Saturday, December 27, 2025

ಕೃಷ್ಣಕರ್ಣಾಮೃತ 88 ಪಿಂಛ-ಲಾಂಛಿತ ಗೋಪವೇಷನ ಕಡುಮುದ್ದು ಕಾಂತಿ (Krishakarnamrta 88)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)





ನಮ್ಮ ಇಷ್ಟಾರ್ಥವನ್ನು ನೆರವೇರಿಸಲಿ, ಶ್ರೀಕೃಷ್ಣ - ಎಂದು ಕೇಳಿಕೊಳ್ಳುತ್ತಾನೆ, ಕವಿ ಲೀಲಾಶುಕ. ಅದಕ್ಕಾಗಿ ಮುರಾರಿಯ ಮುದ್ದಾದ ಮೈಯನ್ನು ಈ ಶ್ಲೋಕದಲ್ಲಿ ಚಿತ್ರಿಸಿದ್ದಾನೆ.

ಅಭಿನವ-ನವನೀತದಂತೆ ಸ್ನಿಗ್ಧನಾಗಿದ್ದಾನೆ, ಕೃಷ್ಣ. ಸ್ನಿಗ್ಧವೆಂದರೆ ಹೊಳೆಯುತ್ತಿರುವುದು. ಕಳೆಕಳೆಯಾಗಿ ಮುದ್ದುಮುದ್ದಾಗಿರುವ ಮಗುವನ್ನು, ಒಳ್ಳೇ ಬೆಣ್ಣೆಯ ಮುದ್ದೆಯಂತಿದೆ - ಎನ್ನುವುದಿಲ್ಲವೇ? ಹಾಗೆ ಇದು.

ಗೊಲ್ಲರ ಮನೆಗಳಲ್ಲಿ ಹಾಲು-ಮೊಸರು-ಬೆಣ್ಣೆಗಳಿಗೇನು ಕಡಿಮೆಯೇ? ಎಂದೇ, ದುಗ್ಧವನ್ನು, ಎಂದರೆ ಹಾಲನ್ನಂತೂ, ಚೆನ್ನಾಗಿಯೇ ಕುಡಿದಿದ್ದಾನೆ. ಆ-ಪೀತವೆಂದರೆ ಚೆನ್ನಾಗಿ ಕುಡಿದಿರುವುದು, ಕೊನೆಯ ಬಿಂದುವಿನವರೆಗೂ, ಕುಡಿದಿರುವುದು!

ಇನ್ನು ಬೆಣ್ಣೆ ಪಡೆಯಬೇಕೆಂದರೆ, ಮೊಸರು ಕಡೆಯುತ್ತಿರುವವರ ಬಳಿ ಮೊದಲು ಹೋಗಬೇಕಲ್ಲವೇ? ಅಲ್ಲಿಗವನು ಹೋದಾಗ ಅವನ ಮೈಮೇಲೆ ಅಲ್ಲಲ್ಲಿ ಆ ಮೊಸರಿನ ಕೆಲವೆರಡು ಬಿಂದುಗಳು ಹಾರಿವೆ. ಹೀಗೆ ದಧಿಯ, ಎಂದರೆ ಮೊಸರಿನ, ಕಣಗಳು ಗುರುತು ಮೈಮೇಲೆ ಪರಿದಿಗ್ಧವಾಗಿವೆ, ಎಂದರೆ ಲೇಪಗೊಂಡಿವೆ: ಅಲ್ಲಿಲ್ಲಿ ತಮ್ಮ ಗುರುತನ್ನು ಮೂಡಿಸಿವೆ.

ತಾಪಿಂಛ-ಗುಚ್ಛವೆಂದರೆ ತಮಾಲ-ವೃಕ್ಷದ ಗೊಂಚಲು. ಅದರ ಬಣ್ಣವೆಂದರೆ ಕಪ್ಪೇ. ಅದರ ಛವಿಯ ಪರಿಯೆಂತೋ ಅಂತಹುದೇ ಛವಿಯು, ಶ್ರೀಕೃಷ್ಣನ ಶರೀರದ್ದು. ಛವಿಯೆಂದರೆ ಕಾಂತಿ, ವರ್ಣ, ಹೊಳಪು. ಹೀಗಾಗಿ ಕೃಷ್ಣನು ತಮಾಲತರುವಿನ ಕಪ್ಪುಕಾಂತಿಯನ್ನೇ ಹೊಂದಿ ಕಮನೀಯನಾಗಿರುವನು.

