Tuesday, December 16, 2025

ಪ್ರಶ್ನೋತ್ತರ ರತ್ನಮಾಲಿಕೆ 44 (Prasnottara Ratnamalike 44)

ಲೇಖಕರು : ವಿದ್ವಾನ್ ನರಸಿಂಹ ಭಟ್

ಪ್ರತಿಕ್ರಿಯಿಸಿರಿ (lekhana@ayvm.in)


ಪ್ರಶ್ನೆ ೪೪. ಯಾರಿಗೆ ದೇವತೆಗಳು ನಮಸ್ಕರಿಸುತ್ತಾರೆ 

ದಯೆ ಉಳ್ಳವನಿಗೆ.

ಈ ಪ್ರಶ್ನೆಯಲ್ಲಿ ನಮಸ್ಕಾರಕ್ಕೆ ಅರ್ಹನಾದ ವ್ಯಕ್ತಿ ಯಾರು? ಎಂಬುದನ್ನು ವಿವರಿಸಲಾಗಿದೆ. ದೇವತೆಗಳು ಕೂಡ ನಮಸ್ಕಾರ ಮಾಡಲು ಯೋಗ್ಯನಾದ ವ್ಯಕ್ತಿಯಾಗಿರಬೇಕಾದರೆ ಅವನ ವ್ಯಕ್ತಿತ್ವ ಎಂತಹದ್ದಾಗಿರಬೇಕು!? ಮತ್ತು ಅಂತಹ ವ್ಯಕ್ತಿತ್ವವು ದಯೆ ಎಂಬ ಗುಣದಿಂದ ಹೇಗೆ ಬರಲು ಸಾಧ್ಯ? ಎಂಬ ಎರಡು ಅಂಶಗಳನ್ನು ಪ್ರಧಾನವಾಗಿ ಈ ಉತ್ತರದಲ್ಲಿ ನಾವು ಚಿಂತಿಸಬೇಕಾಗಿದೆ. ಆದ್ದರಿಂದ ಅದಕ್ಕೂ ಮೊದಲು 'ದಯೆ ಎಂದರೇನು?' ಎಂಬುದನ್ನು ಮೊದಲು ಚಿಂತಿಸಬೇಕಾಗಿದೆ.

