾಗಿರುವಾಗ ಅವನನ್ನು ಕಂಡರೆ ಯಾರಿಗೂ ದ್ವೇಷ ಭಾವನೆ ಬರುವುದೇ ಇಲ್ಲ. ಆ ಪರಿಸರವು ಅಹಿಂಸಾಭಾವದಿಂದ ಕೂಡಿರುತ್ತದೆ. ಇದು ಪ್ರಾಣಿ-ಪಕ್ಷಿಗಳು ಎಲ್ಲವೂ ಕೂಡ ಅವನ ವಶದಲ್ಲಿ ಇರುವಂತೆ ಮಾಡುತ್ತದೆ ಎಂಬುದು ಈ ಪ್ರಶ್ನೋತ್ತರದ ಸಾರವಾಗಿದೆ.
ಸೂಚನೆ : 28/12/2025 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.