ಇದಲ್ಲದೆ ಹೊಸದಾದ ಒಂದು ನವಿಲುಗರಿಯಿಂದ ಲಾಂಛಿತನಾಗಿದ್ದಾನೆ, ಎಂದರೆ ಅಲಂಕೃತನಾಗಿದ್ದಾನೆ, ಕೂಡ.

ಇವೆಲ್ಲವೂ ಆತನ ಹೊರಮೈಯಾಯಿತು. ಆತನ ಒಳರೂಪವನ್ನೂ ಅರಿಯಬೇಕು. ಆತನು ಭುವನದ ಕೃಚ್ಛ್ರಗಳನ್ನು, ಎಂದರೆ ಜಗತ್ತಿನಲ್ಲಿರುವವರ ಕಷ್ಟಗಳನ್ನು, ಛೇದಿಸುವವನು ಎಂದರೆ ಕತ್ತರಿಸಿಹಾಕತಕ್ಕವನು.

ಎಳಸಾದರೂ ಮುದ್ದಾದರೂ ಮಹಿಮೆಯುಳ್ಳ ಇಂತಹ ಮೈಯುಳ್ಳ ಈ ದೇವತೆಯು, ಎಂದರೆ ಶ್ರೀಕೃಷ್ಣನು, ನಮ್ಮ ಅಪೇಕ್ಷೆಗಳನ್ನು ಈಡೇರಿಸಲಿ - ಎಂದು ಕೇಳಿಕೊಂಡಿದ್ದಾನೆ, ಕವಿ.

ಶ್ಲೋಕ ಹೀಗಿದೆ:
ಅಭಿನವ-ನವನೀತ-ಸ್ನಿಗ್ಧಂ ಆಪೀತ-ದುಗ್ಧಂ
ದಧಿ-ಕಣ-ಪರಿದಿಗ್ಧಂ ಮುಗ್ಧಂ ಅಂಗಂ ಮುರಾರೇಃ |
ದಿಶತು ಭುವನ-ಕೃಚ್ಛ್ರ-ಚ್ಛೇದಿ ತಾಪಿಂಛ-ಗುಚ್ಛ-
-ಚ್ಛವಿ ನವ-ಶಿಖಿ-ಪಿಂಛಾ-ಲಾಂಛಿತಂ ವಾಂಛಿತಂ ನಃ ||

ಈ ಶ್ಲೋಕದಲ್ಲಿ ಬಂದಿರುವ ವರ್ಣಸಾಮ್ಯಗಳು ಆಕರ್ಷಕವಾಗಿದೆ. ಅಭಿನವ-ನವನೀತ - ಎನ್ನುವಾಗ ನವ-ನವ ಎಂದೆರಡು ನವಗಳು ಒಟ್ಟಿಗೇ ಬಂದಿವೆ. ಹಾಗೆಯೇ ಸ್ನಿಗ್ಧ-ದುಗ್ಧ-ದಿಗ್ಧ-ಮುಗ್ಧ-ಗಳನ್ನೆಲ್ಲ ಶ್ಲೋಕದ ಪ್ರಥಮಾರ್ಧದಲ್ಲೇ, ಎಂದರೆ ನಿಕಟ-ನಿಕಟವಾಗಿಯೇ, ತಂದಿದೆ. ಮುಗ್ಧ-ಮುರಾರಿ ಎನ್ನುವಾಗ ಮು-ಮುಗಳು ಬಂದಿವೆ. ಹಾಗೆಯೇ ಕೃಚ್ಛ್ರ-ಗುಚ್ಛ-ಚ್ಛವಿ ಎಂಬಲ್ಲಿಯ ಅನುಪ್ರಾಸವೂ ಸುವೇದ್ಯವೇ. ಶ್ಲೋಕಾಂತದಲ್ಲಿಯ ಲಾಂಛಿತ-ಪಿಂಛ-ವಾಂಛಿತಗಳೂ ಹೃದಯಂಗಮವೇ ಆಗಿವೆ.

***

ಮತ್ತೊಂದು ಪದ್ಯ.