'ದಯೆ' ಎಂಬುದಕ್ಕೆ ಪದ್ಮಪುರಾಣವು ಹೀಗೆ ವಿವರಿಸುತ್ತದೆ - "ಪ್ರಯತ್ನಪಟ್ಟು- ಕಷ್ಟಪಟ್ಟು ಯಾರು ಬೇರೆಯವರ ಕಷ್ಟವನ್ನು ಪರಿಹರಿಸಲು ಬಯಸುವನೋ, ಅವನಲ್ಲಿರುವ ಗುಣವನ್ನೇ 'ದಯೆ' ಎಂಬುದಾಗಿ ಕರೆಯಬೇಕು" ಎಂದು. ಈ ವ್ಯಕ್ತಿ ತನಗೆ ಆಗುವ ಕಷ್ಟವನ್ನು ಪರಿಗಣಿಸದೆ, ಬೇರೆಯವರ ಕಷ್ಟವನ್ನು ಪರಿಹರಿಸುವುದರಲ್ಲಿ ಸುಖವನ್ನು ಕಾಣುತ್ತಾನೆ ಎಂದರ್ಥ. ಇದೇ ರೀತಿಯಲ್ಲಿ ಮತ್ಸ್ಯಪುರಾಣವು ದಯೆ ಎಂಬುದನ್ನು ಈ ಬಗೆಯಲ್ಲಿ ವಿವರಿಸುತ್ತದೆ - "ಯಾರು ತನ್ನಂತೆ ಎಲ್ಲಾ ಭೂತ ಕೋಟಿಗಳನ್ನು ಭಾವಿಸಿ, ಎಲ್ಲರ ಹಿತವನ್ನು ಮತ್ತು ಶುಭವನ್ನು ಬಯಸುತ್ತಾನೋ ಆ ವ್ಯಕ್ತಿಯ ಗುಣಕ್ಕೆ 'ದಯೆ' ಎಂಬುದಾಗಿ ಕರೆಯಬೇಕು" ಎಂದು. ಇನ್ನೊಂದು ಕಡೆ ಈ 'ದಯೆ' ಎಂಬುದಕ್ಕೆ ಹೀಗೆ ವಿವರಣೆ ಇದೆ - "ಶತ್ರುವಾಗಲಿ, ಬಂಧುವಾಗಲಿ, ಮಿತ್ರನಾಗಲಿ ಅಥವಾ ತನ್ನನ್ನು ದ್ವೇಷಿಸುವನೇ ಆಗಲಿ ಯಾರೇ ಆಗಲಿ ಅಂತಹವನನ್ನು ತನ್ನಂತೆ ಭಾವಿಸುತ್ತಾನೆ, ಆ ಗುಣವನ್ನು 'ದಯೆ' ಎಂಬುದಾಗಿ ಕರೆಯಬೇಕು" ಎಂದು. ಅಂದರೆ ಈ ಎಲ್ಲಾ ವಿವರಣೆಗಳಿಂದ ನಾವು ತಿಳಿಯುವ ವಿಷಯವೇನೆಂದರೆ ಪ್ರಪಂಚದಲ್ಲಿರುವ ಪ್ರಾಣಿ, ಪಶು, ಪಕ್ಷಿ ಎಲ್ಲರಿಗೂ, ಯಾರು ಹಿತವನ್ನೇ ಬಯಸುತ್ತಾನೋ, ಯಾವುದೇ ಕಾರಣಕ್ಕೂ ಅಹಿತವು ಆಗಬಾರದು, ದುಃಖ-ದುಮ್ಮಾನ ಯಾರಿಗೂ ಬರಬಾರದು ಎಂಬುದಾಗಿ ಆತ್ಮಸಾಕ್ಷಿಯಾಗಿ ಬಯಸುತ್ತಾನೋ, ಅವನೇ ದಯಾಪರನಾದ ವ್ಯಕ್ತಿ ಎನಿಸಿಕೊಳ್ಳುತ್ತಾನೆ. ಇಂಥವನು ಈ ಪ್ರಪಂಚದಲ್ಲಿ ಅದ್ವಿತೀಯನಾಗಿ ಕಾಣಿಸಿಕೊಳ್ಳುತ್ತಾನೆ. ಅಂದರೆ ಎಲ್ಲಾ ಭೂತಕೋಟಿಗಳನ್ನು ಒಂದಾಗಿ ಕಾಣುವ ಮಹಾಪುರುಷನಾಗಿ ಆತ ಆಗುತ್ತಾನೆ. ಇಂತಹ ವ್ಯಕ್ತಿಯು ಈ ಭೂಮಿಯಲ್ಲಿ ಇರುವ ಪರಮಾತ್ಮನ ಪರಿಪೂರ್ಣ ವ್ಯಕ್ತ ರೂಪ ಎಂಬುದಾಗಿ ಭಾವಿಸಬಹುದು. ಪರಿಪೂರ್ಣನಾದ ಭಗವಂತನಿಗೆ ಯಾವ ದೇವತೆಗಳು ತಾನೇ ನತಮಸ್ತಕರಾಗುವುದಿಲ್ಲ? ಎಲ್ಲರೂ ಆ ಪರಬ್ರಹ್ಮನಿಗೆ - ಪರಿಪೂರ್ಣನಿಗೆ ನಮಸ್ಕರಿಸಲೇ ಬೇಕಲ್ಲವೇ? ನಮಸ್ಕಾರ ಎಂಬುದು ಯಾರು ತನಗಿಂತಲೂ ಗುಣ ಸ್ವಭಾವಗಳಿಂದ ಶ್ರೇಷ್ಠನಾಗುತ್ತಾನೋ ಅಂತವನಿಗೇ ಸಲ್ಲಿಸಬೇಕಾಗುವ ಪ್ರಕ್ರಿಯೆ. ಆಗ ಈ ಅತಿಶಯನಾದ ಪರಮ ಪವಿತ್ರನಾದ ಸರ್ವಸದ್ಗುಣಗಣಿಯಾದ ಮಹಾಪುರುಷನಿಗೆ,  ಪರಮಪುರುಷನಿಗೆ ಸಲ್ಲಬೇಕಾದ ನಮಸ್ಕಾರ ಸಲ್ಲುವಂತಾಗುತ್ತದೆ. ಹಾಗಾಗಿ ಇಂತಹ ಪುರುಷನಿಗೆ ಮಾತ್ರ ದೇವತೆಗಳು ನಮಸ್ಕಾರವನ್ನು ಮಾಡುತ್ತಾರೆ. ಪುರಾಣಗಳಲ್ಲಿ ಇಂತಹ ಪುಣ್ಯಚರಿತ್ರೆಯನ್ನು ಕಾಣುತ್ತೇವೆ. ಮಹರ್ಷಿಗಳು ಭೂತಕೋಟಿಗೆ ಉಂಟಾದ ಸಂಕಷ್ಟವನ್ನು ನಿವಾರಿಸುತ್ತಾರೆ. ದಯೆಯಿಂದ ತಮ್ಮ ಪ್ರಾಣವನ್ನು ಕೊಟ್ಟು ಕೇವಲ ತಪೋಧನರಾಗದೇ, ದಯಾಪ್ರಧಾನರೂ ಆದರು ಎಂಬ ಕಥೆಯನ್ನು ಕೇಳುತ್ತೇವೆ. ದಧೀಚಿ ಮೊದಲಾದಮರ್ಷಿಗಳು ತಮ್ಮ ದಯೆ ಎಂಬ ಗುಣದಿಂದ ದೇವತೆಗಳಿಂದಲೂ ಸ್ತುತ್ಯರಾಗಿದ್ದರು ಎಂಬ ಅನೇಕ ಉದಾಹರಣೆಗಳನ್ನು ನಾವು ನೋಡಬಹುದು. ಹಾಗಾಗಿ ದೇವತೆಗಳೇ ನಮಸ್ಕರಿಸುವಂತಹ ಇಂತಹ ಮಹಾಪುರುಷರಿಗೆ ನಾವು ನಮ್ಮ ನಮಸ್ಕಾರವನ್ನು ಸಲ್ಲಿಸೋಣ ಅಲ್ಲವೇ?.

ಸೂಚನೆ : 14/12/2025 ರಂದು ಈ ಲೇಖನವು  ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.