ನನ್ನ ಮಾನಸದಲ್ಲಿ ಭಾಸಿಸಲಿ - ಎನ್ನುತ್ತಾನೆ, ಲೀಲಾಶುಕ. ಮಾನಸವೆಂದರೆ ಮನಸ್ಸು. ಅಲ್ಲಿ ಸ್ಫುರಿಸಬೇಕಾದದ್ದು ಯಾವುದು? ಎಂಬ ಪ್ರಶ್ನೆ, ಮತ್ತು ಅದೆಂತಹುದು? ಅದರಿಂದಾಗುವ ಫಲವೇನು? - ಎಂಬ ಪ್ರಶ್ನೆಗಳೂ ಬರುತ್ತವೆ. ಅವೆಲ್ಲಕ್ಕೂ ಉತ್ತರವಿತ್ತೇ ಇದ್ದಾನೆ, ಲೀಲಾಶುಕ.

ಕವಿಯು ಹೇಳುವುದರಲ್ಲಿ ವಿಶೇಷವಿದೆ. "ಮುಹುರು ಮುಹುರ್ ಮುಹುಃ" ನನ್ನ ಚಿತ್ತದಲ್ಲಿ ಹೊಳೆಯಲಿ ಎನ್ನುತ್ತಿದ್ದಾನೆ; ಹಾಗೆಂದರೆ "ಮತ್ತೆ ಮತ್ತೆ ಮತ್ತೆ".

ಹೇಳಿದ್ದನ್ನೇ ಮತ್ತೆ ಮತ್ತೆ ಮೂರು ಬಾರಿ ಹೇಳಿದೆಯೆಂದರೆ ಅದೇನೋ ಅತಿಶಯವೇ ಸರಿ. ಯಾವುದು ಬಹಳ ಮುಖ್ಯವೋ ಅಥವಾ ಬಹಳ ಆಸ್ವಾದ್ಯವೋ ಅಂತಹುದನ್ನೇ ನಾವು ಪುನಃ ಪುನಃ ಹೇಳುವುದು. ಪುನಃ ಪುನಃ ಹೇಳುವುದನ್ನೇ ಪೌನಃಪುನ್ಯ - ಎನ್ನುವುದು. ಪೌನಃಪುನ್ಯವು ಉತ್ಸುಕತೆ-ಸಂಭ್ರಮಗಳಿಗಾಗಿಯೂ ಬರಬಹುದು. ಪ್ರಕೃತ-ಶ್ಲೋಕದಲ್ಲಿ ಭಕ್ತನಿಗಾಗುವ ಸಂಭ್ರಮ-ಭಾವತೀವ್ರತೆಗಳು ವ್ಯಕ್ತವಾಗಿವೆ.

ಯಾವುದು ಹಾಗೆ ಮತ್ತೆ ಮತ್ತೆ ಚಿತ್ತದಲ್ಲಿ ಕಾಣುತ್ತಲಿರಬೇಕಾದದ್ದು? : ವಿಭುವಿನ ರಮಣೀಯತೆ.

ಯಾರು ವಿಭು? ವಿಭುವೆಂದರೆ ಪರಮಾತ್ಮನೇ. ಎಂತಹವನು ಈ ವಿಭು? ಯಾವನು ನಾನಾಕಾರ-ನಾನಾರೂಪಗಳನ್ನು ತಳೆಯಬಲ್ಲನೋ ಆತನೇ ವಿ-ಭು: ಅರ್ಥಾತ್ ವಿವಿಧವಾಗಿ ಆಗತಕ್ಕವನು. ಹಾಗಿದ್ದರೆ ಇಲ್ಲಿ ಹೇಳುತ್ತಿರುವುದು ಯಾವುದನ್ನು? ಸ್ವಯಂ ಗೋಪವೇಷವನ್ನು ಧರಿಸಿದವನನ್ನು - ಎಂದರೆ ಕೃಷ್ಣನನ್ನು.

ಇಲ್ಲಿ ಸ್ವಯಂ ಎಂಬುದರ ವಿಶೇಷವೇನು? ಮಿಕ್ಕ ಗೊಲ್ಲರೋ ತಮ್ಮ ತಮ್ಮ ಕರ್ಮಕ್ಕೆ ವಶರಾಗಿ ಹಾಗೆ ಹುಟ್ಟಿರುವವರು. ಕೃಷ್ಣನು ಹಾಗಲ್ಲ. ಯಾವುದೇ ಶರೀರವನ್ನಾದರೂ ಆತನು ಪರಿಗ್ರಹಿಸಬಲ್ಲನು. ಹಿಂದೆ ಪ್ರಾಣಿ-ಶರೀರಗಳನ್ನೇ ತಳೆದಿದ್ದನಲ್ಲವೇ? ಆತನು ಇಚ್ಛಾ-ಮೀನ, ವಿಹಾರ-ಕಚ್ಛಪ - ಎಂದರೆ ಮತ್ಸ್ಯಾವತಾರ-ಕೂರ್ಮಾವತಾರಗಳನ್ನು ಸ್ವಕೀಯೇಚ್ಛೆಯಿಂದಲೇ ಪರಿಗ್ರಹಿಸಿದವನು.

ಆ ಶರೀರಗಳನ್ನು ಹೊಂದಿದ್ದುದು ತನ್ನ ಪೂರ್ವ-ಕರ್ಮಗಳಿಗೆ ಅಧೀನನಾಗಿ ಅಲ್ಲ, ಬೇರೆ ವಿಧಿಯೂ ಇರಲಿಲ್ಲವೆಂದಲ್ಲ.

ಇದಂತೂ, ಈ ಗೊಲ್ಲರ ನಡುವೆ ಈತನಿರುವ ಬಗೆಯಂತೂ, ನಮ್ಮ ಭಾಗ್ಯವೇ. ಏಕೆ? ಅದೆಷ್ಟು ಸುಲಭನಾದ, ಈಗ! ಬಾಲ-ಬಾಲೆಯರಿಗೂ ಲಭ್ಯನಾದ!

ಎಂತಹುದು, ಈ ವಿಭುವಿನ ರಮಣೀಯತೆ? ಅದು "ಯಾಪಿ ಕಾಪಿ" ಎಂದರೆ "ಯಾವುದೋ ಒಂದು"; ಎಂದರೆ "ಹೀಗೆಂದು ಬಣ್ಣಿಸಲಾಗದಿರುವುದು" ಎಂದರ್ಥ. ಅರ್ಥಾತ್, ಅನಿರ್ವಚನೀಯವಾದುದದು.

ಎಲ್ಲವೂ ಸರಿಯೇ. ಆತನೇಕೆ ನಮ್ಮ ಅಂತರಂಗದಲ್ಲಿ ಮತ್ತೆ ಮತ್ತೆ ಗೋಚರನಾಗಬೇಕು? ಏಕೆಂದರೆ ಆತನೇ ಭವ-ಭಯೈಕ-ಭೇಷಜ. ಎಂದರೆ ಭವಭಯಕ್ಕೆ ಆತನೇ ಏಕ-ಭೇಷಜ. ಭವ-ಭಯವೆಂದರೆ ಸಂಸಾರಭೀತಿ. ಮತ್ತೆ ಮತ್ತೆ ಹುಟ್ಟಿಸಾಯುತ್ತಿರುವುದೇ ಭವ. ಅದುವೇ ಎಲ್ಲ ಭಯಗಳಿಗಿಂತಲೂ ಹಿರಿದಾದುದು. ಅದುವೇ ಒಂದು ರೋಗವೂ ಹೌದು. ರೋಗಕ್ಕೆ ಮದ್ದು ಬೇಕು. ಈ ವಿಶಿಷ್ಟವಾದ ರೋಗಕ್ಕೆ ವಿಶಿಷ್ಟವಾದ ಭೇಷಜವೇ ಬೇಕು. ಇದಕ್ಕಿರುವುದೋ ಒಂದೇ ಔಷಧ: ಅದುವೇ ಈ ವಿಭುವಿನ ರಮಣೀಯತೆ, ಅದರ ದರ್ಶನ.

ಸಾರಾಂಶವಿಷ್ಟು. ಕೃಷ್ಣ-ರಮಣೀಯತೆಯು ನಮ್ಮ ಅಂತಃಕರಣದಲ್ಲಿ ಪೌನಃಪುನ್ಯದಿಂದ ಹೊಳೆಯುತ್ತಿದ್ದರೆ, ನಮ್ಮ ಭವ-ಭಯಕ್ಕೆ ಮದ್ದು ಸಿದ್ಧವಾದಂತೆಯೇ ಸರಿ. ಎಂದೇ, ಅದೇ ಸ್ಫುರಿಸುತ್ತಿರಲಿ - ಎಂದು ಕೋರಿಕೆ. 

ಅರ್ಥಾತ್, ಧ್ಯಾನದಲ್ಲಿ ಸಾಧಾರಣವಾಗಿ, ಚಿತ್ತ-ಚಾಂಚಲ್ಯದಿಂದಾಗಿ ಮನಸ್ಸಿನಲ್ಲಿ ಏನೂ ಸ್ಥಿರವಾಗಿ ನಿಲ್ಲದಲ್ಲವೇ? ಆದರೀಗ ಮತ್ತೆ ಮತ್ತೆ ಕೃಷ್ಣ-ಸೌಂದರ್ಯವೇ ಕಣ್ಮುಂದೆ ಬರುತ್ತಿದ್ದಲ್ಲಿ, ಬರಬರುತ್ತಾ ಧ್ಯಾನ-ಸಿದ್ಧಿಯೇ ಅಗುವುದು. ಅಂತರಂಗದ ಪಟಲದ ಮೇಲೆ ಈ ರಂಗನ ಮೂರ್ತಿಯೇ ಸ್ಥಿರವಾಗಿ ನಿಲ್ಲುವುದು. ಪರಿಣಾಮವಾಗಿ, ಸಂಸಾರ-ಬಂಧನವು ಕಳಚುವುದು: ಭವ-ಭಯವೇ ಕೊನೆಗೊಳ್ಳುವುದು.

ಯಾವ ಲಕ್ಷ್ಯದ ಸಾಧನೆಗಾಗಿ ಎಲ್ಲರೂ ಬಹುವಾಗಿ ಶ್ರಮಿಸುವರೋ, ಆ ಕಷ್ಟ-ಸಾಧ್ಯವಾದ ಲಕ್ಷ್ಯವು ಈಗ ಈ ಸುಲಭೋಪಾಯದಿಂದಲೇ ಸಾಧ್ಯ! ಯೋಗ-ಧ್ಯಾನಾದಿಗಳಿಗೆ ನಿಯಮಾವಳಿಗಳು ಹೆಚ್ಚು; ಆದರೆ ಶ್ರೀಕೃಷ್ಣ-ರಮಣೀಯತೆಯು ಸ್ವತಃ ಸ್ವರೂಪತಃ ಆಸ್ವಾದ್ಯವೇ ಆಗಿರುತ್ತದೆ.

ಅಲ್ಲಿಗೆ, ಮೆಚ್ಚಿಕೊಂಡು ಚಪ್ಪರಿಸಿಕೊಂಡು ತೋಷಗೊಂಡೇ ಗುರಿಯನ್ನು ಸಾಧಿಸುವ ಮಾರ್ಗವಿದಾಗಿದೆ. ಜ್ಞಾನ-ಮಾರ್ಗವು ಕ್ಲೇಶ-ಬಹುಲ. ಭಕ್ತಿ-ಮಾರ್ಗವು ಸುಲಭ-ಸಾಧ್ಯ, ಚಿತ್ತಾಸ್ವಾದ್ಯ.

ಶ್ಲೋಕ ಹೀಗಿದೆ:
ಭಾಸತಾಂ ಭವ-ಭಯೈಕ-ಭೇಷಜಂ /
ಮಾನಸೇ ಮಮ ಮುಹುರ್ಮುಹುರ್ ಮುಹುಃ |
ಗೋಪ-ವೇಷಂ ಉಪಸೇದುಷಃ ಸ್ವಯಂ /
ಯಾಪಿ ಕಾಪಿ ರಮಣೀಯತಾ ವಿಭೋಃ ||

ಮೊದಲ ಪಾದದಲ್ಲಿ ಭ-ಭ-ಭ-ಭಗಳು ನಾಲ್ಕು. ಎರಡನೆಯದರಲ್ಲಿ ಮಕಾರವು ಆರು ಬಾರಿ ಬಂದಿದೆ, ಹಕಾರವು ಮೂರು ಬಾರಿ. ಉಳಿದೆರಡು ಪಾದಗಳಲ್ಲೂ ಅನುಪ್ರಾಸವು ಕಿಂಚಿತ್ತಾಗಿ ಕಂಡಿದೆ. ಒಟ್ಟಿನಲ್ಲಿ ಆಸ್ವಾದ್ಯಪದ್ಯ.

ಸೂಚನೆ : 27/12/2025 ರಂದು ಈ ಲೇಖನವು  ವಿಜಯಕರ್ನಾಟಕದ ಬೋಧಿ ವೃಕ್ಷ ಪತ್ರಿಕೆಯಲ್ಲಿ ಪ್ರಕಟವಾಗಿದೆ.